ಇಲವಾಲ ಸಮೀಪ ಅಪಘಾತ; ನೀರಿಗೆ ಹಾರಿದ್ದವ ಶವವಾಗಿ ಪತ್ತೆ

ಮೈಸೂರು: ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಂದು ನಡೆದಿದ್ದ ಅಪಘಾತದ ರಭಸಕ್ಕೆ ಓರ್ವ ಯುವಕ ಕೆಆರ್‌ಎಸ್ ಹಿನ್ನೀರಿನಲ್ಲಿ ಹೋಗಿ ಬಿದ್ದಿದ್ದನು. ಆತನ ಶವವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಹೀಗಾಗಿ ಸಹೋದರರಿಬ್ಬರೂ ಅಪಘಾತದಲ್ಲಿ ಮೃತಪಟ್ಟಂತಾಗಿದೆ.

ಮೃತರು ಹೊಸಕೋಟೆ ಗ್ರಾಮದ ವಿಶ್ವ (21) ಮತ್ತು ವಿಷ್ಣು(19) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಎಂಬ ಸಹೋದರರಿಬ್ಬರ ಪೈಕಿ ವಿಶ್ವಗೆ ತೀವ್ರ ಪೆಟ್ಟಾಗಿ ಆಸ್ಪತ್ರೆ ಸೇರಿ ಅಲ್ಲಿಯೇ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಹಾರಿದ್ದ ವಿಷ್ಣು ಮಂಗಳವಾರ ಶವವಾಗಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದಾರೆ.

ಹೊಸಕೋಟೆಯಿಂದ ಬೈಕ್ ಮೂಲಕ ಕೆ.ಆರ್.ನಗರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಢಿಕ್ಕಿ ಹೊಡೆದಿದ್ದ ಕಾರಿನ ಚಾಲಕ ಪರಾರಿಯಾಗಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ.

ವಿಷ್ಣುವಿನ ಶವಕ್ಕಾಗಿ ಶೋಧ ನಡೆಸಿದ್ದ ಪೊಲೀಸರು

ವಿಷ್ಣುವಿನ ಶವಕ್ಕಾಗಿ ಕಾವೇರಿ ಹಿನ್ನೀರಿನಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಶೋಧ ನಡೆಸಿದ್ದರು. ಎರಡು ದಿನಗಳ ಬಳಿಕ ಶವ ನೀರಿನ ಮೇಲೆ ತೇಲುತ್ತಿರುವಾಗ ಪತ್ತೆ ಮಾಡಿದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us