ವಾರಾಂತ್ಯ ವಿಶೇಷ

ಕರ್ನಾಟಕದಲ್ಲಿ ಹುಲಿ ಹೆಗ್ಗುರುತು

• ಅನಿಲ್ ಅಂತರಸಂತೆ / ಶ್ರೇಯಸ್‌ ದೇವನೂರು

ಹುಲಿಯೊಂದು ಉಳಿದರೆ ಕಾಡೇ ಉಳಿದಂತೆ ಎಂಬ ಉದ್ದೇಶದಿಂದ ಹುಲಿಯನ್ನೇ ಕೇಂದ್ರವಾಗಿಟ್ಟು ಕಾಡಿನ ಸಂರಕ್ಷಣೆಗೆ ಇಂದಿರಾ ಗಾಂಧಿ ಯವರು ವಿಶೇಷ ಯೋಜನೆಯೊಂದನ್ನು ಆರಂಭಿಸಿ ಅದಕ್ಕೆ ‘ಹುಲಿ ಯೋಜನೆ’ ಎಂಬ ಹೆಸರಿಟ್ಟು ಹುಲಿಗಳ ಸಂರಕ್ಷಣೆಯ ಜೊತೆಗೆ ಕಾಡಿನ ರಕ್ಷಣೆಗೂ ಮುಂದಾದ್ದರಿಂದ ಇಂದು ದೇಶದಲ್ಲಿ ಹುಲಿಗಳ ಸಂಖ್ಯೆ 3,000ದ ಗಡಿ ದಾಟಿದೆ.

ಶತಮಾನಗಳಿಂದಲೂ ಭೂಮಿಯ ಮೇಲೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿರುವ ಹುಲಿಯ ಸಂತತಿ 1940 ರಿಂದ ಈಚೆಗೆ ತೀರಾ ಕುಸಿಯಲು ಆರಂಭವಾಯಿತು. ಅಲ್ಲಿಯವರೆಗೂ ದೇಶದ ಕಾಡುಗಳಲ್ಲಿ ಸುಮಾರು 30-40 ಸಾವಿರದಷ್ಟಿದ್ದ ಹುಲಿಗಳ ಸಂಖ್ಯೆ 1970ರ ದಶಕದ ವೇಳೆಗಾಗಲೇ ಅಳಿವಿನ ಅಂಚಿಗೆ ಜಾರಿ ಕೆಂಪುಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಯಿತು.

ಮೋಜಿನ ಶಿಕಾರಿಯಿಂದಿಡಿದು ಚರ್ಮ, ಉಗುರುಗಳಿಗಾಗಿ ನಡೆಯುವ ಕಳ್ಳಬೇಟೆಗಳಿಗೆ ಹುಲಿಗಳು ಬಲಿಯಾಗಿವೆ. 1973ರ ಹುಲಿ ಯೋಜನೆ ಜಾರಿಯಾದ ನಂತರ 2006ರಲ್ಲಿ ಮೊದಲ ಹುಲಿ ಗಣತಿ ನಡೆಸಲಾಯಿತು. ಈ ವೇಳೆ ದೇಶದಲ್ಲಿ 1,411 ಹುಲಿಗಳಿವೆ ಎಂದು ಗುರುತಿಸಲಾಗಿತ್ತು. ಬಳಿಕ ನಡೆದ ಗಣತಿಗಳಲ್ಲಿ ಹುಲಿಗಳ ಸಂಖ್ಯೆ ಹಂತ ಹಂತವಾಗಿ ಹೆಚ್ಚಾಗಿ 2018ರ ಗಣತಿಯ ವೇಳೆಗೆ ಅವುಗಳ ಸಂಖ್ಯೆ 2,967ಕ್ಕೆ ಏರಿಕೆಯಾಗಿತ್ತು. 2023ರ ವೇಳೆಗೆ ದೇಶದಲ್ಲಿ 3,167 ಹುಲಿಗಳು ದಾಖಲಾಗಿದ್ದು, 4 ವರ್ಷಗಳಲ್ಲಿ ದೇಶದಲ್ಲಿ 200 ಹುಲಿಗಳು ಹೆಚ್ಚಾಗಿವೆ.

ಸಂಖ್ಯೆ ಏರಿಕೆಯಾದ ಮಾತ್ರಕ್ಕೆ ಅವುಗಳ ಸಂರಕ್ಷಣೆಯಾಗಿದೆ ಎಂಬುದಕ್ಕಿಂತ ಅವುಗಳ ನೆಲ, ತಳಿ ವೈವಿಧ್ಯತೆ, ಸಮರ್ಪಕ ಆಹಾರ, ಕಾಡುಗಳು ಸಮೃದ್ಧವಾಗಿವೆಯೇ? ಎಂಬೆಲ್ಲ ಪ್ರಶ್ನೆಗಳ ಆಧಾರದ ಮೇಲೆ ಹುಲಿಗಳ ಅಳಿವು ಉಳಿವಿನ ಪ್ರಶ್ನೆ ನಿರ್ಧಾರವಾಗಲಿದೆ.

ದೇಶದ ಬಹುತೇಕ ಹುಲಿ ಸಂರಕ್ಷಿತ ಪ್ರದೇಶಗಳು ನಿರ್ದಿಷ್ಟ ಗಡಿಯನ್ನು ನಿರ್ಧರಿಸಿಕೊಂಡಿವೆ. ಒಂದು ವೇಳೆ ಆ ಗಡಿ ಸವೆಯಬಹುದೇ ವಿನಾ ವಿಸ್ತೀರ್ಣ ಹೆಚ್ಚಾಗುವ ಭರವಸೆ ತೀರಾ ಕಡಿಮೆ. ನಗರೀಕರಣ ಅಭಿವೃದ್ಧಿ ಆದಂತೆಲ್ಲ, ಕಾಡು ಕ್ಷೀಣಿಸಲಾರಂಭಿಸುತ್ತದೆ. ಕಾಡು ಕಾಡಿನ ಮಧ್ಯ ಸಂಪರ್ಕ ಕೊಂಡಿ ಕಳಚಿ, ಒಂದೇ ಕಡೆ ಹುಲಿಗಳು ಬಂದಿಯಾಗುವಂತಾಗುತ್ತದೆ. ಇದರಿಂದಾಗಿ ಹುಲಿಗಳಲ್ಲಿ ಅನುವಂಶೀಯ ಕೊರತೆ ಹೆಚ್ಚಾಗಿ ತಳಿ ವೈವಿಧ್ಯತೆ ಇಲ್ಲದೆ ಹುಟ್ಟುವ ಮರಿಗಳು ದುರ್ಬಲವಾಗಲೂಬಹುದು ಮತ್ತು ಅವುಗಳ ನಡುವೆಯೇ ನೆಲೆಗಾಗಿ ಸಂಘರ್ಷ ಹೆಚ್ಚಾಗಿ ಸಾವಿಗೀಡಾಗುವ ಸಾಧ್ಯತೆಯೂ ಹೆಚ್ಚು. ಅದರಲ್ಲಿಯೂ ತಳಿ ವೈವಿಧ್ಯತೆ ಕಡಿಮೆಯಾಗುತ್ತಾ ಹೋದಂತೆ ಅವುಗಳ ಸಂತತಿ ದೀರ್ಘಕಾಲ ಆರೋಗ್ಯಕರವಾಗಿ ಮುಂದುವರಿಯುವ ಭರವಸೆ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ.

ಯಾವುದೇ ಜೀವಿಗಳಲ್ಲಿಯೂ ಅವುಗಳ ಸಂತತಿ ಆರೋಗ್ಯಕರವಾಗಿ ವೃದ್ಧಿಸಲು ಅವುಗಳಿಗೆ ತಳಿ ವೈವಿಧ್ಯತೆ ಅತ್ಯವಶ್ಯ. ಹುಲಿಗಳಲ್ಲಿಯೂ ಅಷ್ಟೇ ಕಾಡಿನಿಂದ ಕಾಡಿಗೆ ಅವುಗಳ ಓಡಾಟ ನಿರಂತರವಾಗಿರಬೇಕು. ಆಗಷ್ಟೇ ಅನುವಂಶೀಯ ಕೊರತೆ ನೀಗಿ, ಅವುಗಳ ಸಂಖ್ಯೆ ಆರೋಗ್ಯಕರವಾಗಿ ವೃದ್ಧಿಸಲು ಸಾಧ್ಯ ಎಂಬುದು ತಜ್ಞರ ಮಾತು. ಮತ್ತೊಂದೆಡೆ ಕಾಡಿಗೆ ಕಂಟಕವಾಗಿರುವ ಲಂಟಾನಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಹುಲಿಗಳಿಗೆ ಅನುಕೂಲ ವಾತಾವರಣ ಸೃಷ್ಟಿಸಿದರೂ, ಲಂಟಾನಗಳು ಕಾಡಿಗೆ ಅಪಾಯವೇ, ಲಂಟಾನ ತೆರವು ಮಾಡದೇ ಹಾಗೇ ಬಿಟ್ಟಲ್ಲಿ ಆ ಜಾಗದಲ್ಲಿ ಹುಲ್ಲು ಮತ್ತು ಇತರೆ ಸಸ್ಯಗಳು ಬೆಳೆಯದೆ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆಯುಂಟಾಗಿ ಅವುಗಳ ಸಂಖ್ಯೆ ಕ್ಷೀಣಿಸಬಹುದು. ಇದರಿಂದ ಸಸ್ಯಾಹಾರಿ ಪ್ರಾಣಿಗಳನ್ನು ಅವಲಂಬಿಸಿರುವ ಹುಲಿಗಳ ಆಹಾರಕ್ಕೂ ಕೊರತೆಯಾಗಬಹುದು. ಮತ್ತೊಂದೆಡೆ ಲಂಟಾನವನ್ನು ಸಂಪೂರ್ಣ ತೆರವು ಮಾಡಿದರೂ ಅದು ಹುಲಿ ಮರಿಗಳ ಬೆಳವಣಿಗೆಗೆ ಪೂರಕವಾದ ಕುರುಚಲು ಕಾಡಿನ ಕೊರತೆಯಾಗಿ ಬಯಲಿನಂತಾಗುವ ಕಾಡಿನಲ್ಲಿ ಹುಲಿಗಳು ಬಹುದೂರ ಓಡಿ ಬೇಟೆಯಾಡಲಾರವು. ಅಲ್ಲದೆ ಮರಿಗಳನ್ನು ಇತರೆ ಬೇಟೆಗಾರ ಪ್ರಾಣಿಗಳಿಂದಲೂ ರಕ್ಷಿಸಲು,ಬಚ್ಚಿಡಲು ಸಾಧ್ಯವಿಲ್ಲ. ಕುರುಚಲು ವಾತಾವರಣದ ಕಾಡಿಲ್ಲದಿದ್ದರೆ ಹುಲಿಮರಿಗಳು ಸುಲಭವಾಗಿ ಇತರೆ ಬೇಟೆಗಾರ ಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ ಎಂಬುದೂ ಕೂಡ ತಜ್ಞರ ಅಭಿಪ್ರಾಯ.

ಈಗಿರುವ ಕಾಡಿನಲ್ಲಿಯೇ ಹುಲಿಗಳು ತಮ್ಮ ನೆಲೆಗಾಗಿ ಸಂಘರ್ಷ ಇಳಿಯ ಬೇಕಾದ ಅನಿವಾರ್ಯತೆ ಇದೆ. ದೇಶದಲ್ಲಿ ಕಾದಾಟದಿಂದಲೇ ನಿತ್ಯ ಹುಲಿಗಳ ಸಾವಿನ ವರದಿಯಾಗುತ್ತಲೇ ಇದೆ. ಕಳೆದ 4 ವರ್ಷಗಳಲ್ಲಿ ಹುಲಿಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದರೂ 2022ರ ವರ್ಷವೊಂದರಲ್ಲೇ ದೇಶದಲ್ಲಿ ಸುಮಾರು 107, 2021ರಲ್ಲಿ 127 ಹುಲಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆ ಪೈಕಿ ಕಳೆದ ಬಾರಿ ನಂ.1 ಸ್ಥಾನದಲ್ಲಿದ್ದ ಮಧ್ಯಪ್ರದೇಶದಲ್ಲಿಯೇ ಹೆಚ್ಚು ಹುಲಿಗಳು ಸಾವಿಗೀಡಾಗಿವೆ ಎಂಬುದು ಮತ್ತೊಂದು ಆತಂಕ.

ಎನ್‌ಟಿಸಿಎ ಮಾಹಿತಿ ಪ್ರಕಾರ ಕಳೆದ 10 ವರ್ಷಗಳಲ್ಲಿ (2012-2022) ದೇಶದಲ್ಲಿ ಸುಮಾರು 1,105 ಹುಲಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಅದರಲ್ಲಿಯೂ 2018–22ರ ಅವಧಿಯಲ್ಲಿ 551 ಹುಲಿಗಳು ಸಾವಿಗೀಡಾಗಿವೆ. ಇವುಗಳಲ್ಲಿ ಕೆಲವು ಕಳ್ಳಬೇಟೆಗಾರರಿಗೆ ಬಲಿಯಾದರೇ, ಬಹುಪಾಲು ನೆಲೆಗಾಗಿ ಸಂಘರ್ಷಕ್ಕಿಳಿದು ಸಾವಿಗೀಡಾದ ಸಂಗತಿಗಳೇ ಹೆಚ್ಚು.

ನಿರ್ದಿಷ್ಟವಾಗಿ ಗುರುತಿಸಲಾಗಿರುವ ಕಾಡಿನಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾದಷ್ಟೂ ಅವುಗಳಲ್ಲೇ ನೆಲೆಗಾಗಿ ಸಂಘರ್ಷ ಉಂಟಾಗುತ್ತದೆ. ಇದರಿಂದ ಹುಲಿಗಳು ಕಾಡಿನಿಂದ ಹೊರಬಂದು ಮನುಷ್ಯನೊಂದಿಗೆ ಸಂಘರ್ಷಕ್ಕೂ ನಿಲ್ಲಬೇಕಾಗುತ್ತದೆ. ಕಾಡಿನ ಸುತ್ತ ಬ್ಯಾರಿಕೇಡ್, ಟ್ರಂಚ್ ಗಳನ್ನು ನಿರ್ಮಾಣ ಮಾಡಿ ನಾವು ಕಾಡಿನ ವ್ಯಾಪ್ತಿಯನ್ನು ನಿರ್ಧರಿಸಬಹುದೇ ವಿನಾ ಜೀವಿಗಳ ನೆಲೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅವು ಕಾಡಿನಿಂದ ಕಾಡಿಗೆ ಅಲೆಯಬೇಕು. ಹೊಸ ಹೊಸ ನೆಲೆಗಳನ್ನು ಕಂಡುಕೊಳ್ಳಬೇಕು. ಆ ಮೂಲಕ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳಬೇಕು. ಈಗಾದಾಗಲೇ ಯಾವುದೇ ಜೀವಿಯಲ್ಲಿ ಅನುವಂಶೀಯ ವೈವಿಧ್ಯತೆ ಕಾಣಲು ಸಾಧ್ಯ. ಮರಿಗಳೂ ಆರೋಗ್ಯಕರವಾಗಿ ಬಲಿಷ್ಠವಾಗಿ ಬೆಳವಣಿಗೆಯಾಗಲು ಸಾಧ್ಯ.

ಈ ನಿಟ್ಟನಲ್ಲಿ ಅರಣ್ಯ ಇಲಾಖೆಯೂ ಅನೇಕ ಯೋಜನೆಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಏರಿಕೆಯಾಗುತ್ತಿರುವ ಹುಲಿಗಳಿಗೆ ಮುಂದಿನ 10 ವರ್ಷಗಳಲ್ಲಿ ನೆಲೆಯನ್ನು ವಿಸ್ತರಿಸುವುದು ಹೇಗೆ? ಎಂಬುದರ ಬಗ್ಗೆ ಅರಣ್ಯ ಇಲಾಖೆ ಕೊಂಚ ಗಮನ ನೀಡಬೇಕು. ಈಗಾಗಲೇ ನಿರ್ಧಾರವಾಗಿರವ ಕಾಡಿನ ವಿಸ್ತೀರ್ಣವನ್ನು ಹಂತಹಂತವಾಗಿ ಹೆಚ್ಚಿಸುವ ಪ್ರಯತ್ನ ಮಾಡಬೇಕು. ಕಾಡಿನ ಸುತ್ತ ಕೃಷಿಗೆ ಯೋಗ್ಯವಲ್ಲದ ಪಾಳು ಬಿದ್ದ ಜಮೀನುಗಳನ್ನು ಖರೀದಿಸಿ ಅದನ್ನು ಅರಣ್ಯದೊಳಗೆ ಸೇರಿಸಿಕೊಳ್ಳುವ ಪ್ರಯತ್ನವಾಗಬೇಕು. ಇದರಿಂದ ರೈತರಿಗೂ ಅನುಕೂಲ. ಆಗ ಕಾಡೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.

ಹುಲಿಗಳಿಗಾಗಿ ಕಾಡಿನ ನಿರ್ವಹಣೆ

ಲಂಟಾನಗಳನ್ನು ತೆರವುಗೊಳಿಸಿ ಅಲ್ಲಿ ಹುಲ್ಲುಗಾವಲು ಅಭಿವೃದ್ಧಿ ಮಾಡುವುದು. ಇದರಿಂದ ಸಸ್ಯಾಹಾರಿಪ್ರಾಣಿಗಳ ಸಂಖ್ಯೆ ವೃದ್ಧಿಸಲಿದ್ದು, ಹುಲಿಗಳಿಗೂ ಆಹಾರ ಪೂರೈಕೆಯಾಗಲಿದೆ.

ಹುಲಿಗಳ ಆವಾಸ ಸ್ಥಾನಗಳನ್ನು ರಕ್ಷಣೆ ಮಾಡುವುದು, ಅವುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು.

ಹುಲಿಗಳ ಆವಾಸ ಸ್ಥಾನಗಳ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಆಧುನಿಕ ಸಲಕರಣೆಗಳ ಮೂಲಕ ನಿರ್ವಹಿಸುವುದು.

ಪ್ರತ್ಯೇಕ ಕಾಡುಗಳಲ್ಲಿ ಕ್ಯಾಮೆರಾ ಕಣ್ಣಿಗೆ ಲಭ್ಯವಾಗಿರುವ ಹುಲಿಗಳ ಸಂಖ್ಯೆ

ಹುಲಿ ರಕ್ಷಿತಾರಣ್ಯ                   ಕ್ಯಾಮೆರಾ ಸಂಖ್ಯೆ                   ಕ್ಯಾಮೆರಾಗೆ ಸೆರೆ ಸಿಕ್ಕ ಹುಲಿ ಸಂಖ್ಯೆ
ನಾಗರಹೊಳೆ                                    501                                                         149
ಬಂಡೀಪುರ                                       612                                                         143
ಬಿಆರ್‌ಟಿ                                           288                                                        39
ಭದ್ರ                                                   330                                                        26
ಕಾಳಿ                                                  448                                                         19

ಹುಲಿಗಳ ಸಂಖ್ಯೆ                            ಇಸವಿ
1,411                                          2006
2,967                                       2018
3,167                                       2023

 

ಕ್ಯಾಮೆರಾಗಳ ಸಂಖ್ಯೆ

2018 ರಲ್ಲಿ  –  4123
2022 ರಲ್ಲಿ  –  4786

ನಾಗರಹೊಳೆಯಲ್ಲಿ ಈ ಬಾರಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. 14 ಹುಲಿಗಳು ನಮ್ಮಲ್ಲಿ ಏರಿಕೆಯಾಗಿದ್ದು, ಇಲ್ಲಿ ಆವಾಸಸ್ಥಾನಗಳ ಉತ್ತಮ ನಿರ್ವಹಣೆಯಿಂದಾಗಿ ಅವುಗಳಿಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಭಾರತದಲ್ಲಿಯೂ ಅವುಗಳ ಸಂಖ್ಯೆ 3,000ದ ಗಡಿ ದಾಟಿರುವುದು ಸಂತಸದ ವಿಚಾರವಾಗಿದೆ.

-ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್, ನಾಗರಹೊಳೆ,

ದೇಶದಲ್ಲಿ ಹುಲಿಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ನಾಗರಹೊಳೆಯಲ್ಲಿಯೂ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದು ಸಂತಸದ ವಿಚಾರ. ಕಾಡುಗಳಲ್ಲಿಯೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಹುಲಿಗಳ ಆವಾಸ ಸ್ಥಾನಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲ

-ಸಿದ್ದರಾಜು, ವಲಯ ಅರಣ್ಯಾಧಿಕಾರಿ,

ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಶ್ರಮದಿಂದಾಗಿ ಬಂಡೀಪುರ ಹುಲಿಗಳ ಪ್ರಮುಖ ಆವಾಸ ಸ್ಥಾನವಾಗಿ ಹೊರಹೊಮ್ಮಿದೆ. ಕರ್ನಾಟಕ,ಅದರಲ್ಲಿಯೂ ನಮ್ಮ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿರು ವುದು ಹೆಮ್ಮೆಯ ವಿಚಾರ. ಹುಲಿಗಳ ನಿರ್ವಹಣೆಯಲ್ಲಿ ಸ್ಥಳೀಯರ ಸಹಕಾರವೂ ಪ್ರಮುಖ ಪಾತ್ರವಹಿಸಿದೆ.

-ಪುಟ್ಟರಾಜು, ವಲಯ ಅರಣ್ಯಾಧಿಕಾರಿ

1973ರಲ್ಲಿ ದೇಶದ ಮೊದಲ 9 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಂಡೀಪುರವೂ ಸೇರ್ಪಡೆಯಾದ ಬಳಿಕ ಅಲ್ಲಿಂದ ಇಲ್ಲಿಯವರೆಗೂ ಎಲ್ಲ ಅಧಿಕಾರಿ ಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರ ದಿಂದ ಇಂದು ಬಂಡೀಪುರ ದೇಶದ ನಂ.1 ಹುಲಿ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಸ್ಥಳೀ ಯರ ಸಹಕಾರವೇ ಇಂದು ಹುಲಿಗಳ ಸಂಖ್ಯೆ ವೃದ್ಧಿಸಲು ಕಾರಣವಾಗಿದೆ.

-ಕೆ.ಪರಮೇಶ್‌, ಎಸಿಎಫ್, ಯಡಿಯಾಲ

 

lokesh

Recent Posts

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

11 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

45 mins ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

1 hour ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

2 hours ago

ಕೈಗಾರಿಕಾ ವಲಯದ ಪ್ರಸ್ತಾವನೆಗಳಿಗೆ ಸಿಎಂ ಅನುಮೋದನೆ

ಬೆಂಗಳೂರು:  ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…

2 hours ago