ನಟಿಯರಾದ ರಾಗಿಣಿ, ಸಂಜನಾರಿಂದ ಡ್ರಗ್‌ ಸೇವನೆ: ಎಫ್‌ಎಸ್‌ಎಲ್ ವರದಿಯಲ್ಲಿ ದೃಢ!

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸ್ಯಾಂಡಲ್‌ವುಡ್ ತಾರೆಯರ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುಲ್ರಾನಿ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಈ ನಟಿಮಣಿಯರ ಮಾದಕ ವಸ್ತು ಸೇವಿಸಿದ್ದ ಸಂಗತಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ದ ವರದಿಯಲ್ಲಿ ದೃಢಪಟ್ಟಿದೆ. ಈ ವರದಿಯನ್ನು ಆಧರಿಸಿ ರಾಗಿಣಿ ಮತ್ತು ಸಂಜನಾ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸಿಸಿಬಿ ಪೊಲೀಸರಿಗೆ ಮತ್ತಷ್ಟು ಸಾಕ್ಷ್ಯ ಲಭಿಸಿದಂತಾಗಿದೆ.

ಹೈದರಾಬಾದ್‌ನ ಎಫ್‌ಎಸ್‌ಎಲ್ ವರದಿಯಲ್ಲಿ ಈ ಸ್ಪೋಟಕ ಸತ್ಯ ಬಯಲಾಗಿದ್ದು, 10 ತಿಂಗಳ ನಂತರ ಪ್ರಕರಣದ ಪ್ರಮುಖ ಆರೋಪಿಗಳಿಗೆ ಮತ್ತಷ್ಟು ಕಾನೂನು ಕಂಟಕ ತಲೆದೋರಿದೆ. ಸ್ಯಾಂಡಲ್‌ವುಡ್ ತಾರೆಯರು ಡ್ರಗ್ಸ್ ಸೇವಿಸಿದ್ದ ಸಂಗತಿಯೂ ಅವರ ತಲೆಕೂದಲು ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ.

ಈ ತಾರೆಯರಲ್ಲದೇ ಡ್ರಗ್ಸ್ ಪ್ರಕರಣದಲ್ಲಿ ಹೆಸರಿಸಲಾಗಿದ್ದ ವೀರೇಶ್ ಖನ್ನಾ, ರವಿ ಶಂಕರ್ ಮೊದಲಾದವರು ಸಹ ಡ್ರಗ್ಸ್ ಸೇವಿಸಿರುವ ಮತ್ತು ಈ ದಂಧೆಯಲ್ಲಿ ತೊಡಗಿರುವ ಮಾಹಿತಿಯೂ ದೃಢಪಟ್ಟಿದೆ.

ಎಫ್‌ಎಸ್‌ಎಲ್‌ನ ವರದಿಯು ಈಗ ಸಿಸಿಬಿ ಪೊಲೀಸರ ಕೈ ಸೇರಿದ್ದು, ತನಿಖೆ ತೀವ್ರಗೊಳ್ಳುವ ಮೂಲಕ ಕೆಲವು ತಿಂಗಳಿನಿಂದ ತಣ್ಣಗಿದ್ದ ಡ್ರಗ್ಸ್ ಪ್ರಕರಣ ಮತ್ತೆ ಸ್ಪೋಟಕ ಸ್ವರೂಪ ಪಡೆಯುತ್ತಿದೆ.

× Chat with us