ಕೊರೊನಾ ಪಿಡುಗು: ಕೃಷಿ ವಲಯದ ಸವಾಲುಗಳು- ಪರಿಹಾರಗಳು

ಶ್ಯಾಮ್ ಎನ್ ಕಶ್ಯಪ್, ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ

 

(ನಿನ್ನೆಯ ಸಂಚಿಕೆಯಿಂದ)

ಈರುಳ್ಳಿ, ಆಲೂಗೆಡ್ಡೆ ಬೆಳೆದವರ ಗೋಳು: ಈರುಳ್ಳಿ ಮತ್ತು ಆಲೂಗೆಡ್ಡೆ ಬೆಳೆಗಳು ಮಾರುಕಟ್ಟೆಗೆ ಬರಲಾಗದೇ ಈ ರೈತರ ಬವಣೆ ಹೆಚ್ಚಿದೆ. ಸರಬರಾಜಿನ ವ್ಯತ್ಯಯ ಮತ್ತು ಕಡಿಮೆ ಪೂರೈಕೆಯಿಂದಾಗಿ ಮುಂದಿನ ದಿನಗಳಲ್ಲಿ ಈ ಅವಶ್ಯಕ ತರಕಾರಿಗಳ ಬೆಲೆಗಳು ಏರಿಕೆಯಾಗಿ ಗ್ರಾಹಕರಿಗೆ ತೊಂದರೆಯಾಗಲಿದೆ. ಹಣ್ಣು-ತರಕಾರಿಗಳಂತಹ ಬೇಗನೆ ಕೆಡುವ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಕೊರೊನಾ ಮಾರಿಯು ತೀವ್ರ ಸಂಕಷ್ಟವನ್ನೊದಗಿಸಿದೆ. ನಿರ್ಬಂಧದ ಬಹುತೇಕ ದಿನಗಳಲ್ಲಿ ಕೃಷಿ ಚಟುವಟಿಕೆ ನಿಂತ ಪರಿಣಾಮವಾಗಿ ಕಟಾವು ಮತ್ತಿತರ ಕೆಲಸಗಳಿಗೆ ಹೊಡೆತ ಬಿದ್ದಿದೆ. ಅಲ್ಲದೇ, ಹೋಟೆಲ್‌ಗಳು ಛತ್ರಗಳು ಮುಚ್ಚಿರುವುದರಿಂದಾಗಿ ಇವುಗಳ ಬೇಡಿಕೆ ಕುಗ್ಗಿದೆ. ಕುಸಿದ ಬೆಲೆ ಮತ್ತು ಸಾಗಣೆಯಲ್ಲಿ ತೊಂದರೆಯಿಂದಾಗಿ ಪಪ್ಪಾಯ, ಕಲ್ಲಂಗಡಿ, ದಾಳಿಂಬೆ ಮತ್ತು ತರಕಾರಿಗಳನ್ನು ಬೆಳೆದ ಹಲವು ರೈತರು ನಷ್ಟವನ್ನು ಅನುಭವಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.

ರೇಷ್ಮೆಯಂತಹ ಹೆಚ್ಚು ಮೌಲ್ಯದ ವಾಣಿಜ್ಯ ಬೆಳೆಗಳ ಬೆಲೆಗಳೂ ಕುಸಿದಿವೆ. ಇದಕ್ಕೆ ವ್ಯತಿರಿಕ್ತವಾಗಿ ಹಾಲಿನ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಹಾಲಿನ ಮಾರಾಟವು ಹೆಚ್ಚಾಗಿ ಸಹಕಾರದ ಮಾದರಿಯಲ್ಲಿರುವುದರಿಂದ ಮತ್ತು ಹಾಲಿನ ಸರಬರಾಜಿಗೆ ಯಾವುದೇ ತಡೆ ಮೊದಲಿಂದಲೂ ಇಲ್ಲದುದರಿಂದ, ಹಾಲು ಉತ್ಪಾದಕರಿಗೆ ಹೆಚ್ಚಿನ ಸಮಸ್ಯೆಯಾಗದಿರುವುದು ಈ ವ್ಯವಸ್ಥೆಯ ಉಪಯುಕ್ತತೆಯನ್ನು ತೋರಿಸುತ್ತದೆ.

ಸ್ಥಳೀಯ ಅನುಭವಗಳನ್ನು ತೆಗೆದುಕೊಂಡರೆ, ಕೊರೊನಾ ಪೀಡೆಯಿಂದಾಗಿ ನಮ್ಮ ಹಳ್ಳಿಗಳಲ್ಲಿ ಚಿತ್ರ ವಿಚಿತ್ರ ಬೆಳವಣಿಗೆಗಳನ್ನು ಕಾಣಬಹುದಾಗಿದೆ. ಯಾರ ಹೊಲಗದ್ದೆಗಳಲ್ಲಿ ಯಾರು ಕೂಲಿಗೆ ಹೋಗಬಹುದು, ಯಾರ ತೋಟಕ್ಕೆ ಹೋಗಬಾರದು ಮತ್ತಿತರ ಜಗಳಗಳಿಂದಾಗಿ ಕೃಷಿಯು ಕೆಲವು ಹಳ್ಳಿಗಳಲ್ಲಿ ರಾಜಕೀಯ ಬಣ್ಣ ಪಡೆದಿದೆ. ಉದ್ಯೋಗ ಖಾತರಿ ಯೋಜನೆಯ ಹಳೆಯ ಬಾಕಿ ಪಾವತಿ, ಹೊಸ ಕ್ರಿಯಾ ಯೋಜನೆಗಳ ಅನುಮೋದನೆ, ಹೊಸ ಕಾರ್ಮಿಕರ ಸೇರ್ಪಡೆ ಮುಂತಾದ ಗೋಜಲುಗಳ ನಡುವೆ ಸಿಕ್ಕಿಹಾಕಿಕೊಂಡಿದೆ. ನಿರ್ಬಂಧದ ನಂತರದ ದಿನಗಳಲ್ಲಿ ಕೃಷಿ ಮತ್ತು ಉದ್ಯೋಗ ಖಾತರಿ ಯೋಜನೆಗಳಲ್ಲಿ ಜನರು ಸಾರ್ವಜನಿಕ ಅಂತರವನ್ನು ಕಾಪಾಡಿಕೊಂಡು ಕೆಲಸ ಮಾಡಬಹುದು ಎಂದು ಸರ್ಕಾರ ಘೋಷಿಸಿದರೂ, ಈ ವ್ಯಾಜ್ಯಗಳ ನೆಪದಿಂದಾಗಿ ಪರಿಸ್ಥಿತಿಯು ಇನ್ನೂ ಸಹಜ ಸ್ಥಿತಿಗೆ ಮರಳದೇ ಇರುವುದು ನಮ್ಮ ಹಳ್ಳಿಗಳ ಒಗ್ಗಟ್ಟಿನ ಬಗ್ಗೆ, ಸ್ಥಳೀಯ ಸಂಸ್ಥೆಗಳ ಕಾರ್ಯಕ್ಷಮತೆಗೆ ಕನ್ನಡಿ ಹಿಡಿಯುತ್ತವೆ.

ಮನಸೋ ಇಚ್ಛೆ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗಳಂತಹ ಮಾನವ ನಿರ್ಮಿತ ಸಮಸ್ಯೆಗಳಿಂದಾಗಿ ಕೊರೊನಾದಂತಹ ಪಿಡುಗುಗಳು ಹೆಚ್ಚು ಹೆಚ್ಚು ಬರಲಿವೆ ಮತ್ತು ವಿಧ್ವಂಸಕಾರಿಯಾಗಲಿವೆ ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಹಾಗಾಗಿ ಕೊರೊನಾ ಪಿಡುಗನ್ನು ನಾವು ಮುಂದಿನ ದಿನಗಳಲ್ಲಿ ಬರಬಹುದಾದ ಸಂಕಷ್ಟಗಳ ಮುನ್ನೋಟವೆಂದೇ ಪರಿಗಣಿಸಬೇಕಾಗಿದೆ.

ಕೊರೊನಾ ಮಾರಿಯು ನಮ್ಮ ದೇಶಕ್ಕೆ ಲಗ್ಗೆಯಿಡುವ ಮೊದಲು, ಕೇಂದ್ರ ಸರ್ಕಾರವು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು (ಅಂದರೆ 2016ರಲ್ಲಿ ತಿಂಗಳಿಗೆ ಸರಾಸರಿ 8,000 ರೂ. ಇದ್ದ ಕೃಷಿ ಕುಟುಂಬದ ಆದಾಯವನ್ನು 2023ರ ಒಳಗೆ 16,000 ರೂ.ಗೆ ಏರಿಸುವ ಗುರಿ) ಹಾಕಿಕೊಂಡಿತ್ತು. ಈ ಗುರಿಯ ಸಾಧನೆಗಲ್ಲದಿದ್ದರೂ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆ ಸರ್ಕಾರಗಳಿಗಿವೆ. ನೀರು, ಗೊಬ್ಬರ ಕೀಟನಾಶಕಗಳು ಮತ್ತಿತರ ಪರಿಕರಗಳ ಬಳಕೆಯನ್ನು ಮತ್ತು ಲಾಭದಲ್ಲಿ ಅಭದ್ರತೆಯನ್ನು ಹೆಚ್ಚು ಮಾಡುವ ವಾಣಿಜ್ಯ ಬೆಳೆಗಳನ್ನು ಪ್ರೋತ್ಸಾಹಿಸುವ ನೀತಿ ನಿಯಮಗಳ ಬದಲಿಗೆ, ಈ ವಿಪತ್ತಿನ ಸಂದರ್ಭವನ್ನು ನಾವು ಮುಂದಿನ ದಿನಗಳ ಸನ್ನದ್ಧತೆಗೆ ಬಳಸಿಕೊಳ್ಳುವುದು ಸೂಕ್ತ ಅನಿಸುತ್ತದೆ.

ಸಾಲ ಮನ್ನಾ, ರೈತರ ಖಾತೆಗೆ ಹಣದ ವರ್ಗಾವಣೆಯಂತಹ ಅಲ್ಪಾವಧಿಯ ನೀತಿಗಳ ಜೊತೆಗೆ, ಕೃಷಿ ಕುಟುಂಬದ ಆದಾಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜಾಗತಿಕ ಮಾರುಕಟ್ಟೆಯ ಮತ್ತು ಕೇಂದ್ರೀಕೃತ ಅರ್ಥವ್ಯವಸ್ಥೆಯ ಅವಲಂಬನೆಯನ್ನು ಕಡಿಮೆ ಮಾಡುವಂತಹ ನೀತಿಗಳ ಅನುಷ್ಠಾನಕ್ಕೆ ಸರ್ಕಾರಗಳನ್ನು ನಾವು ಒತ್ತಾಯಿಸಬೇಕಿದೆ. ವಾಣಿಜ್ಯ ಬೆಳೆಗಳ ಜೊತೆ ಸಾಂಪ್ರದಾಯಿಕ ಬೆಳೆಗಳ ಮಿಶ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ನೀರು, ಗೊಬ್ಬರ, ಮರಮುಟ್ಟು, ಯಂತ್ರಗಳಂತಹ ಸಂಪನ್ಮೂಲಗಳ ನಿಯಮಿತ ಬಳಕೆಯ ಪ್ರೋತ್ಸಾಹ, ಪರಿಸರ ಸ್ನೇಹಿ ಗೃಹೋಪಯೋಗಿ ವಸ್ತುಗಳ ಉತ್ಪಾದನೆಯ ಮೂಲಕ ಕೃಷಿಯೇತರ ಆದಾಯದಲ್ಲಿ ಹೆಚ್ಚಳ ಮತ್ತು ಆಮದು ಪ್ರಮಾಣದ ಕಡಿತ, ಸಹಕಾರ ವ್ಯವಸ್ಥೆಯ ಮೂಲಕ ಗ್ರಾಮೀಣ ಉತ್ಪನ್ನಗಳ ಸ್ಥಳೀಯ ಮಾರಾಟ ಮುಂತಾದ ವ್ಯವಸ್ಥೆಗಳ ಮೂಲಕ ಆರ್ಥಿಕ-ನೈಸರ್ಗಿಕ ಸುಸ್ಥಿರತೆಯನ್ನು ಕಾಪಾಡುವ ನೀತಿ ನಿಯಮಗಳು ಈಗ ಅನುಷ್ಠಾನಗೊಳ್ಳಬೇಕಾಗಿವೆ.

ಸ್ಥಳೀಯ ಮಟ್ಟದ ಸ್ವಾವಲಂಬನೆಯು ಕೊರೊನಾದಂತಹ ಹಲವು ಜಾಗತಿಕ ಸಂದಿಗ್ಧತೆಗಳಿಗೆ ಪರಿಹಾರವಾಗಬಹುದು ಎನ್ನುವುದು ಪ್ರಚಲಿತ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದಾಗ ತೋರುತ್ತದೆ. ಒಂದು ಪ್ರದೇಶದ ನಗರ ಮತ್ತು ಗ್ರಾಮೀಣ ಭಾಗಗಳ ನಡುವೆ ಉತ್ಪಾದನೆ ಮತ್ತು ಬಳಕೆಯ ಸಂಬಂಧಗಳು ಪರಸ್ಪರ ಪೂರಕ ಹಾಗೂ ಗಾಢವಾಗಿದ್ದರೆ, ಕೈಗಾರಿಕೆ, ಕೃಷಿ ಮತ್ತು ಇತರ ಸ್ಥಳೀಯ ಆರ್ಥಿಕ ಕ್ಷೇತ್ರಗಳಲ್ಲಿ ಸ್ವಾವಲಂಬನೆ, ವಲಸೆಯ ಕಡಿತ, ಪರಿಣಾಮಕಾರಿ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜನಸಮುದಾಯಗಳ ರಕ್ಷಣೆಗಳು ಸಾಧ್ಯ ಎಂಬುದು ಇಲ್ಲಿ ನಾವು ಕಲಿಯಬಹುದಾದ ಪಾಠವಾಗಿದೆ. ಸೋಜಿಗವೆಂದರೆ, ಈ ಪರಿಹಾರಗಳೆಲ್ಲವೂ ಗಾಂಧೀಜಿಯ “ಗ್ರಾಮ ಸ್ವರಾಜ್ಯ”ದ ಕಲ್ಪನೆಯ ಸಾಂದರ್ಭಿಕ ಅಳವಡಿಕೆಯಷ್ಟೇ. ಹಾಗಾಗಿ, ಗಾಂಧೀಜಿಯವರ ಮೂಲತತ್ವಗಳೇ ನಮ್ಮ ಸಮಾಜವನ್ನು ಇಂತಹ ಪಿಡುಗುಗಳಿಂದ ಉಳಿಸಬಲ್ಲವು ಎಂದು ಗೋಚರಿಸುತ್ತದೆ.

(ಮುಗಿಯಿತು) 

ಏನಿದು ಆತ್ಮ ನಿರ್ಭರ್‌..?

Andolana E-PAPER

× Chat with us