ಬೆಂಗಳೂರಲ್ಲಿ 6 ಸಾವಿರ ಮರಗಳ ಹನನಕ್ಕೆ ವಿರೋಧ: ಸಹಿ ಸಂಗ್ರಹಕ್ಕೆ ರಮ್ಯಾ ಮನವಿ

ಬೆಂಗಳೂರು: ನಟನೆ, ರಾಜಕಾರಣದಿಂದ ದೂರ ಉಳಿದಿರುವ ನಟಿ ರಮ್ಯಾ ಅವರು ಈಗ ಮರಗಳ ಉಳಿವಿಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರಿನ ಮರಗಳನ್ನು ಉಳಿಸುವ ಆಂದೋಲನವನ್ನು ರಮ್ಯಾ ಬೆಂಬಲಿಸಿದ್ದಾರೆ. ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆಯಡಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಯೋಜನೆಗೆ 6 ಸಾವಿರಕ್ಕೂ ಅಧಿಕ ಮರಗಳ ಹನನ ಮಾಡಲಾಗುತ್ತಿದೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರ ಕಡಿಯುವುದು ಏಕೆ? ಇದರಿಂದ ಪರಿಸರ ಮತ್ತಷ್ಟು ಹಾಳಾಗಲಿದೆ ಎನ್ನುವುದು ಪರಿಸರವಾದಿಗಳ ಅಭಿಪ್ರಾಯ.

ಈ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಪರಿಸರ ಪರ ಕಾಳಜಿ ಹೊಂದಿರುವ ಅನೇಕರು ಮರವನ್ನು ಕತ್ತರಿಸುವುದಕ್ಕೆ ವಿರೋಧಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಇದನ್ನು ರಮ್ಯಾ ಬೆಂಬಲಿಸಿದ್ದಾರೆ. ಅಲ್ಲದೆ, ಅಭಿಮಾನಿಗಳ ಬಳಿ ಸಹಿ ಹಾಕುವಂತೆ ಕೋರಿದ್ದಾರೆ.

× Chat with us