ಪತ್ನಿ ಮೇಲೆ ಅನುಮಾನ… ಕೊಲೆ ಮಾಡಿ ಗೋಡೆ ಕುಸಿದು ಸತ್ತಳೆಂದು ನಂಬಿಸಿದ್ದ ಖತರ್ನಾಕ್‌ ಪತಿ ಅಂದರ್

ಅಂತರಸಂತೆ: ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಹೆಂಡತಿ ಮೇಲೆ ಅನುಮಾನಪಟ್ಟು ಹಲ್ಲೆ ನಡೆಸಿ ಕೊಲೆ ಮಾಡಿ, ಗೋಡೆ ಬಿದ್ದು ಸತ್ತಿದ್ದಾಳೆಂದು ನಂಬಿಸಿದ್ದ ಪತಿಯನ್ನು ಬೀಚನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪದ ಹೊನ್ನಮ್ಮನಕಟ್ಟೆ ಗ್ರಾಮದಲ್ಲಿ ಕಳೆದ ಭಾನುವಾರ ಮನೆಯ ಸ್ನಾನದ ಮನೆಯ ಗೋಡೆ ಕುಸಿದು ಸಲ್ಮಬಾನು (27) ಸಾವಿಗೀಡಾಗಿಲ್ಲ. ಅದು ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಲ್ಮಬಾನು ಅವರ ಮಕ್ಕಳನ್ನು ಕರೆದು ವಿಚಾರಿಸಿದಾಗ ಮಕ್ಕಳು ತಮ್ಮ ತಂದೆ ಅಮ್ಮನ ತಲೆಯನ್ನು ಗೋಡೆಗೆ ಗುದ್ದಿಸಿದರು. ಬಳಿಕ ಅಮ್ಮ ಕೆಳಗೆ ಬಿದ್ದಾಗ ಅವರ ಮೇಲೆ ಗೋಡೆಯನ್ನು ಬೀಳಿಸಿದರು ಎಂದು ಹೇಳಿದ್ದನ್ನು ಆಧಾರವನ್ನಾಗಿಟ್ಟುಕೊಂಡು ಸಲ್ಮಬಾನು ಕುಟುಂಬಸ್ಥರು ರಹೀಮ್ ಪಾಷ ವಿರುದ್ಧ ದೂರ ದಾಖಲಿಸಿದ್ದರು.

ದೂರು ಪಡೆದು ಸ್ಥಳ ಮಹಜೂರಿಗೆ ಬಂದ ಪೊಲೀಸರಿಗೆ ಮೇಲ್ನೊಟಕ್ಕೆ ಇದು ಕೊಲೆ ಎಂದು ತಿಳಿದುಬಂದಿದ್ದು, ಮೃತಳ ಗಂಡ ರಹೀಮ್ ಪಾಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿ ರಹೀಮ್ ಪಾಷ ತನ್ನ ಪತ್ನಿ ಬೇರೊಬ್ಬರ ಜೊತೆ ಫೋನ್‍ನಲ್ಲಿ ಮಾತನಾಡುತ್ತಿದ್ದರ ಬಗ್ಗೆ ಅನುಮಾನಗೊಂಡು ಗಲಾಟೆ ತೆಗೆದು ನಂತರ ಹೆಂಡತಿಯ ತಲೆಗೂದಲು ಹಿಡಿದು, ಸಿಮೆಂಟ್ ಇಟ್ಟಿಗೆಗೆ ಗುದ್ದಿದ ಪರಿಣಾಮ ಆಕೆ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ವೇಳೆ ರಹೀಮ್ ಪಾಷ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಪತ್ನಿ ಮೇಲೆ ಸುಮಾರು 3 ಅಡಿ ಗೋಡೆಯನ್ನು ಬೀಳಿಸಿ ನಂತರ ತನ್ನ ಹೆಂಡತಿಯ ಮೇಲೆ ಗೋಡೆ ಕುಸಿದಿದೆ ಎಂದು ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದು ಈ ಪ್ರಕರಣವನ್ನು ಆಕಸ್ಮಿಕ ಎಂದು ಚಿತ್ರಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

× Chat with us