ನೆಗೆಟಿವ್‌ ವರದಿ ಇದ್ರೆ ಮಾತ್ರ ಚಾ.ನಗರಕ್ಕೆ ಬನ್ನಿ: ತಮಿಳುನಾಡಿನಿಂದ ಬಂದಿದ್ದ ಮೈಸೂರು, ಮಂಡ್ಯದ 134 ಕಾರ್ಮಿಕರು ವಾಪಸ್

ಚಾಮರಾಜನಗರ: ಉದ್ಯೋಗ ಅರಸಿ ತಮಿಳುನಾಡಿಗೆ ಗುಳೆ ಹೋಗಿದ್ದ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 134 ಕೂಲಿ ಕಾರ್ಮಿಕರನ್ನು ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಶನಿವಾರ ಜಿಲ್ಲೆಯ ಒಳಗಡೆ ಬಿಟ್ಟುಕೊಡದೇ ವಾಪಸ್ ಕಳುಹಿಸಲಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ 72 ಮಂದಿ, ಮಂಡ್ಯ ಜಿಲ್ಲೆಯ 62 ಮಂದಿ ಸಣ್ಣಪುಟ್ಟ ಮಕ್ಕಳೊಟ್ಟಿಗೆ ತಮ್ಮೂರಿಗೆ ಹೋಗಲು ತಮಿಳುನಾಡಿನಿಂದ ಮೂರು ವಾಹನಗಳಲ್ಲಿ ಬಂದಿದ್ದರು. ಈ ಎಲ್ಲರನ್ನು ಚಾಮರಾಜನಗರ ತಾಲ್ಲೂಕಿನ ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದರು. ತಾಳವಾಡಿ ತಹಸಿಲ್ದಾರ್ ಮತ್ತು ಪೊಲೀಸರು ಮನವೊಲಿಸಿದರೂ ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದರಷ್ಟೆ ರಾಜ್ಯದ ಒಳಗಡೆ ಪ್ರವೇಶವೆಂದು ಇಲ್ಲಿಯ ಪೊಲೀಸರು ಸ್ಪಷ್ಟಪಡಿಸಿದರು.

ಈ ಮಧ್ಯೆ ಚಾಮರಾಜನಗರದ ತಹಸಿಲ್ದಾರ್ ಚಿದಾನಂದ ಗುರುಸ್ವಾಮಿ, ನಗರ ಗ್ರಾಮಾಂತರ ಉಪ ವಿಭಾಗದ ಇನ್‌ಸ್ಪೆಕ್ಟರ್ ಆನಂದ್ ಅವರು ಸ್ಥಳಕ್ಕೆ ಧಾವಿಸಿದರು. ಅಲ್ಲಿಯ ತಹಸಿಲ್ದಾರ್ ಜತೆ ಮಾತನಾಡಿ ತಾಳವಾಡಿಯಲ್ಲಿಯೇ ಈ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲು ತಿಳಿಸಿದರು. ವರದಿ ಬರುವವರೆಗೂ ತಾಳವಾಡಿಯಲ್ಲಿಯೇ ಕ್ವಾರಂಟೈನ್ ಮಾಡುವಂತೆ ಹೇಳಿದರು. ಅದಕ್ಕೆ ಒಪ್ಪಿ ಎಲ್ಲಾ ಕಾರ್ಮಿಕರನ್ನು ತಾಳವಾಡಿಗೆ ಕರೆದೊಯ್ದರು.

ತಮಿಳುನಾಡಿನ ಪೊಲ್ಲಾಚಿ ಮತ್ತು ಸುತ್ತಮುತ್ತ ಕೋಳಿ ಫಾರಂಗಳಿದ್ದು, ಅಲ್ಲಿ ದುಡಿಯಲು ಕುಟುಂಬ ಸಮೇತ ಈ ಕಾರ್ಮಿಕರು ತೆರಳಿದ್ದರು. ಕೋವಿಡ್ ನೆಗೆಟಿವ್ ತನ್ನಿ ಎಂದು ತಡೆಯೊಡ್ಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ ಭಾರವಾದ ಹಾಗೂ ಒಲ್ಲದ ಮನಸ್ಸಿನಿಂದ ತಾವು ಬಂದಿದ್ದ ಲಾರಿ ಮತ್ತು ಈಚರ್ ವಾಹನಗಳನ್ನು ಹತ್ತಿ ತಾಳವಾಡಿಗೆ ಹೋದರು. ಮೂಡ್ಲುಪುರ ಸತೀಶ್ ನೇತೃತ್ವದ ತಂಡ ಈ ತಿಳಿದು ಇವರಿಗೆ ಉಪಾಹಾರ ವ್ಯವಸ್ಥೆ ಮಾಡಿದರು. ಹಸಿದ ಜೀವಗಳಿಗೆ ಮೃಷ್ಟಾನ ಸಿಕ್ಕಂತಾಯಿತು.

× Chat with us