ಬಾ.ನಾ. ಸುಬ್ರಮಣ್ಯ

ಚಿತ್ರರಂಗ : ಡಿಜಿಟಲ್‌ ಲೋಕ, ಸಾಮಾಜಿಕ ತಾಣಗಳ ಸುತ್ತಮುತ್ತ

ವೈಡ್‌ ಆಂಗಲ್‌

ಕಳೆದ ಒಂದು ವಾರ ಕನ್ನಡ ಚಿತ್ರರಂಗದಲ್ಲೀ ಭಾರೀ ಸುದ್ದಿ. ತೆರೆಯ ಮೇಲೆ ಪವಾಡ ಸದೃಶವಾಗಿ ಗೆಲ್ಲುತ್ತಿರುವ ಚಿತ್ರದ ಸುದ್ದಿ ಒಂದೆಡೆ, ತೆರೆಯ ಮೇಲೆ ಜನಪ್ರಿಯರಾದ, ಆದರೆ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿರುವವರ ಸುದ್ದಿ ಇನ್ನೊಂದೆಡೆ. ಸಾಮಾಜಿಕ ಮಾಧ್ಯಮಗಳು ಬೀರುವ ಪರಿಣಾಮ ಮತ್ತು ಅದರ ಸಾಧ್ಯತೆಗಳು ಕುರಿತಂತೆ, ಈ ಹಿಂದೆ ಹೇಳಿದಂತೆ, ಅಂಧರು ಆನೆ ಮುಟ್ಟಿ ನೋಡಿ ಅದನ್ನು ವರ್ಣಿಸಿದಂತೆಯೇ ಸರಿ.

ಚಿತ್ರದ ಕುರಿತಂತೆ ರಾಜ್ ಬಿ. ಶೆಟ್ಟಿ ಮತ್ತವರ ಗೆಳೆಯರು ಸೇರಿ ನಿರ್ಮಿಸಿದ ಚಿತ್ರ ‘ಸು ಫ್ರಮ್ ಸೋ’ ಮರುಭೂಮಿಯಲ್ಲಿ ನೀರು ಕಂಡಂತಾಗಿದೆ ಕನ್ನಡ ಚಿತ್ರರಂಗಕ್ಕೆ. ಕಳೆದ ವಾರ ತೆರೆಕಂಡ ‘ಎಕ್ಕ ’ ಮತ್ತು ‘ಜೂನಿಯರ್ ’ ಚಿತ್ರಗಳು ಪರವಾಗಿಲ್ಲ ಎನಿಸಿಕೊಳ್ಳತೊಡಗಿದ್ದವು. ಆದರೆ ‘ಸು ಫ್ರಮ್ ಸೋ’ ಚಿತ್ರ ತೆರೆಗೆ ಬರುತ್ತಿದ್ದಂತೆ ಎಲ್ಲರ ಗಮನ ಅಲ್ಲಿಗೆ ಹೋಯಿತು. ಹೊಸಬರ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ಎಂದೂ ಮಾಡದ ದಾಖಲೆ ಮಾಡಿತು. ವಾರಾಂತ್ಯ ಮಾತ್ರವಲ್ಲ, ವಾರದ ದಿನಗಳಲ್ಲೂ ‘ಜನಭರಿತ ’ ಆಟಗಳು!

ವಿಷಯ ಅದಲ್ಲ. ಯಾವುದೇ ರೀತಿಯ ಪ್ರಚಾರ ಈ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಇರಲಿಲ್ಲ. ಬಿಡುಗಡೆ ಪೂರ್ವ ಕಾರ್ಯಕ್ರಮ, ಟೀಸರ್ ಬಿಡುಗಡೆ, ಟ್ರೈಲರ್ ಬಿಡುಗಡೆ, ಹಾಡುಗಳ ಬಿಡುಗಡೆ, ಅದನ್ನು ಮಿಲಿಯಗಟ್ಟಲೇ ಜನ ನೋಡಿದ್ದಾರೆ ಎನ್ನುವ ಪ್ರಚಾರ, ಜನಪ್ರಿಯ ನಟರ ಸಾಥ್, ಪ್ರಸ್ತುತಿ ಮೊದಲಾದ ಯಾವುದೇ ಪ್ರಚಾರದ ಮೊರೆ ಹೋಗದೆ ತೆರೆಗೆ ಬಂದ ಚಿತ್ರವದು. ಆರಂಭದಲ್ಲಿ ಚಿತ್ರಮಂದಿರಗಳನ್ನು ಕೊಡಲು ಹಿಂದೇಟು ಹಾಕಿದವರು, ಜನಪ್ರಿಯ ನಟರು ಇಲ್ಲ ಎಂದ ಮಂದಿ, ಪ್ರಚಾರ ಸಾಲದು ಎಂದು ಹೇಳಿದ ಮಂದಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಚಿತ್ರರಸಿಕರನ್ನು ಈ ಚಿತ್ರ ಸೆಳೆಯುತ್ತಿದೆ.

ಹಾಗಾದರೆ ಈ ಚಿತ್ರದ ಯಶಸ್ಸಿನ ಗುಟ್ಟೇನು? ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಜ್ ಬಿ. ಶೆಟ್ಟಿ ಅವರಿಗೆ ಮೊದಲಿನಿಂದಲೇ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಚಿತ್ರ ನೀಡುವ ಛಲವಿತ್ತು. ಅವರ ‘ ಟೋಬಿ’ ಚಿತ್ರದ ಬಿಡುಗಡೆ ಪೂರ್ವದಲ್ಲಿ ನಡೆದ ಸಮಾರಂಭದಲ್ಲಿ ಈ ಮಾತನ್ನು ಅವರು ಹೇಳಿದ್ದರು ಕೂಡ. ಆದರೆ ಅಲ್ಲಿ ಅವರ ಲೆಕ್ಕಾಚಾರ ತಪ್ಪಿತ್ತು.

‘ಒಂದು ಮೊಟ್ಟೆಯ ಕಥೆ ’ ಹೇಳಿದ ಅವರು ಈ ಬಾರಿ ಛಲ ಬಿಡದೆ ತಮ್ಮ ಲೆಕ್ಕ ಸರಿಮಾಡಿಕೊಂಡಿದ್ದಾರೆ. ‘ಪೋಸ್ಟರ್ ನೋಡಿ ಜನ ಬರ್ತಾರೆ’, ನಟರ ಮುಖ ನೋಡಿ ಜನ ಬರ್ತಾರೆ ಎನ್ನುವುದೆಲ್ಲ ಸುಳ್ಳು, ಚಿತ್ರ ಚೆನ್ನಾಗಿದ್ದರೆ ಜನ ಬರ್ತಾರೆ ಎನ್ನುವುದು ಅವರ ವಾದ. ಅವರದೇ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ ’ ಚಿತ್ರವನ್ನು ಜನ ಸ್ವೀಕರಿಸುವುದರ ಕುರಿತೂ ಅವರಿಗೆ ಅನುಮಾನ ವಿತ್ತಂತೆ. ಕಾರಣ, ಅದು ಪರ್ಸನಲ್ ಸಿನಿಮಾ. ಅವರದೇ ಮಾತಿದು.

ಪ್ರಚಾರವಿಲ್ಲದೆ ಬಂದ ಚಿತ್ರಗಳು ಗೆದ್ದ ಸಾಕಷ್ಟು ಉದಾಹರಣೆಗಳೂ ಇವೆ. ಎಚ್. ಡಿ . ಕುಮಾರಸ್ವಾಮಿ ಅವರಿಗಾಗಿ ಎಸ್. ನಾರಾಯಣ್ ನಿರ್ದೇಶಿಸಿದ, ಮುರಳಿ (ಈಗ ಶ್ರೀಮುರಳಿ) ಮುಖ್ಯಭೂಮಿಕೆಯ ಚಿತ್ರ ‘ ಚಂದ್ರಚಕೋರಿ’ ಯಾವುದೇ ಪ್ರಚಾರವಿಲ್ಲದೆ ತೆರೆಕಂಡಿತ್ತು. ಅದಕ್ಕೆ ಕಾರಣವೂ ಇತ್ತು. ಚಿತ್ರೋದ್ಯಮದಲ್ಲಿ ನಿರ್ಮಾಪಕರ ಸಂಘ ಪ್ರದರ್ಶಕರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಹೊಸ ಚಿತ್ರಗಳ ಬಿಡುಗಡೆ ಇರಲಿಲ್ಲ. ಈ ಚಿತ್ರದ ನಿರ್ಮಾಪಕರಾದ ಎಚ್. ಡಿ. ಕುಮಾರಸ್ವಾಮಿ ಅವರು ಪರ್ಯಾಯ ನಿರ್ಮಾಪಕರ ಸಂಘವನ್ನು ಸ್ಥಾಪಿಸುವ ನಿರ್ಧಾರ ಮಾಡಿದ್ದೇ ಅಲ್ಲದೆ ಆ ಮೂಲಕ ಚಿತ್ರವನ್ನು ಬಿಡುಗಡೆ ಮಾಡಿದರು. ಯಾವುದೇ ಪ್ರಚಾರ ಇರಲಿಲ್ಲ. ಆ ಚಿತ್ರ ಬೆಳಗಾವಿಯ ಪ್ರಕಾಶ್ ಚಿತ್ರಮಂದಿರದಲ್ಲಿ ೫೦೦ದಿನ, ೨೬ ಕೇಂದ್ರಗಳಲ್ಲಿ ರಜತ ಮಹೋತ್ಸವ ವಾರ ಮತ್ತು, ೩೭ ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಇದೇ ನಿರ್ಮಾಪಕ, ನಿರ್ದೇಶಕ ಜೋಡಿಯ ಇನ್ನೊಂದು ಚಿತ್ರ ‘ಗಲಾಟೆ ಅಳಿಯಂದ್ರು ’ ಕೂಡ ಯಾವುದೇ ಪ್ರಚಾರ ಇಲ್ಲದೆ ತೆರೆಗೆ ಬಂದಿತ್ತು. ವೀರಪ್ಪನ್ ರಾಜಕುಮಾರ್ ಅಪಹರಣದ ಉತ್ತರಾರ್ಧದ ದಿನಗಳವು. ಶಿವರಾಜಕುಮಾರ್, ನಾರಾಯಣ್ ಮುಖ್ಯಪಾತ್ರಗಳಲ್ಲಿದ್ದ ಆ ಚಿತ್ರ ೩೮ ಕೇಂದ್ರಗಳಲ್ಲಿ ಶತದಿನ ಪ್ರದರ್ಶನ ಕಂಡ ದಾಖಲೆ.

ಹಾಗೆ ನೋಡಿದರೆ, ‘ಸು ಫ್ರಮ್ ಸೋ’ ಬಳಗದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ’ , ‘ಕಾಂತಾರ’ ಚಿತ್ರಗಳು ಅಷ್ಟೇನೂ ಅದ್ಧೂರಿ ಪ್ರಚಾರದೊಂದಿಗೆ ಬಂದಿಲ್ಲ ಅವುಗಳೂ ಅತ್ಯಂತ ಯಶಸ್ಸನ್ನು ಕಂಡವು. ನೆಲದ ಕಥೆಯನ್ನು ಹೇಳುವ ಚಿತ್ರಗಳು ಗೆಲ್ಲುತ್ತವೆ ಎನುವುದನ್ನು ಆ ಎರಡು ಚಿತ್ರಗಳು ತೋರಿಸಿಕೊಟ್ಟವು. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದವು. ಇದೀಗ ಆ ಸಾಲಿಗೆ ‘ಸು ಫ್ರಮ್ ಸೋ’ ಸೇರಿಕೊಂಡಿದೆ. ಯಾವುದೇ ರೀತಿಯ ಪೂರ್ವ ಪ್ರಚಾರವನ್ನು ಅದ್ಧೂರಿಯಾಗಿ ಮಾಡದೆ. ರಿಷಭ್ ಶೆಟ್ಟಿ ಅವರ ‘ಕಾಂತಾರ’ ದಲ್ಲಿ ಸ್ಥಳೀಯ ‘ದೈವ ’ ಚಿತ್ರದ ಮೂಲದಲ್ಲಿದ್ದರೆ, ಜೆ. ಪಿ. ತುಮಿನಾಡು ಅವರ ‘ಸು ಫ್ರಮ್ ಸೋ’ ದ ಕೇಂದ್ರ ‘ದೆವ್ವ’! ಚಿತ್ರದ ಕೇಂದ್ರ ಪಾತ್ರ ಅದರ ಕಥೆ ಮತ್ತು ಅದನ್ನು ನಿರೂಪಿಸಿದ ರೀತಿ. ಸಿನಿಮಾ ನೋಡಿದವರಿಂದಲೇ, ಅದರ ಪ್ರಚಾರ ಆಗುತ್ತದೆ ಎನ್ನುವ ಕಾರಣಕ್ಕೆ ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸುತ್ತಾರೆ ರಾಜ್ ಬಿ. ಶೆಟ್ಟಿ. ಬಿಡುಗಡೆಯ ಮುನ್ನಾದಿನಕ್ಕೆ ಈ ಸಂಖ್ಯೆ ನಲವತ್ತಾಯಿತು ಎನ್ನುತ್ತಾರೆ ಅವರು. ಮೊದಲೆಲ್ಲ ಪ್ರೀಮಿಯರ್ ಪ್ರದರ್ಶನ ಎಂದರೆ, ಮೊದಲ ಪ್ರದರ್ಶನ. ಉದ್ಯಮದ ಮಂದಿ, ಅತಿಥಿಗಳಿಗಾಗಿ, ಒಮ್ಮೊಮ್ಮೆ ಮಾಧ್ಯಮವೂ ಸೇರಿದಂತೆ ಪ್ರದರ್ಶನ. ಆದರೆ ಈ ದಿನಗಳ ಲೆಕ್ಕಾಚಾರವೇ ಬೇರೆ. ನಲವತ್ತು ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸುವುದು ಹೇಗೆ? ಈಗ ಅದಕ್ಕಾಗಿಯೇ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಗಳಿವೆ. ಅವುಗಳಿಗೆ ತಮ್ಮ ಬೇಡಿಕೆಗಳನ್ನು ಹೇಳಿದರಾಯಿತು. ಮಂಗಳೂರೋ, ಮೈಸೂರೋ, ಬೆಂಗಳೂರೋ , ಹುಬ್ಬಳ್ಳಿಯೋ ಅಲ್ಲಿನ ಆಸಕ್ತ ಮಂದಿಗೆ ಟಿಕೆಟ್ ತೆಗೆದು ಚಿತ್ರ ವೀಕ್ಷಿಸಲು ನೆರವಾಗುತ್ತವೆ ಈ ಸಂಸ್ಥೆಗಳು. ನಿರ್ಮಾಣ ತಂಡದ ಶಕ್ತ್ಯಾನುಸಾರ ಈ ಪ್ರದರ್ಶನಗಳು ನಡೆಯುತ್ತವೆ.

ಚಿತ್ರ ಚೆನ್ನಾಗಿದ್ದರೆ ಈ ಪ್ರದರ್ಶನಗಳು ಪ್ರಚಾರ ವಾಹಕಗಳಾಗುತ್ತವೆ. ಇಲ್ಲದೆ ಹೋದರೆ ಅಪಪ್ರಚಾರಕ್ಕೆ ಎಡೆ ಮಾಡಿಕೊಡಲೂ ಬಹುದು. ರಾಜ್ ಬಿ. ಶೆಟ್ಟಿ ಅಂಥವರು, ಚಿತ್ರರಸಿಕರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರು. ಹಾಗಾಗಿಯೇ ‘ ಒಂದು ಮೊಟ್ಟೆಯ ಕಥೆ ‘ ಯಂತಹ ಚಿತ್ರವನ್ನು ನೀಡಿದ್ದು ಮಾತ್ರವಲ್ಲ, ತಾವೇ ಮೊಟ್ಟೆತಲೆಯವನಾಗಿ ನಟಿಸಿದ್ದು, ಗೆದ್ದದ್ದು. ಪ್ರಚಾರ ಇಲ್ಲದೆ ಚಿತ್ರ ಬಿಡುಗಡೆಯಾದದ್ದು, ನವಮಾಧ್ಯಮಗಳು ಹಾಗೂ ಚಿತ್ರೋದ್ಯಮಕ್ಕೆ ಹೊಸದೊಂದು ಪಾಠವೇ ಹೌದು. ಈ ಡಿಜಿಟಲ್ ದಿನಗಳಲ್ಲಿ ನವಮಾಧ್ಯಮಗಳು ಚಿತ್ರಗಳ ಪ್ರಚಾರಕ್ಕೆ ಅನಿವಾರ್ಯ ಎನ್ನುವುದನ್ನು ಅಲ್ಲಗಳೆದು ಎಲ್ಲಕ್ಕೂ ಮೊದಲು ಒಳ್ಳೆಯ ವಸ್ತು, ಅದರ ನಿರೂಪಣೆ ಮುಖ್ಯ ಎಂದು ಹೇಳಿ, ಗೆದ್ದು ತೋರಿಸಿದ ಚಿತ್ರವಿದು.

ಈ ಚಿತ್ರದ ಗೆಲುವಿನ ಜೊತೆಜೊತೆಯಲ್ಲೇ ನಟ ದರ್ಶನ್ ಅಭಿಮಾನಿಗಳು ಹಾಗೂ ತಾರೆ ರಮ್ಯಾ ನಡುವೆ ನಡೆಯುತ್ತಿರುವ ಎಕ್ಸ್ ಬರಹ ಸಮರ, ಕಾನೂನು ಕ್ರಮಕೈಗೊಳ್ಳುವಂತೆ ರಮ್ಯಾ ದೂರು, ನಟ ಪ್ರಥಮ್ ಪ್ರಸಂಗ ಇನ್ನೊಂದೆಡೆ ಪ್ರಚಾರ ಪಡೆಯತೊಡಗಿದೆ. ಜನಪ್ರಿಯ ನಟರಿಗೆ ಅಭಿಮಾನಿಗಳಿರುತ್ತಾರೆ. ಅವರ ಚಿತ್ರಗಳನ್ನು ನೋಡಿ ಅಭಿಮಾನಿಗಳಾದ ವರು, ಇಲ್ಲವೇ ಅವರ ಸಾಮಾಜಿಕ ನಿಲುವು, ಬದ್ಧತೆಗಳಿಗಾಗಿ ಹಿಂಬಾಲಕರಾದವರು. ಕೆಲವು ನಟರು ಅಭಿಮಾನಿಗಳನ್ನು ತಾವೇ ಪ್ರೋತ್ಸಾಹಿಸಿದರೆ, ಕೆಲವರು ತಮಗೂ ಅವರಿಗೂ ಸಂಬಂಧ ಇಲ್ಲ ಎಂದ ಪ್ರಸಂಗಗಳೂ ಇವೆ. ನಾಗ್ ಸಹೋದರರು ಎಂದೂ ಅಭಿಮಾನಿ ಸಂಘಟನೆಗಳನ್ನು ಉತ್ತೇಜಿಸಿದ್ದಿಲ್ಲ. ಆದರೆ ಇಂದು ಶಂಕರ್‌ನಾಗ್ ಅವರ ಅಭಿಮಾನಿ ಸಮೂಹ ಬಹಳ ದೊಡ್ಡದು. ರಾಜ್ಯದ ಬಹುತೇಕ ನಗರಗಳ ಆಟೋರಿಕ್ಷಾ ನಿಲ್ದಾಣಗಳಿಗೆ ಶಂಕರ್‌ನಾಗ್ ಹೆಸರಿದೆ!

ಸಾಮಾಜಿಕ ತಾಣಗಳ ತಮ್ಮ ಖಾತೆಗಳಲ್ಲಿ ಏನು ಬೇಕಾದರೂ ಹೇಳಬಹುದು, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುವುದೇನೋ ನಿಜ. ತಮ್ಮವರನ್ನು ಹಾಡಿ ಹೊಗಳುವುದನ್ನು ಯಾರೂ ತಡೆಯುವುದಿಲ್ಲ. ಆದರೆ ಇನ್ನೊಬ್ಬರ ಮಾನಹಾನಿಕರವಾದ ಸಾಲುಗಳು, ನಿಂದನೆ, ಅವಾಚ್ಯ ಪದಗಳ ಪ್ರಯೋಗ ಇವು ಎಂದೂ ಸಭ್ಯತೆ ಅಲ್ಲ. ಅದು ತಾವು ಆರಾಧಿಸುವ ನಟರಿಗೂ ಗೌರವ ತರುವಂತಹದ್ದಲ್ಲ ಎನ್ನುವುದನ್ನು ಸಂಬಂಧಪಟ್ಟವರು ಮನಗಾಣಬೇಕು. ಅಭಿಮಾನಿಗಳು, ತಮಗಾಗದವರ ಮೇಲೆ, ಬಳಸುವ ಭಾಷೆ ಬಹಳಷ್ಟು ಸಂದರ್ಭಗಳಲ್ಲಿ ತೀರಾ ಕೆಳಮಟ್ಟದ್ದಾಗಿರುತ್ತದೆ. ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಪ್ರಕಟಿಸುವ ಹಕ್ಕೂ ಅವರವರಿಗಿದೆ. ತಮಗಾಗದ ವಿಷಯ ಎಂದು ಮೈಮೇಲೆ ಬೀಳುವಂತೆ ಬರೆಯುವ ಪ್ರವೃತ್ತಿ ಉದ್ಯಮದ ದೃಷ್ಟಿಯಿಂದಲೂ ಸಮರ್ಥನೀಯವಲ್ಲ. ಕಾನೂನಿನ ಕೈಗೆ ಸಿಕ್ಕರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಕುಣಿಕೆಯಾಗುವ ಸಾಧ್ಯತೆಯೇ ಹೆಚ್ಚು.

ರಮ್ಯ, ಪ್ರಥಮ್, ದರ್ಶನ್ ಅಭಿಮಾನಿಗಳು ಇವರ ಪ್ರಸಂಗಗಳು ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಇದೆ. ರಾಜಕೀಯ ಕ್ಷೇತ್ರದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯ ಇರುವ ರಾಜಕಾರಣಿಗಳ ಹಿಂಬಾಲಕರು ಕೂಡ ಇಂತಹದೇ ಕೆಲಸಗಳಲ್ಲಿ ನಿರತರು. ಕೆಲವು ಅಪವಾದಗಳ ಹೊರತಾಗಿ ಎನ್ನಿ. ಪಕ್ಷಗಳ ಮಂದಿ ಕೂಡ. ಈಗಾಗಲೇ ಇರುವ ನಿಯಮಗಳ ಜೊತೆ ಇನ್ನಷ್ಟು ಬಿಗಿಯಾದ ಕಾನೂನನ್ನು ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಜ್ಜೆ ಇಟ್ಟಿವೆ. ಸಾಮಾಜಿಕ ಮಾಧ್ಯಮಗಳ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಅದು ಅಗತ್ಯ ಎನ್ನುವುದು ಬಹುತೇಕರ ಅಭಿಪ್ರಾಯ.

– ಬಾ.ನಾ ಸುಬ್ರಹ್ಮಣ್ಯ

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ: ಬಸ್ ಟಿಕೆಟ್‌ ದರ ದುಪ್ಪಟ್ಟು ಏರಿಕೆ

ಬೆಂಗಳೂರು: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಇರುವುದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂಡಿಗೋ ವಿಮಾನ ಸಮಸ್ಯೆ ಬೆನ್ನಲ್ಲೇ ಇತರ ವಿಮಾನಗಳ…

12 mins ago

2026ರ ಐಪಿಎಲ್‌ ಬೆಂಗಳೂರಿನಲ್ಲೇ ಫಿಕ್ಸ್: ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ

ಬೆಂಗಳೂರು: 2026ರ ಐಪಿಎಲ್‌ಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಎಸ್‌ಸಿಎ ಚುನಾವಣೆ ಮತದಾನದ ವೇಳೆ…

35 mins ago

ದೆಹಲಿ: ಇಂದು 108 ಇಂಡಿಗೋ ವಿಮಾನಗಳ ಹಾರಾಟ ರದ್ದು

ನವದೆಹಲಿ: ಇಂಡಿಗೋ ವಿಮಾನದ ಅಧ್ವಾನ ಆರನೇ ದಿನವೂ ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನೂರಕ್ಕೂ…

46 mins ago

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

2 hours ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

2 hours ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

3 hours ago