ಬಿಹಾರದ ಚುನಾವಣೆಗಳಲ್ಲಿ ತೇಜಸ್ವಿಯೆಂಬ ಬಿಸಿ ರಕ್ತ!

ಡಿ.ಉಮಾಪತಿ

ದಿಲ್ಲಿಯಲ್ಲಿ ಕೇಂದ್ರ ಸರ್ಕಾರದ ಗದ್ದುಗೆ ಹಿಡಿಯುವ ದಾರಿ ಕೇವಲ ಉತ್ತರಪ್ರದೇಶ ಮಾತ್ರವಲ್ಲ, ಬಿಹಾರದಿಂದಲೂ ಹಾದು ಹೋಗುತ್ತದೆ. ಪರಸ್ಪರರನ್ನು ಪ್ರಭಾವಿಸುವ ಈ ನೆರೆ ಹೊರೆಯ ರಾಜ್ಯಗಳು ಲೋಕಸಭೆಗೆ ಆರಿಸಿ ಕಳಿಸುವ ಒಟ್ಟು ಸದಸ್ಯರ ಸಂಖ್ಯೆ ೧೨೦. ಈ ಪೈಕಿ ಬಿಹಾರದವರು ನಲವತ್ತು ಮಂದಿ.

ದೇಶದ ಬಿಹಾರ ಎಂಬುದು ಭೌಗೋಳಿಕ ಪರಿಕಲ್ಪನೆಯ ರೂಪದಲ್ಲೇ ಕಣ್ಣಿಗೆ ಕಟ್ಟಬೇಕಿಲ್ಲ. ಪ್ರತಿಗಾಮಿತನಕ್ಕೆ, ಬಡತನಕ್ಕೆ, ಹಸಿದ ಜನವರ್ಗಗಳ ಶೋಷಣೆಗೆ, ಊಳಿಗಮಾನ್ಯ ವ್ಯವಸ್ಥೆಗೆ, ಆಳವಾಗಿ ಬೇರು ಬಿಟ್ಟು ಹಬ್ಬಿದ ಲಂಚಗುಳಿತನಕ್ಕೆ, ಕಾಯಿದೆ ಕಾನೂನುಗಳ ಆಡಳಿತ ಮಾಯವಾದ ಅರಣ್ಯ ನ್ಯಾಯದ ಅನ್ಯಾಯಕ್ಕೆ ರೂಪಕವಾಗಿತ್ತು ಬಿಹಾರ.

ಈ ರಾಜ್ಯದ ಜನಸಂಖ್ಯೆ ಹನ್ನೆರಡು ಕೋಟಿ. ದೇಶದ ೧೪೫ ಲಕ್ಷ ಕೋಟಿ ರುಪಾಯಿಯ ಜಿ.ಡಿ.ಪಿ. ಯಲ್ಲಿ ಬಿಹಾರದ ಪಾಲು ಕೇವಲ ೪.೧ ಲಕ್ಷ ಕೋಟಿ ರೂಪಾಯಿ. ಶೇ.೮೫ರಷ್ಟು ಜನಸಂಖ್ಯೆ ಹಳ್ಳಿಗಳಲ್ಲಿ ವಾಸಿಸುತ್ತಿದೆ. ಸಮೃದ್ಧ ಗಂಗೆ ಈ ರಾಜ್ಯವನ್ನು ಎರಡು ಭಾಗಗಳಾಗಿ ಸೀಳಿ ಹರಿಯುತ್ತಾಳೆ. ಆದರೆ ಹರಿದು ಹಂಚಿ ಹೋಗಿರುವ ಹಿಡುವಳಿಗಳು ಹಳ್ಳಿಗಾಡಿನ ದಾರಿದ್ರ್ಯವನ್ನು ದಟ್ಟವಾಗಿಸಿವೆ.

ಬಿಹಾರದ ಗತ ಭವ್ಯವಾದದ್ದು. ಅಂಗ, ಮಿಥಿಲ, ಮಗಧ, ವಜ್ಜಿಯನ್ನು ಚಂದ್ರಗುಪ್ತ ಮೌರ್ಯ, ಅಶೋಕ, ಸಮುದ್ರಗುಪ್ತ, ವಿಕ್ರಮಾದಿತ್ಯ ಮೊದಲಾದವರು ಆಳಿದ್ದರು. ನಳಂದ ಮತ್ತು ವಿಕ್ರಮಶಿಲೆಯಂತಹ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳು ಇಲ್ಲಿದ್ದವು. ಬ್ರಿಟಿಷರು ಸ್ಥಾಪಿಸಿದ ಜಮೀನ್ದಾರೀ ವ್ಯವಸ್ಥೆಯನ್ನು ಸ್ವಾಮೀ ಸಹಜಾನಂದ ಸರಸ್ವತೀ, ರಾಹುಲ ಸಾಂಕತ್ಯಾಯನ, ಬಾಬಾ ನಾಗಾರ್ಜುನ ಮುಂತಾದವರು ಕೆಡವಲು ಆಂದೋಲನ ಹೂಡಿ ಹೂಂಕಾರ ಎಂಬ ಪತ್ರಿಕೆಯನ್ನು ನಡೆಸಿದ್ದರು. ರೈತ ಚಳವಳಿಯೂ ಸೇರಿದಂತೆ ಬಿಹಾರದಲ್ಲಿ ಹುಟ್ಟಿದ ಜನಪರ ಆಂದೋಲನಗಳು ರಾಜ್ಯದ ಗಡಿ ದಾಟಿ ಪ್ರೇರಣೆ ನೀಡಿದವು. ಸಂಪೂರ್ಣ ಕ್ರಾಂತಿಯ ಹರಿಕಾರ ಜಯಪ್ರಕಾಶ ನಾರಾಯಣ, ಸಮಾಜವಾದಿ ಕರ್ಪೂರಿ ಠಾಕೂರ್?, ಮಂತ್ರಮುಗ್ಧವಾಗಿಸುವ ಶಹನಾಯ್ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಇದೇ ನೆಲದವರು. ಕಮ್ಯೂನಿಸ್ಟ್ ಚಳವಳಿ ಬಲವಾಗಿ ಬೇರೂರಿದ್ದ ನಾಡಿದು. ಕಡುಬಡವರ ನಿರಂತರ ಸುಲಿಗೆಯಲ್ಲಿ ನಿರತವಾಗಿದ್ದ ಸಿರಿವಂತ ಭೂಮಾಲೀಕ ವರ್ಗದ ವಿರುದ್ಧ ಬಂದೂಕು ಕೈಗೆತ್ತಿಕೊಂಡ ಕಟ್ಟರ್ ಕಮ್ಯೂನಿಸ್ಟರ ಕೆಂಪು ಸೇನೆಗಳನ್ನು ಹಣಿಯಲು ಮೇಲ್ಜಾತಿಗಳ ರಣವೀರ ಸೇನೆ ಹುಟ್ಟಿ ಎರಡರ ನಡುವೆ ನಡೆದ ಘರ್ಷಣೆಗಳಲ್ಲಿ ಗ್ರಾಮೀಣ ಬಿಹಾರ ರಕ್ತಸಿಕ್ತವಾಗಿತ್ತು. ಅಪಹರಣಗಳ ಕುಖ್ಯಾತ ಉದ್ಯಮ ರಾಜ್ಯಾಶ್ರಯ ಪಡೆದಿತ್ತು.

೨೦೦೪ರ ಹೊತ್ತಿಗೆ ಬಿಹಾರದಲ್ಲಿ ಲಾಲೂ-ರಾಬ್ಡಿ ಆಡಳಿತಕ್ಕೆ ೧೪ ವರ್ಷಗಳು ತುಂಬಿದ್ದವು. ಆಗ the economist ನಿಯತಕಾಲಿಕ ಬರೆದಿದ್ದ ಪ್ರಕಾರ ದೇಶದಲ್ಲಿ ಅತಿ ಕೇಡಿನ ಸಂಗತಿಗಳೆಲ್ಲದರ ತವರು ಬಿಹಾರ. ಹರಡಿ ಹಬ್ಬಿದ ಬಡತನ, ತಾವು ಪೊರೆದು ಪೋಷಿಸಿದ ಮಾಫಿಯಾ ಡಾನ್‌ಗಳ ಹೆಗಲ ಮೇಲೆ ಕೈ ಹಾಕಿ ಸಾಗುತ್ತಿದ್ದ ಭ್ರಷ್ಟ ರಾಜಕಾರಣಿಗಳು, ಅತಿ ಕೆಟ್ಟ ಉಳಿಗಮಾನ್ಯ ಕ್ರೌರ್ಯವನ್ನು ಉಳಿಸಿಕೊಂಡಿರುವ ಜಾತಿ ತಾರತಮ್ಯದ ಸಾಮಾಜಿಕ ವ್ಯವಸ್ಥೆ, ದುರ್ಬಲ ಆಡಳಿತ ಮುಂತಾದವುಗಳ ಆಡುಂಬೊಲವೇ ಬಿಹಾರ ಎಂದಿತ್ತು.

ಲಾಲೂಪ್ರಸಾದ್ ಯಾದವ್ ಅವರ ೧೫ ವರ್ಷಗಳ ಅಧಿಕಾರಾವಧಿಯಲ್ಲಿ ಅರಾಜಕತೆಯ ಅಂಧಕಾರಕ್ಕೆ ಜಾರಿದ್ದ ಬಿಹಾರವನ್ನು ಅಭಿವೃದ್ಧಿ ಮತ್ತು ಕಾನೂನು- ಸುವ್ಯವಸ್ಥೆಯ ಸುಸ್ಥಿತಿಗೆ ಹಿಡಿದೆತ್ತುವ ಪ್ರಯತ್ನವನ್ನು ನಿತೀಶ್ ಕುಮಾರ್ ಬಿಜೆಪಿ ಬೆಂಬಲದೊಂದಿಗೆ ಮಾಡಿದ್ದು ಹೌದು. ಆದರೆ ಗುರಿ ಸೇರದೆ ನಡುದಾರಿಯಲ್ಲೇ ಕಳೆದು ಹೋದರು. ಕಳೆದ ೧೫ ವರ್ಷಗಳ ನಿತೀಶ್ ಆಡಳಿತ ಕುರಿತು ಆ ರಾಜ್ಯದ ಜನ ಭ್ರಮನಿರಸನಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿವೆ. ನಿರುದ್ಯೋಗದ ಹಾಹಾಕಾರ ಆವರಿಸಿದೆ.

ರಾಷ್ಟ್ರೀಯ ಜನತಾದಳದ (ಆರ್.ಜೆ.ಡಿ) ಸೂತ್ರಧಾರ ಲಾಲೂ ಪ್ರಸಾದ್ ಯಾದವ್- ರಬಡಿದೇವಿ ಅವರ ಮಗ ತೇಜಸ್ವಿ ಯಾದವ್. ಕುಟುಂಬದ ಆಸ್ತಿಯಂತೆ ನಡೆಸಿಕೊಂಡು ಬರಲಾಗಿರುವ ದೇಶದ ಹಲವಾರು ರಾಜಕೀಯ ಪಕ್ಷಗಳ ಪೈಕಿ ಆರ್.ಜೆ.ಡಿ.ಯೂ ಒಂದು. ಮೇವು ಹಗರಣದಲ್ಲಿ ಮೂರು ವರ್ಷಗಳ ಹಿಂದೆ ಲಾಲೂ ಜೈಲುಪಾಲಾದರು. ಅಂದಿನಿಂದ ತೇಜಸ್ವಿಯೇ ಈ ಪಕ್ಷದ ಸಾರ್ವಜನಿಕ ಚಹರೆ.

ತೇಜಸ್ವಿಗೆ ಈಗ ಮೂವತ್ತೊಂದರ ಹರೆಯ. ಈ ಹಿಂದೆ ೨೦೧೫ರಲ್ಲಿ ಹಳೆಯ ಗೆಳೆಯರಾದ ಲಾಲೂ- ನಿತೀಶ್ ಪುನಃ ಒಂದೂವರೆ ಎರಡು ವರ್ಷದ ಮಟ್ಟಿಗೆ ಒಂದಾಗಿದ್ದಾಗ ನಿತೀಶ್ ಮಂತ್ರಿಮಂಡಲದಲ್ಲಿ ತೇಜಸ್ವಿ ಉಪಮುಖ್ಯಮಂತ್ರಿಯಾಗಿದ್ದರು. ೨೦೧೭ರ ಜುಲೈನಲ್ಲಿ ನಿತೀಶ್ ಮರಳಿ ಬಿಜೆಪಿ ತೆಕ್ಕೆಗೆ ಜಾರಿದ ನಂತರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ನಿಭಾಯಿಸಿದರು. ಓದಿದ್ದು ಒಂಬತ್ತನೆಯ ತರಗತಿಯವರೆಗೆ ಮಾತ್ರ. ಕ್ರಿಕೆಟ್ ಹುಚ್ಚು ಮೈಮೇಲೆ ಏರಿತ್ತು. ಒಮ್ಮೆ ರಾರ್ಖಂಡ್ ಪರವಾಗಿ ರಣಜಿ ಪಂದ್ಯವೊಂದರಲ್ಲಿ ಆಡಿದ್ದುಂಟು. ಐಪಿಎಲ್ ಪಂದ್ಯಗಳಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆದರೆ ಅಲ್ಲಿ ಏಳಿಗೆ ಕಾಣಲಿಲ್ಲ. ೨೦೧೫ರಲ್ಲಿ ವಿಧಾನಸಭೆಗೆ ಆಯ್ದುಕೊಂಡಾಗ ಒಲಿದದ್ದು ಉಪಮುಖ್ಯಮಂತ್ರಿ ಸ್ಥಾನ. ಲಾಲೂ ಜೈಲುಪಾಲಾದ ನಂತರ ಪಕ್ಷದ ನಾಯಕತ್ವ ತೇಜಸ್ವಿಗೆ ದಕ್ಕಿತ್ತು. ಪಕ್ಷದ ಹಿರಿಯರನೇಕರು ಮುನಿಸಿಕೊಂಡು ದೂರಾದರು. ಈ ಪೈಕಿ ಲಾಲೂ ಅವರ ಏರಿಳಿತದ ರಾಜಕಾಯ ಪಯಣದಲ್ಲಿ ಸದಾ ಜೊತೆಗಿದ್ದು ಇತ್ತೀಚೆಗೆ ನಿಧನರಾದ ರಘುವಂಶಪ್ರತಾಪ್ ಸಿಂಗ್ ಪ್ರಮುಖರು. ಮಿತ್ರಪಕ್ಷಗಳ ಹುದ್ದರಿಗಳಾದ ಉಪೇಂದ್ರ ಕುಶವಾಹ ಮತ್ತು ಜೀತನ್ ರಾಮ್ ವಾಂಝಿ ಕೂಡ ದೂರಾದರು. ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ತೇಜಸ್ವಿ ನೇತೃತ್ವದ ಆರ್.ಜೆ.ಡಿ. ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆದರೆ ತೇಜಸ್ವಿ ಎದೆಗುಂದಿಲ್ಲ. ತಂದೆಯ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಮೈತ್ರಿಕೂಟ ಕಟ್ಟಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ತಂದೆ ಲಾಲೂ ಮತ್ತು ತಾಯಿ ರಬಡಿದೇವಿ ಅವರ ಚಿತ್ರಗಳನ್ನು ಆರ್.ಜೆ.ಡಿ. ಭಿತ್ತಿಪತ್ರಗಳಿಂದ ದೂರ ಇರಿಸಿರುವುದು ವಿಶೇಷ ಸಂಗತಿ. ವ್ಯಂಗ್ಯ ವಿಡಂಬನೆ ಪ್ರಾವಾಣಿಕತೆಯನ್ನು ತೇಜಸ್ವಿ ಚುನಾವಣಾ ಭಾಷಣಗಳಲ್ಲಿ ಮತದಾರರು ಗುರುತಿಸಿದ್ದಾರೆ. ೬೯ ವರ್ಷದ ಪಳಗಿದ ರಾಜಕಾರಣಿ ನಿತೀಶ್ ಕುಮಾರ್ ಅವರ ನಿದ್ದೆಗೆಡಿಸಿದ್ದಾರೆ. ತಾಳ್ಮೆಯನ್ನೂ ಪರೀಕ್ಷಿಸಿದ್ದಾರೆ.

ಬಿಹಾರದಲ್ಲಿ ನಿರುದ್ಯೋಗದ ಬೃಹತ್ ಸಮಸ್ಯೆಯನ್ನು ಚುನಾವಣೆಗೆ ಮುನ್ನವೇ ಗುರುತಿಸಿ ಅದರ ಸುತ್ತ ಜನಮಾನಸದೊಂದಿಗೆ ಸಂವಾದ ಕಟ್ಟಿ ನಿಲ್ಲಿಸಿದರು. ಹಾಲಿ ಚುನಾವಣೆಗಳಲ್ಲಿ ಅದನ್ನು ಬಹುದೊಡ್ಡ ಚುನಾವಣಾ ವಿಷಯ ಆಗಿಸಿದ ಯಶಸ್ಸು ಅವರದು. ತಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ೧೦ ಲಕ್ಷ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಅವರ ಘೋಷಣೆ ಬಿಜೆಪಿಯನ್ನು ಬಡಿದೆಬ್ಬಿಸಿದೆ. ಜನಸಮೂಹಗಳು ತೇಜಸ್ವಿಯವರ ಈ ಘೋಷಣೆಗೆ ಸ್ಪಂದಿಸುತ್ತಿರುವ ಬಗೆಯನ್ನು ಗಮನಿಸಿದ ಬಿಜೆಪಿ-ಸಂಯುಕ್ತ ಜನತಾದಳದ ಮೈತ್ರಿಕೂಟ ೧೯ ಲಕ್ಷ ಸರ್ಕಾರಿ ಉದ್ಯೋಗಗಳ ಘೋಷಣೆ ಮಾಡಿದೆ. ತೇಜಸ್ವಿಯವರ ಚುನಾವಣಾ ಪ್ರಚಾರ ಸಭೆಗಳು ಭಾರೀ ಜನಸ್ತೋಮವನ್ನು ಆಕರ್ಷಿಸತೊಡಗಿವೆ. ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರ ರಚಿಸುವುದು ನಿಶ್ಚಿತವೆಂದು ಚುನಾವಣಾ ಸಮೀಕ್ಷೆಗಳು ಸಾರಿವೆ. ಆದರೆ ಬೇರು ಮಟ್ಟದಲ್ಲಿ ಭಿನ್ನ ಬಗೆಯ ಕದಲಿಕೆಗಳು ಮೊಳಕೆಯೊಡೆದಿವೆ. ಮೊದಲ ಹಂತದ ಮತದಾನ ಬುಧವಾರ ಜರುಗಿದೆ. ಉಳಿದ ಹಂತಗಳಲ್ಲೂ ಜನಸಮೂಹಗಳೊಂದಿಗೆ ತೇಜಸ್ವಿಯವರ ಸಂವಾದ ಹೀಗೆಯೇ ಮುಂದುವರೆದರೆ ಮೋದಿ-ನಿತೀಶ್ ಭಾರೀ ಬೆವರು ಹರಿಸಬೇಕಾದೀತು. ಹದಿನೈದು ವರ್ಷಗಳ ನಂತರ ಬಿಹಾರದ ಮತದಾರ ಬದಲಾವಣೆ ಬಯಸಿದಲ್ಲಿ ವಿಶೇಷವಾಗಿ ಮೋದಿಯವರಿಗೆ ಭಾರೀ ಮುಖಭಂಗ ಎದುರಾದೀತು. ಬಿಹಾರದ ಉದ್ದಗಲಕ್ಕೆ ಮೋದಿಯವರದೇ ಕಟೌಟುಗಳು ಭಿತ್ತಿಗಳು ತುಂಬಿ ತುಳುಕಿವೆ. ನೋಡುವವರಿಗೆ ಈ ಚುನಾವಣೆ ಮೋದಿ ಮತ್ತು ತೇಜಸ್ವಿ ನಡುವಣ ಸೆಣಸಾಟವೇನೋ ಎಂಬ ಭಾವನೆಗೆ ದಾರಿಯಾಗಿದೆ.

ಬಿಜೆಪಿ- ಸಂಯುಕ್ತಜನತಾದಳದ ಗೆಲುವಿನ ಭವಿಷ್ಯ ನುಡಿದಿರುವ ಆರಂಭಿಕ ಸಮೀಕ್ಷೆಗಳು ನಿಜವಾಗಬಹುದು ಅಥವಾ ಹುಸಿ ಹೋಗಲೂಬಹುದು. ಆದರೆ ಇಂತಹುದೇ ಸಮೀಕ್ಷೆಯೊಂದು ಬಿಹಾರದ ಶೇ.೨೭ರಷ್ಟು ಮತದಾರರು ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಬಯಸುತ್ತಾರೆ ಎಂದಿದೆ. ಈ ಅಂಶ ಸುಲಭಕ್ಕೆ ತಳ್ಳಿ ಹಾಕುವಂತಹುದಲ್ಲ. ಕ್ರಿಕೆಟ್ಟಿನಲ್ಲಿ ವಿಫಲವಾದರೂ ರಾಜಕಾರಣದಲ್ಲಿ ದೂರ ಭವಿಷ್ಯದ ಆಟಗಾರ ತಾವು ಎಂಬ ನಿಚ್ಚಳ ಸೂಚನೆಗಳನ್ನು ತೇಜಸ್ವಿ ನೀಡಿದ್ದಾರೆ. ಭಾರತದ ವಂಶದ ಕುಡಿಗಳ ರಾಜಕಾರಣದಲ್ಲಿ ಹೊಸ ಸಸಿಯೊಂದು ತಲೆಯೆತ್ತಿದೆ. ಎಂತೆಂತಹ ಆದರ್ಶವಾದಿಗಳನ್ನೂ ಅವರ ಪ್ರಾಮಾಣಿಕತೆಯನ್ನೂ ನುಂಗಿ ನೀರು ಕುಡಿದಿರುವ ಕುಖ್ಯಾತಿ ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆಯದು.

× Chat with us