ಬೈಕ್‌ ಕಳ್ಳತನ; ಅಪ್ರಾಪ್ತರ ಬಂಧನ

ಮಡಿಕೇರಿ: ನಗರದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳವು ಮಾಡಿದ ಬಾಲಾಪರಾಧಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಅ.೩೦ರಂದು ಸಿ.ಆರ್.ತಿಮ್ಮಯ್ಯ ಎಂಬವರು ಟಿವಿಎಸ್ ಅಪಾಚಿ ಮೋಟಾರು ಬೈಕನ್ನು ನಿಲ್ಲಿಸಿದ್ದರು. ಆ ಬೈಕ್ ಕಳವು ಆಗಿದ್ದ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸದರಿ ಪ್ರಕರಣದಲ್ಲಿನ ಆರೋಪಿಗಳ ಪತ್ತೆ ಬಗ್ಗೆ ತಂಡವನ್ನು ರಚಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ ತಂಡ ಮಡಿಕೇರಿಯ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಕಳ್ಳತನವಾಗಿದ್ದ ಟಿವಿಎಸ್ ಅಪಾಚಿ ಮೋಟಾರು ಬೈಕ್ ಸೇರಿದಂತೆ ರಾಜ್ಯದ ಬೆಂಗಳೂರು ಹಾಗೂ ಮಂಡ್ಯ ನಗರದಲ್ಲಿ ಮತ್ತು ಆಂತರ್ ರಾಜ್ಯವಾದ ಕೇರಳದ ಕಣ್ಣೂರಿನಲ್ಲಿ ಕಳುವಾಗಿದ್ದ ಒಟ್ಟು ೫ ವಿವಿಧ ಕಂಪನಿಯ ಮೋಟಾರು ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಶಪಡಿಸಿಕೊಂಡ ಬೈಕ್‌ಗಳ ಅಂದಾಜು ಮೌಲ್ಯ ೨,೨೫,೦೦೦ ರೂ.ಗಳಾಗಿವೆ.

ಮೊಟಾರು ಬೈಕುಗಳನ್ನು ಕಳವು ಮಾಡಿದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದುಕೊಂಡು ಬಾಲ ಅಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.