ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ

ಅಹಮದಾಬಾದ್: ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ಎರಡು ದಿನಗಳಿಂದ ಗಾಂಧಿನಾಡಿನಲ್ಲಿ ಕಂಡು ಬಂದ ರಾಜಕೀಯ ಬೆಳವಣಿಗೆಯಲ್ಲಿ ಪ್ರಥಮ ಬಾರಿ ಶಾಸಕರಾದ ಪಟೇಲ್‌ಗೆ ಸಿಎಂ ಹುದ್ದೆ ನೀಡಿ ಬಿಜೆಪಿ ವರಿಷ್ಠರು ಅಚ್ಚರಿ ಮೂಡಿಸಿದ್ದಾರೆ.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ನೂತನ ಮುಖ್ಯಮಂತ್ರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯ ರೂಪಾಣಿ ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಭೂಪೇಂದ್ರ ಅವರನ್ನು ಸ್ಥಾನಕ್ಕೆ ಆಯ್ಕೆ ಮಾಡಿತು.

ಭೂಪೇಂದ್ರ ಪಟೇಲ್ ಅವರು ತಳಮಟ್ಟದಿಂದ ಹಂತ ಹಂತವಾಗಿ ಬೆಳೆದವರು. ನಗರಸಭೆಯಿಂದ ತಮ್ಮ ರಾಜಕೀಯ ಆರಂಭಿಸಿದವರು. 2017ರಲ್ಲಿ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿ 1.17 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು.

ಗುಜರಾತಿನ ಮಾಜಿ ಮುಖ್ಯಮಂತ್ರಿ ಮತ್ತು ಉತ್ತರ ಪ್ರದೇಶ ರಾಜ್ಯಪಾಲೆ ಆಗಿರುವ ಆನಂದಿಬೆನ್ ಪಟೇಲ್ ಅವರಿಗೆ ಭೂಪೇಂದ್ರ ಅವರು ನಿಕಟವರ್ತಿ. ಹಿಂದೆ ಆನಂದಿಬೆನ್ ಅವರು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರದಿಂದಲೇ ಭೂಪೇಂದ್ರ ಅವರೂ ಗೆದ್ದಿದ್ದಾರೆ.

ಭೂಪೇಂದ್ರ ಅವರು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2015-17ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು.

× Chat with us