ಕೊಡಗಿನಲ್ಲಿ ಗಾಂಜಾ, ಡ್ರಗ್ಸ್ ದಂಧೆ: ಐವರ ಬಂಧನ

ಮಡಿಕೇರಿ: ಡ್ರಗ್ಸ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಪೋಕ್ಲು ಹೊದವಾಡ ಗ್ರಾಮದ ಪದವಿ ವಿದ್ಯಾರ್ಥಿ ಮೊಹಮ್ಮದ್ ಅಸ್ಲಾಂ(23), ನಾಪೋಕ್ಲು ಬೇತು ಗ್ರಾಮದ ವಿದ್ಯಾರ್ಥಿ ಕೆ.ಕೆ. ಬೋಪಣ್ಣ(22), ಅಕ್ಷಿತ್(24), ಮಡಿಕೇರಿಯ ಸುಮಂತ್(22) ಹಾಗೂ ರಾಜೇಶ್(22) ಬಂಧಿತ ಆರೋಪಿಗಳು.

ಡ್ರಗ್ಸ್ ಮತ್ತು ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೈನ್ ಗೇಟ್ ಬಳಿಯ ಡಿ.ಎಫ್.ಓ, ಬಂಗ್ಲೆ ಬಳಿ ಐವರು ಚರ್ಚೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ ಮಾಲು ಸಹಿತ ಐವರನ್ನು ಬಂಧಿಸಿದರು.

ಒಟ್ಟು 1.26 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳಾದ 750 ಗ್ರಾಂ ಗಾಂಜಾ, 11.970 ಗ್ರಾಂ AMPHETAMINE, 0.800 ಮಿಲಿ ಗ್ರಾಂ- ECSTASY ಹಾಗೂ ಎರಡು ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರ ನಿರ್ದೇಶನದಲ್ಲಿ ಡಿವೈಎಸ್‌ಪಿ ಬಿ.ಪಿ.ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಎ.ವೆಂಕಟೇಶ್, ಉಪ ನಿರೀಕ್ಷರಾದ ಅಂತಿಮ ಎಂ.ಟಿ, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್, ಸುನೀಲ್ ಪಿ.ಓ, ಧರ್ಮ ಕೆ.ಎಂ, ಎಲ್.ಎಸ್.ಶಶಿಕುಮಾರ್, ದಿವ್ಯ, ಸೌಮ್ಯ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

× Chat with us