ಬಿಆರ್‌ಹಿಲ್ಸ್‌ನಲ್ಲಿ ಪತ್ತೆಯಾಯ್ತು ಅಪರೂಪದ ಹಕ್ಕಿ.. ಏನಿದರ ವಿಶೇಷ?

ಚಾಮರಾಜನಗರದಲ್ಲಿ ನಡೆದ ಹಕ್ಕಿ ಹಬ್ಬ ನಿನ್ನೆ ಸಂಪನ್ನಗೊಂಡಿದೆ. ಈ ಹಬ್ಬದ ರಾಯಭಾರಿಯಾಗಿದ್ದ ರೂಫಸ್‌ ಬೆಲ್ಲೀಡ್‌ ಈಗಲ್‌ ಹಕ್ಕಿಯು ಪಕ್ಷಿ ವೀಕ್ಷಣೆ ವೇಳೆ ಪತ್ತೆಯಾಗಿರುವುದು ವಿಶೇಷ.

ಪಕ್ಷಿ ವಿಜ್ಞಾನ ಭಾಷೆಯಲ್ಲಿ ರೂಫಸ್‌ ಎನ್ನುವುದು ಒಂದು ಬಗೆಯಾದ ಬಣ್ಣ (ಕಂದು), ಬೆಲ್ಲೀಡ್‌ ಎಂದರೆ ಹೊಟ್ಟೆಯ ಭಾಗ. ಹೊಟ್ಟೆಯ ಮೇಲೆ ಕಂದು ಬಣ್ಣದ ಗುರುತನ್ನು ಹೊಂದಿರುವ ಹದ್ದಿನ ಜಾತಿಯ ಪಕ್ಷಿ ಇದಾಗಿದೆ.

ಈ ಪಕ್ಷಿಯು ತಾನು ವಾಸಿಸಲು ಅತಿ ಎತ್ತರವಾದ ಜಾಗವನ್ನು ಆಯ್ದುಕೊಳ್ಳುತ್ತದೆ. ಆಹಾರ ಸರಪಳಿಯಲ್ಲಿ ಉನ್ನತ ಸ್ಥಾನದಲ್ಲಿರುವ ಈ ಪಕ್ಷಿಯು ಆಹಾರಕ್ಕಾಗಿ ತನಗಿಂತ ಚಿಕ್ಕದಾಗಿರುವ ಪಕ್ಷಿಗಳನ್ನು ಅವಲಂಬಿಸಿದೆ.

ನೋಡಲು ಮಾಮೂಲಿ ಹದ್ದಿಗಿಂತ ಚಿಕ್ಕದಾಗಿರುತ್ತದೆ. ಕತ್ತಿನ ಭಾಗದಲ್ಲಿ ಬಿಳಿಯ ಬಣ್ಣ ಹಾಗೂ ಹೊಟ್ಟೆಯ ಭಾಗದಲ್ಲಿ ರೂಫಸ್‌ ಬಣ್ಣವನ್ನು ಇದು ಹೊಂದಿರುತ್ತದೆ.

ಕಾಲಿನ ಕೆಳ ಭಾಗದಲ್ಲಿ ಪುಕ್ಕಗಳಿರುವ ಈ ಹಕ್ಕಿ ಬಹಳ ಅಪರೂಪ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಸಿಕ್ಕಿರುವುದು ಬಹಳ ಸಂತೋಷದ ವಿಷಯ ಎಂದು ಪಕ್ಷಿ ತಜ್ಞ ಶೈಲೇಶ್‌ರಾಜ್‌ ಅವರು ತಿಳಿಸಿದ್ದಾರೆ.

× Chat with us