ಮೇಕೆದಾಟು ಪಾದಯಾತ್ರೆ ಬಗ್ಗೆ ಗಣ್ಯರು ಹೇಳಿದ್ದೇನು? ಇಲ್ಲಿದೆ ಮಾಹಿತಿ…

ಕನಕಪುರ(ರಾಮನಗರ): ವಾರಾಂತ್ಯ ಕರ್ಫ್ಯೂ ನಡುವೆಯೂ ಭಾನುವಾರ ಕಾಂಗ್ರೆಸ್‌ನಿಂದ ಪಾದಯಾತ್ರೆ ಆರಂಭಗೊಂಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆರಂಭಗೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಹಲವು ಮುಖಂಡರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಪ್ರತಿನಿಧಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಆದರೆ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಇಂದು ಮೇಕೆದಾಟು ಸಂಗಮದಲ್ಲಿ ಹಿಂದೂ – ಕ್ರೈಸ್ತ- ಮುಸ್ಲೀಮ್ ಧರ್ಮಗುರುಗಳು ಕುಂಡಗಳಲ್ಲಿದ್ದ ಸಸಿಗಳಿಗೆ ನೀರೆರೆಯುವ ಮೂಲಕ ನಡಿಗೆ ಆರಂಭದ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ನೀರಿಗಾಗಿ ಹೋರಾಟಕ್ಕೆ ಬದ್ಧ ಎಂಬ ಸಂದೇಶ ಸಾರಿದರು. ಕಾಂಗ್ರೆಸ್ ಶಾಸಕಿಯರು, ಹಿರಿಯ ಕಾರ್ಯಕರ್ತೆಯರು ವೇದಿಕೆ ಸನಿಹ ಇದ್ದ ಕೊಡಗಳಿಗೆ ಸಂಗಮದ ನೀರನ್ನು ತಂದು ತುಂಬಿದರು. ಈ ನೀರನ್ನು ಬೆಂಗಳೂರಿಗೆ ತರಲಾಗುತ್ತದೆ.

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಾಸ್ಕ್‌ ಧರಿಸದೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಪ್ರತಿ ಪಕ್ಷಗಳಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಬಂಧ ಪರ ವಿರೋಧ ಹೇಳಿಕೆ ನೀಡಿದ ಗಣ್ಯರ ಮಾತುಗಳು ಲ್ಲಿವೆ.

ಮೇಕದಾಟು ಜಾರಿಯಾಗಲಿ, ಕನ್ನಡಿಗರ ಬದುಕು ಹಸನಾಗಲಿ…
ಈ ನೆಲದ ಜೀವಜಲ ಕಾವೇರಿಗಾಗಿ ನಾವು ನಡೆಸುತ್ತಿರುವ ಪಾದಯಾತ್ರೆಗೆ ಭರ್ಜರಿ ಚಾಲನೆ ಸಿಕ್ಕಿದೆ. ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಸಹಸ್ರಾರು ಜನರ ಉತ್ಸಾಹ, ಸಾಮಾಜಿಕ ಕಳಕಳಿ ನಮ್ಮ ನೀರನ್ನು ನಮ್ಮಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.
ಮೇಕೆದಾಟು ಜಾರಿಯಾಗಲಿ, ಕನ್ನಡಿಗರ ಬದುಕು ಹಸನಾಗಲಿ..
– ಸಿದ್ದರಾಮಯ್ಯ, ಮಾಜಿ ಸಿಎಂ

ಕಾಂಗ್ರೆಸ್‌ ಮಂಡಿಯೂರಿ ಕ್ಷಮೆ ಕೇಳಲಿ…
ಕಾವೇರಿ ನದಿ ನೀರಿನ ನಮ್ಮ ಹಕ್ಕಿನ ಪಾಲು ಪಡೆಯಲು, ವಿಫಲರಾದ ಕಾಂಗ್ರೆಸ್ ನಾಯಕರು, ಸಂಗಮದ ದಂಡೆಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಬೇಕು. ಕೊರೊನಾ ಸೋಂಕಿನ ಆತಂಕದ ನಡುವೆ ಕಾನೂನನ್ನು ಲೆಕ್ಕಿಸದೆ ಪಾದಯಾತ್ರೆ’ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಿಲ್ಲಾಡಳಿತ ಕ್ರಮ ತೆಗೆದಕೊಳ್ಳುತ್ತದೆ. ಕಾಂಗ್ರೆಸ್ ನಾಯಕರ ನಡವಳಿಕೆ ಅತ್ಯಂತ ಸರಿಯಿಲ್ಲ. ಕಾಂಗ್ರೆಸ್. ನಾಯಕರು ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ, ಆದರೆ ಜನತೆ ಬುದ್ದಿವಂತರು, ಇವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದಾರೆ. ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ವಹಿಸಿದ್ದಾರೆ, ಈಗ ಮುಂದಿನ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೇಕೆದಾಟು ಯೋಜನೆಯನ್ನು ಅನುಷ್ಟಾನಗೊಳಿಸಲು ನಮ್ಮ ಸರ್ಕಾರ ಬದ್ಧ. ಯಾವುದೇ ಸಂಶಯ ಬೇಡ
– ಆರಗ ಜ್ಞಾನೇಂದ್ರಮ, ಗೃಹ ಸಚಿವ

ಅಪರಾಧಿ ಮನೋಭಾವದ ಪಾದಯಾತ್ರೆ
ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಪಕ್ಷ ಮೇಕೆದಾಟು ಯೋಜನೆಗಾಗಿ ಏನೂ ಮಾಡಿರಲಿಲ್ಲ. ಈಗ ಅಪರಾಧಿ ಮನೋಭಾವದಿಂದ ಪಾದಯಾತ್ರೆ ಮಾಡುತ್ತಿದೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜಲ ಸಂಪನ್ಮೂಲ ಸಚಿವರಾಗಿದ್ದರು. ಅವರ ಅವಧಿಯಲ್ಲಿ ಈ ಯೋಜನೆ ಕುರಿತು ಕಾರ್ಯಸಾಧ್ಯತಾ ವರದಿ ಮಾತ್ರ ಸಿದ್ಧಪಡಿಸಲಾಗಿತ್ತು. ವಿಸ್ತೃತ ಯೋಜನಾ ವರದಿ ಸಲ್ಲಿಸಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್‌ ಪಾದಯಾತ್ರೆ ಕುರಿತು ಸಾರ್ವಜನಿಕರ ಮನಸ್ಸಿನಲ್ಲಿ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌ ಮುಖಂಡರಿಗೆ ಈ ವಿಚಾರದಲ್ಲಿ ಬದ್ಧತೆ ಇಲ್ಲ. ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡದೇ ಇರುವುದಕ್ಕೆ ಅಪರಾಧಿ ಮನೋಭಾವ ಕಾಡುತ್ತಿದೆ. ಜನರನ್ನು ದಿಕ್ಕು ತಪ್ಪಿಸಲು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಯೋಜನೆ ವಿಚಾರದಲ್ಲಿ ಕೈಗೊಳ್ಳಬೇಕಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಮಾಡುತ್ತಿದೆ. ಹಿಂದೆ ಯೋಜನಾ ಪ್ರದೇಶಕ್ಕೆ ರೈತ ಸಂಘಟನೆಯವರು ಭೇಟಿ ನೀಡಿದ ಕಾರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಯೋಜನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ತಡೆ ನೀಡಿತ್ತು. ಈಗ ಇಷ್ಟು ದೊಡ್ಡ ರಾಜಕೀಯ ಕಾರ್ಯಕ್ರಮ ಮಾಡುವುದರ ಪರಿಣಾಮ ಏನು ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿದೆ. ಆದರೂ, ಅವರು ಮಾಡುತ್ತಿದ್ದಾರೆ. ಅವರಿಗೆ ಜನರಿಗಿಂತ ರಾಜಕೀಯ ಮುಖ್ಯವಾಗಿದೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ

ಕಾವೇರಿ ನೀರು ನಮ್ಮಹಕ್ಕು
‘ಕಾವೇರಿ ನೀರು ನಮ್ಮ ಹಕ್ಕು. ನೀರಿನ ವಿಚಾರ ಬಂದಾಗ ನನಗೆ ಹುಮ್ಮಸ್ಸು. ನಾನು ಈವರೆಗೂ ಕಾಂಗ್ರೆಸ್​ ಸದಸ್ಯತ್ವ ಪಡೆದಿಲ್ಲ. ನಾವು ಕಲಾವಿದರು. ಕಲಾವಿದರು ಎಲ್ಲ ಕಡೆ ಸಲ್ಲುತ್ತಾರೆ. ಪಕ್ಷದ ಕೆಲಸ ಅವರವರಿಗೆ ಸೇರಿದ್ದು. ಆದರೆ ಈ ಪಾದಯಾತ್ರೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಇದಕ್ಕೆ ನಮ್ಮ ಪ್ರೋತ್ಸಾಹ ಇರಬೇಕು. ಇದು ನೀರಿಗಾಗಿ ಹೋರಾಟ. ಮೇಕೆದಾಟು ಅಣೆಕಟ್ಟು ಕಟ್ಟುವವರೆಗೆ ಹೋರಾಟ ನಿಲ್ಲಬಾರದು’
-ಸಾಧು ಕೋಕಿಲಾ, ನಟ, ನಿರ್ದೇಶಕ

ಪಾದಯಾತ್ರೆಯೊಂದು ಶೋ…
ಕಾಂಗ್ರೆಸ್ ಪಾದಯಾತ್ರೆ ಇಂದ ನಮಗೆ ಆತಂಕ ಇಲ್ಲ. ಕೃಷ್ಣ ಕಡೆಗೆ ಪಾದಯಾತ್ರೆ ಮಾಡಿದ್ದರು. ನೀರಾವರಿ ವಿಚಾರದಲ್ಲಿ ರಾಜಕೀಯ ಶುರು ಮಾಡಿದ್ದಾರೆ. ಕುಮಾರಸ್ವಾಮಿ, 2003ರಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆದರ ಲಾಭವೇನು?. ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿ ಶೋ ಮಾಡುತ್ತಿದ್ದಾರೆ. ಇವರು ಪಾದಯಾತ್ರೆ ಮಾಡಿದರೆ ತಮಿಳುನಾಡಿನವರೂ ಶುರು ಮಾಡುತ್ತಾರೆ. ಪಾದಯಾತ್ರೆಯಿಂದ ಮೇಕೆದಾಟು ಯೋಜನೆ ಆಗೋದಾದರೆ, ನಾನು ಕೂಡ ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲ ನೀಡುತ್ತೇನೆ. ನಮ್ಮ ಕಾರ್ಯಕರ್ತರಿಗೂ ಪಾದಯಾತ್ರೆಗೆ ಹೋಗಲು ಹೇಳುತ್ತೇನೆ. ಸುಮ್ಮನೆ ರಾಜ್ಯದ ಜನರಿಗೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್‌ಗಾಗಿ ಇದೆಲ್ಲಾ ಮಾಡುತ್ತಿದ್ದಾರೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇದಕ್ಕೆ ಮೋಕ್ಷವಾಗುತ್ತದೆ.
– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

× Chat with us