36ನೇ ವಾರ್ಡ್: ನಾಮಪತ್ರ ಸಲ್ಲಿಕೆ ಆರಂಭ, ರುಕ್ಮಿಣಿ ಮಾದೇಗೌಡ ವಾರಗಿತ್ತಿ ಜೆಡಿಎಸ್‌ನಿಂದ ಕಣಕ್ಕೆ?

ಮೈಸೂರು: ಮಹಾಪೌರರಾಗಿದ್ದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ಅಸಿಂಧುವಾಗಿ ತೆರವಾಗಿದ್ದ ಮೈಸೂರು ಮಹಾನಗರಪಾಲಿಕೆ 36ನೇ ವಾರ್ಡಿನ ಸದಸ್ಯ ಸ್ಥಾನಕ್ಕೆ ಸೆ.3 ರಂದು ಚುನಾವಣೆ ನಡೆಯಲಿದ್ದು, ಸೋಮವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಯಿತು.

ನಗರಪಾಲಿಕೆಯ ಯರಗನಹಳ್ಳಿ 36ನೇ ವಾರ್ಡಿನ ಹಿಂದುಳಿದ ವರ್ಗ-ಬಿ ಮಹಿಳಾ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆ.23ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಗಾಯತ್ರಿಪುರಂನಲ್ಲಿರುವ ವಲಯ ಕಚೇರಿ 9ರಲ್ಲಿ ಅಭ್ಯರ್ಥಿಗಳು ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ತನಕ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಆಯ್ಕೆಯಾಗಿದ್ದ ರುಕ್ಮಿಣಿ ಮಾದೇಗೌಡ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರವನ್ನು ಮುಚ್ಚಿಟ್ಟಿದ್ದಾರೆಂದು ಪರಾಜಿತ ಅಭ್ಯರ್ಥಿ ರಜನಿ ಅಣ್ಣಯ್ಯ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್ ಸದಸ್ಯತ್ವ ಅಸಿಂಧುಗೊಳಿಸಿದ್ದರಿಂದ ಮಹಾಪೌರ ಹುದ್ದೆಯೂ ಕಳೆದುಕೊಳ್ಳಬೇಕಾಯಿತು. ಹೀಗಾಗಿ, ಆಯೋಗವು ಸೆ.೩ರಂದು ಚುನಾವಣೆಗೆ ದಿನಾಂಕ ಪ್ರಕಟಿಸಿದ್ದರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಯಿತು.

ಸಹೋದರನ ಪತ್ನಿಗೆ ಟಿಕೆಟ್: ಸರ್ವೋಚ್ಚ ನ್ಯಾಯಾಲಯದಲ್ಲಿ ಸದಸ್ಯತ್ವ ವಜಾ ಅರ್ಜಿ ವಿಚಾರಣೆಯಲ್ಲಿರುವ ಕಾರಣಕ್ಕಾಗಿ ಜಿಪಂ ಮಾಜಿ ಸದಸ್ಯ ಮಾದೇಗೌಡರು ತಮ್ಮ ಪತ್ನಿಯನ್ನು ಕಣಕ್ಕಿಳಿಸುವ ತೀರ್ಮಾನದಿಂದ ಹಿಂದೆ ಸರಿದು ಸಹೋದರನ ಪತ್ನಿ ಲೀಲಾವತಿ (ರುಕ್ಮಿಣಿ ಅವರ ವಾರಗಿತ್ತಿ) ಅವರನ್ನು ಕಣಕ್ಕಿಳಿಸಲಿದ್ದಾರೆ. ಹತ್ತು ವರ್ಷಗಳಿಂದ ಜಾ.ದಳ ವಾರ್ಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮಹೇಶ್ ಅವರ ಪತ್ನಿ ಎಸ್.ಲೀಲಾವತಿ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ಎಂ.ಇಡಿ ಪದವೀಧರರಾಗಿರುವ ಎಸ್.ಲೀಲಾವತಿ ಹೆಸರು ಅಧಿಕೃತವಾಗಿ ಘೋಷಣೆಯಾದ ಮೇಲೆ ಗುರುವಾರ ಅಥವಾ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

ರಜನಿ ಅಣ್ಣಯ್ಯ ಬಹುತೇಕ ಖಚಿತ: ಕಳೆದ ಚುನಾವಣೆಯಲ್ಲಿ ಪರಾಜಿತರಾಗಿರುವ ರಜನಿ ಅಣ್ಣಯ್ಯ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಶಾಸಕ ತನ್ವೀರ್ ಸೇಠ್ ಆಪ್ತ ಬೆಂಬಲಿಗ ಆಗಿರುವ ಅಣ್ಣಯ್ಯ ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಕಳೆದ ಸಲ 300 ಮತಗಳ ಅಂತರದಿಂದ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಕಣಕ್ಕಿಳಿಯುವುದು ಗ್ಯಾರಂಟಿಯಾಗಿದೆ. ಬಿಜೆಪಿ ಈ ಬಾರಿ ಮಾಜಿ ಮಹಾಪೌರ ಎಸ್.ಸಂದೇಶ್ ಸ್ವಾಮಿ ಅವರು ಸೂಚಿಸುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಭವವಿದೆ.

ನಗರಪಾಲಿಕೆ 36ನೇ ವಾರ್ಡಿನ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅರ್ಜಿ ಕರೆಯಲಾಗಿದೆ. ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯಾಗಲು ಇಚ್ಛಿಸುವವರು ನಗರ ಕಾಂಗ್ರೆಸ್ ಸಮಿತಿ ಹೆಸರಿನಲ್ಲಿ 5 ಸಾವಿರ ರೂ. ಡಿಡಿಯೊಂದಿಗೆ ಆ.19ರೊಳಗೆ ವೈಯಕ್ತಿಕ ವಿವರಗಳೊಂದಿಗೆ ಕಚೇರಿಯಲ್ಲಿ ಸಲ್ಲಿಸಬಹುದೆಂದು ಪ್ರಧಾನ ಕಾರ್ಯದರ್ಶಿ ಡಿ.ಈಶ್ವರ ಚಕ್ಕಡಿ ತಿಳಿಸಿದ್ದಾರೆ.

× Chat with us