ಬೆಂಗಳೂರು: ರಾಜ್ಯದಲ್ಲಿಯೂ ಆನ್‌ಲೈನ್ ಮೂಲಕ ಹಾಲು ಮತ್ತು ಮೊಸರು ಮಾರಾಟ ಆರಂಭಿಸಲು ‘ಅಮುಲ್’ ಸಂಸ್ಥೆ ಮುಂದಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಟ್ವಿಟರ್‌ನಲ್ಲಿ ಅಮುಲ್ ಪ್ರಕಟಿಸಿರುವ ಮಾಹಿತಿಯನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕನ್ನಡಿಗರು, ಈ ನಡೆಗೆ ಆಕ್ಷೇಪ ಹೊರಹಾಕುತ್ತಿದ್ದಾರೆ. ‘ಗೋ ಬ್ಯಾಕ್ ಅಮುಲ್’ ಅಭಿಯಾನ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.
‘ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಲು ಅವಕಾಶವಿದ್ದರೂ ಅಲಿಖಿತ ಒಪ್ಪಂದದಂತೆ ಸಹಕಾರ ನೀಡಲಾಗುತ್ತಿತ್ತು. ಹಾಲಿನ ಕೊರತೆ ಇರುವ ರಾಜ್ಯಗಳಲ್ಲಿ ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ ತನ್ನದೇ ಮಾರುಕಟ್ಟೆ ಹೊಂದಿದ್ದು, ವಹಿವಾಟು ನಡೆಸುತ್ತಿವೆ. ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದು ಹಿಂದೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಕರಾಗಿದ್ದ ಎ.ಎಸ್.ಪ್ರೇಮನಾಥ್ ಪ್ರತಿಕ್ರಿಯಿಸಿದರು.
‘ಹೈನೋದ್ಯಮದ ದೈತ್ಯ ಸಂಸ್ಥೆ ಅಮುಲ್, ಈ ಹಿಂದೆ ಕರ್ನಾಟಕದಲ್ಲಿ ಹಾಲು ಮಾರಾಟದ ವಿಸ್ತರಿಸಲು ಉತ್ಸುಕತೆ ತೋರಿತ್ತು. ನಾವು ಸ್ನೇಹದಿಂದಲೇ ತಡೆಯೊಡ್ಡಿದ್ದೆವು. ಈಗ ಸ್ವಯಂ ನಿಯಂತ್ರಣದ ರೇಖೆ ದಾಟಿ ಹಾಲಿನ ಮಾರುಕಟ್ಟೆಗೆ ದಾಳಿಗೆ ಮುಂದಾಗಿದೆ. ಇದರಲ್ಲಿ ರಾಜಕೀಯ ಅಂಶ ಕಾಣುತ್ತಿಲ್ಲ, ವಿಲೀನದ ವಿಷಯವೂ ಅಲ್ಲ’ ಎಂದು ಹೇಳಿದರು.
‘ಗುಜರಾತಿನಿಂದ ದೂರದ ಕರ್ನಾಟಕಕ್ಕೆ ತಾಜಾ ಹಾಲು ಬರಬೇಕಿಲ್ಲ, ಅದು ಸಾಧ್ಯವು ಇಲ್ಲ. ಗುಣಮಟ್ಟದ ‘ನಂದಿನಿ’ ಹಾಲು ದೊರೆತರೂ, ರಾಜ್ಯದಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೆ ಅಮುಲ್ ಬ್ರ್ಯಾಂಡ್ ಮೋಹವಾಗಿ ಸೆಳೆಯುವ ಸಾಧ್ಯತೆಗಳಿವೆ. ಇದರಿಂದ ಕೆಎಂಎಫ್ ಸಂಸ್ಥೆಗೆ ಮತ್ತು ರೈತರ ಹಿತಕ್ಕೆ ಧಕ್ಕೆಯಾಗುವುದು ನಿಶ್ಚಿತ’ ಎಂದರು.
‘ಅಮುಲ್‘ ಉತ್ಪನ್ನಗಳ ನೇರ ಮಾರಾಟವನ್ನು ಕೆಎಂಎಫ್ ಆಡಳಿತ ಗಟ್ಟಿಯಾಗಿ ವಿರೋಧಿಸಬೇಕು. ಅಗತ್ಯ ಎನಿಸಿದರೆ ರಾಜ್ಯ ಸರ್ಕಾರ ಗುಜರಾತ್ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.
‘ನಂದಿಯನ್ನು ಯಾರೂ ಮಣಿಸಲು ಸಾಧ್ಯವಿಲ್ಲ’
‘ನಂದಿನಿ ಬ್ರ್ಯಾಂಡ್‌ನಲ್ಲಿ ಈಶ್ವರನ ವಾಹನ ‘ನಂದಿ’ ಇದೆ. ಯಾವುದೇ ಬ್ರ್ಯಾಂಡ್ ಸ್ಪರ್ಧೆಗೆ ಬಂದರೂ ನಂದಿ ಮಣಿಸಲಾಗದು’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಹೇಳಿದರು.
‘ಗುಣಮಟ್ಟ, ದರದ ವಿಷಯ ಮತ್ತು ಸ್ಥಳೀಯ ಉತ್ಪನ್ನ ಆಗಿರುವುದರಿಂದ ನಂದಿನಿ ಮನೆ ಮಾತಾಗಿದೆ. ಇದಕ್ಕೆ ಯಾರಿಂದಲೂ ಸ್ಪರ್ಧೆ ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಗುಜರಾತ್ ರಾಜ್ಯಕ್ಕೆ ನಾವು ನಂದಿನಿ ಹಾಲು, ಉತ್ಪನ್ನಗಳನ್ನು ಪೂರೈಸುತ್ತಿಲ್ಲ; ಅವರು ಕರ್ನಾಟಕಕ್ಕೆ ಅಮುಲ್ ಹಾಲು ಪೂರೈಕೆ ಮಾಡುತ್ತಿರಲಿಲ್ಲ. ಇದು ಅಲಿಖಿತ ನಿಯಮ. ಈಗ ಅನಾರೋಗ್ಯಕರ ಸ್ಪರ್ಧೆಗೆ ಅಮುಲ್ ಮುಂದಾಗಿದೆ’ ಎಂದು ಹೇಳಿದರು.
‘ಸಹಕಾರ ತತ್ವ ಇರಲಿ. ಅನಾರೋಗ್ಯಕರ ಸ್ಪರ್ಧೆ ಬೇಡ ಎಂದು ಅಮುಲ್ ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ಪತ್ರ ಬರೆದು ಮನವಿ ಮಾಡಲಾಗುವುದು. ಇದಕ್ಕೆ ಸ್ಪಂದನೆ ದೊರೆಯುವ ವಿಶ್ವಾಸವಿದೆ’ ಎಂದರು.
‘ನಂದಿನಿ’ ಹಾಲನ್ನೇ ಬಳಸಿ: ಜಿ.ಸಿ.ಚಂದ್ರಶೇಖರ್
‘ನಂದಿನಿ’ ಹಾಲನ್ನಷ್ಟೇ ಬಳಸುವ ಮೂಲಕ ಕನ್ನಡಿಗರಾದ ನಾವೇ ಕೆಎಂಎಫ್ ಕಾಪಾಡಿಕೊಳ್ಳಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ನಂದಿನಿ ಉತ್ಪನ್ನಗಳನ್ನೇ ಬಳಸುವ ಮೂಲಕ ‘ಅಮುಲ್’ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು. ರೈತರು ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಸಂಬಂಧಪಟ್ಟವರು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಯುವಜನತೆಯನ್ನು ಜಾತಿ, ಧರ್ಮ, ಪಕ್ಷಗಳು, ಅಂತ ಎತ್ತಿ ಕಟ್ಟಿ ಅವರು ಅವರಿಗೆ ಬೇಕಾದಹಾಗೆ ವ್ಯಪಾರ ಮಾಡ್ತಿದಾರೆ. ಇದರ ಆಳ ಇನ್ನು ಯಾರಿಗೂ ತಿಳಿತಿಲ್ಲ ತಿಳಿಯೋ ಅಷ್ಟರಲ್ಲಿ ಎಲ್ಲಾ ಕಳ್ಕೊಂಡುರ್ತೀವಿ’ ಎಂದು ರಾಘವ್ ಎನ್ನುವವರು ಕಳವಳ ವ್ಯಕ್ತಪಡಿಸಿದ್ದಾರೆ.
‘ನಂದಿನಿ ಇರುವಾಗ ಅಮುಲ್ ಅಗತ್ಯವಿಲ್ಲ. ಗೋ ಬ್ಯಾಕ್ ಗುಜರಾತ್’ ಸಾಕಷ್ಟು ನೆಟ್ಟಿಗರು ಅಭಿಪ್ರಾಯಪಟ್ಟಿದ್ದು, ಇನ್ನೂ ಕೆಲವರು, ‘ಕನ್ನಡಿಗರು ಅಮುಲ್ ವಿರುದ್ಧ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದ್ದಾರೆ.
ಅಮುಲ್‌ಗೆ ಪೈಪೋಟಿ ನೀಡಲಿದ್ದೇವೆ
ಗುಜರಾತಿನ ಅಮುಲ್, ಕನ್ನಡದಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು ತೆರೆದಿದೆ. ಕನ್ನಡದಲ್ಲೇ ಮಾಹಿತಿ ಒದಗಿಸಿದ್ದು, ಲೀಟರ್‌ಗೆ ಎಷ್ಟು ದರ ನಿಗದಿ ಮಾಡಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
‘ಅಮುಲ್ ಹಾಲು ಲೀಟರ್‌ಗೆ ದರ ಎಷ್ಟು ಎಂಬುದನ್ನು ನೋಡಬೇಕು. ಸ್ಪರ್ಧೆ ಎದುರಿಸಲು ನಾವೂ ಸಿದ್ಧವಾಗಿದ್ದೇವೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಸ್ಪಷ್ಟಪಡಿಸಿದ್ದಾರೆ. ‘ಕೆಎಂಎಫ್ ರೀತಿ ಅಮುಲ್ ಕೂಡ ಸಹಕಾರ ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ. ಎರಡು ಸಾರ್ವಜನಿಕ ಸಂಸ್ಥೆಗಳ ನಡುವೆ ಪೈಪೋಟಿ ಅಗತ್ಯ ಇರಲಿಲ್ಲ’ ಎಂದೂ ಹೇಳಿದ್ದಾರೆ.
ಕರ್ನಾಟಕ ಹಾಲು ಮಹಾ ಮಂಡಳವು ರಾಜ್ಯದ ಹಾಲು ಉತ್ಪಾದಕರಿಂದ(ರೈತರು) ಸಂಗ್ರಹಿದ ಹಾಲನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಪೂರೈಸುತ್ತಿದೆ. ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಪ್ರಸ್ತಾಪಿಸಿದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…
ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…