ಗಿರೀಶ್ ಹುಣಸೂರು
ಮೈಸೂರು, ಕೊಡಗು ಹಾಗೂ ಕೇರಳದ ವಯನಾಡು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಇರ್ಪು ಜಲಪಾತ ವಾರಾಂತ್ಯದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.
ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗ. ದಟ್ಟ ಕಾನನ, ಕಾಫಿ ತೋಟಗಳು, ಟೀ ಎಸ್ಟೇಟ್‌ಗಳಿಂದಾಗಿ ಇಲ್ಲಿನ ಹಸಿರ ಸಿರಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಕೊಡಗು ಜಿಲ್ಲೆಗೆ ಕಾಲಿಟ್ಟರೆ ಅಲ್ಲಿನ ಅತ್ಯದ್ಬುತ ಪ್ರವಾಸಿ ತಾಣಗಳನ್ನು ಕಂಡು ಮನಸೋಲದವರೇ ಇಲ್ಲ. ಇಲ್ಲಿನ ಸುಂದರ ತಾಣಗಳು ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಪ್ರವಾಸಿ ಪ್ರಿಯ ಯುವ ಜನರಂತೂ ಶನಿವಾರ-ಭಾನುವಾರಗಳಂದು ತಮ್ಮ ಮೋಟಾರು ಬೈಕ್ಗಳಲ್ಲೇ ಕೊಡಗು ಜಿಲ್ಲೆಗೆ ಲಗ್ಗೆ ಇಟ್ಟು, ಹಸಿರ ಸಿರಿಯ ರಮಣೀಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಕೊಡಗಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣಗಳಲ್ಲಿ ದಕ್ಷಿಣ ಕೊಡಗಿನಲ್ಲಿರುವ ಇರ್ಪುಜಲಪಾತ ಕೂಡ ಒಂದು. ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದುಕನ್ನಡಿಗರ ಜೀವನಾಡಿ ಕಾವೇರಿಯನ್ನು ಸೇರುವ ಈ ಕಿರು ಜಲಪಾತದ ಸೊಬಗು ನಯನ ಮನೋಹರ. ಮುಂಗಾರು ಹಂಗಾಮದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವ ಖುಷಿಯೇ ಬೇರೆ. ಹೊಸ ಕಳೆಯೊಂದಿಗೆ ಇರ್ಪು ಜಲಪಾತ ಧುಮ್ಮಿಕ್ಕುವುದನ್ನು ನೋಡುವುದೇ ಚಂದ.
ಹಸಿರು ಹೊದ್ದ ಬೆಟ್ಟಗಳ ಸಾಲಿನಲ್ಲಿ ಬಳಕುತ್ತಾ, ಬಾಗುತ್ತಾ ಸಾಗುವ ಇರ್ಪು ಜಲಪಾತ ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಎನಿಸುವಷ್ಟು ಆಕರ್ಷಣೀಯ. ಪ್ರವಾಸಿಗರ ದಟ್ಟಣೆ, ವಾಹನ ದಟ್ಟಣೆಯ ಕಿರಿಕಿರಿ ಇಲ್ಲದೇ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆನ್ನುವವರಿಗೆ ಇಷ್ಟವಾದ ತಾಣವಿದು. ಸುಮಾರು ೬೦ ಮೀಟರ್ ಎತ್ತರದಿಂದ ನೀರಿನ ಕಿರು ಜರಿಗಳು ಹಾಲ್ನೊರೆಯಂತೆ ಧುಮ್ಮಿಕ್ಕುವುದನ್ನು ಇಲ್ಲಿ ಕಾಣಬಹುದು. ಹೀಗಾಗಿ ಇಲ್ಲಿಗೆ ಭೇಟಿ ನೀಡಿದವರಿಗೆ ವಾಪಸ್ಸಾಗಲು ಮನಸ್ಸೇ ಬರುವುದಿಲ್ಲ ಎಂದು ಪ್ರವಾಸಿ ಪ್ರಿಯರು ಹೇಳುತ್ತಾರೆ.
ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಗದ್ದಲವಿಲ್ಲದೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕೆನ್ನುವವರು ಇಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ದಿನ ಕಳೆಯ ಬಹುದು. ಇರ್ಪು ಜಲಪಾತವಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ರಾಮೇಶ್ವರ ದೇವಾಲಯ ಕೂಡ ಇದೆ. ಈ ಸ್ಥಳಕ್ಕೆ ಪುರಾಣದ ಹಿನ್ನೆಲೆಯೂ ಇದೆ. ಇರ್ಪು ಜಲಪಾತ ಮತ್ತು ಅದರಿಂದ ಮುಂದೆ ನದಿಯಾಗಿ ಹರಿಯುವ ಕಾವೇರಿಯ ಉಪ ನದಿ ಲಕ್ಷ್ಮಣತೀರ್ಥದ ಜೊತೆಗೆ ರಾಮಾಯಣವೂ ಬೆಸೆದುಕೊಂಡಿದೆ. ವನವಾಸದ ಸಂದರ್ಭದಲ್ಲಿ ಸೀತೆಯನ್ನುಹುಡುಕುತ್ತಾ ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಶ್ರೀರಾಮ ಬಾಯಾರಿಕೆಯಿಂದ ನೀರು ಕೇಳಿದಾಗ ಲಕ್ಷ್ಮಣ ಹೆಬ್ಬಂಡೆಗೆ ಬಾಣ ಪ್ರಯೋಗಿಸಿ ಈ ಜಲಪತವನ್ನು ಸೃಷ್ಟಿಸಿರುವುದಾಗಿ ಜನರು ನಂಬಿದ್ದಾರೆ. ಲಕ್ಷ್ಮಣ ಪ್ರಯೋಗಿಸಿದ ಬಾಣದಲ್ಲಿ ಜಲಪಾತ ಸೃಷ್ಟಿಯಾಯಿತು ಎಂಬುದು ಐತಿಹ್ಯ.
ಹೀಗಾಗಿ ಈ ಜಲಪಾತದಿಂದ ಮುಂದೆ ನದಿಯಾಗಿ ಹರಿಯುವ ಕಾವೇರಿಯ ಈ ಉಪನದಿಗೆ ಲಕ್ಷ್ಮಣತೀರ್ಥ ಎಂದೇ ಕರೆಯಲಾಗುತ್ತದೆ. ಜೊತೆಗೆ ಬ್ರಹ್ಮಗಿರಿ ಬೆಟ್ಟದತಪ್ಪಲಿನಲ್ಲಿರುವ ರಾಮೇಶ್ವರ ದೇವಾಲಯ ದಲ್ಲಿರುವ ಶಿವಲಿಂಗವನ್ನು ಶ್ರೀರಾಮನೇ ಪ್ರತಿಷ್ಠಾಪಿಸಿದ್ದು ಎಂಬ ಪ್ರತೀತಿ ಇದೆ. ಶಿವರಾತ್ರಿ ಸಂದರ್ಭದಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ, ಇರ್ಪು ಜಲಪಾತದಲ್ಲಿ ಮಿಂದು, ರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಾರೆ.
ಇರ್ಪುಗೆ ಹೋಗುವುದು ಹೇಗೆ?: ಮೈಸೂರು ಕಡೆಯಿಂದ ತೆರಳುವವರು ಹುಣಸೂರಿಗೆ ತೆರಳಿ ಅಲ್ಲಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಸುಮಾರು ೧೨೦ ಕಿ.ಮೀ ಕ್ರಮಿಸಿ ಇರ್ಪು ಜಲಪಾತವನ್ನು ತಲುಪಬಹುದು. ಮಡಿಕೇರಿಯಿಂದಲೂ ಇರ್ಪು ಜಲಪಾತ ೧೨೦ ಕಿ.ಮೀ ದೂರದಲ್ಲಿದೆ. ವಿರಾಜಪೇಟೆಯಿಂದ ನಾಗರಹೊಳೆ ಮಾರ್ಗದಲ್ಲಿ ಸುಮಾರು ೪೮ ಕಿ.ಮೀ ಸಾಗಿದರೆ ಇರ್ಪು ಜಲಪಾತ ಸಿಗುತ್ತದೆ. ಪ್ರತಿದಿನ ಬೆಳಿಗ್ಗೆ ೬ ರಿಂದ ಸಂಜೆ ೫ ಗಂಟೆವರೆಗೆಮಾತ್ರ ಇರ್ಪು ಜಲಪಾತಕ್ಕೆ ಪ್ರವೇಶವಿದೆ. ಇಲ್ಲಿಗೆ ಭೇಟಿ ನೀಡಲು ಒಬ್ಬರಿಗೆ ೫೦ ರೂ. ಪ್ರವೇಶ ಶುಲ್ಕವನ್ನು ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ. ರಾಮೇಶ್ವರ ದೇವಾಲಯದ ಬಳಿ ವಾಹನಗಳ ನಿಲುಗಡೆಗೆ ಅವಕಾಶವಿದೆ.
ಎಚ್ಚರ ತಪ್ಪಿದರೆ ಅಪಾಯ: ಮಳೆಗಾಲದಲ್ಲಿ ಜಲಪಾತದ ನಯನ ಮನೋಹರ ದೃಶ್ಯವನ್ನು ಸವಿಯುವ ಭರದಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಒಳಿತು. ಕಿರಿದಾದ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಇರ್ಪು ಜಲಪಾತವನ್ನು ತಲುಪಬೇಕಿರುವುದರಿಂದಆಯಾಸವಾಗುವುದು ಸಹಜ. ಹೀಗಾಗಿ ಕುಡಿಯುವ ನೀರನ್ನು ಜೊತೆಗೆ ಕೊಂಡೊಯ್ಯಿರಿ. ಆದರೆ, ನೀರಿನ ಖಾಲಿ ಬಾಟಲಿಗಳನ್ನು ಪ್ರಕೃತಿಯ ಮಡಿಲಲ್ಲಿ ಬಿಸಾಡಿ ಬರಬೇಡಿ. ಹುಣಸೂರು ಕಡೆಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಇರ್ಪುಗೆ ತೆರಳುವವರು, ವಿರಾಜಪೇಟೆ ಕಡೆಯಿಂದ ಇರ್ಪುಗೆ ಬಂದು ಬಳಿಕ ನಾಗರಹೊಳೆಗೆ ಭೇಟಿ ನೀಡುವವರು ಅರಣ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
* ಪ್ರತಿ ವಾಹನಗಳವರೂ ತಮಗೆ ಸೂಚಿಸಿದ ರಸ್ತೆಯಲ್ಲಿ ಮಾತ್ರ ಚಲಿಸಬೇಕು
* ವಾಹನ ಚಾಲಕರು ಗಂಟೆಗೆ ೩೦ ಕಿ.ಮೀ ವೇಗದ ಮಿತಿಯನ್ನು ಪಾಲಿಸಬೇಕು
* ವಾಹನದಲ್ಲಿ ಚಲಿಸುವಾಗ ನಿಶ್ಶಬ್ದದಿಂದ ಚಲಿಸಿ, ಕಾಡಿನಲ್ಲಿ ವಾಹನದಿಂದ ಕೆಳಗೆ ಇಳಿಯದಿರಿ
* ವನ್ಯಪ್ರಾಣಿಗಳಿಗೆ ಕೀಟಲೆ ಮಾಡಬೇಡಿ, ಆಹಾರ ನೀಡಬೇಡಿ, ಅರಣ್ಯ ಇಲಾಖೆಯ ಸಲಹೆಗಳನ್ನು ನಿರ್ಲಕ್ಷ್ಯಿಸಬೇಡಿ
* ಕಾಡಿನಲ್ಲಿ ಮಣ್ಣಿನ ರಸ್ತೆಗಳಲ್ಲಿ ಚಲಿಸಬೇಡಿ, ಕಾಡಿನೊಳಗೆ ಚಲಿಸುವಾಗ ಮೊಬೈಲ್ ಬಳಸಬೇಡಿ, ಅತಿಯಾದ ಶಬ್ಧ ಮಾಡಬೇಡಿ.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…