ಡಾ.ಎಚ್.ಕೆ.ಮಂಜು
ಪ್ರತಿವರ್ಷ ಪ್ರವೇಶಾತಿಯ ಋತು ಬರುತ್ತಿದ್ದಂತೆ ನಾನು ಹೊಸ ವಿದ್ಯಾರ್ಥಿಗಳನ್ನು ಭೇಟಿಯಾದಾಗ ಪ್ರತಿಭಾವಂತಿಕೆಯ ಜೊತೆ ಹಿಂಜರಿಕೆಯ ಭಾವನೆ ಹಲವು ಮಕ್ಕಳಲ್ಲಿ ಕಾಣಸಿಗುತ್ತದೆ. ಮನೋವಿಜ್ಞಾನದಂತಹ ವಿಷಯಗಳನ್ನು ಪರಿಚಯಿಸಿದಾಗ ನನಗೆ ವಿದ್ಯಾರ್ಥಿಗಳು ಹೇಳುವ ಮಾತು ನನಗೆ ಅದರ ಬಗ್ಗೆ ಹೆಚ್ಚು ತಿಳಿದಿಲ್ಲ, ಅದು ಕಷ್ಟವಲ್ಲವೇ? ನನಗೆ ಹೊಸ ವಿಷಯ ಓದಲು ಭಯವಾಗುತ್ತದೆ, ಕಷ್ಟವಾಗುತ್ತದೆ. ನನ್ನ ಸ್ನೇಹಿತ-ಸ್ನೇಹಿತೆಯರು ಆಯ್ಕೆ ಮಾಡಿರುವ ವಿಷಯವನ್ನೇ ನಾನು ಕೂಡ ಓದುತ್ತೇನೆ. ನನ್ನ ಸಂಬಂಧಿಗಳು ಇದೇ ವಿಷಯ ಓದಲು ತಿಳಿಸಿದ್ದಾರೆ ಎಂಬಂತಹ ಮಾತುಗಳು ಪ್ರವೇಶಾತಿ ಸಮಯದಲ್ಲಿ ಸಾಮಾನ್ಯ. ಮಕ್ಕಳಲ್ಲಿ ತನಗೆ ಇಚ್ಛಿಸುವ, ಆಸಕ್ತಿಯ ಕೋರ್ಸ್‌ಗಳನ್ನು ಓದಲು ಹಿಂಜರಿಕೆ. ಇದು ಮನೋವಿಜ್ಞಾನಕ್ಕೆ ಅಥವಾ ಇತರ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ, ಸುಲಭವಾಗಿ ಪದವಿ ಮುಗಿಸಿಬಿಡಬೇಕು ಎಂಬ ಭಾವನೆ ಹೊಸ ವಿಷಯಗಳನ್ನು ಕಲಿಯಲು ಇರುವ ಭಯಕ್ಕೆ ಕಾರಣ. ಇದು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಕುತೂಹಲ ನಮ್ಮ ಬೆಳವಣಿಗೆಯ ಎಂಜಿನ್:
ಸಣ್ಣ ಮಕ್ಕಳಿದ್ದಾಗ ಪ್ರತಿಯೊಂದನ್ನೂ ಪರೀಕ್ಷಿಸಿ, ನೂರು ಪ್ರಶ್ನೆ ಮಾಡಿ ಕುತೂಹಲದಿಂದ ಕಲಿಯುತ್ತಿದ್ದ ವಿದ್ಯಾರ್ಥಿಗಳು ಬೆಳೆದಂತೆ ನಿರ್ಲಿಪ್ತರಾಗಿಬಿಡುತ್ತಾರೆ. ಹೊಸ ಕಲಿಕೆಯ ಬಗ್ಗೆ, ಹೊಸ ವಿಷಯಗಳ ಬಗ್ಗೆ ಕುತೂಹಲವೇ ಇಲ್ಲವಾಗುತ್ತಿದೆ. ಅಯ್ಯೋ ಇದನ್ನೂ ಕಲಿಬೇಕಾ ಎಂಬ ನಿರುತ್ಸಾಹ, ಭಯ ವಿದ್ಯಾರ್ಥಿಗಳಲ್ಲಿ ಮನೆ ಮಾಡುತ್ತಿದೆ. ಕಲೆ, ವಿಜ್ಞಾನದ ಅನ್ವೇಷಣೆಗಳು ಅಥವಾ ಯಾವುದೇ ಸಾಮಾಜಿಕ ಬದಲಾವಣೆಗಳು, ಇದು ಹೀಗೆ ಏಕೆ? ಹೀಗೂ ಏಕಿರಬಾರದು? ಎಂಬ ಧೈರ್ಯದಿಂದ ಪ್ರಶ್ನಿಸುವ ಮನಸ್ಥಿತಿಯಿಂದ ಹೊರ ಬಂದಿರುವುದು. ವಿದ್ಯಾರ್ಥಿಗಳು ತಮ್ಮನ್ನು ಅತಿ ಸುಲಭ ಎಂದು ತೋರುವ ವಿಷಯಗಳಿಗೆ ಸೀಮಿತಗೊಳಿಸಿದಾಗ ತಮ್ಮ ಮಿತಿಗಳನ್ನು ಮೀರಿ ಬೆಳೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಮನೋವಿಜ್ಞಾನ (Psychology), ಸಂಜ್ಞಾನಾತ್ಮಕ ವಿಜ್ಞಾನ (Cognitive Science), ಭೂ ಮಾಹಿತಿ ವಿಜ್ಞಾನ (Geoinformatics), ವರ್ತನಾ ಅರ್ಥಶಾಸ್ತ್ರ ((Behavioral Economics) ದಂತಹ ವಿಷಯಗಳು ಮೊದಲಿಗೆ ಅಪರಿಚಿತ ವೆಂದು ತೋರಬಹುದು. ಆದರೆ ತಮ್ಮನ್ನು ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳಲು ನಮ್ಮ ಗ್ರಹಿಕೆಯನ್ನು ಹೆಚ್ಚಿಸುತ್ತವೆ. ಇಂದಿನ ಸಂಕೀರ್ಣ ಸಮಾಜದಲ್ಲಿ ಇದು ಹಿಂದೆಂದಿಗಿಂತಲೂ ಅವಶ್ಯ.
ಶಿಕ್ಷಣ ಜೀವನೋಪಾಯ ಮೀರಿದ ಕಲಿಕೆ:
ಕಾಲೇಜು ಪದವಿಯು ವೃತ್ತಿಜೀವನದ ಮೆಟ್ಟಿಲು ಎಂದು ಭಾವಿಸುವುದು ತಪ್ಪಲ್ಲ. ಆದರೆ ಶಿಕ್ಷಣವು ಅತಿ ಮುಖ್ಯವಾಗಿ ನಮ್ಮ ಮಾನಸಿಕ ಬೆಳವಣಿಗೆಗೆ, ಪ್ರಬುದ್ಧತೆಗೆ ಕಾರಣವಾಗುವ ಕಲಿಕೆ ಎಂಬುದನ್ನು ಮರೆಯಬಾರದು. ಪದವಿಯು ಕೇವಲ ಸಂಬಳ ತೆಗೆಯುವ ಸಾಧನವಲ್ಲ. ಪದವಿ ಶಿಕ್ಷಣವು ವಿಮರ್ಶಾತ್ಮಕ ಚಿಂತನೆ, ಉತ್ತಮ ಸಂವಹನ, ಸ್ವ-ಅರಿವನ್ನು ಮೂಡಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಿದ್ಧಗೊಳಿಸುತ್ತದೆ.
ಆಯ್ಕೆಗಳು ನಿಮ್ಮ ಜೀವನವನ್ನು ಬದಲಿಸುತ್ತವೆ:
ಜಗತ್ತು ವೇಗವಾಗಿ ವಿಕಾಸವಾಗುತ್ತಿದೆ. ಕುತೂಹಲದಿಂದ ಕಲಿಯುವ ಚಿಂತನಶೀಲ ಬದಲಾವಣೆಗಳಿಗೆ ಬೇಗ ಹೊಂದಿಕೊಳ್ಳುವ ಪರಿಶ್ರಮಿಗಳ ಭವಿಷ್ಯ ಉಜ್ವಲವಾಗಿರುವುದು. ಇಂದಿನ ಹಲವು ಉದ್ಯೋಗಗಳು ಮುಂದೆ ಇಲ್ಲವಾಗಬಹುದು. ಹೊಸ ವಿಷಯಗಳನ್ನು ಅಧ್ಯಯನ ಮಾಡುವ ಆಯ್ಕೆ ನೀವು ತಿಳಿದಿರುವ ಪ್ರತಿಭೆಯನ್ನು ಕಂಡುಕೊಳ್ಳಲು, ಹೊಸ ವೃತ್ತಿ ಮಾರ್ಗಗಳಿಗೆ ನಿಮ್ಮನ್ನು ಪರಿಚಯಿಸಲು ಕಾರಣವಾಗಬಹುದು. ಮನೋವಿಜ್ಞಾನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಇದು ಕೇವಲ ಆಸ್ಪತ್ರೆ, ಚಿಕಿತ್ಸಾ ಕೊಠಡಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ವ್ಯಾಪಾರ, ಮಾರ್ಕೆಟಿಂಗ್, ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಜೀವನ ಕೌಶಲ, ವ್ಯಕ್ತಿತ್ವ ಬೆಳವಣಿಗೆ, ರಕ್ಷಣಾ ವಲಯ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ನೀತಿ ನಿರೂಪಣೆಯಂತಹ ವೈವಿಧ್ಯಮಯ ಕ್ಷೇತ್ರಗಳಿಗೆ ವ್ಯಾಪಿಸಿದೆ. ಇದು ಕೇವಲ ಒಂದು ಕೋರ್ಸ್ ವಿಷಯಕ್ಕಿಂತ ಜಗತ್ತನ್ನು ನೈಜವಾಗಿ ಅರಿಯಲು, ಜನರನ್ನು ಅರ್ಥಮಾಡಿಕೊಳ್ಳಲು, ಸಂಬಂಧಗಳನ್ನು ಸುಧಾರಿಸಲು, ಉತ್ತಮ ಕೆಲಸದ ಸ್ಥಳಗಳನ್ನು ನಿರ್ಮಿಸಲು ಸಹ ಸಹಕಾರಿ. ನಾವು ಏಕೆ ನಮ್ಮಂತೆಯೇ ವರ್ತಿಸುತ್ತೇವೆ? ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ? ಆರೋಗ್ಯಕರ ಸಮಾಜಗಳನ್ನು ಹೇಗೆ ನಿರ್ಮಿಸಬಹುದು? ಇಂತಹ ಅರಿವನ್ನು ನೀಡುತ್ತದೆ. ಇದು ವೃತ್ತಿಪರವಾಗಿ ಉಪಯುಕ್ತ ಮಾತ್ರವಲ್ಲ, ವೈಯಕ್ತಿಕವಾಗಿ ನಮ್ಮ ಜ್ಞಾನವನ್ನು ಶ್ರೀಮಂತಗೊಳಿಸುತ್ತದೆ. ಇದು ಕೇವಲ ಶಿಕ್ಷಣವಲ್ಲದೆ ವ್ಯಕ್ತಿಯ ಸಬಲೀಕರಣವೂ ಹೌದು.
ಸವಾಲು ಸ್ವೀಕರಿಸಿ ಯಶಸ್ಸು ನಿಮ್ಮದಾಗುತ್ತದೆ:
ಪ್ರತಿಯೊಂದು ವಿಷಯವನ್ನು ಕಲಿಯುವಾಗ ಅನೇಕ ಸವಾಲುಗಳಿರುತ್ತವೆ. ಆದರೆ ಯಶಸ್ಸು ಮತ್ತು ಬೆಳವಣಿಗೆಗೆ ನಾವು ನಮ್ಮ ವ್ಯಾಪ್ತಿಯನ್ನು, ದೌರ್ಬಲ್ಯವನ್ನು ಮೀರಬೇಕು, ಹೆಚ್ಚು ಶ್ರಮಿಸಬೇಕು, ಆಳವಾಗಿ ಚಿಂತಿಸಬೇಕು. ಕಷ್ಟ ಎನ್ನುವ ಭಯ ಸ್ವಾಭಾವಿಕ. ಆದರೆ ಅದು ನಮ್ಮ ಆಯ್ಕೆಗಳನ್ನು ಬದಲಿಸಬಾರದು. ನೆನಪಿಡಿ, ಪ್ರತಿಯೊಬ್ಬ ತಜ್ಞರೂ ಒಂದು ಕಾಲದಲ್ಲಿ ವಿಧೇಯ ವಿದ್ಯಾರ್ಥಿ. ಯಶಸ್ಸನ್ನು ಹೊಂದುವ ವಿದ್ಯಾರ್ಥಿಗಳು ಯಾವಾಗಲೂ ಸುಲಭದ ಮಾರ್ಗವನ್ನು ಆರಿಸುವುದಿಲ್ಲ. ಬದಲಿಗೆ ಬದ್ಧತೆ ಮತ್ತು ಪರಿಶ್ರಮದಿಂದ ಸವಾಲನ್ನು ಸ್ವೀಕರಿಸುತ್ತಾರೆ.
ಶೈಕ್ಷಣಿಕ ಪ್ರಯಾಣದಲ್ಲಿ ಮುಂದಿನ ಹೆಜ್ಜೆ ಇಡಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೇ, ಹೊಸ ವಿಷಯ ಕಷ್ಟ ಎನ್ನುವ ಭಯ ನಿಮ್ಮನ್ನು ಹಿಂಜರಿಯಲು ಬಿಡಬೇಡಿ. ಶಿಕ್ಷಣ ಅಥವಾ ಪದವಿ ಕೇವಲ ಉದ್ಯೋಗದ ಅರ್ಜಿಗಾಗಿ ಇರುವುದು ಎಂದು ಭಾವಿಸಬೇಡಿ. ಭಯದ ಬದಲು ಆಸಕ್ತಿಯಿರಲಿ. ಸವಾಲುಗಳಿರುವ ವಿಷಯವೇ ನಿಮಗೆ ಬೆಳವಣಿಗೆಗೆ ಅವಕಾಶ ನೀಡುತ್ತದೆ. ಸುಲಭದ ಮಾರ್ಗವು ಗೆಲುವಿಗೆ ಕಾರಣವಲ್ಲ. ಯಶಸ್ಸಿಗೆ ಮುನ್ನುಡಿ ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸ. ನಿಮಗೆ ಸೂರ್ತಿ ನೀಡುವ ವಿಷಯಗಳನ್ನು ಆರಿಸಿಕೊಳ್ಳಿ, ಹೆಚ್ಚು ಓದಿ, ಹೆಚ್ಚು ಅರಿವು ಬೆಳೆಸಿಕೊಳ್ಳಿ. ವಿವೇಕಪೂರ್ಣವಾಗಿ ಯೋಚಿಸುವ ಶಕ್ತಿ ಜೀವನದ ಎಲ್ಲ ಕ್ಷೇತ್ರಗಳಲ್ಲಿ ನೆರವಾಗುತ್ತದೆ. ತಗ್ಗದ ಪರಿಶ್ರಮ ಜೊತೆಗಿರಲಿ. ಪ್ರತಿಯೊಂದು ಹೊಸ ಹೆಜ್ಜೆಯೂ ಗೆಲುವಿನೆಡೆಗೆ ಎಂದು ನಂಬಿ. ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ.
(ಲೇಖಕರು: ಮನೋವಿಜ್ಞಾನ ಸಹ ಪ್ರಾಧ್ಯಾಪಕರು, ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು)
” ನೆನಪಿಡಿ, ಪ್ರತಿಯೊಬ್ಬ ತಜ್ಞರೂ ಒಂದು ಕಾಲದಲ್ಲಿ ವಿಧೇಯ ವಿದ್ಯಾರ್ಥಿ. ಯಶಸ್ಸನ್ನು ಹೊಂದುವ ವಿದ್ಯಾರ್ಥಿಗಳು ಯಾವಾಗಲೂ ಸುಲಭದ ಮಾರ್ಗವನ್ನು ಆರಿಸುವುದಿಲ್ಲ. ಬದಲಿಗೆ ಬದ್ಧತೆ ಮತ್ತು ಪರಿಶ್ರಮದಿಂದ ಸವಾಲನ್ನು ಸ್ವೀಕರಿಸುತ್ತಾರೆ.”
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…