ಜೂ.15ರಿಂದ 8, 9, 10ನೇ ತರಗತಿಗೆ ಶಾಲೆ ಆರಂಭ

ಬೆಂಗಳೂರು: ಲಾಕ್‌ಡೌನ್ ಅನ್ನು ಜೂ.7ರ ವರೆಗೂ ವಿಸ್ತರಿಸಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಬೇಸಿಗೆ ರಜಾ ಅವಧಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂ.14ರ ವರೆಗೆ ನೀಡಿದ್ದು, ಜೂ.15ರಿಂದ 2021-22ನೇ ಸಾಲಿನ ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಗಳ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿದೆ.

ಈ ವೇಳಾಪಟ್ಟಿಯು ತಾತ್ಕಾಲಿಕವಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಪರಿಷ್ಕರಣೆಗೆ ಒಳಪಟ್ಟಿದೆ. ಕಾಲಕಾಲಕ್ಕೆ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆಗಳನ್ನು ಆಯಾ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಆದೇಶಿಸಿದೆ.

ಪ್ರಾಥಮಿಕ ಶಾಲೆಗಳಿಗೆ ಈ ಹಿಂದೆ ನಿಗದಿಪಡಿಸಿದ ಬೇಸಿಗೆ ರಜಾ ದಿನಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರೌಢಶಾಲೆಗಳಿಗೆ ಜೂ.14ರ ವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದು, ಅವರ ಕಲಿಕಾ ಸಮಸ್ಯೆಗಳನ್ನು ಪರಿಹರಿಸುವುದು.

× Chat with us