ಜಿಟಿಡಿ ಬಣಕ್ಕೆ ಭರ್ಜರಿ ಗೆಲುವು!

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್‌) ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣ ಭರ್ಜರಿ ಜಯ ಸಾಧಿಸಿದೆ.

ಮೈಮುಲ್‌ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಜಿಟಿಡಿ ಬಣ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್‌ ವರಿಷ್ಠ- ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಸಾ.ರಾ.ಮಹೇಶ್‌ ಬಣವು ಕೇವಲ ೩ ಸ್ಥಾನಗಳನ್ನಷ್ಟೇ ಗಳಿಸಿದೆ. ಈ ಮೂಲಕ ಜಿ.ಟಿ,ದೇವೇಗೌಡ ಅವರ ಬಣ ಮುಂದಿನ 5 ವಷದ ವರೆಗೆ ಮೈಮುಲ್‌ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತಗೊಂಡಿದೆ.

ಮಧುಚಂದ್ರಗೆ ಮುಖಭಂಗ
ಮೈಮುಲ್ ಚುನಾವಣೆಯಲ್ಲಿ ಎಚ್‌.ಡಿ‌.ರೇವಣ್ಣ ಸಂಬಂಧಿ ಎಸ್.ಕೆ.ಮಧುಚಂದ್ರ ಸೋಲು ಅನುಭವಿಸಿದ್ದಾರೆ. ಅವರು ಎಚ್‌ಡಿಕೆ -ಸಾ.ರಾ.ಮಹೇಶ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಚಂದ್ರ, ‘ಮೈಸೂರು ಜಿಲ್ಲೆಯಲ್ಲಿ ಜಿ.ಟಿ.ದೇವೇಗೌಡರ ಪ್ರಾಬಲ್ಯ ಒಪ್ಪಿಕೊಂಡಿದ್ದೇವೆ. ಪೂರ್ವ ಸಿದ್ಧತೆ ಇಲ್ಲದೆ ಕಣಕ್ಕಿಳಿದಿದ್ದು ಸೋಲಿಗೆ ಕಾರಣವಾಯಿತು’ ಎಂದು ಹೇಳಿದರು.