ಬಿಜೆಪಿ ಜನಸ್ವರಾಜ್ ಯಾತ್ರೆ ಪ್ರಾರಂಭ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಗುರುವಾರ (ನ.18) ದಿಂದ ರಾಜ್ಯಾದ್ಯಂತ ಜನಸ್ವರಾಜ್ ಯಾತ್ರೆಯನ್ನು ಆರಂಭಿಸಿದೆ. ಬಿಜೆಪಿಯ ಘಟಾನುಘಟಿ ನಾಯಕರುಗಳು 4 ತಂಡಗಳಲ್ಲಿ ರಾಜ್ಯಾದ್ಯಂತ ಜನಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮುಖಂಡರ ತಂಡ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಜನಸ್ವರಾಜ್ ಯಾತ್ರೆ ಆರಂಭಿಸಿದ್ದು, ಪಕ್ಷದ ರಾಜ್ದಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದ ತಂಡ ಕೊಪ್ಪಳದಿಂದ ಯಾತ್ರೆ ಆರಂಭಿಸಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ದಾವಣಗೆರೆಯಿಂದ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದ ತಂಡ, ಶಿವಮೊಗ್ಗದಿಂದ ಜನಸ್ವರಾಜ್ ಯಾತ್ರೆ ಆರಂಭಿಸಿತು.

ಬಿಜೆಪಿ ಮುಖಂಡರ ಈ ಜನಸ್ವರಾಜ್ ಯಾತ್ರೆ ನ. 21ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಪಕ್ಷದ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿ.10 ರಂದು ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಕನಿಷ್ಠ 18 ರಿಂದ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಈ ಜನಸ್ವರಾಜ್ ಯಾತ್ರೆಯನ್ನು ಬಿಜೆಪಿ ನಡೆಸುತ್ತಿದೆ. ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ಜತೆಗೆ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಮಾಡುವುದು ಈ ಯಾತ್ರೆಯ ಉದ್ದೇಶವಾಗಿದೆ. ಈ ಯಾತ್ರೆಯಲ್ಲಿ ಕೇಂದ್ರದ ಸಚಿವರುಗಳು, ರಾಜ್ಯದ ಸಚಿವರುಗಳು, ಶಾಸಕರು, ಸಂಸದರು ಹಾಗೂ ಪ್ರಮುಖ ಮುಖಂಡರುಗಳು ಪಾಲ್ಗೊಂಡಿದ್ದಾರೆ.

ಜನಸ್ವರಾಜ್ ಯಾತ್ರೆ ಹಾದು ಹೋಗುವ ಎಲ್ಲ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಗಳ ಮೂಲಕ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವರು. ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ಭಾಗವಾಗಿ ಯಾತ್ರೆ ಸಾಗುವ ಎಲ್ಲೆಡೆ ಗ್ರಾಮಪಂಚಾಯ್ತಿ ಸದಸ್ಯರ ಸಮಾವೇಶಗಳನ್ನು ಆಯೋಜಿಸಲಾಗಿದೆ.