ಗೆಜ್ಜಲಗೆರೆ ಭೀಕರ ಕೊಲೆ ಪ್ರಕರಣ: 7 ಆರೋಪಿಗಳ ಬಂಧನ… ಹತ್ಯೆಗೆ ಕಾರಣವೇನು?

ಮಂಡ್ಯ: ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮನ್‌ಮುಲ್‌ಗೆ ಹಾಲು ಪೂರೈಕೆ ಮಾಡುವ ಕ್ಯಾಂಟರ್ ವಾಹನಗಳ ಟೆಂಡರ್ ಪಡೆಯುವ ವಿಚಾರ ಹೇಮಂತ್‌ಕುಮಾರ್ ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸಮೀಪದ ಮಲ್ಲಯ್ಯನಗರ ಬಳಿ ಕಳೆದ ಮೇ 10ರ ರಾತ್ರಿ ಹೇಮಂತ್ ಕುಮಾರ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಪೈಕಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗೆಜ್ಜಲಗೆರೆ ಗ್ರಾಮದ ಜಿ.ಪಿ. ಇಂದುಕುಮಾರ್ ಉ. ಪಾವಲಿ, ಪ್ರಸಾದ್ ಉ. ಪುಟ್ಟ, ಎಂ.ಎಸ್. ಸ್ವರೂಪಗೌಡ ಉ. ಸ್ವರೂಪ, ಚನ್ನಪಟ್ಟಣ ತಾಲ್ಲೂಕು ಮುದುಗೆರೆ ಗ್ರಾಮದ ಮಧು ಉ. ಕಪ್ಪೆ, ನಾಗರಾಜು ಉ. ನಾ, ಜಿ.ಎನ್. ಮಹದೇವ ಹಾಗೂ ಬಿಳಿಕೆರೆ ಗ್ರಾಮದ ಅವಿನಾಶ್ ಉ. ಇಡ್ಲಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಒಂದು ಮಾರುತಿ ಸ್ವಿಪ್ಟ್ ಕಾರು, ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮನ್‌ಮುಲ್‌ಗೆ ಹಾಲು ಪೂರೈಕೆ ಮಾಡುವ ಕ್ಯಾಂಟರ್ ವಾಹನಗಳ ಟೆಂಡರ್ ಪಡೆಯುವ ವಿಚಾರದಲ್ಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದುಕುಮಾರ್ ಹಾಗೂ ಕೊಲೆಯಾದ ಹೇಮಂತ್‌ಕುಮಾರ್ ನಡುವೆ ಹಲವು ದಿನಗಳಿಂದ ವೈಷಮ್ಯವಿತ್ತು. ಅಲ್ಲದೆ, ಮೇ 9ರ ಭಾನುವಾರದಂದು ಗೆಜ್ಜಲಗೆರೆ ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಉಭಯ ಗುಂಪುಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು. ಇದು ಸಹ ಕೊಲೆಗೆ ಕಾರಣವಾಗಿದೆ ಎಂದು ಹೇಳಿದರು.

ಇದೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಮೇ 10ರ ಸೋಮವಾರ ರಾತ್ರಿ ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಿ ಕ್ಯಾಂಟರ್ ವಾಹನಗಳನ್ನು ಒಕ್ಕೂಟದ ಆವರಣದಲ್ಲಿ ನಿಲ್ಲಿಸಿದ ನಂತರ ಹೇಮಂತ್ ಕುಮಾರ್ ತನ್ನ ಸ್ನೇಹಿತ ಸುನೀಲ್ ಕುಮಾರ್‌ನೊಂದಿಗೆ ರಾತ್ರಿ 8ರ ಸಮಯದಲ್ಲಿ ಬೈಕ್‌ನಲ್ಲಿ ಗೆಜ್ಜಲಗೆರೆ ಗ್ರಾಮಕ್ಕೆ ಬರುತ್ತಿದ್ದಾಗ, ಬೆಂಬಲಿಗರೊಂದಿಗೆ ಕಾರಿನಲ್ಲಿ ಹೊಂಚುಹಾಕಿ ಕುಳಿತ್ತಿದ್ದ ಇಂದುಕುಮಾರ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಲೆಮನ್ ಟೀ ಸ್ಟಾಲ್ ಬಳಿ ಹೇಮಂತ್‌ಕುಮಾರ್ ಚಾಲನೆ ಮಾಡುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ.

ಈ ವೇಳೆ ಬೈಕ್‌ನಿಂದ ಕೆಳಕ್ಕೆ ಬಿದ್ದ ಹೇಮಂತ್‌ಕುಮಾರ್ ಹಾಗೂ ಸುನೀಲ್‌ಕುಮಾರ್ ಮೇಲೆ ಇಂದುಕುಮಾರ್ ಮತ್ತು ಆತನ ಸಹಚರರು ಲಾಂಗ್‌ನಿಂದ ಹಲ್ಲೆನಡೆಸಿ ಹೇಮಂತ್‌ಕುಮಾರ್ ಕೈ ಕತ್ತರಿಸಿದ ನಂತರ ಕಾಂಕ್ರಿಟ್ ಇಟ್ಟಿಗೆಗಳಿಂದ ತಲೆ ಮೇಲೆ ಒಡೆದು ಗಾಯಗೊಳಿಸಿದ್ದಾರೆ. ಇದರಿಂದ ತೀವ್ರಗಾಯಗೊಂಡ ಹೇಮಂತ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟನು.
ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಂಕ್ಚರ್ ಆಗಿದ್ದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಮಲ್ಲಯ್ಯನಗರದ ಜಮೀನೊಂದರ ಬಳಿ ಬಿಟ್ಟು ಬೈಕಿನಲ್ಲಿ ಪರಾರಿಯಾಗಿದ್ದರು ಎಂದು ವಿವರಿಸಿದರು.

ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಇಂದುಕುಮಾರ್, ಪ್ರಸಾದ್, ಸ್ವರೂಪ ಅವರನ್ನು ಮೇ 16ರ ಭಾನುವಾರ ಚನ್ನಪಟ್ಟಣ ತಾಲ್ಲೂಕು ಮುದುಗೆರೆ ಸಮೀಪ ಬಂಧಿಸಿದರೆ, ಇನ್ನುಳಿದ ಆರೋಪಿಗಳನ್ನು ಸೋಮವಾರ ಬೆಳಿಗ್ಗೆ ಮುದುಗೆರೆ ಸಮೀಪವಿರುವ ಮಾವಿನ ಮರದ ತೋಪಿನ ಬಳಿ ಬಂಧಿಸಲಾಗಿದೆ ಎಂದು ಹೇಳಿದರು.

7 ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

× Chat with us