ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: ಕ್ಷುಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಡ್ರ್ಯಾಗರ್‌ನಿಂದ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.

ಲಿಂಗಾಬುದಿ ಪಾಳ್ಯ ನಿವಾಸಿ ಭಾಸ್ಕರ್ (30) ಹಲ್ಲೆಗೊಳಾಗದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ನಿವಾಸಿ ಆನಂದ ಎಂಬುವನು ಡ್ರ್ಯಾಗರನಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸಣ್ಣಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಸೋಮವಾರ ಗಲಾಟೆಯಾಗಿತ್ತು, ಇದೇ ದ್ವೇಷದಿಂದ ಮಂಗಳವಾರ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದ ಭಾಸ್ಕರ್ ಮೇಲೆ ಆನಂದ್ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ರಸ್ತೆಯಲ್ಲಿ ರಕ್ತದ ಮಡುವಿನಿನಲ್ಲಿ ಬಿದ್ದಿದ್ದ ಭಾಸ್ಕರ್‌ನನ್ನು ದಾರಿಹೋಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ಕುವೆಂಪುನಗರ ಪೊಲೀಸ್ ಇನ್ಸ್ಪೆಕ್ಟರ್ ರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಹಲ್ಲೆ ನಡೆದಿರುವ ಸ್ಥಳದಲ್ಲಿ ಈ ಹಿಂದೆ ಅತ್ಯಾಚಾರ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ನಡೆದಿದ್ದವು ಎಂಬುದು ಗಮನಾರ್ಹ. ಪೊಲೀಸರು ಘಟನೆ ನಡೆದಾಗ ಮಾತ್ರ ಗಸ್ತು ತಿರುಗುತ್ತಾರೆ. ಆಮೇಲೆ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

× Chat with us