ಮಂಡ್ಯ| ನೌಕರಿ ಕೊಡಿಸುವ ಮೋಸದ ಜಾಲ!

ಮಂಡ್ಯ: ಹೈಕೋರ್ಟ್‍ನಲ್ಲಿ ಉದ್ಯೋಗ ಕೊಡಿಸುವುದಾಗಿ, ವಂಚಿಸಿರುವ ಜಾಲವೊಂದು ಸಕ್ಕರೆ ನಾಡು ಮಂಡ್ಯದಲ್ಲಿ ಬೀಡುಬಿಟ್ಟಿರುವ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಆಧಾರ ಸಹಿತ ದೂರು ಕೊಟ್ಟರೂ, ಪ್ರಕರಣ ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸಿದ್ದರು. ಪೊಲೀಸರ ನಡೆ ವಿರುದ್ಧ ದೂರುದಾರರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ, ಪ್ರಕರಣ ಸಂಬಂಧ ಎಫ್.ಐ.ಆರ್ ದಾಖಲಿಸಿ, ತನಿಖೆ ನಡೆಸುವಂತೆ ಮಂಡ್ಯ ಜೆಎಂಎಫ್‍ಸಿ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

ಮಂಡ್ಯದ ಭೋವಿ ಕಾಲೋನಿ ನಿವಾಸಿ ಕಿರಣ್ ಕುಮಾರ್ ಎಂಬವರೇ ತಮ್ಮ ಸ್ನೇಹಿತರೊಬ್ಬರ ಮಗನಿಗೆ ಹೈಕೋರ್ಟ್‍ನಲ್ಲಿ ಉದ್ಯೋಗ ಕೊಡಿಸುವ ಆಮಿಷವನ್ನು ನಂಬಿ, ವಂಚಕರ ಜಾಲದಿಂದ ಹಣ ಕಳೆದುಕೊಂಡವರು.

ಪ್ರಕರಣದ ಹಿನ್ನೆಲೆ

ದೂರುದಾರ ಕಿರಣ್ ಕುಮಾರ್ ಎಂಬವರು ತಮ್ಮ ಸ್ನೇಹಿತರ ಮಗನ ಜೊತೆ ಬೋವಿ ಕಾಲೋನಿ ಮೂರನೇ ತಿರುವುನಲ್ಲಿರುವ ಕುಮಾರ್ ಎಂಬುವವರ ಮನೆಗೆ ತೆರಳಿದ್ದರು. ಈ ವೇಳೆ ಸಿ.ಕೆ.ಕುಮಾರ್ ಮತ್ತು ಆತನ ತಂಗಿ ಸರ್ಕಾರಿ ಶಿಕ್ಷಕಿಯಾಗಿರುವ ಸಿ.ಶಾಂತಲಾ ಎಂಬುವವರ ಜೊತೆ ಸೇರಿಕೊಂಡು, ಕಿರಣ್ ಜೊತೆ ಇದ್ದ ಸ್ನೇಹಿತನ ಮಗನಿಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದಾರೆ.

ಸಿ.ಕೆ.ಕುಮಾರ್ ಮತ್ತು ಆತನ ಸಹೋದರಿ ಸಿ.ಶಾಂತಲಾ ಅವರ ಮಾತುಗಳನ್ನ ನಂಬಿದ ಕಿರಣ್ ಕುಮಾರ್, ತಮ್ಮ ಜೊತೆ ಇದ್ದ ಸ್ನೇಹಿತನ ಮಗನ ಭವಿಷ್ಯದ ದೃಷ್ಟಿಯಿಂದ ತನ್ನದು ಎರಡು ಲಕ್ಷ ರೂಪಾಯಿ, ಸ್ನೇಹಿತನ ಮನೆಯವರಿಂದ ಎರಡು ಲಕ್ಷ ಸೇರಿಸಿ, ಒಟ್ಟು ನಾಲ್ಕು ಲಕ್ಷ ರೂಪಾಯಿ ಹಣವನ್ನ ಸಿ.ಕೆ.ಕುಮಾರ್ ಮತ್ತು ಸಿ.ಶಾಂತಲಾ ಅವರಿಗೆ ಕೊಡಲು ಒಪ್ಪಿದ್ದಾರೆ. ಒಪ್ಪಂದದಂತೆ ಸಿ.ಕೆ.ಕುಮಾರ್ ಮತ್ತು ಸಿ.ಶಾಂತಲಾ ಇಬ್ಬರೂ ಮೂರು ಲಕ್ಷ ರೂಪಾಯಿ ನಗದು ಪಡೆದುಕೊಂಡಿದ್ದಾರೆ. ಉಳಿದ ಒಂದು ಲಕ್ಷ ರೂಪಾಯಿಯನ್ನ ಸಿ.ಕೆ.ಕುಮಾರ್ ಮತ್ತು ಸಿ.ಶಾಂತಲಾ ಅವರು ಹೇಳಿದಂತೆ ಚನ್ನಪಟ್ಟಣ ತಾಲೂಕು ಚಿಕ್ಕೇನಹಳ್ಳಿಯ ಎಸ್.ಪಿ.ಮೋಹನ್ ಕುಮಾರ್ ಎಂಬುವವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಹೈ ಕೋರ್ಟ್‍ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಹಣ ಪಡೆದದ್ದಕ್ಕಾಗಿ, ಸಿ.ಕೆ.ಕುಮಾರ್ ಮತ್ತು ಸಿ.ಶಾಂತಲಾ ಇಬ್ಬರೂ ಕಿರಣ್ ಕುಮಾರ್ ಅವರಿಗೆ ಒಡಂಬಡಿಕೆ ಪತ್ರ ಕೂಡ ಬರೆದುಕೊಟ್ಟಿದ್ದಾರೆ.

2019ರ ನವೆಂಬರ್‌ನಲ್ಲಿ ಹೈಕೋರ್ಟ್‍ಗೆ ನೇಮಕವಾದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಆ ವೇಳೆ ಕಿರಣ್ ಕುಮಾರ್ ಅವರ ಸ್ನೇಹಿತನ ಮಗನ ಹೆಸರು ಇರದಿದ್ದಾಗ ಗಾಬರಿಯಾಗಿ ವಿಚಾರ ಮಾಡಿದ್ದಾರೆ. ಈ ವೇಳೆ ಎರಡನೇ ಪಟ್ಟಿಯಲ್ಲಿ ಹೆಸರು ಸೇರಿಸುವುದಾಗಿ ಹೇಳಿದ್ದಾರೆ. ಅವರ ಮಾತಿನ ಮೇಲೆ ನಂಬಿಕೆ ಬಾರದೆ, ಸಂಶಯ ಉಂಟಾದ ಕಾರಣ ಕಿರಣ್ ಕುಮಾರ್ ಅವರು ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿಕೊಂಡಿದ್ದಾರೆ.

ಹಣ ಕೇಳಿದ್ದಕ್ಕೆ ಬೆದರಿಕೆ

ಆ ವೇಳೆ ಸಿ.ಶಾಂತಲಾ ತಮ್ಮ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಕಾರಣ ಸ್ವಲ್ಪ ದಿನ ಕಾಲಾವಕಾಶ ಕೇಳಿದ್ದರು. ಕೊಟ್ಟ ಸಮಯ ಮುಗಿದ ನಂತರ ನಾಲ್ಕು ಲಕ್ಷ ಹಣದ ಪೈಕಿ 16/02/2020ರಲ್ಲಿ ಒಂದು ಲಕ್ಷ ಹಣವನ್ನ ಉದ್ಯೋಗಾಂಕ್ಷಿಯ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮೂಲಕ ಜಮಾ ಮಾಡಿದ್ದಾನೆ.

ಆ.೮ ರಲ್ಲಿ ಉಳಿದ ಹಣವನ್ನ ಕೇಳಲು ಹೋದ ವೇಳೆ ಕಿರಣ್ ಕುಮಾರ್ ವಿರುದ್ಧ ಸಿ.ಕೆ.ಕುಮಾರ್, ಸಹೋದರಿ ಸಿ.ಶಾಂತಲಾ ಜಗಳ ತೆಗೆದು, ಹಣದ ವಿಚಾರದಲ್ಲಿ ತಮ್ಮ ಮನೆ ಬಳಿಗೆ ಬಂದರೆ ಸುಮ್ಮನೇ ಬಿಡೋದಿಲ್ಲ. ನನಗೆ ಪೊಲೀಸರು, ರಾಜಕಾರಣಿಗಳು ಗೊತ್ತಿದ್ದು, ನಿನ್ನನ್ನ ಜೈಲಿಗೆ ಕಳಿಸುತ್ತೇನೆ ಅಂತೆಲ್ಲಾ ಬೆದರಿಕೆ ಹಾಕಿದ್ದರಂತೆ.

ದೂರು ಕೊಟ್ಟರೂ, ಕ್ರಮ ವಹಿಸದ ಪೊಲೀಸರು

ಈ ಸಂಬಂಧ ಆ.೮ ರಂದು ಸಿ.ಕೆ.ಕುಮಾರ್, ಸಿ.ಶಾಂತಲಾ ಮತ್ತು ಎಸ್.ಪಿ.ಮೋಹನ್ ಕುಮಾರ್ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಕಿರಣ್ ಕುಮಾರ್ ದೂರು ನೀಡುತ್ತಾರೆ. ಆದರೆ, ಸಂಬಂಧಪಟ್ಟ ಪೊಲೀಸರು ಕಿರಣ್ ಕುಮಾರ್ ದೂರನ್ನ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡಿರುತ್ತಾರೆ. ಮುಂದುವರೆದು ಮೇಲಾಧಿಕಾರಿಗಳಾದ ಎಸ್ಪಿ, ಡಿಜಿಪಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೂ ದೂರು ನೀಡಿದ್ದರೂ ಪ್ರಯೋಜವಾಗಿರಲಿಲ್ಲ.

ಕೋರ್ಟ್ ಮೊರೆ, ಎಫ್‍ಐಆರ್‌ಗೆ ಆದೇಶ

ಹೀಗಾಗಿ, ಅ.೧೩ ರಂದು ವಕೀಲ ಬಿ.ಟಿ.ವಿಶ್ವನಾಥ್ ಮುಖಾಂತರ ಕಿರಣ್ ಕುಮಾರ್ ಅವರು ಮಂಡ್ಯದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 162, 406, 417, 420, 467, 506 ಹಾಗೂ 120(ಬಿ) ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಮಂಡ್ಯ ಪೂರ್ವ ಠಾಣೆ ಪೊಲೀಸರಿಗೆ ಆದೇಶಿಸಿದ್ದಾರೆ.

ಬೃಹತ್ ಜಾಲದ ಶಂಕೆ

ಇದು ಸ್ಯಾಂಪಲ್ ಅಷ್ಟೇ. ಈ ರೀತಿ ಇತರೆ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದು, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟು ಕೊಡಿಸುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪಗಳು ಸಾಕಷ್ಟಿವೆ. ಈ ಜಾಲ ಕೇವಲ ಮಂಡ್ಯ ಮಾತ್ರವಲ್ಲದೆ, ರಾಜ್ಯದ ಉದ್ದಗಲಕ್ಕೂ ಹರಡಿದೆ ಎನ್ನಲಾಗುತ್ತಿದೆ. ಉದಾಹರಣೆಗೆ ಇದೇ ಪ್ರಕರಣದ ಆರೋಪಿಗಳಾದ ಸಿ.ಕೆ.ಕುಮಾರ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರವರ ಕಚೇರಿಯಲ್ಲಿ ಮೆಡಿಕಲ್ ಸೀಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಇದೆಲ್ಲವನ್ನೂ ನೋಡಿದರೆ, ಈ ಬೃಹತ್ ಜಾಲದಲ್ಲಿ ಹಲವು ಸರ್ಕಾರಿ ನೌಕರರು, ರಾಜಕಾರಣಿಗಳು, ರಾಜಕಾರಣಿಗಳ ಹಿಂಬಾಲಕರು ಇರುವ ಶಂಕೆ ಇದೆ. ಪೊಲೀಸರು ಸಮಗ್ರವಾಗಿ ಈ ಪ್ರಕರಣವನ್ನ ತನಿಖೆ ಮಾಡಿ, ತಪ್ಪಿತಸ್ಥರಿಗೆ ಕಾನೂನು ಶಿಕ್ಷೆಗೊಳಪಡಿಸುವ ಅವಶ್ಯಕತೆ ಇದೆ.

ಈ ಹಿಂದೆ ದೂರು ಕೊಟ್ಟಾಗಲೇ, ಹಲವು ಆಧಾರಗಳನ್ನು ಪೊಲೀಸರಿಗೆ ಒಪ್ಪಿಸಿದ್ದೆ. ಪೊಲೀಸರು ಎಫ್.ಐ.ಆರ್ ದಾಖಲಿಸೋಕೂ ಮುಂದಾಗಿದ್ದರು. ಆದರೆ, ಕೆಲವು ಪ್ರಭಾವಿಗಳು ಎಫ್.ಐ.ಆರ್ ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರೆಂಬ ಅನುಮಾನ ಇದೆ. ಇದೀಗ ನ್ಯಾಯಾಲಯವೇ ಎಫ್.ಐ.ಆರ್.ಗೆ ಆದೇಶ ಮಾಡಿದೆ. ಪೊಲೀಸರು ಯಾವ ಒತ್ತಡಕ್ಕೂ ಮಣಿಯದೆ, ನಿಷ್ಪಕ್ಷಪಾತವಾಗಿ, ಕಾನೂನುಬದ್ಧವಾಗಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.

× Chat with us