ಮಳೆ ಅನಾಹುತ: ತುರ್ತು ಪರಿಹಾರಕ್ಕೆ ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ನಷ್ಟವಾಗಿದೆ. ಹೀಗಾಗಿ ಎಲ್ಲ ಜಿಲ್ಲೆಗಳಲ್ಲಿ ಮಳೆ ಹಾನಿ ವರದಿ ಮಾಹಿತಿ ಕಲೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಬಹಳಷ್ಟು ಬೆಳೆ ಹಾನಿಯಾಗಿದೆ. ಮೈಸೂರು, ಮಂಡ್ಯ, ಹಾಸನದಲ್ಲಿ ರಾಗಿಗೆ ಹೆಚ್ಚು ಹಾನಿಯಾಗಿದೆ. ಬೆಳಗಾವಿ, ಉತ್ತರ ಕರ್ನಾಟಕ ಭಾಗದಲ್ಲೂ ಹೆಚ್ಚು ಹಾನಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಹೋಗಿ, ಪರಿಶೀಲಿಸಿ, ಪರಿಹಾರದ ಬಗ್ಗೆ ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ. ಚುನಾವಣಾ ನೀತಿ ಸಂಹಿತೆಯಿಂದ ನಾವು ಸ್ಥಳ ಪರಿಶೀಲನೆ ಮಾಡಲು ಹೋಗಲು ಆಗಲ್ಲ, ಅದಕ್ಕಾಗಿ ಶಾಸಕರು, ಸಚಿವರನ್ನು ಕರೆದುಕೊಂಡು ಹೋಗದೇ, ಅಧಿಕಾರಿಗಳ ತಂಡ ಹೋಗಿ ಪರಿಶೀಲನೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮನೆ ಹಾನಿಗೆ 10 ಸಾವಿರ ರೂ. ಪರಿಹಾರ ಕೊಡಬೇಕು. ಬೆಳೆ ಪರಿಹಾರವಾಗಿ 130 ಕೋಟಿ ರೂ. ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲೆಗಳನ್ನು ನಾನು ಗುರುತು ಮಾಡಿದ್ದೇವೆ. ರೈತರ ಖಾತೆಗೆ ಪರಿಹಾರದ ಹಣ ಹೋಗುತ್ತದೆ. ಯಾವ ಯಾವ ಬೆಳೆಗೆ ಏನು ಪರಿಹಾರ ಅನ್ನೋದರ ಬಗ್ಗೆ ಈಗಾಗಲೇ ನಿಗದಿಪಡಿಸಲಾಗಿದೆ. ಕಾಫಿ ಬೆಳೆಗೆ ಪರಿಹಾರ ಸಿಗುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಅಶೋಕ್ ಹೇಳಿದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರದಿಂದ ಈಗಾಗಲೇ 8 ವರ್ಷದಲ್ಲಿ, ಎನ್‌ಡಿಆರ್‌ಎಫ್‌ನಿಂದ 13,519 ಕೋಟಿ ರೂ. ಎಸ್‌ಡಿಆರ್‌ಎಫ್‌ನಿಂದ 2922 ಕೋಟಿ ರೂ. ಬಿಡುಗಡೆ ಆಗಿದೆ. 151429 ರೈತರಿಗೆ ಇನ್ ಪುಟ್ ಸಬ್ಸಿಡಿ, ಜುಲೈ, ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ 130 ಕೋಟಿ ಬಿಡುಗಡೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

× Chat with us