ಕಾರು ಅಪಘಾತ: ಇಬ್ಬರು ಖ್ಯಾತ ರೂಪದರ್ಶಿಯರು ಸಾವಿಗೀಡಾಗಿದ್ದಾರೆ

ತಿರುವನಂತಪುರಂ: ಕೇರಳದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಖ್ಯಾತ ರೂಪದರ್ಶಿಯರು ದುರಂತ ಸಾವಿಗೀಡಾಗಿದ್ದಾರೆ.

ಮಿಸ್ ಕೇರಳ 2019 ಪ್ರಶಸ್ತಿ ವಿಜೇತೆ ಆನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ಭಾನುವಾರು ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಕಾರು ಚಕ್ಕರಪರಂಬುವಿನಲ್ಲಿ ಹಾಲಿಡೇ ಇನ್ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪಾಲಾರಿವಟ್ಟಂ ಪೊಲೀಸರು ತಿಳಿಸಿದ್ದಾರೆ.

ರೂಪದರ್ಶಿ ಫೋಟೋ ಸೆಷನ್‌ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‌ನಿಂದ ಕೊಚ್ಚಿಗೆ ಬಂದಿದ್ದರು. ತ್ರಿಶೂರ್‌ಗೆ ತೆರಳುತ್ತಿದ್ದಾಗ ಅಪಘಾತ ವಲಯವಾದ ಚಕ್ಕರಪರಂಬು ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಗುರುತು ಹಿಡಿಯಲಾಗದಷ್ಟು ನಜ್ಜುಗುಜ್ಜಾಗಿದೆ.

× Chat with us