ಶಿಂಷಾ ನದಿಯಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

ಭಾರತೀನಗರ: ಇಲ್ಲಿಗೆ ಸಮೀಪದ ತೊರೆಚಾಕನಹಳ್ಳಿ ಸಮೀಪದ ಶಿಂಷಾ ನದಿ ಸೇತುವೆ ಕೆಳಗೆ ಯುವಕನ ಶವವೊಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತನನ್ನು ಮಳವಳ್ಳಿ ತಾಲ್ಲೂಕಿನ ಅಮೃತೇಶ್ವರನಹಳ್ಳಿ ಗ್ರಾಮದ ಸುರೇಶ (25) ಎಂದು ಗುರುತಿಸಲಾಗಿದ್ದು, ಈತನ ಮೇಲೆ ಹಲ್ಲೆ ಮಾಡಿ, ಸೇತುವೆ ಮೇಲಿಂದ ನದಿಗೆ ಬೀಸಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರಿನ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಕಳೆದ ಒಂದೂವರೆ ವರ್ಷದ ಹಿಂದೆ ಬಾರ್‌ನ ಕ್ಯಾಷಿಯರ್ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಕೊಲೆ ಆರೋಪದ ಮೇರೆಗೆ ಜೈಲು ಸೇರಿದ್ದನು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ತಿಳಿದುಬಂದಿದೆ.

ಕಳೆದ ವಾರವಷ್ಟೇ ಬೆಂಗಳೂರಿಗೆ ತೆರಳಿದ್ದ ಸುರೇಶ ನಂದಿನಿ ಲೇಔಟ್‌ನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ. ಇದ್ದಕ್ಕಿದಂತೆಯೇ ಈತನ ಶವ ಶಿಂಷಾನದಿಯಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ತೆರಳಿ ಶವವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

× Chat with us