• ನಿಶಾಂತ್ ದೇಸಾಯಿ
ಬೆಂಗಳೂರು, ಮೈಸೂರಿನವರಾದ ನಾವು ಮುಂಜಾನೆ ಬೀಳುವ ಒಂದಿಷ್ಟು ಇಬ್ಬನಿ, ಚಳಿಯಿಂದ ರಕ್ಷಣೆಗಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತೇವೆ. ಕೆಲ ಬಾರಿ ಸಾಧಾರಣ ಚಳಿಯನ್ನೂ ನಾವು ತಡೆದುಕೊಳ್ಳುವುದಿಲ್ಲ. ಹೀಗಿರುವ ನಾವು -20, -30 ಡಿಗ್ರಿ ಉಷ್ಣಾಂಶದ ಕೊರೆಯುವ ಚಳಿ ಇರುವ ಪ್ರದೇಶಕ್ಕೆ ಹೋದರೆ ನಮ್ಮ ಪಾಡು ಏನಾಗಬಹುದು?
ವನ್ಯಜೀವಿ ಛಾಯಾಗ್ರಹಣದ ಹವ್ಯಾಸ ಹೊಂದಿರುವ ನಾನು ಮತ್ತು ನನ್ನ ಗೆಳೆಯರ ಗುಂಪೊಂದು ಈ ಭಾರಿ ಒಂದು ಸಾಹಸಮಯ ಪ್ರವಾಸಕ್ಕೆ ಮುಂದಾಗಿದ್ದೆವು. ಎಷ್ಟೇ ಕಷ್ಟವಾದರೂ ಸರಿ ಒಮ್ಮೆಯಾದರೂ ಆ ಪ್ರಯತ್ನವನ್ನು ಮಾಡಲೇಬೇಕು ಎಂಬ ಬಯಕೆ ನಮ್ಮದಾಗಿತ್ತು. ಕನಿಷ್ಠ ಉಷ್ಣಾಂಶದಲ್ಲಿ, ಅದರಲ್ಲಿಯೂ ಹಿಮದೊಳಗೆ ಬದುಕುವ, ಜನ ಸಂಪರ್ಕದಿಂದ ಬಹುದೂರ ಉಳಿದು ಬದುಕುತ್ತಿರುವ ಹಿಮ ಚಿರತೆಗಳನ್ನು ಒಮ್ಮೆಯಾದರೂ ಕಂಡು ಅವುಗಳ ಚಿತ್ರ ಸೆರೆ ಹಿಡಿಯಬೇಕು ಎಂಬುದು ನಮ್ಮ ಈ ಸಾಹಸಮಯ ಪ್ರವಾಸದ ಉದ್ದೇಶ. ಇದಕ್ಕಾಗಿ ನಾವು ಹೊರಟಿದ್ದು ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸಿಟಿ ಕಣಿವೆಗೆ.
ಪ್ರಪಂಚದ ಅತಿ ಎತ್ತರದ ಪ್ರದೇಶಗಳಲ್ಲಿ ಒಂದಾದ ಈ ಲಾಹೋಲ್ ಮತ್ತು ಸಿಟಿ ಕಣಿವೆಯಲ್ಲಿ ಬೆಟ್ಟಗಳನ್ನು ಏರಿಇಳಿದು ಹಿಮಚಿರತೆಗಳನ್ನು ಹುಡುಕುವುದು, ಅವುಗಳ ಫೋಟೋಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಆದರೂ ನಮ್ಮ ಹವ್ಯಾಸ ಇಂತಹದೊಂದು ಚಾಲೆಂಜಿಂಗ್ ಟಾಸ್ಕ್ ಅನ್ನು ಪೂರ್ಣಗೊಳಿಸುವತ್ತ ಪ್ರೇರೇಪಿಸಿತು.
ಲಾಹೋಲ್ ಮತ್ತು ಸ್ಪಿಟಿಯಲ್ಲಿ 2021ರ ಜನಗಣತಿಯ ಪ್ರಕಾರ ಸುಮಾರು 400ರಷ್ಟು ಜನಸಂಖ್ಯೆ ಇದೆ. ಇವರೆಲ್ಲರ ಪ್ರಮುಖ ಉದ್ಯೋಗವೇ ಈ ಹಿಮ ಚಿರತೆಗಳನ್ನು ಪ್ರವಾಸಿಗರಿಗೆ ತೋರಿಸುವುದು, ಅದರಿಂದ ಬಂದ ಆದಾಯದಿಂದ ಜೀವನ ಸಾಗಿಸುವುದು. ಆದರೆ ಈ ಉದ್ಯೋಗ ವರ್ಷದ ಎಲ್ಲ ಸಮಯದಲ್ಲಿಯೂ ಇರುವುದಿಲ್ಲ. ವರ್ಷದ ಕೆಲ ತಿಂಗಳು ಮಾತ್ರ ಇಲ್ಲಿನ ಬಹುಪಾಲು ಜನರು ಈ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಾರೆ. ವರ್ಷದ ಬಹುಪಾಲು ಇಲ್ಲಿ ಹಿಮ ಬೀಳುತ್ತಿರುತ್ತದೆ. ಹಿಮ ಬಿದ್ದರೆ ಅವರೂ ಬದಕಲು ಸಾಧ್ಯ. ಆದರೆ ಕಳೆದ ಬಾರಿ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಿಮ ಬೀಳುವುದು ಈ ಬಾರಿ ಕೊಂಚ ತಡವಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 4,400 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಮಗೆ ಮೊದಲು ಎದುರಾದ ಸವಾಲೇ ಉಸಿರಾಟದ ಸಮಸ್ಯೆ. ಒಂದಿಷ್ಟು ದೂರ ನಡೆದರೂ ಏದುಸಿರು ಬಿಡುವಂತಾಗುತ್ತಾದೆ. ಇಂತಹ ಕಠಿಣ ಪರಿಸ್ಥಿತಿ ಯಲ್ಲಿ ಹತ್ತಾರು ಕಿಮೀ ನಡೆದು, ಬೆಟ್ಟವನ್ನು ಏರಿ ಹಿಮ ಚಿರತೆಗಳ ಫೋಟೋಗಳನ್ನು ತೆಗೆಯುವುದು ಕಷ್ಟ ಸಾಧ್ಯವೇ ಸರಿ. ಇಲ್ಲಿ ನಮ್ಮ ಕಾಡುಗಳಲ್ಲಿ ಮಾಡುವಂತೆ ಸಫಾರಿ ವಾಹನ ಗಳಿಲ್ಲ. ಕಾಲ್ನಡಿಗೆಯಲ್ಲೇ ಎಲ್ಲ ಪ್ರಾಣಿಗಳನ್ನು ನೋಡಬೇಕು.
ನಾವು ಉಳಿದಕೊಂಡಿದ್ದ ರೆಸಾರ್ಟ್‌ನಲ್ಲಿ ಒಂದಿಷ್ಟು ಮಂದಿ ಮುಂಜಾನೆಯೇ ಎದ್ದು, ಈ ಹಿಮ ಚಿರತೆಗಳ ಹುಡುಕಾಟಕ್ಕೆಂದು ಹೋಗುತ್ತಾರೆ. ಚಿರತೆ ಸಿಕ್ಕ ಕೂಡಲೇ ನಾವಿರುವಲ್ಲಿಗೆ ಮಾಹಿತಿ ರವಾನಿಸುತ್ತಾರೆ. ಕೂಡಲೇ ನಾವು ಸಿದ್ಧರಾಗಿ ಅಲ್ಲಿಗೆ ಹೋಗಿ, ಹಿಮ ಚಿರತೆಗಳಿರುವ ಬೆಟ್ಟದ ಎದುರು ಬೆಟ್ಟವನ್ನು ಏರಿ ತುತ್ತ ತುದಿಯಲ್ಲಿ ನಮ್ಮ ಕ್ಯಾಮೆರಾಗಳನ್ನು ಇರಿಸಿಕೊಂಡು ಕಾದು ಕುಳಿತುಕೊಂಡು ಅವುಗಳ ಚಿತ್ರ ಸೆರೆ ಹಿಡಿಯಬೇಕು. ಇದು ಸವಾಲು. ಇದರೊಂದಿಗೆ ನಾವು ಕುಳಿತಿರುವ ಸ್ಥಳ ಕೆಳಗೆ ನೋಡಿದರೆ 3,000 ಅಡಿಗಳಷ್ಟು ಆಳದ ದೊಡ್ಡ ಪ್ರಪಾತ.
9 ದಿನಗಳ ಪ್ರವಾಸದಲ್ಲಿ ಈ ಹಿಮಚಿರತೆಗಳನ್ನು ನೋಡುವ ಭಾಗ್ಯ ಸಿಕ್ಕಿದ್ದು ನಮಗೆ ಒಂದೇ ಬಾರಿ. ಅದು ನಮ್ಮ ಮೂರನೇ ದಿನ. 2 ದಿನಗಳಿಂದ ಹಿಮಚಿರತೆ ಕಾಣದೆ ಮಂಕಾಗಿದ್ದ ನಮಗೆ ಚಿರತೆಗಳಿರುವ ಸುಳಿವು ಸಿಕ್ಕಿತು. ನಮ್ಮ ರೆಸಾರ್ಟ್‌ನಿಂದ ಹೋಗಿದ್ದವರಿಗೆ ಎರಡು ಚಿರತೆಗಳು ಒಟ್ಟಿಗೆ ಮಲಗಿರುವುದು ಕಾಣಿಸಿದೆ. ಕೂಡಲೇ ಅವರು ನಾವಿದ್ದೆಡೆಗೆ ವಿಷಯ ಮುಟ್ಟಿಸಿದ್ದಾರೆ. ನಾವೂ ಸಿದ್ಧರಾಗಿ ಚಿರತೆಗಳಿದ್ದ ಬೆಟ್ಟದ ಬಳಿಗೆ ಹೋದೆವು. ನಮ್ಮ ಗೈಡ್ ಚಿರತೆ ಇರುವ ಬೆಟ್ಟದತ್ತ ಕೈ ತೋರಿ, ಹಿಂದಿಯಲ್ಲಿ ಆ ಬೆಟ್ಟದ ಮೇಲೆ ಎರಡು ಹಿಮ ಚಿರತೆಗಳು ಮಲಗಿವೆ. ಅವು ಮೇಲೆದ್ದು ಓಡಾಡಲು ತಡವಾಗಬಹುದು. ಅಷ್ಟರಲ್ಲಿ ನಾವು ಈ ಬೆಟ್ಟವನ್ನು ಏರಿ ಸಿದ್ಧರಾಗಿ ಕುಳಿತುಕೊಳ್ಳಬೇಕು’ ಎಂದು ಪಕ್ಕದ ಬೆಟ್ಟಕ್ಕೆ ಕೈ ತೋರಿದೆ. ಅದೇನೂ ಸಣ್ಣ ಬೆಟ್ಟವೇ? ಕನಿಷ್ಠ ಎಂದರೂ 3 ಕಿ.ಮೀ ಮೇಲೆ ಏರಬೇಕು. ಮೊದಲೇ ಉಸಿರಾಟಕ್ಕೂ ಪರದಾಡುವ ನಮಗೆ ಇನ್ನು ಬೆಟ್ಟ ಏರುವುದು ಹೇಗೆ? ಎಂಬ ಚಿಂತೆ ಶುರುವಾಯಿತು.
ಇಲ್ಲಿನವರು ದೈಹಿಕವಾಗಿ ಬಹಳ ಗಟ್ಟಿ ಮನುಷ್ಯರು. ಇಲ್ಲಿನ ಸಮಸ್ಯೆಯನ್ನು ಅರಿತಿರುವ ಅವರು ನಮ್ಮಿಂದ ಒಂದು ಸಣ್ಣ ಬಾಟಲಿಯನ್ನೂ ಹಿಡಿದು ಹತ್ತಲು ಬಿಡುವುದಿಲ್ಲ. ನಮ್ಮೆಲ್ಲಾ ಕ್ಯಾಮೆರಾಗಳನ್ನು ಅವರೇ ಹೊತ್ತುಕೊಂಡು ನಮ್ಮೊಡನೆ ಬೆಟ್ಟ ಏರಿದರು.
ನಾವು ಬೆಟ್ಟದ ತುತ್ತ ತುದಿಯಲ್ಲಿ ಕುಳಿತಿದ್ದೇವೆ. ಕೆಳಗಡೆ ಪ್ರಪಾತ, ಕಾಲು ಜಾರಿದರೂ ನಮ್ಮ ಅಸ್ಥಿಯೂ ಸಿಗುವುದಿಲ್ಲ. ಸುಮಾರು 1500 ಮೀ. ದೂರದಲ್ಲಿ ಎರಡು ಚಿರತೆಗಳು ಮಲಗಿರುವುದು ನಮಗೆ ಗೋಚರವಾಯಿತು. ಕ್ಯಾಮೆರಾಗಳನ್ನು ಸಿದ್ಧ ಮಾಡಿಕೊಂಡು ಅವು ಮೇಲೇಳುವುದನ್ನೇ ಕಾದೆವು. ಬಹುಶಃ ಅವು ಒಂದೇ ತಾಯಿಯ ಮಕ್ಕಳಿರಬೇಕು. ಬೆಳಗಿನ ಸುಮಾರು 9ಗಂಟೆಗೆ ಗೋಚರವಾದ ಅವು ಸಂಜೆಯಾದರೂ ಮೇಲೇಳಲಿಲ್ಲ. ಸಂಜೆ ಸುಮಾರು 4 ಗಂಟೆ, ಸೂರ್ಯ ನಮಗೆ ವಿದಾಯ ಹೇಳುತ್ತಿದ್ದಾನೆ. ನಾವೂ ಒಂದೊಂದಾಗಿ ನಮ್ಮ ಬ್ಯಾಗ್ ಅನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದೆವು. ಕಂಡ ಚಿರತೆ ಮೇಲೆದ್ದು ನಡೆಯಲಿಲ್ಲವಲ್ಲ ಎಂಬ ಬೇಸರ. ಅಷ್ಟರಾಗಲೇ ನಮ್ಮ ಗೈಡ್ ಕೂಗಿಕೊಂಡ ‘ಓ… ಒಂದು ಚಿರತೆ ಎದ್ದು ನಿಂತಿದೆ! ಫೋಟೋ ತೆಗಿಯಿರಿ’ ಎಂದ. ನಾವು ತಡ ಮಾಡದೆ ಫೋಟೋಕ್ಲಿಕ್ಕಿಸಿದೆವು. ನೋಡ ನೋಡುತ್ತಾ ಮತ್ತೊಂದು ಚಿರತೆಯೂ ಎದ್ದು, ಎರಡೂ ಜತೆಯಾಗಿ ಬೆಟ್ಟ ಇಳಿದವು. ಬೆಳಗಿನಿಂದ ಕಾದಿದ್ದಕ್ಕೂ ಸಮಾಧಾನ ಎನ್ನುವಂತಹ ಅನುಭಾವವಾಯಿತು.
ಇಂತಹ ಕೊರೆಯುವ ಚಳಿಯಲ್ಲಿಯೂ ಅಸಾಧಾರಣ ವಾತಾವರಣದಲ್ಲಿಯೂ ಈ ಚಿರತೆಗಳು ಬದುಕುತ್ತಿವೆ ಎಂದರೆ ಪ್ರಕೃತಿ ಎಂತಹ ವಿಸ್ಮಯ ನೋಡಿ. ನಮ್ಮ 9 ದಿನಗಳ ಪ್ರವಾಸದಲ್ಲಿ ಒಮ್ಮೆ ಕಂಡ ಈ ಚಿರತೆಗಳು ನಮಗೆ ಮತ್ತೆ ಕಾಣಿಸಲಿಲ್ಲ. ಉಳಿದ ದಿನಗಳಲ್ಲಿ ಇಲ್ಲಿನ ಬ್ಲೂ ಶಿಪ್, ಹಿಮಾಲಯನ್ ಐಬ್ಯಾಕ್ಸ್, ಹಿಮಾಲಯನ್ ರೆಡ್ ಫಾಕ್ಸ್ ಮೊದಲಾದ ಪ್ರಾಣಿಗಳು, ಹಿಮಾಲಯನ್ ರೆಡ್ ಸ್ಪರ್ಟ್ ಹಾಗೂ ರಣಹದ್ದು ಕಂಡವು. ಅವುಗಳ ಫೋಟೋಗಳನ್ನು ಸೆರೆ ಹಿಡಿದುಕೊಂಡೆವು.
ಇಲ್ಲಿನ ಚಳಿಯನ್ನು ಹೊಂದಿಕೊಳ್ಳುವುದು ನಮಗೆ ಬಹುದೊಡ್ಡ ಸವಾಲು. -20, -30 ಡಿಗ್ರಿಯಲ್ಲಿ ನಾವು ಹಿಮಚಿರತೆ ರಾತ್ರಿವೇಳೆ ಮಲಗಿ ನಿದ್ರಿಸುವುದಾದರೂ ಹೇಗೆ? ಅದಕ್ಕಾಗಿ ರೆಸಾರ್ಟ್‌ನಲ್ಲಿ ಮಂದವಿರುವ ಸುಮಾರು 8 ಬೆಡ್‌ಶೀಟ್ ಗಳು ಹಾಗೂ ಅದರ ಮೇಲೊಂದು ಬೆಚ್ಚಗಿನ ಅನುಭವ ನೀಡುವ ಎಲೆಕ್ನಿಕಲ್ ಬೆಡ್ ಶೀಟ್ ನೀಡಿದ್ದರು. ಇಷ್ಟಿದ್ದರೂ ದೇಹ ನಡುಗಿದ್ದಂತೂ ನಿಜ.
ಇನ್ನು ಇಲ್ಲಿನ ಹಿಮ ಚಿರತೆಗಳ ಟೂರಿಸಂ ಹೊರತಾಗಿ ಕೃಷಿಯನ್ನು ಅಲಂಬಿಸಿದ್ದಾರೆ. ಆಲೂಗಡ್ಡೆ ಮತ್ತು ಬಟಾಣಿ ಪ್ರಮುಖ ಬೆಳೆ. ಇನ್ನು ಇಲ್ಲಿನ ಬಹುಪಾಲು ಮಂದಿ ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಇಲ್ಲಿರುವ 1000ಕ್ಕೂ ಅಧಿಕ ವರ್ಷಗಳ ಹಳೆಯದಾದ ಬೌದ್ಧ ಮಂದಿರ ಇವರ ಪ್ರಮುಖ ಪ್ರಾರ್ಥನಾ ಮಂದಿರವಾಗಿದೆ. ಪ್ರತಿ ಮನೆಯಿಂದ 2ನೇ ಮಗು ಗಂಡು ಮಗುವಾಗಿದ್ದರೆ ಆ ಮಗುವನ್ನು ಬೌದ್ಧ ಸನ್ಯಾಸಿ ಮಾಡಬೇಕು ಎಂಬುದು ಇಲ್ಲಿನ ನಂಬಿಕೆ. ದೇಶ ಒಂದೆಯಾದರೂ ನಾನಾ ಸಂಸ್ಕೃತಿಯ ತವರು ಭಾರತ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
ಒಟ್ಟಾರೆ ನಮ್ಮ ಈ ಹಿಮಾಚಲ ಪ್ರದೇಶದ ಪ್ರವಾಸ ನಮಗೆ ಸಾಕಷ್ಟು ಅನುಭವಗಳನ್ನು ನೀಡಿದೆ. ಜೀವ ಪರಿಸರದ ವೈವಿಧ್ಯತೆ, ಜನರ ಬದುಕಿನ ಶೈಲಿಯನ್ನು ಪರಿಚಯಿಸಿದೆ. ಮುಂದಿನ ಭಾರಿ ಮತ್ತೊಮ್ಮೆ ಭೇಟಿ ನೀಡುವ ಆಸೆ ಮೂಡಿಸಿದೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…