ಜಿಂಕೆ ಮಾಂಸ ಸಾಗಣೆ: ಆರೋಪಿ ಬಂಧನ

ಹನೂರು: ತಾಲ್ಲೂಕಿನ ಗಡಿ ಭಾಗ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಟ್ಟಿ ತಾಲ್ಲೂಕಿನ ನಟಾರಪಾಳ್ಯ ನಿವಾಸಿ ಶಕ್ತಿ ಬಿನ್ ಗೋಪಾಲ ಬಂಧಿತರು.

ಘಟನೆ ವಿವರ: ವ್ಯಕ್ತಿಯೋರ್ವ ಜಿಂಕೆ ಮಾಂಸ ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಕಾವೇರಿ ವನ್ಯಧಾಮದ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಿಶ್ಚಿತ, ಡಿಆರ್‌ಎಫ್‌ಒ ಬಿ.ಬಿ.ದಿನೇಶ್, ಚಂದ್ರಶೇಖರ ಕುಂಬಾರ, ಅರಣ್ಯ ರಕ್ಷಕ ಜಮೀರ್ ಮುಲ್ಲಾ ಅವರು, ಗೋಪಿನಾಥಂ ಮತ್ತು ಹೊಗೇನಕಲ್ ಮುಖ್ಯ ರಸ್ತೆಯಲ್ಲಿ ನಿಂತಿದ್ದರು. ಹೊಗೇನಕಲ್ ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ಆತ ಸಾಗಿಸುತ್ತಿದ್ದ ೨೫ ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಪರೇಕಟ್ಟು ಅರಣ್ಯ ಪ್ರದೇಶ ಪುಂಗುಮ್ ಗಸ್ತಿನಲ್ಲಿ ಬೇಟೆಯಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯಿಂದ ನಾಡಬಂದೂಕು, ಬೈಕ್, ಎರಡು ಚೂರಿ, ಮೊಬೈಲ್, ಬ್ಯಾಟರಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

× Chat with us