ಶೇ 85 ಬೋಧನಾ ಶುಲ್ಕ: ಸರ್ಕಾರ ಆದೇಶ

ಬೆಂಗಳೂರು: ಖಾಸಗಿ ಶಾಲೆಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪೂರ್ಣ ಪಡೆದಿದ್ದರೆ, ಅದರಲ್ಲಿ ಶೇ 85ರಷ್ಟು ಮಾತ್ರ ಉಳಿಸಿಕೊಂಡು ಬಾಕಿ ಶೇ 15ರಷ್ಟು ಶುಲ್ಕವನ್ನು ತಕ್ಷಣ ಹಿಂದಿರುಗಿಸಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಅಲ್ಲದೆ, ಶಾಲಾ ಅಭಿವೃದ್ಧಿ ಶುಲ್ಕ ಸೇರಿದಂತೆ ಇತರ ಶುಲ್ಕಗಳು, ಟ್ರಸ್ಟ್ ಅಥವಾ ಸೊಸೈಟಿಗೆ ದೇಣಿಗೆ ಸ್ವೀಕರಿಸಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚಿಸಿದೆ.

ಹೆಚ್ಚುವರಿ ಶುಲ್ಕವನ್ನು 2020-21ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಒಂದೊಮ್ಮೆ ನಿಗದಿಪಡಿಸಿದ ಶುಲ್ಕಕ್ಕಿಂತ (ಶೇ 85ಕ್ಕಿಂತ ಹೆಚ್ಚು) ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಚಿಸಿದರೆ ಅದಕ್ಕೂ ಅವಕಾಶವಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಕೋವಿಡ್ ಕಾರಣದಿಂದ ಪೋಷಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಖಾಸಗಿ ಶಾಲೆಗಳು 2020-21ನೇ ಸಾಲಿನಲ್ಲಿ ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡುವಂತೆ ರಾಜ್ಯ ಸರ್ಕಾರ ೨೦೨೧ರ ಜ.29 ರಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಮಧ್ಯೆ, ಪೋಷಕರಿಂದ ಪೂರ್ಣ ಶುಲ್ಕ ವಸೂಲು ಮಾಡಿದ್ದ ಅನೇಕ ಖಾಸಗಿ ಶಾಲೆಗಳು, ಉಚ್ಚ ನ್ಯಾಯಾಲಯದ ಅಂತಿಮ ತೀರ್ಪು ಬಂದ ಬಳಿಕ ಶುಲ್ಕ ಕಡಿತ ಮಾಡುವುದಾಗಿ ಹೇಳಿದ್ದವು. ಸರ್ಕಾರದ ಆದೇಶವನ್ನು ಪರಿಷ್ಕರಿಸಿ ಸೆ. 16ರಂದು ತೀರ್ಪು ನೀಡಿದ್ದ ಉಚ್ಚ ನ್ಯಾಯಾಲಯ, ಶೇ 15ರಷ್ಟು ಶುಲ್ಕ ಕಡಿತ ಮಾಡುವಂತೆ ಖಾಸಗಿ ಶಾಲೆಗಳಿಗೆ ಸೂಚಿಸಿತ್ತು. ಆದರೆ, ಅನೇಕ ಶಿಕ್ಷಣ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ, ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.

× Chat with us