ಬೆಂಗಳೂರಿನ ಚಾಮರಾಜಪೇಟೆ ಬಳಿ ಹೊತ್ತಿ ಉರಿಯಿತು ಬಿಎಮ್‌ಟಿಸಿ ಬಸ್, ಪ್ರಯಾಣಿಕರು, ಡ್ರೈವರ್ ಮತ್ತು ಕಂಡಕ್ಟರ್ ಸುರಕ್ಷಿತ!

ಬೆಂಗಳೂರು: ಬೇಚಲಿಸುವ ಕಾರುಗಳಿಗೆ ಬೆಂಕಿ ತಗುಲಿ ಅವು ರಸ್ತೆಯ ಮೇಲೆ ಹೊತ್ತಿ ಉರಿಯುವುದನ್ನು ನಾವು ನೋಡಿದ್ದೇವೆ ಮತ್ತ ವರದಿ ಮಾಡಿದ್ದೇವೆ. ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಹಾಗೆ ಹೊತ್ತಿ ಉರಿದ ಸಂದರ್ಭಗಳು ವಿರಳವೆಂದೇ ಹೇಳಬೇಕು. ಆದರೆ, ಶುಕ್ರವಾರ ದೀಪಾಂಜಲಿ ನಗರ ಡಿಪೋಗೆ ಸೇರಿದ ಬಸ್ಸೊಂದು ಚಾಮರಾಜಪೇಟೆಯ ಮಕ್ಕಳಕೂಟದ ಬಳಿ ಬೆಂಕಿ ಅವಗಢಕ್ಕೆ ಗುರಿಯಾಯಿತು. ಸಂತೋಷದ ಸಂಗತಿಯೇನೆಂದರೆ, ಸದರಿ ಬೆಂಕಿ ಆಕಸ್ಮಿಕದಲ್ಲಿ ಯಾರಿಗೂ ಗಾಯವಾಗಿಲ್ಲ. ಕೇವಲ ಬಸ್ ಮಾತ್ರ ಅರ್ಧಕ್ಕಿಂತ ಹೆಚ್ಚಿನ ಭಾಗದಷ್ಟು ಸುಟ್ಟು ಕರಕಲಾಗಿದೆ. ಕೆ ಅರ್ ಮಾರ್ಕೆಟ್ ಗೆ ಹೊರಟಿದ್ದ ಬಸ್ಸು ಹೊಸಕೆರೆಹಳ್ಳಿ ಬಸ್ ನಿಲ್ದಾಣದಿಂದ ರಸ್ತೆಗಳಿದಿತ್ತು. ಬೆಂಕಿ ಹೊತ್ತಿಕೊಂಡ ನಂತರ ಯಾರೋ ಒಬ್ಬ ವ್ಯಕ್ತಿ ಒಂದು ಚಿಕ್ಕ ಪೈಪಿನ ಮೂಲಕ ನೀರು ಹಾಯಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಅದರೆ, ಆ ಪೈಪ್ ನಿಂದ ಹೊರಬೀಳುತ್ತಿದ್ದ ನೀರಿನ ಪ್ರಮಾಣ ಮತ್ತು ಪ್ರೆಶರ್ ಗೆ ಬೆಂಕಿ ಆರಿಸುವ ಕ್ಷಮತೆ ಇರಲಿಲ್ಲ.

ಸಾರ್ವಜನಿಕರ ಪೈಕಿ ಯಾರೋ ಒಬ್ಬರು ಅಗ್ನಿ ಶಾಮಕದಳದ ಕಚೇರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಫೈರ್ ಎಂಜಿನ್​ಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಯು ಬೆಂಕಿಯನ್ನು ಆರಿಸಿದೆ. ಆದರೆ ಅಷ್ಟರಲ್ಲಿ ಅರ್ಧದಷ್ಟು ಬಸ್ ಸುಟ್ಟು ಹೋಗಿತ್ತು.

ಬಸ್​ನಲ್ಲಿ ಒಟ್ಟು 40 ಜನ ಪ್ರಯಾಣಿಕರಿದ್ದರು ಮತ್ತು ಎಂಜಿನ್ನಲ್ಲಿ ಹೊಗೆಯಾಡಲಾರಂಭಿಸಿದ ಕೂಡಲೇ ಅವರನೆಲ್ಲ ಇಳಿಸಿ ಬೇರೆ ಬಸ್ನಲ್ಲಿ ಕಳಿಸಲಾಯಿತು ಎಂದು ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದ ಬಸ್ ಕಂಡಕ್ಟರ್ ಹೇಳಿದರು.