ನವದೆಹಲಿ : ಪ್ರಯಾಣಿಕರ ಸುರಕ್ಷತೆ ಕುರಿತು ನಿಯಮ ಉಲ್ಲಂಘನೆ ಮಾಡಿದ ಏರ್ ವಿಸ್ತಾರಾಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) 10 ಲಕ್ಷ ರೂಪಾಯಿಗಳ ದಂಡವನ್ನು ಹಾಕಿದೆ. ಮಧ್ಯಪ್ರದೇಶದ ಇಂದೂರ್ ವಿಮಾನ ನಿಲ್ದಾಣದಲ್ಲಿ ತರಬೇತಿ ಇಲ್ಲದೆ ಪೈಲಟ್ ನಿಂದ ಪ್ರಯಾಣಿಕರಿದ್ದ ವಿಮಾನವನ್ನು ಲ್ಯಾಂಡಿಂಗ್ ಮಾಡಿಸಿದ್ದಕ್ಕಾಗಿ ದಂಡವನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ ಟೇಕಾಪ್ ಮತ್ತು ಲ್ಯಾಂಡಿಂಗ್ ಕ್ಲಿಯರೆನ್ಸ್ ನಿಯಮವನ್ನು ಉಲ್ಲಂಘನೆ ಮಾಡಿರುವುದಲ್ಲದೆ ಇದರಿಂದಾಗಿ ಪ್ರಯಾಣಿಕರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಬಹಳ ಇತ್ತು. ಸಿಮ್ಯುಲೇಟರ್ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಸಿಮ್ಯುಲೇಟರ್ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.