ಮೈಸೂರಿಗೆ ಇಂದಿರಾಜಿ ಭೇಟಿ ನೀಡಿದ ಆ ದಿನ – ಭಾಗ ೧

  • ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ

ಅಂದು ೧೯೮೨ರ ಜನವರಿ . ಮೈಸೂರಿಗೆ ಪ್ರಧಾನಿ ಇಂದಿರಾ ಗಾಂಧಿ ಬರಲಿದ್ದರು. ಹೆಲಿಪ್ಯಾಡಿನಿಂದ ಲಲಿತಮಹಲಿಗೆ ಮೊದಲು ಬಂದು, ಅಲ್ಲಿಂದ ಹನ್ನೊಂದು ಗಂಟೆಗೆ ಸಿಎಫ್ಟಿಆರ್ನಲ್ಲಿ ನಡೆಯಲಿದ್ದ ಸಮಾವೇಶದ ಉದ್ಘಾಟನೆಗೆ ತೆರಳಬೇಕಿತ್ತು.

ಬೆಳಿಗ್ಗೆ ಒಂಬತ್ತಾಗುವುದರೊಳಗೆ ಮುಖ್ಯಮಂತ್ರಿ ಗುಂಡೂರಾವ್, ರಾಜ್ಯಪಾಲ ಗೋವಿಂದನಾರಾಯಣ್ ಸೇರಿದಂತೆ ಇಡೀ ಮಂತ್ರಿಮಂಡಲ ಮತ್ತು ಪಾಸ್ ಇದ್ದ ಕಾಂಗ್ರೆಸ್ ನಾಯಕರು ಲಲಿತಮಹಲಿಗೆ ಹಿಂಡುಗಟ್ಟಿ ಬರತೊಡಗಿದರು. ತಮ್ಮದೇ ಸಮಾರಂಭವಿದ್ದರೂ ಒಂದೆರಡು ಗಂಟೆ ತಡವಾಗಿ ಬರುವ ಮಂತ್ರಿ ಮಹೋದಯರೆಲ್ಲ ಎರಡು ಗಂಟೆ ಮೊದಲೇ ತರಾತುರಿಯಲ್ಲಿ ಬಂದದ್ದನ್ನು ನೋಡಿ ಆಶ್ಚರ್ಯವೆನಿಸಿತು.

ಇಂದಿರಾಜಿಯವರ ಮಿನಿಟ್ ಟು ಮಿನಿಟ್ ಕಾರ್ಯಕ್ರಮದಂತೆ ಅವರು ಹೆಲಿಪ್ಯಾಡಿನಿಂದ ಲಲಿತಮಹಲಿಗೆ ಬರಲಿದ್ದ ಸಮಯ ಬೆಳಿಗ್ಗೆ ೧೦.೧೫ ಗಂಟೆ. ಆದರೆ ಒಂಬತ್ತಕ್ಕೇ ಲಲಿತಮಹಲಿನ ಪ್ರವೇಶದ್ವಾರ, ಪಡಸಾಲೆ ಎಲ್ಲವೂ ರಾಜಕಾರಣಿಗಳಿಂದ ಗಿಜಿಗುಡತೊಡಗಿತು. ಎಲ್ಲರೂ ಗರಿಗರಿ ಶುಭ್ರ ಶ್ವೇತ ಖಾದಿ ತೊಟ್ಟಿದ್ದ ಗಣ್ಯರೇ. ಕಾಲದ ಪಾನ್ ಜಗಿತ, ಸಿಗರೇಟ್ ಹೊಗೆಯ ಗಬ್ಬಿಲ್ಲದೆ ಎಲ್ಲರೂ ಒಂಥರಾ ಕ್ಲೀನಾಗಿ ಕಾಣುತ್ತಿದ್ದರು. ಆದರೆ ಅಳತೆ ಮೀರಿ ಗಹಗಹಿಸುವ ಅನಾಗರಿಕ ಸಪ್ಪಳ ಮಾತ್ರ ಕಿವಿಗೆ ಅಪ್ಪಳಿಸುತ್ತಿತ್ತು .

ನನಗೆ ಲಲಿತಮಹಲಿನಲ್ಲಿಯೇ ಮಫ್ತಿ ಡ್ಯೂಟಿ. ಇನ್ನೇನು ವಿಐಪಿ ಬರುವ ಸಮಯ ಸಮೀಪಿಸಿತು. ಅಲ್ಲಲ್ಲಿ ಚದುರಿ ನಿಂತಿದ್ದ ಗಣ್ಯರನ್ನು ಒಂದು ಕಡೆ ಶಿಸ್ತಾಗಿ ನಿಂತುಕೊಳ್ಳಿ ಎಂದು ಹೇಳಲಾಗದ ಇಕ್ಕಟ್ಟು.

ನನ್ನ ಮೇಲಿನವರು, “ಅವರನ್ನೆಲ್ಲಾ ಸರಿಯಾಗಿ ನಿಂತ್ಕೊಳ್ಳೋದಿಕ್ಕೆ ಹೇಳ್ರೀಎಂದು ನನ್ನನ್ನು ಗದರಿಸುತ್ತಲೇ ಇದ್ದರು.

ಹೇಗೆ ಹೇಳೋದು? ಎಲ್ಲರೂ ಮಂತ್ರಿ ಮಹೋದಯರೇ. ಒಂದು ಮಾತಾಡಿದರೆ ಹೆಚ್ಚು ಇಲ್ಲವೆ ಕಡಿಮೆ. ‘ಸ್ವಲ್ಪ ಅಡ್ಜಸ್ಟ್ ಮಾಡಿ ನಿಂತುಕೊಳ್ಳಿ. ಸಪ್ಪಳ ಬೇಡಿಎಂಬಂತೆ ಮುಖದಲ್ಲೇ ಗಿಂಜುತ್ತಾ ಓಡಾಡುತ್ತಿದ್ದೆ.

ಪ್ರಧಾನಿ ಹೆಲಿಪ್ಯಾಡ್ ಬಿಟ್ಟರು ಎಂಬ ಮೆಸೇಜ್ ಬಂತು.

ಸುತ್ತಲಿದ್ದವರಿಗೆಮೇಡಂ ಗೇಟಿಗೆ ಬಂದೇ ಬಿಟ್ಟರುಎಂಬಂತೆ ಹೇಳಿದೆ. ಎಲ್ಲರೂ ಸಡನ್ನಾಗಿ ಗಾಬರಿಗೊಂಡು ಅಲರ್ಟ್ ಆದರು. ಇಡೀ ಲಲಿತಮಹಲ್ ಸ್ತಬ್ಧವಾಗಿ ಹೋಯಿತು. ಎಲ್ಲರಲ್ಲೂ ಕಾತರ ಮನೆ ಮಾಡಿ, ಗುಜುಗುಜು ತಂತಾನೆ ನಿಂತಿತು.

ನನ್ನ ಕಾಲೇಜು ದಿನಗಳ ಹೀರೋಗಳಾದ ವೀರೇಂದ್ರ ಪಾಟೀಲ್, ಇಬ್ರಾಹಿಂ ಮುಂತಾದ ವಿಪಕ್ಷದವರೆಲ್ಲ ಈಗ ಕಾಂಗೈಗಳಾಗಿ ಅತ್ತಿತ್ತ ಜೋರಾಗಿ ಓಡಾಡುತ್ತಿದ್ದರು. ಅವರೆಲ್ಲ ಎಮರ್ಜೆನ್ಸಿ ನಂತರ ಇಂದಿರಾರನ್ನು ತುಚ್ಛವಾಗಿ ಬೈದು ಭೀಕರ ಭಾಷಣ ಮಾಡಿದ್ದನ್ನು ಕೇಳಿ ಸಂತೋಷಿಸಿದ್ದೆ. ಮೇಡಂ ಬಂದೊಡನೆ ಇವರೆಲ್ಲ ಉಳಿದ ಕಾಂಗೈಗಳ ದೈನ್ಯತೆ ಬಿಟ್ಟ ಹಿಂದಿನ ಗತ್ತಿನಿಂದ ಕೈಕುಲುಕಿ ಮಾತಾಡುತ್ತಾರೆ ಎಂಬ ನಿರೀಕ್ಷೆ ಬೇರೆ ಇತ್ತು. (ನನಗಾಗ ಅಪಕ್ವ ಇಪ್ಪತ್ತೆಂಟರ ಹರಯ!) ಮಂತ್ರಿಗಳಲ್ಲದ ಹೀರೊಗಳ ಗುಂಪಿನ ಬಳಿ ನಿಂತುಕೊಂಡೆ.

ಅರ್ಧ ಕಿಮೀ ದೂರದಲ್ಲಿ ವಾಹನಗಳ ಸಾಲು ಬರುವುದು ಗೊತ್ತಾಯಿತು. ಒಟ್ಟು ೨೬ ವಾಹನಗಳಿದ್ದ ಇಟ್ಞqqs (ಅತಿ ಗಣ್ಯ ವ್ಯಕ್ತಿಗಳ ಬೆಂಗಾವಲಿನ ವಾಹನಗಳ ಸಾಲು) ಅದು. ಮೊದಲಿಗೆ ಕೆಂಪು ಬಾವುಟದ ವಾರ್ನಿಂಗ್ ಜೀಪು ಬಂತು. ಅಲ್ಲಿದ್ದ ಎಲ್ಲರೂ ಎದ್ದುನಿಂತರು. ಇಡೀ ಲಲಿತಮಹಲಿನಲ್ಲಿ ಏಕ್ ದಂ ಸ್ತಬ್ಧತೆ ಆವರಿಸಿತು.

ಕೊಂಚ ಹೊತ್ತಿನ ನಂತರ ಬಂದ ಪೈಲಟ್ ವಾಹನ, ಅದನ್ನು ಹಿಂಬಾಲಿಸಿ ಬಂದ ನಾಲ್ಕಾರು ಬೆಂಗಾವಲು ವಾಹನಗಳು. ನಡುವೆ ಬುಲೆಟ್ ಪ್ರೂಫ್ ಕಾರು. ಅದರಲ್ಲಿ ಇಂದಿರಾಜಿ. ಅವರ ನಂತರದಲ್ಲಿ ನಾನಾ ಅಧಿಕಾರಿಗಳಿದ್ದ ಇಪ್ಪತ್ತು ಕಾರುಗಳು. ಕೊನೆಯಲ್ಲಿ ಆಂಬ್ಯುಲೆನ್ಸ್.

ಇಂದಿರಾಜಿ ಕಾರು ಪೋರ್ಟಿಕೊದಲ್ಲಿ ನಿಂತಿತು. ೨೨ ಜನರ ಸಶಸ್ತ್ರ ಪಡೆ ರಾಷ್ಟ್ರೀಯ ಗೌರವ ಸಲ್ಲಿಸಿತು. ಅಲ್ಲಿಂದ ಬಂದ ಪ್ರಧಾನಿಯವರನ್ನು ಮುಖ್ಯಮಂತ್ರಿ ಗುಂಡೂರಾಯರು ರಾಜ್ಯದ ಪರವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಮೆಟ್ಟಿಲು ಹತ್ತಿ ಬರುತ್ತಿದ್ದಂತೆ ಫಳ್ ಎಂದು ಮಿಂಚು ಹೊಡೆದಂತಾಗಿ ಮೂಡಿದ ಸ್ತಂಭೀಭೂತತೆ. ಇಡೀ ವಾತಾವರಣಕ್ಕೆ ಹಬ್ಬಿದ ನೀರವತೆ.

ಇಂದಿರಾಜಿ ತಕ್ಷಣ CFTRIಗೆ ಹೊರಡಬೇಕಿತ್ತು. ತಮ್ಮ ರೂಮಿಗೆ ಹೋಗಿ ಬರಲು ಒಂದರ್ಧ ಗಂಟೆ ತೆಗೆದುಕೊಂಡರು. ಕಾಯುವಿಕೆಯ ಅವಧಿಯಲ್ಲಿ ಯಾವೊಬ್ಬ ಮಂತ್ರಿಯೂ ತುಟಿ ಪಿಟಕ್ ಎನ್ನಲಿಲ್ಲ. ಓರ್ವ ವ್ಯಕ್ತಿಯ ಬರುವಿಕೆ ಅಲ್ಲಿದ್ದವರನ್ನೆಲ್ಲಾ ಸ್ತಬ್ಧಗೊಳಿಸುವ ಪವಾಡವನ್ನು ನಾನು ನೋಡಿದ್ದು ಅದೇ ಮೊದಲು ಮತ್ತು ಅದೇ ಕೊನೆಯದು ಕೂಡ.

ಇದೇನು ಈಕೆ ಬಂದೊಡನೆ ಇಷ್ಟು ಗರ ಹೊಡೆದಂತಾಗಬೇಕೇ? ಯಾಕೆ ಹೀಗೆ? ಎಮರ್ಜೆನ್ಸಿಗಾಗಿ ಸೋಲಿನ ಅವಮಾನ ಅನುಭವಿಸಿ ವಾಪಸ್ ಬಂದವರು ಆಕೆ. ಕಾಂಗೈಗಳಿಗೆ ಈಗ ಹಳೆಯ ಭಯ ಉಳಿದಿರಲಾರದು. ಆಕೆಯೆದುರು ಜಬರ್ದಸ್ತಾಗಿ ಇರುತ್ತಾರೆಂದುಕೊಂಡಿದ್ದ ನನ್ನ ಎಮರ್ಜೆನ್ಸಿ ಹೀರೊಗಳೂ ಗರಬಡಿದವರಂತೆ ನಿಂತದ್ದನ್ನು ನೋಡಿ ನನಗೇ ಬೇಜಾರಾಯಿತು!

ಇಂದಿರಾ CFTRI ಕಾರ್ಯಕ್ರಮಕ್ಕೆ ಹೋಗಲು ಮೆಟ್ಟಲಿಳಿದು ಬರುತ್ತಿದ್ದಾರೆ ಎಂಬ ಮಾಹಿತಿ ಬಂತು. ಮತ್ತೆ ಆವರಿಸಿದ ಅದೇ ನೀರವತೆ. ಸಚಿವ ಸಂಪುಟದವರ ಪರಿಚಯ ಮಾಡಿಸಲು ಮುಖ್ಯಮಂತ್ರಿಗಳು ಎಲ್ಲರನ್ನೂ ಒಂದೆಡೆ ನಿಲ್ಲಿಸಿ ಮುಂದೆ ನಿಂತು ಕಾಯುತ್ತಿದ್ದರು.

ದಡ ದಡ ಮೆಟ್ಟಿಲಿಳಿದು ಬಂದ ಇಂದಿರಾಜಿ, ಸಂಪುಟದ ಮಂತ್ರಿಗಳನ್ನು ಹ್ಞೂ ಹ್ಞೂ ಎಂಬಂತೆ ನೋಡುತ್ತಾ ನಸುನಗುತ್ತಾ ಹೊರಟೇ ಹೋದರು. ಮಂತ್ರಿಗಳು ಕೈಕುಲುಕುವುದಿರಲಿ ನಮಸ್ಕಾರಕ್ಕೂ ಆಸ್ಪದವಾಗಲಿಲ್ಲ. ಇಡೀ ಮಂತ್ರಿಮಂಡಲ ತಪ್ಪಿತಸ್ಥ ವಿದ್ಯಾರ್ಥಿಗಳಂತೆ ನಿಂತಿತ್ತು. Convoy ಹೊರಟ ಮೇಲೆ ಮಂತ್ರಿ ಮಾಗಧರ ಕಾರುಗಳು ನಿಧಾನವಾಗಿ ಹಿಂಬಾಲಿಸಿದವು.

ಇಂದಿರಾ ಗಾಂಧಿಯಂತಹ ಹೆಣ್ಣುಮಗಳಿಗೇ ಪಾಟಿ ಗೌರವ ಅಂದರೆ, ಕ್ರೂರ ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಸ್ಟಾಲಿನ್, ಮುಸಲೋನಿಯಂತಹವರ ಮುಂದೆ ಅದೆಂತಹ ಕರೆಂಟ್ ಹೊಡೆಸಿಕೊಂಡ ಜನರಿರುತ್ತಿದ್ದರೋ?

ಬೆರಗುವಡೆದು ಯೋಚಿಸುತ್ತಿದ್ದೆ.

*

ಕಾರ್ಯಕ್ರಮ ಮುಗಿಸಿ ಬಂದ ಮೇಲೆ ಬ್ಯಾಂಕ್ವೆಟ್ ಹಾಲ್ನಲ್ಲಿ ನೂರು ಜನ ಆಹ್ವಾನಿತರಿಗೆ ಭೋಜನ. ಪಾಸ್ ಇದ್ದವರೆಲ್ಲ ಒಬೊಬ್ಬರಾಗಿ ಸದ್ದಿಲ್ಲದೆ ಬಂದು ಕೂರತೊಡಗಿದರು. ಹಾಲ್ ಒಂದು ಗೋಡೆಯ ಬಳಿ ಕೊಂಚ ಎತ್ತರವಾಗಿ ಒಂಟಿ ಸಾಲಿನ ಟೇಬಲ್ ಹಾಕಿದ್ದರು. ಅಲ್ಲಿ ೧೫ ಜನರಿಗೆ ಮಾತ್ರ ಇಂದಿರಾಜಿಯೊಂದಿಗೆ ಸಹ ಭೋಜನ. ಇಡೀ ಬ್ಯಾಂಕ್ವೆಟ್ ಹಾಲ್ ನಿಶ್ಶಬ್ದವಾಗಿ ಇಂದಿರಾಜಿಯ ಬರುವಿಕೆ ಎದುರು ನೋಡುತ್ತಿತ್ತು. ಎದುರು ಭಾಗದಲ್ಲಿ ನನ್ನದು ಮಫ್ತಿ ಡ್ಯೂಟಿ. ಏನಾದರೂ ಅವಘಡ ಸಂಭವಿಸಿದರೆ ಪಕ್ಕದ ಬಾಗಿಲನ್ನು ತೆರೆದು ಜನ ಹೊರಹೋಗುವಂತೆ ಮಾಡಬೇಕಿತ್ತು. ನಾವು ನಾಲ್ವರು ಅಧಿಕಾರಿಗಳು ಹೋಟಲಿನವರಂತೆ ಟೈ ಧರಿಸಿ ಅತ್ತಿತ್ತ ಓಡಾಡುತ್ತಿದ್ದೆವು.

ಆಗೊಬ್ಬ ಬಿಳಿ ಉಡುಪಿನ ನೇರ ನಿಲುವಿನ ವ್ಯಕ್ತಿಯೊಬ್ಬರು ನಿಧಾನವಾಗಿ ನಡೆದು ಬರುತ್ತಿರುವುದು ಕಂಡಿತು. ಡೋಂಟ್ ಕೇರ್ ಎಂಬಂತಹ ನಿರ್ಲಕ್ಷ್ಯದ ನಡೆ. ಅವರ ಜೊತೆ ಇನ್ನಿಬ್ಬರು.

ದೆಹಲಿಯ ಅಧಿಕಾರಿಯೊಬ್ಬರು.

ಅವರು ಯಾರು?” ಎಂದು ನನ್ನನ್ನು ಕೇಳಿದರು. ನನಗೂ ಗೊತ್ತಿರಲಿಲ್ಲ.

ಪಕ್ಕದಲ್ಲಿದ್ದ ಗುಪ್ತಪೊಲೀಸ್ ಸಿದ್ದರಾಜೇಗೌಡರನ್ನು ಕೇಳಿದೆ.

ಫಾರೆಸ್ಟ್ ಮಿನಿಷ್ಟ್ರು ಮಾದೇಗೌಡ ಅಂತ, ಮಂಡ್ಯದವರು.” ಆತನ ಪಿಸುದನಿಯ ಉತ್ತರ. ಅವರು ಟೇಬಲೊಂದನ್ನು ಆಕ್ರಮಿಸಿ ಕುಳಿತರು.

ನಂತರ ಹಾಲ್ಗೆ ಬಂದವರೇ ಇಂದಿರಾಜಿ. ಎಲ್ಲರಿಗೂ ನಮಸ್ಕರಿಸಿ ಕುಳಿತರು. ಚಾಕು ಮತ್ತು ಫೋರ್ಕ್ ಕೈಗೆತ್ತಿಕೊಂಡು ಊಟ ಶುರು ಮಾಡಿದರು. ಉಳಿದ ಮಂತ್ರಿ ಮಹೋದಯರ ಫೋರ್ಕ್, ಚಾಕು, ಚಮಚಾಗಳೆಲ್ಲ ಖಣಿ ಖಣಿ ಸದ್ದು ಮಾಡತೊಡಗಿದವು.

ಅಷ್ಟರಲ್ಲಿ ಅರಣ್ಯ ಮಂತ್ರಿ ಮಾದೇಗೌಡರು ತಮ್ಮ ಫೋರ್ಕ್ ಚಮಚಾ ಕೆಳಗಿಟ್ಟು, ಷರಟಿನ ತುಂಬುದೋಳನ್ನು ಮೇಲೇರಿಸಿ ಇಡೀ ಅಂಗೈಯನ್ನೇ ಪ್ಲೇಟಿನ ಮೇಲೆ ಹಾಕಿದರು! ಅವರಂತಹ ಹಿರಿಯ ಮಂತ್ರಿಯೇ ತಟ್ಟೆಗೆ ಕೈಹಾಕಿದ ಮೇಲೆ ಉಳಿದವರಿಗೆ ಯಾತರ ಶಿಷ್ಟಾಚಾರ? ಅದೇ ಆದರ್ಶ! ಬಹುತೇಕರ ಚಾಕು ಚಮಚಾಗಳೆಲ್ಲ ಕೆಳಗಿಳಿದವು. ಎಲ್ಲರೂ ಕೈಊಟ ಬಾರಿಸ ತೊಡಗಿದರು.

ಇಂದಿರಾಜಿ ತಿಂದದ್ದು ಅತ್ಯಲ್ಪ. ಆದರೆ ಉಳಿದವರ ಊಟ ಮುಗಿಯಲಿ ಎಂಬ ಸೌಜನ್ಯಕ್ಕಾಗಿ ಕಾದು ಕುಳಿತರು. ಅವರ ಉದ್ದ ಟೇಬಲಿನಲ್ಲಿ ಕುಳಿತಿದ್ದ ಮುಖ್ಯಮಂತ್ರಿ, ಗವರ್ನರ್ ಆದಿಯಾಗಿ ಯಾವ ಗಣ್ಯರೂ ಸರಿಯಾಗಿ ಊಟವನ್ನೇ ಮಾಡಲಿಲ್ಲ. ಭಯಮಿಶ್ರಿತ ಸಂಕೋಚ, ಹಿಂಜರಿಕೆ ಎದ್ದು ಕಾಣುತ್ತಿತ್ತು. ಇಂದಿರಾಜಿ ಯಾರೊಂದಿಗೂ ಮಾತಾಡಲಿಲ್ಲ. ಎದುರಿನ ಭೂರಿ ಭೋಜನ ದಾಸರನ್ನು ಸುಮ್ಮನೆ ನೋಡುತ್ತಿದ್ದರು.

ಅರ್ಧ ಗಂಟೆ ಕಳೆದಿತ್ತು? ಎದ್ದೇಳಬಹುದೇ?? ಎಂಬಂತೆ ಮುಖ್ಯ ಮಂತ್ರಿಗಳ ಮುಖ ನೋಡಿದರು. ಕೈಲಿದ್ದ ಚಾಕು ಚಮಚಾವನ್ನು ತಟ್ಟೆಯ ಮೇಲೆ ಕತ್ತರಿಯಾಕಾರದಲ್ಲಿ ಇಟ್ಟರು. ಅದು ಮುಕ್ತಾಯದ ಸೂಚನೆ. ಇಂದಿರಾಜಿ ಎದ್ದು ಹೊರಡಲು ಅನುವಾಗುತ್ತಿದ್ದಂತೆ ಊಟ ಮಾಡುತ್ತಿದ್ದವರೆಲ್ಲ ಗಡಬಡಿಸಿ ಎದ್ದರು. ಇಂದಿರಾಜಿ ನಿರ್ಗಮಿಸಿದರು.

ಅಷ್ಟೊಂದು ಭಯ, ದಿಗ್ಭ್ರಮೆ ಹುಟ್ಟಿಸುವ ಶಕ್ತಿ ಆಕೆಯಲ್ಲಿ ಯಾವುದಿತ್ತು ಎಂಬುದು ಈಗಲೂ ನನಗೆ ಬಗೆಹರಿಯದ ಪ್ರಶ್ನೆ. ತಮ್ಮ ಪಾಡಿಗೆ ತಾವು ಬಂದು, ಸೌಜನ್ಯದಿಂದ ನಡೆದುಕೊಂಡು ಹೋದರಷ್ಟೇ. ಅಷ್ಟಕ್ಕೇ ಕಾಂಗೈಗಳೆಲ್ಲಾ ಸ್ತಂಭೀಭೂತರಾಗುವಂತಹ ಸಮ್ಮೋಹಿನಿ ಯಾವುದಿತ್ತು ಎಂಬುದು ಅರ್ಥವಾಗಲಿಲ್ಲ.

ವ್ಯಕ್ತಿತ್ವದ ವಜನ್ನೇ ಹಾಗಿತ್ತಾ?

ಅದಾದ ನಂತರ ಐದು ಜನ ಪ್ರಧಾನಮಂತ್ರಿಗಳ ಹತ್ತಿರದಲ್ಲಿಯೇ ಬಂದೋಬಸ್ತ್ ಕರ್ತವ್ಯ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಇಂದಿರಾಜಿ ಎದುರುಗಡೆ ಉಂಟಾಗುತ್ತಿದ್ದ ನೀರವ ತಲ್ಲಣದ ಸ್ತಬ್ಧತೆ ಬೇರಾವ ಪ್ರಧಾನಿಗಳಿಗೂ ನಡೆದದ್ದು ನೋಡಿಲ್ಲ. ನರಸಿಂಹರಾವ್, ವಾಜಪೇಯಿ, ರಾಜೀವ್ ಅವರ ಸುತ್ತಲೂ ಜನರಿರುತ್ತಿದ್ದರು. ಆದರೆ ಶಾಕ್ ಹೊಡೆಸುವ ಬಗೆಯ ಸ್ತಬ್ಧತೆ? ಅದು ಮಾತ್ರ ಇಂದಿರಾಜಿ ವ್ಯಕ್ತಿತ್ವದಲ್ಲಿದ್ದ ಅಪೂರ್ವ ಶಕ್ತಿ ಅನ್ನಿಸುತ್ತದೆ.

*

ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಜಿ.ಮಾದೇಗೌಡರ ಚಿತ್ರ ನೋಡಿದಾಗ, ಅಂದಿನ ನೇರ ನಿಲುವಿನ ಕಾವೇರಿ ಖಡಕ್ ಹೋರಾಟಗಾರ ಗೌಡರು ನೆನಪಾದರು. ಅವರಿಗೀಗ ತೊಂಬತ್ತೆದು ವರ್ಷ. ಶುಭವಾಗಲಿ.

***

 

 

 

× Chat with us