ಗೆಡ್ಡೆಗೆಣಸು ಮೇಳದಲ್ಲಿ 98 ಕೆಜಿಯ ನಾಗರಕೋನ ಗೆಣಸು

ಮೈಸೂರು: ನಗರದ ನಂಜರಾಜ ಬಹದ್ಧೂರು ಛತ್ರದಲ್ಲಿ ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಆಶ್ರಯದಲ್ಲಿ ಇಂದಿನಿಂದ ಗೆಡ್ಡೆ ಗೆಣಸು ಮೇಳ ಆರಂಭವಾಗಿದ್ದು, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೇಳಕ್ಕೆ ಚಾಲನೆ ನೀಡಿದರು.

ಕರ್ನಾಟಕದ ವಿವಿಧ ಭಾಗಗಳಿಂದ ಬರುವ 25ಕ್ಕೂ ಹೆಚ್ಚಿನ ಮಳಿಗೆಗಳವರು ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆಬಗೆಯ ಅಡುಗೆಗಳನ್ನು ಮೇಳದಲ್ಲಿ ಪ್ರದರ್ಶನಗೊಂಡವು.

ಈ ವೇಳೆ ಮಾತನಾಡಿದ ಯದುವೀರ್‌ ಅವರು, ಮೈಸೂರು ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಅದನ್ನು ಸಂರಕ್ಷಿಸದ ಹೊರತು ಭವಿಷ್ಯವಿಲ್ಲ ಎಂದರು.

ಕೋವಿಡ್ ಜನರಲ್ಲಿ ಆತಂಕ ಮೂಡಿಸಿದೆ. ನಾವು ತಿನ್ನು ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ನಿಸರ್ಗದತ್ತವಾಗಿ ಬೆಳೆಯುವ ಗೆಡ್ಡೆ ಗೆಣಸುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರೋಗರುಜಿನಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಮನುಷ್ಯ ಕೃಷಿ ಮಾಡುವ ಮುನ್ನ ಗೆಡ್ಡೆ ಗೆಣಸು ಮನುಕುಲದ ಆಹಾರವಾಗಿದ್ದವು. ಇಂಥ ಗೆಡ್ದಡೆ ಗೆಣಸು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು. ಪ್ರಕೃತಿಯ ಕೊಡುಗೆಯಾದ ಗೆಡ್ಡೆ ಗೆಣಸು ಗ್ರಾಹಕರ ಹಿತ ಕಾಯುತ್ತವೆ ಎಂದು ತಿಳಿಸಿದರು.

98 ಕೆಜಿಯ ನಾಗರಕೋನ ಗೆಣಸು: ಮೇಳದಲ್ಲಿ 98 ಕೆಜಿಯ 25ಅಡಿ ಇರುವ ನಾಗರಕೋನ ಗೆಣಸು ಗಮನ ಸೆಳೆಯಿತು. ಉತ್ತರಕನ್ನಡದ ಜೋಯಿಡಾದ ರೈತ ಪಾಂಡುರಂಗ ಗಾವಡಾ ಅವರು ಇದನ್ನು ಬೆಳೆದಿದ್ದು. 1 ವರ್ಷ 6 ತಿಂಗಳಲ್ಲಿ ಈ ಗೆಣಸನ್ನು ಬೆಳೆಸಲಾಗಿದೆ.

× Chat with us