• ಕೀರ್ತಿ ಬೈಂದೂರು
ಇಂಜಿನಿಯರ್ ಆಗಿ ಐದಾರು ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿ, ಪ್ರಕೃತಿಯ ಪ್ರೇಮ- ಸೆಳೆತದ ನಡುವೆ ಶ್ರದ್ಧೆ, ಶಿಸ್ತಿನ ಅಧ್ಯಯನದೊಂದಿಗೆ ಸೌಮ್ಯ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ 33ನೇ ರ್ಯಾಂಕ್ ಗಳಿಸಿದ್ದಾರೆ. ನಿಸರ್ಗ ಮತ್ತು ಇವರ ತಾದಾತ್ರ್ಯವೇ ಬಹುಶಃ ಈ ರೂಪದಲ್ಲಿ ಒದಗಿರಬಹುದು ಎಂದು ಪರಿಭಾವಿಸುತ್ತಾರೆ.
ಒಮ್ಮೆ ರಾಜ್‌ಕುಮಾರ್ ನಟಿಸಿದ್ದ ಗಂಧದಗುಡಿ ಚಿತ್ರ ನೋಡಿ ಖುಷಿಪಟ್ಟು, ‘ಆಗೋದಾದ್ರೆ ಫಾರೆಸ್ಟ್ ಆಫೀಸರ್ ಆಗಬೇಕಪ್ಪಾ’ ಅಂದುಕೊಂಡಿದ್ದರು. ಎಂದರೆ ಬದುಕು ಆಗಲೇ ಕನಸು ಕಟ್ಟಲು ಆರಂಭಿಸಿತ್ತು. ಮೊದಲು ಐಎಎಸ್ ಗೆಂದು ತಯಾರಿ ನಡೆಸುತ್ತಿರುವಾಗ ಐಎಫ್‌ಎಸ್ ಕುರಿತಾಗಿ ಮಾಹಿತಿಯನ್ನೂ ಕಲೆಹಾಕಿದ್ದರು. ಮಹಿಳಾ ಐಎಫ್‌ಎಸ್ ಅಧಿಕಾರಿಗಳ ಬಗೆಗೆ ವಿವರವಾದ ಸಂಗತಿಗಳೆಲ್ಲ ದಾಖಲಾದ ‘ದ ಗ್ರೀನ್ ಸ್ಟೀನ್ಸ್ ಆಫ್ ಇಂಡಿಯಾʼ ಪುಸ್ತಕದ ಓದು ಬದುಕಿಗೆ ತಿರುವು ನೀಡಿತು.
ಯುಪಿಎಸ್‌ಸಿ ಗುರಿ ಬೆನ್ನತ್ತಿದ ಅನೇಕರು ಪಿಯುಸಿ ಅಥವಾ ಪದವಿ ಹಂತದಿಂದಲೇ, ಅಧ್ಯಯನವನ್ನು ಆರಂಭಿಸುತ್ತಾರೆ. ಆದರೆ ಎದುರಿಗೆ ಬೇರೆ ಆಯ್ಕೆಗಳಿ ದ್ದರೂ ಆ ಬಗ್ಗೆ ಸೌಮ್ಯ ಅವರು ಯೋಚಿಸಲೇ ಇಲ್ಲ. ಹಾಗಾಗಿ ಎಲ್ಲರೂ ಇಂಜಿನಿಯರಿಂಗ್ ಮಾಡು ಎಂದಿದ್ದಕ್ಕೆ, ಕಾಕತಾಳಿಯವಾಗಿ ಅವಕಾಶಗಳೂ ಒದಗಿಬಂದಿದ್ದರಿಂದ ಸಹಜವಾಗಿ ಆ ಕಡೆಗೇ ವಾಲಿದರು. ಓದು ಮುಗಿದ ತಕ್ಷಣ ಕೆಲಸವೂ ಸಿಕ್ಕಿತು. ‘ತಡವಾಗಿರುವುದು ಯಾವತ್ತಿಗೂ ಉತ್ತಮ ಎಂಬುದು ಇವರ ಯಶಸ್ಸಿನ ಸೂತ್ರ. ‘ನಂಗಿಷ್ಟು ವಯಸ್ಸಾಯ್ತು ಇನ್ನೇನು ಯುಪಿಎಸ್‌ಸಿ ತಯಾರಿ ಮಾಡೋದು! ಅಂತ ತುಂಬಾ ಜನ ಹೇಳ್ತಿರ್ತಾರೆ. ಆದ್ರೆ, ಆ ವಯಸ್ಸಲ್ಲಿ ಪರೀಕ್ಷೆ ಬರೆಯೋದಕ್ಕೆ ಅರ್ಹತೆ ಇದ್ದು, ಪ್ರೋತ್ಸಾಹ ಮತ್ತೆ ಉತ್ಸಾಹ ಎರಡೂ ಇತ್ತಂದ್ರೆ ಖಂಡಿತಾ ಆಗುತ್ತೆ’ ಎನ್ನುವ ಇವರ ಮಾತಿನಲ್ಲಿ ಬದುಕಿನ ಬಗೆಗೆ ಆತ್ಮವಿಶ್ವಾಸವಿದೆ.
ಸಮರ್ಪಕವಾದ ಸಮಯ ನಿಗದಿ ಮಾಡಿಕೊಂಡು ಅಧ್ಯಯನಕ್ಕೆ ತೊಡಗಿಕೊಳ್ಳಬೇಕಾದ ಕಾರಣಕ್ಕೆ ಆದಷ್ಟು ಸಾಮಾಜಿಕವಾಗಿ ಬೆರೆಯುವುದಕ್ಕೆ ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಸುತ್ತಲ ಜನರ ಅಪೇಕ್ಷೆಗಳೇ ಬೇರೆ, ಕೇಂದ್ರ ಲೋಕಸೇವಾ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವವರ ಆದ್ಯತೆಯೇ ಬೇರೆ ಇರುವುದರಿಂದ ಓದಿಗೆ ಸಮಸ್ಯೆಯಾಗಬಹುದು ಎಂದು ಬಹುತೇಕರು ಪ್ರತ್ಯೇಕವಾಗಿ ಉಳಿದುಬಿಡುತ್ತಾರೆ. ಇವರ ವಿಷಯದಲ್ಲೂ ಇದು ಹೊರತಲ್ಲ. ಹಾಗಾಗಿ, ಯಾವುದೇ ಸಾಮಾಜಿಕ ಜಾಲತಾಣಗಳು ಇವರ ಮನಸ್ಸು ತಪ್ಪಿಯೂ ಸುಳಿಯುತ್ತಿರಲಿಲ್ಲ.
ರಾತ್ರಿ ಎಷ್ಟು ಹೊತ್ತಾದರೂ ಕೂತು ಓದಬಹುದು ಎನ್ನುವ ಸೌಮ್ಯ ಅವರಿಗೆ ಬೆಳಗೆಂದರೆ ಗದ್ದಲ. ಇವರ ಓದಿಗೆ ಜೊತೆಯಾಗಿದ್ದೇ, ಇರುಳಿನ ನೀರವ ಮೌನ. ಜೊತೆಗೆ, ಮನಸ್ಸಿಗೆ ಹಿತ ಭಾವ ನೀಡುತ್ತಿದ್ದ ಭಾವಗೀತೆಗಳು, ಮೆಲೋಡಿ ಹಾಡುಗಳನ್ನು ಕೇಳುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದಿನ ಜಗತ್ತಿನಿಂದ ಹೊರಬಂದಾಗೆಲ್ಲ ಕಲಾತ್ಮಕ ಚಿತ್ರಗಳೆಲ್ಲ ಕೈ ಬೀಸಿ ಕರೆಯುತ್ತಿದ್ದವು. ಪೆನ್ಸಿಲ್ ಸ್ಕೆಚ್ ಇವರಿಷ್ಟದ ಹವ್ಯಾಸ. ಪ್ರಕೃತಿಯನ್ನು ಪ್ರೀತಿಸುವ ಸೌಮ್ಯ ಅವರಿಗೆ ಐಎಫ್‌ಎಸ್ ನ ಮೂಲಕವೇ ಕೊಡುಗೆ ನೀಡಬೇಕೆನ್ನುವ ಮನಸ್ಸಿದೆ. ಅಂತೆಯೇ ದೊರೆತ ಅವಕಾಶವನ್ನೇ ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂಬ ಭರವಸೆ ಇವರ ಜೊತೆಗಿದೆ. ಆಸೆ ಮತ್ತು ಆಸಕ್ತಿ ಎರಡೂ ಇದ್ದರೆ ವಯಸ್ಸು ಯಾವುದಕ್ಕೂ ಅಡ್ಡಿಯಲ್ಲ ಎನ್ನುವ ಸೌಮ್ಯ ಅವರು ಲೋಕಸೇವಾ ಉದ್ಯೋಗಾಕಾಂಕ್ಷಿಗಳಿಗೆ ಮಾದರಿ.
ಪೋಷಕರು ಸಮಾರಂಭಕ್ಕೆ ಹೋದಾಗೆಲ್ಲ, ‘ಮಗಳು ನಿರುದ್ಯೋಗಿ ಅಲ್ವಾ? ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳಾ?’ ಹೀಗೆ ತರತರಹದ ಪ್ರಶ್ನೆಗಳಿಗೆ ಪೋಷಕರು ಉತ್ತರ ಕೊಡಲಾಗದಿದ್ದರೂ ತನ್ನ ಮೇಲಿನ ಭರವಸೆ ಕಳೆದುಕೊಳ್ಳದೆ ಸದಾ ಬೆಂಬಲವಾಗಿ ನಿಂತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸರಿಯಾದ ವ್ಯಕ್ತಿಗಳ ಸೂಕ್ತವಾದ ಮಾರ್ಗದರ್ಶನ ಜೀವನಕ್ಕೆ ಬಹಳ ಮುಖ್ಯ ಎಂಬುದು ಇವರ ಅಭಿಪ್ರಾಯ. ಬಹುಶಃ ಇದು ಐಎಎಸ್ ತಯಾರಿಯಲ್ಲಿ ಸಿಗಲಿಲ್ಲ ಎಂಬ ಬೇಸರವಿದ್ದರೂ ಐಎಫ್‌ಎಸ್ ಪರೀಕ್ಷೆಗೆ ಮಾತ್ರ ಅನೇಕ ಐಎಫ್‌ಎಸ್ ಅಧಿಕಾರಿಗಳು ನೀಡಿದ ಸಲಹೆಗಳನ್ನು ನೆನಪಿಸಿಕೊಳ್ಳುತ್ತಾರೆ. ಸತತವಾಗಿ ಐದನೆಯ ಪ್ರಯತ್ನದಲ್ಲಿ ಐಎಫ್‌ಎಸ್‌ನ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಮೈನ್ಸ್ ಪರೀಕ್ಷೆ ಪಾಸ್ ಆಗುವುದಕ್ಕೆ ಎರಡೇ ಪ್ರಯತ್ನಗಳು ಸಾಕಾಯಿತು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…