ಎಂಪಿ ಮನೆ ಮುಂದೆ 3 ಬಾಂಬ್ ಸ್ಫೋಟ!

ಕೋಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆಯ ಬಳಿ ಇಂದು ಮುಂಜಾನೆ 3 ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ. ಅಲ್ಪ ತೀವ್ರತೆಯ ಬಾಂಬ್‌ಗಳು ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಿಜೆಪಿ ಎಂಪಿ ಅರ್ಜುನ್ ಸಿಂಗ್ ಮನೆ ಬಳಿ ನಡೆದ ಬಾಂಬ್ ದಾಳಿ ತುಂಬ ಆತಂಕ ಹುಟ್ಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯೇ ಅಪಾಯದಲ್ಲಿದೆ ಎನ್ನಿಸುತ್ತಿದೆ ಎಂದು ಘಟನೆ ಬಗ್ಗೆ ರಾಜ್ಯಪಾಲ ಜಗದೀಶ್ ಧನಕರ್ ಟ್ವೀಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ದಾಳಿಗೆ ತೃಣಮೂಲ ಕಾಂಗ್ರೆಸ್ ಪಕ್ಷವೇ ಕಾರಣವೆಂದು ಬಿಜೆಪಿ ಆರೋಪ ಮಾಡಿದೆ. ತನಗೂ ಬಾಂಬ್ ದಾಳಿಗೂ ಸಂಬಂಧವಿಲ್ಲ ಎಂದು ಹೇಳಿದೆ.

ಪೊಲೀಸರು ತನಿಖೆ ಮುಂದುವರಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಅರ್ಜುನ್ ಸಿಂಗ್ ಮನೆಯೆದುರು ಭದ್ರತೆಯನ್ನು ಹೆಚ್ಚಿಸಲಾಗಿದೆ. ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಪತ್ತೆ ಕಾರ್ಯ ನಡೆಯುತ್ತಿದೆ.

ಈ ವರ್ಷದ ಏಪ್ರಿಲ್ ತಿಂಗಳಲ್ಲಿ, ಅರ್ಜುನ್ ಸಿಂಗ್ ತಮ್ಮ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಆರೋಪ ಮಾಡಿದ್ದರು. ಉತ್ತರ ಕೋಲ್ಕತ್ತದ ಬೆಲ್ಗಾಚಿಯಾದಲ್ಲಿ ನನ್ನ ಮೇಲೆ ಗುಂಡಿನ ದಾಳಿ ಮಾಡಲು ಪ್ರಯತ್ನ ನಡೆದಿತ್ತು. ನನ್ನ ರಕ್ಷಣಾ ಸಿಬ್ಬಂದಿ ಕಾಪಾಡಿದರು ಎಂದು ಆಗ ಹೇಳಿದ್ದರು. ಅರ್ಜುನ್ ಸಿಂಗ್ ಮೊದಲು ತೃಣಮೂಲ ಕಾಂಗ್ರೆಸ್ ಶಾಸಕರೇ ಆಗಿದ್ದರು. 20019ರ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಸೇರಿ, ಬಾರಕ್‌ಪುರ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದಾರೆ.

× Chat with us