ಭೌಗೋಳಿಕ ರಾಜಕೀಯ, ಭಾರತ ಮತ್ತು ಚೀನಾ

ಅಮೆರಿಕದ ನಿಲುವು ಅರಿಯಲು ಪದೇ ಪದೆ ಕಾಲ್ಕೆದರಿ ಕ್ಯಾತೆ

-ಪ್ರೊ.ಆರ್.ಎಂ.ಚಿಂತಾಮಣಿ

ಅಂದು ನೆಹರೂ ಚೌಎನ್ಲಾಯರನ್ನು ನಂಬಿದಂತೆ ಇಂದು ಮೋದಿಯವರು ಕ್ಸೀ ಜಿಂಪಿಂಗ್‌ರನ್ನು ನಂಬಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ಚೆನ್ನೈ ಹತ್ತಿರ ಮಹಾಬಲಿಪುರಂನಲ್ಲಿ ನಡೆದ ಭಾರತ ಚೀನಾ ಶೃಂಗಸಭೆಯಲ್ಲಿ ಈ 70 ವರ್ಷಗಳಲ್ಲಿ ಎರಡೂ ದೇಶಗಳಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಜಂಟಿಯಾಗಿ 70 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ನಿರ್ಧರಿಸಲಾಗಿತ್ತು. ಮುಂದಿನ ಕ್ರಮಗಳನ್ನು ಚರ್ಚಿಸಿ ಅಂತಿಮ ರೂಪ ಕೊಡಲು ಮೋದಿಯವರು ಇನ್ನೇನು ಬೀಜಿಂಗ್‌ಗೆ ಭೇಟಿ ಕೊಡಲಿದ್ದರು. ಅಷ್ಟರಲ್ಲಿ ಚೀನಾ ತನ್ನ ಕೊಂಕು ಬುದ್ಧಿ ತೋರಿಸಿಬಿಟ್ಟಿತು.

ಆರು ವಾರಗಳಿಂದ ಲಡಾಖ್ ಪೂರ್ವ ಪ್ರದೇಶ ಗಲ್ವಾನ ಕೊಳ್ಳದ ಗಡಿ ಭಾಗದಲ್ಲಿ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಾ ಚರ್ಚೆ ಮತ್ತು ಒಪ್ಪಂದದ ನಾಟಕ ಆಡುತ್ತಿದ್ದ ಚೀನಾದ ಸೇನಾಪಡೆ ಇದೇ ತಿಂಗಳ 15-16ರ ಮಧ್ಯರಾತ್ರಿ ಶಿಲಾಯುಗದ ಕಾಡು ಮಾನವರಂತೆ ಕಲ್ಲು ದೊಣ್ಣೆಗಳಿಂದ ನಮ್ಮ ಸೈನಿಕರ ಮೇಲೆ ಹಠಾತ್ ದಾಳಿ ಮಾಡಿ 20 ಯೋಧರನ್ನು (ಒಬ್ಬ ಕರ್ನಲ್ ಸೇರಿ) ಕೊಂದು ಹಲವರನ್ನು ಗಾಯಗೊಳಿಸಿದರು. ನಮ್ಮ ಸೈನಿಕರೂ ತಮ್ಮ ರಕ್ಷಣೆಗಾಗಿ ಸಮರ್ಥವಾಗಿ ಪ್ರತ್ಯುತ್ತರ ಕೊಟ್ಟು ದೊಡ್ಡ ಪ್ರಮಾಣದಲ್ಲಿ ಅವರ ಕಡೆಗೆ ಸಾವು-ನೋವು ಅನುಭವಿಸುವಂತೆ ಮಾಡಿದ್ದಾರೆ. ನಮ್ಮ ಸೈನಿಕರ ತ್ಯಾಗ ಮತ್ತು ಶೌರ್ಯಕ್ಕೆ ಒಂದು ಸೆಲ್ಯೂಟ್. ನಮ್ಮ ಪ್ರಧಾನಿಗಳು ʻಕೆಣಕಿದರೆ ತಕ್ಕ ಶಾಸ್ತಿ ಮಾಡುತ್ತೇವೆʼ ಎಂದು ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಇದನ್ನೇ ಯುದ್ಧದ ಕಹಳೆ ಎಂದು ಭಾವಿಸಿ ಯುದ್ಧೋನ್ಮಾದದಲ್ಲಿ ಭಾವನೆಗಳಿಗೆ ಎಡೆ ಕೊಡುವುದು ತಪ್ಪಾದೀತು. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತ ಜವಾಬ್ದಾರಿಯುತ ಪಾತ್ರ ವಹಿಸಬೇಕಾಗಿದೆ.

ಇಂದು ನಾವು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ಸದಸ್ಯ ದೇಶವಾಗಿ ಏಷ್ಯಾ ಪೆಸಿಫಿಕ್ ದೇಶಗಳ ಪ್ರತಿನಿಧಿಯಾಗಿದ್ದೇವೆ. ಯುದ್ಧ ಅನಿವಾರ್ಯವಾದರೆ ನಾವು ಸದಾ ಸಿದ್ಧರಾಗಿದ್ದೇವೆ. ಆದರೆ, ಅದಕ್ಕಿಂತಲೂ ಮೊದಲು ರಾಜತಾಂತ್ರಿಕ ನೆಲೆಯಲ್ಲಿ ನಮ್ಮ ಪರ ಜಾಗತಿಕ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡಬೇಕು. ಚೀನಾದ ತಪ್ಪು ನಡೆಯನ್ನು ಬಿಂಬಿಸಬೇಕು. ಆರ್ಥಿಕ ನೆಲೆಯಲ್ಲಿ ಚಾಣಾಕ್ಷಣತನದಿಂದ ಚೀನಾದೊಡನೆ ವ್ಯಾಪಾರ ಬಹುಮಟ್ಟಿಗೆ ಸ್ಥಗಿತಗೊಳ್ಳುವಂತೆ ಮಾಡಿ ಇದು ತನ್ನ ಅರ್ಥವ್ಯವಸ್ಥೆಗೆ ಪೆಟ್ಟು ಬೀಳಲು ಕಾರಣವಾಗುತ್ತದೆ ಎಂಬುದು ಚೀನಾಕ್ಕೆ ಮನವರಿಕೆಯಾಗುವಂತೆ ವಾತಾವರಣ ಸೃಷ್ಟಿಸಬೇಕು.

ಆರ್ಥಿಕವಾಗಿ ಬೆಳೆದ ಮಹತ್ವಾಕಾಂಕ್ಷಿ ಚೀನಾ

ಡೆಂಗ್ ಕಾಲದಲ್ಲಿಯೇ ಕಬ್ಬಿಣದ ಪರದೆ ಬದಿಗೆ ಸರಿಸಿದ ಚೀನಾ ಮುಕ್ತ ಆರ್ಥಿಕ ವ್ಯವಸ್ಥೆಯ ಕಡೆಗೆ ವಾಲಿತು. ವಿದೇಶಿ ಶಿಕ್ಷಣ ಪಡೆದು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿತು. ತನ್ನ ದೊಡ್ಡ ಗಾತ್ರದ ಜನಸಂಖ್ಯೆಯ ಬಲದಿಂದ ಎಲ್ಲ ವಲಯಗಳಲ್ಲೂ ಅಗ್ಗದ ಉತ್ಪನ್ನಗಳನ್ನು ತಯಾರಿಸಿ ವಿದೇಶಿ ಪೇಟೆಗಳಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುತ್ತಾ ಮುನ್ನಡೆಯಿತು. ತನ್ನ ಕಮ್ಯುನಿಸ್ಟ್ ನೀತಿಯ ಗೌಪ್ಯತೆಯನ್ನೂ ಮುಂದುವರಿಸಿತು. ಜಗತ್ತಿನ ಉತ್ಪಾದನಾ ಕೇಂದ್ರವಾಗಿ ಬೆಳೆಯಿತು.

ಇಂದು ಚೀನಾ ಜಗತ್ತಿನ ಎರಡನೇ ಅರ್ಥ ವ್ಯವಸ್ಥೆಯಾಗಿ ನಿಂತಿದ್ದರೆ ಅದಕ್ಕೆ ಅಮೆರಿಕ, ಯೂರೋಪ್ ಮತ್ತು ಭಾರತ ಸೇರಿ ಎಲ್ಲ ದೇಶಗಳೂ ಕಾರಣ. ಎಲ್ಲರೂ ಅಲ್ಲಿಂದ ಒಂದಿಲ್ಲೊಂದು ವಸ್ತುವನ್ನು ತರಿಸಿಕೊಂಡವರೇ. ಹೀಗಾಗಿ 2005ರಲ್ಲಿ ಚೀನಾದ ರಾಷ್ಟ್ರೀಯ ಒಟ್ಟಾದಾಯ(ಜಿ.ಡಿ.ಪಿ) ಜಗತ್ತಿನ ಒಟ್ಟಾದಾಯದ ಶೇ. 3 ಮಾತ್ರ ಇದ್ದದ್ದು 2020ರ ಹೊತ್ತಿಗೆ ಶೇ.17ಕ್ಕೆ ಏರಿದೆ. ಅಂದರೆ ಜಗತ್ತಿನ ಆದಾಯದ 6ನೇ ಒಂದು ಭಾಗಕ್ಕಿಂತ ಸ್ವಲ್ಪ ಹೆಚ್ಚು ಚೀನಾದ್ದೇ. ಸೌರಶಕ್ತಿ ವಿದ್ಯುತ್ ಉತ್ಪಾದನೆಯಲ್ಲಂತೂ ಚೀನಾದ್ದೇ ಪಾರಮ್ಯ. ಪ್ರತಿ ಮೂರು ಯಂತ್ರ ಮತ್ತು ಉಪಕರಣಗಳಲ್ಲಿ ಎರಡು ಚೀನಾದ್ದು ಉಳಿದ ಒಂದು ಬೇರೆ ದೇಶದಲ್ಲಿ ಉತ್ಪಾದನೆಯಾದರೂ ಶೇ.75ರಷ್ಟು ಬಿಡಿ ಭಾಗಗಳು ಚೀನಾದಿಂದ ಬಂದವುಗಳಾಗಿರುತ್ತವೆ. ಟೆಲಿಫೋನ್ ವಿಷಯದಲ್ಲೂ ಅಷ್ಟೆ.

ಭಾರತದೊಡನೆ ವ್ಯಾಪಾರ ಸಂಬಂಧಕ್ಕೆ ಬಂದರೆ ಚೀನಾ ನಮ್ಮ ಅತೀ ದೊಡ್ಡ ವ್ಯಾಪಾರ ಪಾಲುದಾರ ದೇಶ. ಅಲ್ಲಿಂದ ನಮ್ಮ ಒಟ್ಟು ಆಮದಿನ ಶೇ.13.7 ರಷ್ಟು ಬರುತ್ತಿದ್ದರೆ, ನಮ್ಮ ಒಟ್ಟು ರಫ್ತಿನ ಶೇ.5.1 ಮಾತ್ರ ಚೀನಾಕ್ಕೆ ಹೋಗುತ್ತದೆ. ದೊಡ್ಡ ಯಂತ್ರಗಳಿಂದ ಆಟಿಕೆ ಸಾಮಾನುಗಳವರೆಗೆ ಆಮದಾಗುವುದೆಲ್ಲ ಉತ್ಪಾದಿತ ಸರಕುಗಳೇ. ನಮ್ಮ ರಫ್ತುಗಳಲ್ಲಿ ಬಹು ಭಾಗ ಕಚ್ಚಾ ವಸ್ತುಗಳಿರುತ್ತವೆ. ಇನ್ನು ಮೌಲ್ಯಕ್ಕೆ ಬರುವುದಾದರೆ 2019-20ರ ಅಂಕಿ ಸಂಖ್ಯೆಗಳನ್ನೇ ಗಮನಿಸೋಣ. 2019 ಏಪ್ರಿಲ್ ತಿಂಗಳಿಂದ 2020 ಫೆಬ್ರವರಿ ಕೊನೆವರೆಗೆ ನಮ್ಮ ಒಟ್ಟು ಆಮದು ಚೀನಾದಿಂದ 62.37 ಬಿಲಿಯನ್ ಮತ್ತು ರಫ್ತು 15.54 ಬಿಲಿಯನ್.

ಔಷಧಿ ಮತ್ತು ಔಷಧ ವಿಜ್ಞಾನ ಉದ್ದಿಮೆಯಲ್ಲಿ ಶೇ.68 ಭಾಗ ಚೀನಾದಿಂದ ಬಂದ ಆಮದುಗಳನ್ನು ಅವಲಂಬಿಸಿದೆ. ಇದು ವಿದ್ಯುನ್ಮಾನ (ಎಲೆಕ್ಟ್ರಾನಿಕ್ಸ್) ಉದ್ದಿಮೆಯಲ್ಲಿ ಶೇ.43 ಇದ್ದರೆ, ವಾಹನ ಬಿಡಿ ಭಾಗಗಳು ಮತ್ತು ಗಾರ್ಮೆಂಟ್ಸ್ ವಲಯಗಳಲ್ಲಿ ತಲಾ ಶೇ.27 ಇದೆ. ನಮ್ಮಲ್ಲಿ ಮಾರಾಟವಾಗುವ ಸ್ಮಾರ್ಟ್ ಫೋನುಗಳಲ್ಲಿ ಶೇ.72 ಚೀನಾದ ಮೊಬೈಲ್‌ಗಳೇ. ಇಂಟರ್‌ನೆಟ್ ಆ್ಯಪ್‌ಗಳ ಉಪಯೋಗ ಮತ್ತು ಟೆಲಿವಿಷನ್‌ಗಳೂ ಅಷ್ಟೇ. ಚೀನಾದ ಹೂಡಿಕೆಗಳೂ ನಮ್ಮಲ್ಲಿ ಇ-ಕಾಮರ್ಸ್ ವಲಯದಲ್ಲಿ ಹೆಚ್ಚಾಗಿವೆ. ರೈಲ್ವೆ ಮತ್ತು ಟೆಲಿಕಾಂ ಮುಂತಾದ ಮೂಲಸೌಲಭ್ಯ ವಲಗಳಲ್ಲೂ ಚೀನೀ ಕಂಪನಿಗಳ ಪಾಲುದಾರಿಕೆ ಸಾಕಷ್ಟಿದೆ.

ರಾಜಕೀಯ ಪ್ರಾಬಲ್ಯಕ್ಕಾಗಿ ಹುನ್ನಾರವೆ?

ಮೊದಲೇ ಅಮೆರಿಕ ಮತ್ತು ಚೀನಾದ ನಡುವೆ ಪ್ರೀತಿ-ದ್ವೇಷದ ಕಣ್ಣಾಮುಚ್ಚಾಲೆ ನಡೆಯುತ್ತಿತ್ತು. ಪ್ರೀತಿಗಿಂತ ದ್ವೇಷವೇ ಹೆಚ್ಚಾಗಿತ್ತು. ತಾನು ಜಗತ್ತಿನ ದೊಡ್ಡಣ್ಣ ಎಂಬ ಜಂಭ ಟ್ರಂಪ್‌ಗಿದ್ದರೆ ಆರ್ಥಿಕ ನಿಯಂತ್ರಣ ಸಾಮರ್ಥ್ಯದ ಹಮ್ಮು ಚೀನಾಕ್ಕೆ. ಇಬ್ಬರಿಗೂ ದೊಡ್ಡ ಪ್ರಭಾವಿ ದೇಶಗಳನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ತವಕ. ಟೆಲಿಕಾಂ ಗೇರ ಸ್ವಾಮ್ಯ ಹೊಂದಿರುವ ಹುವಾಯಿ ಮತ್ತು ಝೆಡ್.ಟಿ.ಇ. ಅಮೆರಿಕ ಮತ್ತು ಯೂರೋಪ್‌ನಿಂದ ಓಡಿಸುವುದಾಗಿ ಟ್ರಂಪ್ ಚೀನಾಕ್ಕೆ ಬೆದರಿಕೆ ಹಾಕಿದ್ದೂ ಉಂಟು.

1929ರಲ್ಲಿ ಗೋಲ್ಡ್ ಸ್ಟ್ಯಾಂಡರ್ಡ್ ರದ್ದಾದ ನಂತರ ಇಂಗ್ಲೆಂಡನ್ನು ದೂರ ಸರಿಸಿ ಅಮೆರಿಕ ತನ್ನ ಪ್ರಭಾವ ಬೆಳೆಸಿಕೊಂಡು ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾಪಿಸಿಕೊಂಡಂತೆ ಈಗ ಅಮೆರಿಕವನ್ನು ತಳ್ಳಿ ಆ ಸ್ಥಾನಕ್ಕೆ ತಾನು ಬರಬೇಕೆಂಬ ದೂರದ ಆಸೆ ಚೀನಾಕ್ಕಿರಬೇಕು.

ಆದರೆ ಕೊರೊನಾ ವೈರಾಣು ಮೊದಲು ಚೀನಾದಲ್ಲಿ ಕಾಣಿಸಿಕೊಂಡದ್ದು. ಅದರ ಹರಡುವಿಕೆಯ ಬಗ್ಗೆ ತಿಳಿಸಲು ನಿಧಾನ ಮಾಡಿದ್ದಲ್ಲದೆ ತಪ್ಪು ಮಾಹಿತಿ ಕೊಟ್ಟಿತೆಂದು ಆಸ್ಟ್ರೇಲಿಯಾ ಮತ್ತು ಕೆಲ ಯೂರೋಪಿಯನ್ ದೇಶಗಳು ಆಪಾದಿಸಿದ್ದರಿಂದ ಟ್ರಂಪ್‌ಗೆ ಹೊಸ ಅಸ್ತ್ರ ಸಿಕ್ಕಂತಾಯಿತು. ಅವರು ಅದನ್ನು ʻಚೀನಾ ವೈರಸ್ʼ ಎಂದು ಕರೆದುದಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದರಿಂದ ಚೀನಾಕ್ಕೆ ದೊಡ್ಡ ಹಿನ್ನಡೆಯಾಯಿತು.

ಕೋವಿಡ್ ನಂತರ ಇನ್ನೊಂದು ಬೆಳವಣಿಗೆಯಲ್ಲಿ ಬಹುತೇಕ ಎಲ್ಲ ದೇಶಗಳೂ ತಮ್ಮ ಕೈಗಾರಿಕಾ ನೀತಿ, ವಿದೇಶಿ ಹೂಡಿಕೆ ನೀತಿ ಮತ್ತು ಆಮದು- ರಫ್ತು ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ, ಚೀನಾದಿಂದ ಹೊರ ಬರುವ ಮತ್ತು ಬೇರೆಡೆ ಹೂಡಿಕೆ ಮಾಡುವ ಚಿಂತನೆ ಮಾಡುತ್ತಿವೆ. ಇದು ಚೀನಾಕ್ಕೆ ಇನ್ನಷ್ಟು ಕಹಿ ಸುದ್ದಿ. ಆಸೆಗೆ ತಣ್ಣೀರೆರಚಿದಂತಾಯಿತು.

ಕಳೆದ ನವೆಂಬರ್ ತಿಂಗಳಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ 16 ದೇಶಗಳ ರೀಜನಲ್ ಕಾಂಪ್ರಿಹೆನ್ಸಿವ್ ಎಕನಾಮಿಕ್ ಪಾರ್ಟನರ್‌ಶಿಪ್ (ಆರ್.ಸಿ.ಇ.ಪಿ.) ಶೃಂಗ ಸಭೆಯಲ್ಲಿ ಚರ್ಚೆಗಳ ನಂತರ ಚೀನಾದ ಪ್ರಭಾವ ಹೆಚ್ಚು ಎಂಬ ಕಾರಣ ಮುಂದು ಮಾಡಿ ಭಾರತ ಕೊನೆ ಗಳಿಗೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕದೆ ಭಾರತ ಹೊರಬಂದಿತ್ತು. ಇದೂ ಸಹಿತ ಚೀನಾಕ್ಕೆ ಮುಜುಗರವನ್ನುಂಟು ಮಾಡಿತ್ತು.

ಇನ್ನೆರಡು ಘಟನೆಗಳು ನಡೆದವು. ಕಳೆದ ಏಪ್ರಿಲ್‌ನಲ್ಲಿ ಭಾರತ ವಿದೇಶ ನೇರ ಬಂಡವಾಳದ ಬಗ್ಗೆ ಒಂದು ಹೊಸ ಆದೇಶ ಹೊರಡಿಸಿ ಇನ್ನು ಮುಂದೆ ನಮ್ಮ ದೇಶದೊಡನೆ ಭೂಗಡಿಯನ್ನು ಹೊಂದಿರುವ ದೇಶಗಳಿಂದ ಬರುವ ವಿದೇಶಿ ನೇರ ಬಂಡವಾಳಗಳಿಗೆ ಮುಕ್ತ ಅವಕಾಶವಿಲ್ಲ. ಪರಿಶೀಲನೆ ಮತ್ತು ನಿಯಂತ್ರಣಕ್ಕೊಳಪಡಿಸಲಾಗುತ್ತದೆ ಎಂದು ಹೇಳಿತು. ಅದರಲ್ಲಿ ಚೀನಾದ ಹೆಸರಿಲ್ಲದಿದ್ದರೂ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನೊಂದರಲ್ಲಿ ಚೀನಾದಿಂದ ಹೂಡಿಕೆ ಹಿಂಪಡೆದು ಹೊರಬಂದ ಯೂರೋಪಿನ ಶೂ ಕಂಪನಿಯೊಂದಕ್ಕೆ ಭಾರತದ ಉತ್ತರ ಪ್ರದೇಶದಲ್ಲಿ ಅವಕಾಶ ಕಲ್ಪಿಸಿ ಕೊಟ್ಟು ಹೆಚ್ಚಿನ ಹೂಡಿಕೆಗೆ ಅನುವು ಮಾಡಲಾಯಿತು.

ಇದರಿಂದ ಇಲ್ಲಿಯವರೆಗೆ ತಟಸ್ಥವಾಗಿರುವ ಭಾರತ ಅಮೆರಿಕದ ಕಡೆಗೆ ವಾಲುವುದೇನೋ ಎಂಬ ಭಯ ಚೀನಾಕ್ಕೆ ಆಗಿರಬಹುದು. ಅದಕ್ಕಾಗಿ ಆಳ ಅಗಲ ಪರೀಕ್ಷಿಸಲು ಮೊನ್ನಿನ ಕಾಲ್ಕೆದರಿ ತೆಗೆದ ಕ್ಯಾತೆ ಇರಬಹುದು. ಅಲ್ಲದೆ ತನ್ನ ನೆರೆ ಹೊರೆಯವರಾದ ವಿಯೆಟ್ನಾಂ, ಬ್ರುನೆಯಿ, ಇಂಡೋನೇಶಿಯಾ, ಮಲೇಶಿಯಾ, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಜೊತೆಗೆ ಚೀನಾದ ಸಂಬಂಧಗಳು ಸರಿಯಾಗಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಚೀನಾದ ಭೂ ದಾಹ ಅವರಿಗೆಲ್ಲ ಆಗಾಗ ತೊಂದರೆ ಉಂಟು ಮಾಡಿರುವ ವರದಿಗಳಿವೆ.

ಭಾರತದ ನಿಲುವು ಸ್ಪಷ್ಟವಾಗಿಯೇ ಇದೆ. ನಾವು, ಶಾಂತಿಪ್ರಿಯರು, ಯುದ್ಧಕ್ಕೇ ಬರಬೇಕೆಂದು ಆಹ್ವಾನಿಸಿ ಹಠ ಮಾಡಿದರೆ ಅದಕ್ಕೆ ಎಲ್ಲ ತಯಾರಿ ಇದೆ. ಯಾವ ಮಟ್ಟಕ್ಕಾದರೂ ಸೈ. ನಮ್ಮ ದೇಶ ರಕ್ಷಣೆ ಮಾಡಿಕೊಳ್ಳುತ್ತೇವೆ.
ಇನ್ನು ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯ ನಮ್ಮ ಪರವಾಗಿರುವಂತೆ ರಾಜತಾಂತ್ರಿಕ ಕ್ರಮಗಳು ಬೇಕು. ಚೀನೀಯರೊಡನೆ ಯಾವುದೇ ಆರ್ಥಿಕ ಒಪ್ಪಂದ ಹೊಸದಾಗಿ ಬಂದಿರದಿದ್ದರೆ ಅವುಗಳನ್ನು ರದ್ದುಗೊಳಿಸಬೇಕು. ಅಲ್ಲಿಂದ ಆಮದುಗಳನ್ನು ಕಡಿಮೆ ಮಾಡಬೇಕು.

ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಇನ್ನೂ ಬಲಪಡಿಸಬೇಕು. ಗಡಿ ಭದ್ರಪಡಿಸಬೇಕು. ನಮ್ಮ ಸಂಶೋಧನೆ ಮತ್ತು ನಾವೀನ್ಯತೆ ಹೆಚ್ಚಿಸಿ ಚೀನೀ ಆಮದಿಗೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸಬೇಕು.

ಒಂದು ಮಾತು: ನವೆಂಬರ್‌ವರೆಗೆ ಈ ಅನಿಶ್ಚಿತತೆ ಮುಂದವರಿದೀತು.

× Chat with us