ಆಪದ್ಬಾಂಧವನಾಗಿ ಬಂದ ಕ್ರೌಡ್ ಫಂಡಿಂಗ್!; ಈ ಜೀವ ಈ ಜೀವನ

ಮಗುವಿನ ಜೀವ ಉಳಿಸಲು ಸಂಗ್ರಹವಾಗಿದ್ದು ಬರೋಬ್ಬರಿ ೧೭ ಕೋಟಿ ರೂ.

ತೀರಾ, ಮುಂಬೈನ ಮಿಹೀರ್ ಕಾಮತ್ ಮತ್ತು ಪ್ರಿಯಾಂಕಾ ದಂಪತಿಗಳ ಮುದ್ದಿನ ಮಗಳು. ಹೆರಿಗೆಯ ನಂತರ ಅವಳ ಲಾಲನೆ ಪಾಲನೆಯಲ್ಲಿ ದಿನಗಳು ಕಳೆದು, ಎರಡನೇ ತಿಂಗಳು ತುಂಬುತ್ತಿದ್ದಾಗ ಅವಳಲ್ಲೇನೋ ದೈಹಿಕ ತೊಂದರೆ ಇರುವುದನ್ನು ಅವರು ಗಮನಿಸಿದರು. ತೀರಾ ತನ್ನದೇ ಪ್ರಾಯದ ಇತರ ಮಕ್ಕಳಂತೆ ಕುಳಿತುಕೊಳ್ಳಲಾರಳು, ತನ್ನ ತಲೆಯನ್ನು ಎತ್ತಲಾರಳು, ಹಾಲು ಕುಡಿಯುವಾಗಲೆಲ್ಲಾ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಡಲಾಗದೆ ಬಿಕ್ಕುವಳು.

ವೈದ್ಯರಿಗೆ ತೋರಿಸಿ ತಪಾಸಣೆ ಮಾಡಿದಾಗ ಅವರಿಗೆ ಆಘಾತ ನೀಡುವಂತಹ ವಿಚಾರ ತಿಳಿದುಬಂತು. ಅವಳಿಗೆ ದೇಹದ ಸ್ನಾಯುಗಳನ್ನು ದುರ್ಬಲಗೊಳಿಸುವ ಅತಿ ಅಪರೂಪದ ಒಂದು ನರಸಂಬಂಧಿತ ಕಾಯಿಲೆ ಇರುವುದು ಪತ್ತೆಯಾಯಿತು. ಈ ಕಾಯಿಲೆಯ ಹೆಸರು ‘ಸ್ಪೈನಲ್ ಮಸ್ಕುಲರ್ ಅಟ್ರೋಫಿ’. ಪ್ರತೀ ೮೦೦೦ ಮಕ್ಕಳಲ್ಲಿ ಒಂದು ಮಗುವಿಗೆ ಈ ಕಾಯಿಲೆ ಬರಬಲ್ಲದು. ಈ ಕಾಯಿಲೆ ತಗುಲಿದ ಮಕ್ಕಳು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಬದುಕಲಾರವು.

ಸಮಾಧಾನದ ಸಂಗತಿಯೆಂದರೆ, ಇದನ್ನು ಗುಣಪಡಿಸಲು ಜೀನ್ ಥೆರಪಿ ಔಷಧಿವೊಂದಿದೆ. ಆ ಔಷಧಿಯ ಹೆಸರು ‘ಝೊಲ್ಗೆನ್ಸ್ಮಾ’. ಕೇವಲ ಒಂದೇ ಒಂದು ಝೊಲ್ಗೆನ್ಸ್ಮಾ ಇಂಜೆಕ್ಷನ್ ಕೊಟ್ಟರೆ ಸಾಕು, ತೀರಾಳ ಈ ಸ್ನಾಯು ಸಮಸ್ಯೆ ಶಾಶ್ವತವಾಗಿ ಗುಣವಾಗಿ ಸಾಮಾನ್ಯ ಮಕ್ಕಳಂತೆ ಬೆಳೆಯಬಲ್ಲಳು. ೨೦೧೯ರಲ್ಲಷ್ಟೇ ಈ ಔಷಧಿಯನ್ನು ಕಂಡುಹಿಡಿಯಲಾಗಿತ್ತು. ಆದರೆ, ಸಮಸ್ಯೆ ಏನೆಂದರೆ, ಝೊಲ್ಗೆನ್ಸ್ಮಾ ಭಾರತದಲ್ಲೆಲ್ಲೂ ಸಿಗುವುದಿಲ್ಲ, ಅಮೆರಿಕದಿಂದ ಇದನ್ನು ತರಿಸಬೇಕು. ಮತ್ತು, ಕೇವಲ ೧೪ ದಿನಗಳ ‘ಶೆಲ್ಫ್ ಲೈಫ್’ವುಳ್ಳ ಇದರ ಬೆಲೆ ೧೬ ಕೋಟಿ ರೂಪಾಯಿ! ಹೌದು, ೧೬ ಕೋಟಿ ರೂಪಾಯಿಗಳು!

ಭಾರತದಲ್ಲಿ ‘ಸ್ಪೈನಲ್ ಮಸ್ಕುಲರ್ ಅಟ್ರೋಫಿ’ ಸಮಸ್ಯೆಯಿಂದ ಬಳಲುವ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ ಈ ಸಮಸ್ಯೆಯಿಂದ ಬಳಲುವ ೨೦೦ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸ್ವಿಝರ್ಲ್ಯಾಂಡಿನ ಔಷಧಿ ಕಂಪೆನಿ ‘ನೋವಾರ್ಟಿಸ್’, ಎರಡು ವಾರಗಳಿಗೊಮ್ಮೆ ಜಾಗತಿಕ ಮಟ್ಟದಲ್ಲಿ ಲಾಟರಿ ಹಾಕಿ, ಲಾಟರಿಯಲ್ಲಿ ಗೆದ್ದ ಮಕ್ಕಳಿಗೆ ಈ ಔಷಧಿಯನ್ನು ಉಚಿತವಾಗಿ ಕಳಿಸಿಕೊಡುತ್ತದೆ. ಕೆಲವು ವಾರಗಳ ಹಿಂದೆ, ಇದೇ ಸಮಸ್ಯೆಯಿಂದ ಬಳಲುತ್ತಿದ್ದ ಭಟ್ಕಳದ ಒಂದು ಮಗು ಲಾಟರಿಯಲ್ಲಿ ಗೆದ್ದು, ಈ ಔಷಧಿಯನ್ನು ಪಡೆದುಕೊಂಡಿತ್ತು. ಈ ಔಷಧಿಯ ಆಯುಷ್ಯ ಕೇವಲ ೧೪ ದಿನಗಳಾದುದರಿಂದ ಉಚಿತವಾಗಿ ಸಿಕ್ಕರೂ ಇದನ್ನು ಅಮೆರಿಕದಿಂದ ಇಲ್ಲಿಗೆ ತರಿಸುವುದೂ ಒಂದು ಸಾಹಸವೇ!

ತೀರಾಳ ತಂದೆ ಮಿಹೀರ್ ಕಾಮತ್ ಮುಂಬೈಯ ಐಟಿ ಕಂಪೆನಿಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದಾರೆ. ತಾಯಿ ಪ್ರಿಯಾಂಕಾ ಒಬ್ಬರು ಇಲ್ಲಸ್ಟ್ರೇಟರ್(ಅನಕ್ಷರಸ್ಥರು). ಅಷ್ಟು ಹಣ ಒಗ್ಗೂಡಿಸಲು ಅವರಿಗೆ ಕನಸಲ್ಲೂ ಸಾಧ್ಯವಾಗದ ಮಾತು. ಆಗ ಅವರು ಮೊರೆ ಹೋದುದು ‘ಕ್ರೌಡ್ ಫಂಡಿಂಗ್’ ವಿಧಾನಕ್ಕೆ. ಕಳೆದ ನವೆಂಬರ್ ತಿಂಗಳಲ್ಲಿ ಅವರು ‘ಇಂಪ್ಯಾಕ್ಟ್ ಗುರು’ ಎಂಬ ಒಂದು ಕ್ರೌಡ್ ಫಂಡಿಂಗ್ ಪ್ಲ್ಯಾಟ್ ಫಾರ್ಮ್ ಸಂಪರ್ಕಿಸಿ, ತೀರಾಳ ವೈದ್ಯಕೀಯ ಸಮಸ್ಯೆ, ಅದರ ತೀವ್ರತೆ, ಅದಕ್ಕೆ ತಗಲುವ ಖರ್ಚು ಮತ್ತು ತಮ್ಮ ಆರ್ಥಿಕ ಅಸಹಾಯಕತೆಯನ್ನು ಹೇಳಿಕೊಂಡರು.

ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲೂ ಖಾತೆಗಳನ್ನು ತೆರೆದು ತೀರಾಳ ಕತೆಯನ್ನು ಹಂಚಿಕೊಂಡರು. ಮೂರು ತಿಂಗಳಲ್ಲಿ ಸುಮಾರು ಒಂದು ಲಕ್ಷ ಜನ ಅವರ ಕೋರಿಕೆಗೆ ಸ್ಪಂದಿಸಿ, ೧೭ ಕೋಟಿ ರೂಪಾಯಿಗಳು ಸಂಗ್ರಹವಾದವು! ಇದರಲ್ಲಿ ೧೫ ಕೋಟಿ ರೂಪಾಯಿ ‘ಇಂಪ್ಯಾಕ್ಟ್ ಗುರು’ ಒಂದರಲ್ಲೇ ಸಂಗ್ರಹವಾದರೆ, ಉಳಿದ ಹಣ ‘ಗೋಫಂಡ್ ಮೀ’ ಎಂಬ ಇನ್ನೊಂದು ‘ಕ್ರೌಡ್ ಫಂಡಿಂಗ್’ ಪ್ಲ್ಯಾಟ್ ಫಾರ್ಮ್ ಮೂಲಕ ಸಂಗ್ರಹವಾಯಿತು. ಇದು ಭಾರತದಲ್ಲಿ ಈವರೆಗೆ ನಡೆದ ಅತೀದೊಡ್ಡ ವೈದ್ಯಕೀಯ ‘ಕ್ರೌಡ್ ಫಂಡಿಂಗ್’ ಎನಿಸಿಕೊಂಡಿದೆ. ಇದರಲ್ಲಿ ಭಾರತ ಮಾತ್ರವಲ್ಲದೆ ವಿಶ್ವದ ಎಲ್ಲೆಡೆಯಿಂದ ದಾನಿಗಳು ಪಾಲ್ಗೊಂಡಿದ್ದರು.

ಸಹೃದಯಿಗಳು ನೀಡಿದ ಈ ಅಗಾಧ ಪ್ರಮಾಣದ ಆರ್ಥಿಕ ನೆರವಿನಿಂದ ಸಮಾಧಾನ ಹೊಂದಿದ ಮಿಹೀರ್ ಕಾಮತ್ ಅಮೆರಿಕಾದಿಂದ ಝೊಲ್ಗೆನ್ಸ್ಮಾ ಔಷಧಿಯನ್ನು ತರಿಸಲು ಬೇಕಾದ ಕಾಗದಪತ್ರಗಳನ್ನು ಸಿದ್ಧಗೊಳಿಸಿ, ಆರ್ಡರ್ ಕಳಿಸಿದರು. ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿರುವುದರಿಂದ ಆರ್ಡರ್ ಮೇಲಿನ ಜಿಎಸ್‌ಟಿ ಮತ್ತು ಆಮದು ಸುಂಕದಿಂದ ಸಂಪೂರ್ಣ ರಿಯಾಯಿತಿ ಸಿಕ್ಕಿತು. ಎರಡು ವಾರಗಳ ನಂತರ ಔಷಧಿ ಆಮದುಗೊಂಡು, ಕಳೆದ ಶುಕ್ರವಾರ ಬೆಳಿಗ್ಗೆ, ಮಾಹಿಮ್‌ನ ಹಿಂದೂಜಾ ಆಸ್ಪತ್ರೆಯಲ್ಲಿ ತೀರಾಳಿಗೆ ಝೊಲ್ಗೆನ್ಸ್ಮಾ ಇಂಜೆಕ್ಷನ್ ಕೊಟ್ಟು, ಶನಿವಾರ ಮನೆಗೆ ಕಳಿಸಿಕೊಡಲಾಯಿತು. ತಮ್ಮ ಮುದ್ದಿನ ಮಗಳಿಗೆ ಪುನರ್ಜನ್ಮ ಸಿಕ್ಕಿತು ಎಂದು ಭಾವುಕರಾಗಿ ಹೇಳುವ ಮಿಹೀರ್ ಕಾಮತ್, ಅವಳ ಔಷಧೋಪಚಾರಕ್ಕೆ ಖರ್ಚಾಗಿ ಉಳಿದ ಹಣವನ್ನು ಇದೇ ಸಮಸ್ಯೆಯಿಂದ ಬಳಲುವ ಇತರ ಮಕ್ಕಳಿಗೆ ದಾನ ನೀಡುತ್ತೇನೆ ಎಂದು ಹೇಳುತ್ತಾರೆ.

ಇದಕ್ಕೂ ಹಿಂದೆ ಭಾರತದಲ್ಲಿ ಹೀಗೆಯೇ ವೈದ್ಯಕೀಯ ಕಾರಣಗಳಿಗೆ ಕ್ರೌಡ್ ಫಂಡಿಂಗ್ ನಡೆದ ಆನೇಕ ಉದಾಹರಣೆಗಳಿವೆ. ಲಾಕ್‌ಡೌನ್ ಸಮಯದಲ್ಲಿ ಮುಂಬೈನ ರಿದಾಖಾನ್ ಎಂಬ ಒಬ್ಬಳು ಚಿಕ್ಕ ಹುಡುಗಿ ಹೀಗೆಯೇ ಕ್ರೌಡ್ ಫಂಡಿಂಗ್ ನಡೆಸಿ, ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಬಡ ವಲಸೆ ಕಾರ್ಮಿಕನೊಬ್ಬನ ಹುಡುಗನಿಗೆ ೩ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟು ನೆರವಾಗಿದ್ದಳು. ವೈದ್ಯಕೀಯ ಕಾರಣಗಳಿಗಲ್ಲದೆ ಇನ್ನೂ ಹಲವು ರೀತಿಯ ಸಾಮಾಜಿಕ ಕಾರ್ಯಗಳಿಗಾಗಿಯೂ ಕ್ರೌಡ್ ಫಂಡಿಂಗ್ ನಡೆಸಲಾಗುತ್ತದೆ. ಒಂದೆರಡು ವರ್ಷಗಳ ಹಿಂದೆ, ಮುಂಬೈ ಮೆಟ್ರೋ ವಿಸ್ತರಣೆಗಾಗಿ ಹಸಿರು ವಲಯವಾದ ಆರೇ ಕಾಲೋನಿಯಲ್ಲಿ ಮರ ಕಡಿಯುವುದರ ವಿರುದ್ಧ ಪ್ರತಿಭಟನೆ ನಡೆದಾಗ ಕೆಲವು ಪ್ರತಿಭಟನಾಕಾರರು ಪೋಲಿಸರಿಂದ ಬಂಧಿತರಾಗಿದ್ದರು. ತಕ್ಷಣವೇ ಅವರಿಗೆ ಜಾಮೀನು ಕೊಡಿಸಲು ಕ್ರೌಡ್ ಫಂಡಿಂಗ್ ನಡೆಸಿ ಕೆಲವೇ ಗಂಟೆಗಳಲ್ಲಿ ಹಲವು ಸಾವಿರ ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು.

ಪಂಜು ಗಂಗೊಳ್ಳಿ

× Chat with us