ಹುಲಿಮರಿಗಳ ಜನನದಲ್ಲಿ ಮೈಸೂರು ಮೃಗಾಲಯ ಮೊದಲು

ಮೈಸೂರು : ನಗರದ ಪ್ರಸಿದ್ಧ ಪ್ರವಾಸಿ ತಾಣವಾದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತಾರ ಎಂಬ ಹೆಣ್ಣು ಬಿಳಿ ಹುಲಿಯು ಮೂರು ಮರಿಗಳಿಗೆ ಜನ್ಮ ನೀಡಿದೆ.

ತಾರಾ ಏ.26ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ ನೀಡಿದ್ದು, ಆರೈಕೆ ಮಾಡುತ್ತಿದೆ. ತಾಯಿ ಮತ್ತು ಮೂರು ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

ಸಹಜವಾಗಿ ಹಾಲುಣಿಸುವ ಮೂಲಕ ಆರೈಕೆ ಮಾಡುತ್ತಿದೆ. ಕಳೆದೆರಡು ವಾರಗಳಿಂದ ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆರೈಕೆಯಲ್ಲಿ ತಾಯಿ ಹುಲಿಯಿಂದ ಸಹಜ ವರ್ತನೆ ದೃಢಪಟ್ಟ ಹಿನ್ನೆಲೆಯಲ್ಲಿ ಹುಲಿಮರಿಗಳ ಜನನವನ್ನು ಮೃಗಾಲಯ ದೃಢಪಡಿಸಿದೆ.

ಈ ಬಗ್ಗೆ ಮಾತನಾಡಿದ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ 9 ವರ್ಷಗಳ ನಂತರ ಮೃಗಾಲಯದಲ್ಲಿ ಹುಲಿಮರಿಗಳ ಜನನವಾಗಿದೆ. ಹುಲಿಗಳ ಸಂರಕ್ಷಣೆ ಮತ್ತು ಹುಲಿಮರಿಗಳ ಜನನದಲ್ಲಿ ಮೈಸೂರು ಮೃಗಾಲಯ ಮುಂಚೂಣಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಹುಲಿಗಳ ಕೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಜನನ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಇದೀಗ ಬೇರೆ ಬೇರೆ ಮೃಗಾಲಯಗಳಿಂದ ಹುಲಿಗಳ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತಾರಾ ಹಾಗೂ ರಾಕಿಯನ್ನು ಒಟ್ಟಿಗೆ ಬಿಡಲಾಗಿತ್ತು. ಇದೀಗ ಮೂರು ಮರಿಗಳು ಜನಿಸಿವೆ. ಪಾಲಕರು ಹಾಗೂ ವೈದ್ಯರು ತಾಯಿ ಹುಲಿ ಹಾಗೂ ಮರಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಈ ಮರಿಗಳ ಜನನದಿಂದ ಮೈಸೂರು ಮೃಗಾಲಯ 9 ಗಂಡು ಹುಲಿ, 7 ಹೆಣ್ಣು ಹುಲಿ ಹಾಗೂ ಮೂರು ಹುಲಿಮರಿಗಳನ್ನು ಹೊಂದಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.