Making competition naturally easy is intelligence
ಡಾ. ನೀಗೂ ರಮೇಶ್
ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಪವಾಡವೆಂದರೆ, ಒಂದು ಪರೀಕ್ಷೆ, ಒಂದು ಚುನಾವಣೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ದೊಡ್ಡ ಸ್ಥಾನಕ್ಕೆ ಏರಿಸಬಲ್ಲವು ಎಂಬುದು. ಈ ಮಾತಿನ ಮರ್ಮವನ್ನು ಅರಿತುಕೊಂಡರೆ ಎಂತಹ ಅಸಹಾಯಕನಿಗೂ ತಾನು ಒಂದು ಪ್ರಯತ್ನ ಮಾಡಿಯೇ ನೋಡಬೇಕುಎನಿಸುವುದು ಸುಳ್ಳಲ್ಲ.
ಚುನಾವಣೆಯ ಮಾನದಂಡಗಳೇ ಬೇರೆ, ಉದ್ಯೋಗದ ಮಾನದಂಡವೇ ಬೇರೆ. ಆದರೆ, ಇವೆರಡೂ ನಮ್ಮ ಕೈಗೆಟುಕದ ಕನಸುಗಳು ಎಂದು ಯಾರೂ ನಿರಾಶರಾಗುವ ಅಗತ್ಯವಿಲ್ಲ. ಅಂತಹ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಒಬ್ಬ ಸಾಮಾನ್ಯ ವ್ಯಕ್ತಿ ಜನಬಲದಿಂದ ಚುನಾವಣೆ ಎದುರಿಸಿ ಒಂದು ಅಧಿಕಾರದ ಸ್ಥಾನ ಹಿಡಿಯಬಹುದು. ಹಾಗೆಯೇ ಹಣ, ಪ್ರಭಾವ ಯಾವುದೂ ಇಲ್ಲದ ಒಬ್ಬ ಪ್ರತಿಭಾವಂತ ಅಭ್ಯರ್ಥಿ ತನ್ನಲ್ಲಿರುವ ಜ್ಞಾನಬಲವನ್ನು ಬಳಸಿ ಉನ್ನತ ಹುದ್ದೆಗೆ ಏರಬಲ್ಲ. ಇವೆರಡೂ ಮೇಲುನೋಟಕ್ಕೆ ಸರಳವೆನಿಸಿದರೂ ಹಾದಿ ದುರ್ಗಮವೇ ಆದುದು. ಯಾವ ಶ್ರೇಷ್ಠ ಪದವಿಯೂ ಸುಲಭವಾಗಿ ದೊರಕಬಾರದು ಎಂಬ ಲೋಕನೀತಿ ಇದಕ್ಕೆ ನಮಗೆ ಸಮಾಧಾನ ನೀಡಬಲ್ಲುದು.
ಅದಕ್ಕೆ ಒಂದು ಕ್ರಮಬದ್ಧವಾದ ಸಿದ್ಧತೆ ಬೇಕು, ಆತ್ಮವಿಶ್ವಾಸ ಬೇಕು. ಆ ಕಠಿಣ ಹಾದಿಯನ್ನು ಕ್ರಮಿಸುವ ಸಹನೆ ಬೇಕು. ರಾಜಕೀಯದ ಮಾತಿರಲಿ, ಉದ್ಯೋಗದ ವಿಷಯದಲ್ಲಂತೂ ಅರ್ಹತೆಯಿರುವ ಎಲ್ಲರಿಗೂ ಮುಕ್ತ ಅವಕಾಶವಿದೆ. ಒಂದು ಕಾಲಕ್ಕೆ ಸರ್ಕಾರಿ ಉದ್ಯೋಗ ಎಂದರೆ ಹಣ ಅಥವಾ ಪ್ರಭಾವಶಾಲಿಗಳಿಗೆ ಮಾತ್ರ ಎಂಬ ನಂಬಿಕೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ನಡೆಸುವ ಒಂದು ಪರೀಕ್ಷೆ ಒಬ್ಬ ಗುಮಾಸ್ತನಿಂದ ಹಿಡಿದು ಜಿಲ್ಲಾಧಿಕಾರಿಯ ಹುದ್ದೆಯನ್ನೂ ನೀಡಲಿದೆ. ಉಳಿದ ಎಲ್ಲಾ ಬೇಡದ ಸಂಗತಿಗಳನ್ನು ದೂರ ಇಡಿ, ಸಿದ್ಧತೆಗೆ ಹೊರಡಿ.
ಇಂತಹ ಆಶಾಭಾವದ ಸಂದರ್ಭದಲ್ಲಿ ಎದುರಾಗುವ ದೊಡ್ಡ ಸವಾಲೆಂದರೆ ನಕಾರಾತ್ಮಕ ಮನೋಭಾವನೆ ಇದೊಂದೇ ಒಂದು ದೌರ್ಬಲ್ಯ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು, ಕನಸುಗಳನ್ನು, ಸಿದ್ಧತೆಗಳನ್ನು ಕ್ಷಣ ಮಾತ್ರದಲ್ಲಿ ಕರಗಿಸಿಬಿಡಬಲ್ಲದು. ಒಂದು ದೊಡ್ಡ ಗುರಿಯನ್ನು ಬೆನ್ನತ್ತಲು ಹೊರಟವರ ಬೆನ್ನ ಹಿಂದೆ ಕೇಳಿ ಬರುವ ದನಿಗಳು ಹೆಚ್ಚು ನಕಾರಾತ್ಮಕವಾದವುಗಳೇ ಆಗಿರುತ್ತವೆ. ‘ಅದೆಲ್ಲ ಕಷ್ಟ’ ‘ನಮ್ಮಂಥವರಿಗೆ ಆಗಲ್ಲ’ ‘ಇವರಿಗೆ ಬುದ್ಧಿ ಇಲ್ಲ’ ‘ಸುಮ್ಮನೆ ಸಮಯ ಹಣ ಹಾಳು’ ಎಂದು ಕಾಲೆಳೆವವರೇ ಹೆಚ್ಚು. ಅವೆಲ್ಲವನ್ನೂ ಮೀರಿ ಮುನ್ನುಗ್ಗ ಬಲ್ಲವರಷ್ಟೇ ಗುರಿ ತಲುಪಲು ಸಾಧ್ಯ. ಒಮ್ಮೆ ಒಂದು ಕಡಿದಾದ ಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ದೈಹಿಕವಾಗಿ ಘಟಾನುಘಟಿಗಳೆಲ್ಲ ಅರ್ಧದಲ್ಲೇ ನಿಂತು ಬಿಟ್ಟರಂತೆ.
ಸಾಮಾನ್ಯದೃಢಕಾಯದ ವ್ಯಕ್ತಿಯೊಬ್ಬ ಬೆಟ್ಟದ ತುತ್ತ ತುದಿಗೆ ಹತ್ತಿ ನಿಂತನಂತೆ. ಕಾರಣ ಅವನು ಕಿವುಡನಾಗಿದ್ದನಂತೆ! ಸಾಧಕ ನಕಾರಾತ್ಮಕ ನುಡಿಗಳಿಗೆ ಕಿವುಡಾದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ಯಾವುದೇ ಹುದ್ದೆಗೆ ಅರ್ಜಿ ಕರೆದಾಗ ಬಗೆ ಬಗೆಯ ಚರ್ಚೆಗಳು ನಡೆಯುತ್ತವೆ. ಹುದ್ದೆಗೆ ಅರ್ಜಿ ಹಾಕಿದವರ ಸಂಖ್ಯೆ ತಿಳಿದ ಮೇಲಂತೂ ಕುಸಿದು ಹೋಗುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಂತೂ ಹುದ್ದೆ ಮತ್ತು ಆಕಾಂಕ್ಷಿಗಳ ಅನುಪಾತ ಏರುತ್ತಲೇ ಇದೆ. ೧:೧೦೦ ಇದ್ದ ಅನುಪಾತ ಈಗ ೧:೧೦೦೦ ದಾಟಿದೆ. ಒಬ್ಬ ಸಾಮಾನ್ಯ ನೌಕರಿಗೂ ಸಾವಿರಾರು ಜನರ ನಡುವೆ ನಮ್ಮ ಸಾಮರ್ಥ್ಯ, ಪ್ರತಿಭೆಗಳಿಂದ ಗುರುತಿಸಿಕೊಳ್ಳ ಬೇಕಾಗುತ್ತದೆ. ಈ ಸ್ಪರ್ಧೆಯನ್ನು ನೋಡಿ ಅರ್ಹತೆಯಿರುವ ಹಲವರು ಅರ್ಜಿಯನ್ನೇ ಹಾಕದೆ ಹಿಂದೆ ಸರಿಯುತ್ತಾರೆ. ಅರ್ಜಿ ಹಾಕಿದವರಲ್ಲಿ ಅರ್ಧದಷ್ಟು ಜನರು ಆಸಕ್ತಿಯಿಂದ ಓದುವುದನ್ನು ಕೈಬಿಡುತ್ತಾರೆ. ಓದುವವರಲ್ಲೂ ಬಹಳಷ್ಟು ಮಂದಿ ಈ ಸ್ಪರ್ಧೆಯ ತೀವ್ರತೆ ಕಂಡು ಹೇಗೂ ತಮಗೆ ಆ ಕೆಲಸ ಸಿಗುವುದಿಲ್ಲ ಎಂದು ನಿರ್ಧಾರಕ್ಕೆ ಬಂದು ಕಾಟಾಚಾರಕ್ಕೆ ಓದುತ್ತಾರೆ. ಹಲವರು ಪರೀಕ್ಷೆಗೇ ಹಾಜರಾಗದೆ ಉಳಿದು ಬಿಡುತ್ತಾರೆ. ಪರೀಕ್ಷೆ ಬರೆದವರಲ್ಲಿ ಅರ್ಧದಷ್ಟು ಜನ ಅರೆಮನಸ್ಸಿನಿಂದ ಬರೆದಿರುತ್ತಾರೆ. ಒಂದು ಸಣ್ಣ ಸಂಖ್ಯೆಯ ಜನರು ಮಾತ್ರ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಬರೆಯುತ್ತಾರೆ. ಈ ಹಂತಕ್ಕೆ ಬರುವ ವೇಳೆಗೆ ೧:೧೦೦೦ ಇದ್ದ ಸ್ಪರ್ಧೆ ವಾಸ್ತವವಾಗಿ ೧:೧೦ಕ್ಕೂ ಕಡಿಮೆ ಅನುಪಾತಕ್ಕೆ ಇಳಿದಿರುತ್ತದೆ! ಈ ಹಂತದಲ್ಲಿಯೂ ಭರವಸೆ ಕಳೆದುಕೊಳ್ಳದೆ ಆತ್ಮವಿಶ್ವಾಸ ಉಳಿಸಿಕೊಂಡವರು ಯಶಸ್ವಿಯಾಗುತ್ತಾರೆ.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ದಿನೇ ದಿನೇ ಸ್ಪರ್ಧೆ ಹೆಚ್ಚುತ್ತಲೇ ಇದೆ. ಅದು ಉಳಿವಿಗಾಗಿ ನಡೆದಿರುವ ಹೋರಾಟ. ಇದೇ ಭೀತಿಯಲ್ಲಿ ಈಗಾಗಲೇ ಚಿಕ್ಕ ಮಕ್ಕಳ ಸಹಜ ಬೆಳವಣಿಗೆಯ ಬಾಲ್ಯವನ್ನು ಕಸಿದುಕೊಳ್ಳಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ಮಕ್ಕಳಿಗೆ ತುಂಬಿಸಿ, ಪರೀಕ್ಷೆಯಲ್ಲಿ ಹೊರಹಾಕಿಸಿ, ಅಂಕಗಳು ಬಂದ ಆನಂದದಲ್ಲಿ ಪೋಷಕರೂ ನಿರಾಳರಾಗುತ್ತಾರೆ. ಮಕ್ಕಳೂ ಕಲಿತದ್ದೆಲ್ಲಾ ಮರೆಯುತ್ತಾರೆ! ಒಂದನೇ ತರಗತಿಯಲ್ಲೇ ಚಿತ್ರಪಟ ನೋಡಿಕೊಂಡು ಆಕಾಶಕಾಯಗಳು, ಗ್ರಹ, ನಕ್ಷತ್ರಗಳನ್ನು ಪರಿಚಯಿಸುವ ಮಗು ಪ್ರೌಢಶಾಲೆಗೆ ಬಂದಾಗ ಆ ಯಾವ ನೆನಪೂ ಇಲ್ಲದೆ ಹೊಸದಾಗಿ ಕಲಿಯುತ್ತದೆ. ಕಲಿತ ಯಾವ ಸಂಗತಿ ಆಗಾಗ ಪುನರಾವರ್ತನೆಯಾಗುತ್ತದೆಯೋ ಅದು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಎಂದೋ ಕಲಿತು ಮತ್ತೆ ಆ ಕಡೆ ನೆನಪು ಮಾಡಿಕೊಳ್ಳದ ಸಂಗತಿ ನಮ್ಮದಾಗುವುದಿಲ್ಲ. ಆಯಾ ವಯಸ್ಸಿಗೆ ಬೇಕಾದ ಸಂಗತಿಗಳನ್ನು ಮಾತ್ರ ಕ್ರಮಬದ್ಧವಾಗಿ ಕಲಿಸಿದರೆ ಅದು ಅವರ ಜ್ಞಾನವಾಗುತ್ತದೆ. ಅದರ ಬುನಾದಿಯ ಮೇಲೆ ಹೆಚ್ಚಿನ ಜ್ಞಾನ ಭಂಡಾರ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅಂದರೆ, ಒಮ್ಮೆ ಕಲಿತ ಜ್ಞಾನ ಮನಸ್ಸಿನಲ್ಲಿ ಉಳಿಯಬೇಕಾದರೆ ಆಗಾಗ ಪುನರಾವರ್ತನೆಯಾಗಬೇಕು, ಉಪಯೋಗಿಸಬೇಕು. ೨೦-೩೦ ಪುಸ್ತಕಗಳನ್ನು ಪ್ರತೀ ವರ್ಷ ಅರೆಬರೆ ಓದಿಸಿಬಿಸಾಡುವುದರಿಂದ ಮಕ್ಕಳು ಬುದ್ಧಿವಂತರಾಗುವುದಿಲ್ಲ.
ಸಮಯೋಚಿತವಾಗಿ ತರಗತಿಗಳಲ್ಲಿ, ಮನೆಗಳಲ್ಲಿ, ಮಾಧ್ಯಮಗಳು ಹಾಗು ಪರಿಸರದಲ್ಲಿ ಕಲಿತ ಸಂಗತಿಗಳನ್ನು ಅಗತ್ಯ ಬಂದಾಗ ಅಸ್ತ್ರವಾಗಿ ಕೌಶಲವಾಗಿ ಬಳಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು. ಇಲ್ಲದಿದ್ದರೆ ನಮ್ಮ ಪುಸ್ತಕದ ಜ್ಞಾನ ಹಣ ತಂದುಕೊಡಬಹುದೇ ಹೊರತು, ಬದುಕುವುದನ್ನು ಕಲಿಸುವುದಿಲ್ಲ. ದೊಡ್ಡ ಸ್ಥಾನಗಳನ್ನು ತಲುಪಲು ಸಾಕಾಗುವುದಿಲ್ಲ. ಇನ್ನೊಂದು ಮಾತು: ಎಷ್ಟು ಹುದ್ದೆಗಾದರೂ ಅರ್ಜಿ ಕರೆದಿರಲಿ, ಎಷ್ಟು ಜನರಾದರೂ ಅರ್ಜಿ ಹಾಕಿರಲಿ, ನನಗೆ ಬೇಕಾಗಿರುವುದು ಒಂದೇ ಹುದ್ದೆ ಎಂದುಕೊಳ್ಳುವವನಿಗೆ ಅದು ದೊರೆಯುತ್ತದೆ. ಕೊನೆಗೆ ಒಂದೇ ಹುದ್ದೆ ಇದ್ದರೂ ಅದು ನನ್ನದೇ ಅಂದುಕೊಳ್ಳುವವರದು ಈ ಜಗತ್ತು!
ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಮನೋಭೂಮಿಕೆಯ ಪಂಚ ಸೂತ್ರಗಳು:
* ಸ್ವಇಚ್ಛೆಯಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಎದುರಿಸಿ, ಬೇರೆಯವರ ಒತ್ತಾಸೆಗಾಗಿ ಅಲ್ಲ
* ಪರೀಕ್ಷೆಯ ದಿನಗಳು ನಿಮ್ಮ ಬದುಕಿನ ಅಮೂಲ್ಯ ಕ್ಷಣಗಳು. ಅವುಗಳನ್ನು ಬೇರೆ ಯಾವುದೇ ಆಕರ್ಷಣೆಗಳಿಗೆ ವ್ಯಯಿಸಬೇಡಿ, ಎಲ್ಲಾ ಕಾರ್ಯಕ್ರಮಗಳಿಂದ ದೂರ ಇರಿ.ಮನರಂಜನೆಯ ಸಾಧನಗಳನ್ನು ಸ್ವಚ್ಛೆಯಿಂದ ತ್ಯಾಗ ಮಾಡಿ. ಕ್ಷಣಿಕ ಸಂತೋಷ ಅನಂತ ಸುಖದ ನಾಶ
* ರಾಶಿ ರಾಶಿ ಪುಸ್ತಕಗಳನ್ನು ಓದುವ ಬದಲು ಬೇಕಾಗಿರುವಷ್ಟು ವಿಷಯಗಳನ್ನು ಕ್ರಮಬದ್ಧವಾಗಿ ಬರವಣಿಗೆಯೊಂದಿಗೆ ಓದಿ. ಅದು ಎಲ್ಲರ ನಡುವೆ ನೀವು ಗೆಲ್ಲಿಸುವ ಚಿಮ್ಮುಹಲಗೆಯಾಗುತ್ತದೆ
* ಪರೀಕ್ಷೆಗಳ ಸುದೀರ್ಘ ಹಾದಿಯಲ್ಲಿ ಗುಣಮಟ್ಟದ ಆಹಾರ, ನಿದ್ರೆ, ಜೀವನಶೈಲಿ ನಿಮ್ಮ ಸಾಧನೆಗೆ ಬೆನ್ನೆಲುಬಾಗುತ್ತವೆ
* ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿ. ನಾಳೆಯ ಕನಸುಗಳೊಂದಿಗೆ ಸಂಭ್ರಮಿಸಿಕೊಂಡು ಓದಿ
ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.…
ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…
ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…
ಮಂಡ್ಯ: ಲ್ಯಾಬ್ ಟು ಲ್ಯಾಂಡ್ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…
ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…