ವಾರಾಂತ್ಯ ವಿಶೇಷ

ಕೆಆರ್‌ಎಸ್ ಹಿನ್ನೀರಿನಲ್ಲಿ ಗತವೈಭವ ಸಾರುವ ವೇಣುಗೋಪಾಲಸ್ವಾಮಿ ದೇವಾಲಯ

ಎಸ್.ಪಿ. ಪರಶಿವಮೂರ್ತಿ ನಂಜೀಪುರ, ಸರಗೂರು ತಾ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಜೀರ್ಣೋದ್ಧಾರ ಗೊಂಡಿರುವ ಹೊಯ್ಸಳ ವಾಸ್ತುಶಿಲ್ಪದ ಭವ್ಯರಮಣೀಯ ೧೨ನೇ ಶತಮಾನದ ವೇಣುಗೋಪಾಲ ಸ್ವಾಮಿ ದೇವಸ್ಥಾನವು ಹತ್ತು ಹಲವು ವೈಶಿಷ್ಟ್ಯತೆಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಪ್ರವಾಸಿಗರನ್ನು ಆಯಸ್ಕಾಂತದಂತೆ ತನ್ನತ್ತ ಸೆಳೆಯುತ್ತಿದೆ.

ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಕನ್ನಂಬಾಡಿ ಗ್ರಾಮವು ಮುಳುಗಡೆ ಆದಾಗ ಈ ದೇವಾಲಯ ಕೂಡ ಸುಮಾರು ೭೦ ವರ್ಷಗಳ ಕಾಲ ನೀರಿನಲ್ಲಿ ಮುಳುಗಿತ್ತು. ಇಂತಹ ಸಂದರ್ಭದಲ್ಲಿ ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜಒಡೆಯರ್ ರವರು ಕನ್ನಂಬಾಡಿ ಗ್ರಾಮದ ನಿವಾಸಿಗಳಿಗೆ ಹೊಸ ಗ್ರಾಮವನ್ನು ೧೯೩೦ರಲ್ಲಿ ನಿರ್ಮಿಸಲು ಆದೇಶಿಸಿ ಅದಕ್ಕೆ ಹೊಸ ಕನ್ನಂಬಾಡಿ ಗ್ರಾಮ ಎಂದು ಹೆಸರಿಟ್ಟರು. ಆಗ ಈ ದೇವಾಲಯವನ್ನು ಕೂಡ ಹೊಸ ಕನ್ನಂಬಾಡಿ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು.

ಬೆಂಗಳೂರಿನ ಪ್ರಸಿದ್ಧ ಉದ್ಯಮಿ ಶ್ರೀಹರಿ ಖೋಡೆ ಅವರ ಮಾರ್ಗದರ್ಶನದಲ್ಲಿ ಖೋಡೆ ಪ್ರತಿಷ್ಠಾನವು ದೇವಾ ಲಯದ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿತು. ಹಳೆಯ ದೇವಾಲಯವು ಹೇಗೆ ಇತ್ತೋ ಅದೇ ರೀತಿ ಹೊಯ್ಸಳರ ಕಾಲದ ವಾಸ್ತುಶಿಲ್ಪದ ಶೈಲಿಯಲ್ಲೇ ಸುಂದರ ವಾಗಿ ೩೦ ಎಕರೆ ಪ್ರದೇಶದಲ್ಲಿ ಬೃಹದಾಕಾರವಾಗಿ ಕಣ್ಮನ ಸೆಳೆಯು ವಂತೆ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನಿರ್ಮಿಸಲಾಗಿದೆ.

ಮೂಲ ದೇವಾಲಯದಿಂದ ಉತ್ತರಕ್ಕೆ ಸುಮಾರು ಒಂದು ಕಿ.ಮೀ. ಕೆಆರ್‌ಎಸ್ ಬೃಂದಾವನ ಉದ್ಯಾನದಿಂದ ರಸ್ತೆಯ ಮೂಲಕ ೯ ಕಿ.ಮೀ. ಮೈಸೂರಿನಿಂದ ೨೦ ಕಿ.ಮೀ., ಮಂಡ್ಯದಿಂದ ೪೦ ಕಿ.ಮೀ. ದೂರದಲ್ಲಿದೆ.

ಹಂಪಿಯಲ್ಲಿರುವ ಕಲ್ಲಿನ ರಥದಂತೆ ಆಕರ್ಷಕವಾದ ಕಲ್ಲಿನ ರಥವನ್ನು ಬಹಳ ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ. ದೇವಾಲಯದ ಹೊರ ಭಾಗದ ಸುತ್ತಲೂ ನಾಲ್ಕು ಕಂಬಗಳುಳ್ಳ ಎಂಟು ಮಂಟಪಗಳನ್ನು ವಿಭಿನ್ನ ಕಲಾಕೃತಿಗಳಿಂದ ಕೆತ್ತಲಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ದೇವಾಲಯದ

ಒಳಭಾಗವಂತೂ ಅತ್ಯದ್ಭುತವಾಗಿದೆ. ದೇವಾಲಯದ ಒಳಹೊಕ್ಕಾಗ ಎಡ ಭಾಗದಿಂದ ವಿಘ್ನೇಶ್ವರ, ಶಿವ-ಪಾರ್ವತಿ, ಸುಬ್ರಹ್ಮಣ್ಯ, ದತ್ತಾತ್ರೇಯ ಗುಡಿಗಳಿವೆ. ಮುಂದೆ ಸಾಗುತ್ತಿದ್ದಂತೆ ಅಷ್ಟಲಕ್ಷ್ಮಿಯರಿದ್ದಾರೆ. ನಂತರ ಸಪ್ತ ನದಿಗಳ ದೇವರ ಗುಡಿಗಳು, ತದನಂತರ ನವಗ್ರಹಗಳು, ಇನ್ನೂ ಮುಂದೆ ಸಾಗಿದಂತೆ ವಿಷ್ಣುವಿನ ದಶಾವತಾರದ ಗುಡಿಗಳು, ತದನಂತರ ಸಪ್ತ ಮಹರ್ಷಿಗಳ ದೇವರ ಗುಡಿಗಳನ್ನು ವೈಶಿಷ್ಟ್ಯಮಯವಾಗಿ ಕೆತ್ತಲಾಗಿದೆ. ಗರ್ಭಗುಡಿಯಲ್ಲಿ ಕೊಳಲನ್ನು ಹಿಡಿದು ನಿಂತಿರುವ ಕೃಷ್ಣನ ಮೂರ್ತಿಯನ್ನು ನೋಡುವುದೇ ಒಂದು ಸಂತೋಷ. ಉತ್ಸವ ಮೂರ್ತಿ ಕೂಡ ಇದ್ದು ಒಟ್ಟು ೪೮ ದೇವರ ಸನ್ನಿಧಿಗಳು ಈ ದೇವಾಲಯ ಸಂಕೀರ್ಣದಲ್ಲಿದ್ದು ಮನಸ್ಸಿಗೆ ಶಾಂತಿಯನ್ನು ನೀಡುತ್ತಿವೆ.

ಬೆಳಿಗ್ಗೆ ೬.೩೦ಕ್ಕೆ ಬಾಗಿಲು ತೆರೆಯುವ ದೇವಾಲಯ ಸಂಜೆ ೫.೩೦ಕ್ಕೆ ಮುಚ್ಚಲ್ಪಡುತ್ತದೆ. ಈ ದೇವಾಲಯವು ಇತರ ದೇವಾಲಯಗಳಿಗಿಂತ ವಿಭಿನ್ನ… ಇಲ್ಲಿ ಭಕ್ತರು ದೇವರಿಗೆ ಹೂ, ಹಣ್ಣು,ಕಾಯಿ, ಗಂಧದ ಕಡ್ಡಿ, ಕರ್ಪೂರಗಳ ಸೇವೆಗೆ ಅವಕಾಶವಿರುವುದಿಲ್ಲ. ಕಾಣಿಕೆ ಹುಂಡಿಯೂ ಕೂಡ ಇರುವುದಿಲ್ಲ, ಇತರೆ ದೇವಾಲಯಗಳಂತೆ ಸೇವಾರ್ಥದಾರರ ಕಾಣಿಕೆ ಮತ್ತು ದಾನಿಗಳು ನೀಡುವ ಪಟ್ಟಿಯಂತೂ ಇಲ್ಲವೇ ಇಲ್ಲ. ಅಂದರೆ ಒಂದು ರೀತಿಯಲ್ಲಿ ವಿಶೇಷವಾದಂತಹ ದೇವಾಲಯವನ್ನು ನೋಡಬಹುದಾಗಿದೆ. ಈ ದೇವಾಲಯದ ಪುನರ್ ನಿರ್ಮಾಣ ಕಾರ್ಯವು ೨೦೦೩ ರಲ್ಲಿ ಆರಂಭವಾಗಿ ೨೦೧೬ರ ವರೆಗೆ ಪ್ರತಿ ದಿನ ೨೦೦೦ ನುರಿತ ಕುಶಲಕರ್ಮಿಗಳು, ನುರಿತ ಶಿಲ್ಪಿಗಳು ಅನೇಕ ವರ್ಷಗಳು ತಮ್ಮ ಕೈ ಚಳಕದಿಂದ ಕೆತ್ತನೆಗಳನ್ನು ಮಾಡಿ ಆಕರ್ಷಕವಾಗಿ ನಿರ್ಮಿಸಿ ಎಲ್ಲರ ಮನ ಗೆದ್ದಿದ್ದಾರೆ.

೨೦೧೭ರ ಡಿಸೆಂಬರ್ ೫ರಂದು ಈ ದೇವಾಲಯವು ಲೋಕಾರ್ಪಡೆಗೊಂಡಿದೆ. ದೇವಾಲಯದ ಸಂಪೂರ್ಣ ನಿರ್ವಹಣೆಯನ್ನು ಶ್ರೀಹರಿ ಖೋಡೆ ಪ್ರತಿಷ್ಠಾನದವರು ನಿರ್ವಹಿಸುತ್ತಿದ್ದು, ಶ್ರೀಹರಿ ಖೋಡೆಯವರ ಸಹೋದರ ಸ್ವಾಮಿ ಖೋಡೆಯವರ ನೇತೃತ್ವದಲ್ಲಿ ಸುಮಾರು ೫೦ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು, ಶೌಚಾಲಯದ ವ್ಯವಸ್ಥೆಯನ್ನೂ ಕೂಡ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ.

ನಾವು ನೋಡಿರುವ ರೀತಿ ಹಲವು ದೇವಾಲಯಗಳಲ್ಲಿ ವಿಶೇಷ ದರ್ಶನಕ್ಕೆಂದು ಒಂದು ಕೌಂಟರ್ ತೆರೆದು ಹಣ ಪಾವತಿಸಬೇಕಾಗುತ್ತದೆ. ಆದರೆ ಇಲ್ಲಿ ಯಾರೇ ಗಣ್ಯರು, ರಾಜಕೀಯ ಮುಖಂಡರು ಆಗಮಿಸಿದರೂ ಧರ್ಮದರ್ಶನವನ್ನೇ ಮಾಡಬೇಕಾಗುತ್ತದೆ. ಪಾರ್ಕಿಂಗ್, ಶೌಚಾಲಯದ ವ್ಯವಸ್ಥೆಗೆ ಯಾವುದೇ ಶುಲ್ಕವಿರುವುದಿಲ್ಲ, ನಿತ್ಯ ಸಹಸ್ರಾರು ಪ್ರವಾಸಿಗರು ರಾಜ್ಯ- ಹೊರ ರಾಜ್ಯಗಳಿಂದ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಜಾ ದಿನಗಳಲ್ಲಿ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ.

ಆಂದೋಲನ ಡೆಸ್ಕ್

Recent Posts

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

16 mins ago

ವಾಚ್‌ ವಿಚಾರವಾಗಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…

21 mins ago

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

1 hour ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

1 hour ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

1 hour ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

2 hours ago