ಮದುವೆಗಾಗಿ ಹೊರಟರು… ಮಸಣ ಸೇರಿದರು!

ಕೇರಳ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ ಆರು ಮಂದಿ ಸಾವಿಗೀಡಾಗಿರುವ ಧಾರುಣ ಘಟನೆ ಕಾಸರಗೋಡಿನಲ್ಲಿನ ರಾಜಪುರಂನ ಪಾಣತ್ತೂರ್‌ ಪ್ರದೇಶದಲ್ಲಿ ನಡೆದಿದೆ.

ಪಾಣತ್ತೂರ್‌-ಸುಳ್ಯಾ ರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ಮನೆ ಮೇಲೆ ಉರುಳಿದೆ. ಇದರಿಂದ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಲ್ಲಿ ಐವರು ಕರ್ನಾಟಕ ಮೂಲದವರು ಎನ್ನಲಾಗಿದೆ (ತಲಾ ಇಬ್ಬರು ಮಕ್ಕಳು, ಮಹಿಳೆಯರು, ಪುರುಷರು ಮೃತರು). ಬಸ್‌ನಲ್ಲಿದ್ದ ಉಳಿದವರು ಗಾಯಗೊಂಡಿದ್ದಾರೆ. ಅವರನ್ನು ಪೂಡಮಕಳ್ಳು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ನಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕನ್ಹಂಗಡ್‌ನಲ್ಲಿರುವ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮದುವೆ ಸಮಾರಂಭಕ್ಕೆ ವಧುವಿನ ಸಂಬಂಧಿಕರು ಸುಳ್ಯಾದಿಂದ ಪಾಣತ್ತೂರ್‌ ಎಲ್ಲುಕೊಚ್ಚಿ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಬಸ್‌ ನಿಯಂತ್ರಣ ತಪ್ಪಿ ರಸ್ತೆ ಬಳಿಯಲ್ಲಿದ್ದ ಮನೆಯ ಮೇಲೆ ಪಲ್ಟಿ ಹೊಡೆದಿದೆ. ಜೋಸ್‌ ಎಂಬವರ ಮನೆ ಹಾನಿಗೊಳಗಾಗಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

× Chat with us