ರಂಗನತಿಟ್ಟಿನಲ್ಲಿ ಈಗ ವಿದೇಶಿ ಹಕ್ಕಿಗಳ ಕಲರವ

ಅನಿಲ್ ಅಂತರಸಂತೆ

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆಯೇ ರಂಗನತಿಟ್ಟು ಪಕ್ಷಿಧಾಮದಲ್ಲಿ ವಿದೇಶಿ ಹಕ್ಕಿಗಳ ಕಲರವ ಹೆಚ್ಚಾಗುತ್ತದೆ. ಇಲ್ಲಿಗೆ ವಲಸೆ ಬರುವ ವಿದೇಶಿ ಹಕ್ಕಿಗಳನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹೆಚ್ಚು ಪ್ರಖ್ಯಾತಿ ಪಡೆದಿರುವ ರಂಗನತಿಟ್ಟು ಪಕ್ಷಿಧಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮೀಪದಲ್ಲಿದೆ. ಇಲ್ಲಿನ ವೈವಿಧ್ಯಮಯ ಪಕ್ಷಿ ಸಂಕುಲ ಜನರನ್ನು ಆಕರ್ಷಿಸುತ್ತದೆ. ಇಲ್ಲಿಗೆ ವಲಸೆ ಬರುವ ವಿದೇಶಿ ಹಕ್ಕಿಗಳು ಇಲ್ಲಿನ ನೈಸರ್ಗಿಕ ದ್ವೀಪ ಪ್ರದೇಶಗಳಲ್ಲಿ ಗೂಡುಕಟ್ಟಿಕೊಂಡು ಆಶ್ರಯ ಪಡೆದು ಸಂತಾನೋತ್ಪತ್ತಿ ಮಾಡಿಕೊಂಡು ತಮ್ಮ ಸ್ವಸ್ಥಾನಗಳಿಗೆ ಮರಳುತ್ತವೆ.

ಕರ್ನಾಟಕದ ಅತ್ತಿವೇರಿ ಪಕ್ಷಿಧಾಮ, ಮಾಗಡಿ ಪಕ್ಷಿಧಾಮ, ಬಂಕಾಪುರ ನವಿಲು ಧಾಮ, ಮಂಡಗದ್ದೆ ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು, ಗುಡವಿ ಪಕ್ಷಿಧಾಮ, ಕಗ್ಗಲಡು ಪಕ್ಷಿಧಾಮ, ಬೋನಾಳ ಕೆರೆ ಪಕ್ಷಿಧಾಮಗಳ ಪೈಕಿ ರಂಗನತಿಟ್ಟು ದೊಡ್ಡದಾದ ಪಕ್ಷಧಾಮವಾಗಿದ್ದು, ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಪ್ರದೇಶವನ್ನು 1940ರಲ್ಲಿ ಪಕ್ಷಿ ವಿಜ್ಞಾನಿ ಡಾ.ಸಲೀಂ ಅಲಿರವರು ಪಕ್ಷಿಧಾಮ ಎಂದು ಘೋಷಿಸಿದರು. ಇಲ್ಲಿ ನೂರಾರು ಬಗೆಯ ಪಕ್ಷಿ ಪ್ರಭೇದಗಳು ಆಶ್ರಯ ಪಡೆದಿರುವುದರಿಂದ ಈ ಸ್ಥಳವು ಪಕ್ಷಿ ಕಾಶಿ ಎಂದೇ ಪ್ರಖ್ಯಾತಿ ಪಡೆದಿದೆ.

ಇಂತಹ ಪಕ್ಷಿಧಾಮಕ್ಕೆ ಯಾವ ಸಮಯದಲ್ಲಿ ಭೇಟಿ ನೀಡುವುದು ಸೂಕ್ತ ಎಂದು ಕೇಳುತ್ತೀರಾ? ಈ ಪಕ್ಷಿ ಕಾಶಿಗೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಅಂದರೆ ನವೆಂಬರ್‌ನಿಂದ ಫೆಬ್ರವರಿಯವರೆಗೆ ಭೇಟಿ ನೀಡುವುದು ಹೆಚ್ಚು ಸೂಕ್ತವಾಗಿದೆ. ಈ ಸಮಯದಲ್ಲಿ ಇಲ್ಲಿ ವಿದೇಶಿ ವಲಸೆ ಹಕ್ಕಿಗಳ ಕಲರವ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ನಿಂದ 25 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಇಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಪೇಂಟೆಡ್ ಸ್ಟಾರ್ಕ್, ಯೂರೇಷಿಯನ್ ಸ್ಪೂನ್ ಬಿಲ್, ಏಷ್ಯನ್ ಒಪನ್ ಬಿಲ್ ಸ್ಟಾರ್ಕ್, ಗ್ರೇಟರ್ ಕಾರ್ಮೊರಂಟ್ ಮತ್ತು ಲೆಸ್ಸರ್ ಕಾರ್ಮೊರಂಟ್, ನೈಟ್
ಹೆರಾನ್ ಮತ್ತು ಪಾಂಡ್ ಹೆರಾನ್, ಏಷ್ಯನ್ ವೂಲಿ ನೆಕ್ಕಡ್ ಸ್ಟಾರ್ಕ್, ಲೆಸ್ಟರ್ ವಿಶಿಲಿಂಗ್ ಥಶ್, ಲೆಸ್ಟರ್ ವಿಶಿಲಿಂಗ್ ಡಕ್, ಸ್ಟಾರ್ಕ್ ಬಿಲ್ಲಿಡ್ ಕಿಂಗ್‌ಫಿಶರ್, ಒರಿಯಂಟಲ್ ಡಾರ್ಟರ್, ಗ್ರೇಟ್ ಥಿಕ್ ನೀ, ಸ್ಟೇಕ್ ಥೋಟೆಡ್ ಸ್ಟಾಲನ್, ಸ್ಪಟ್ ಬಿಲ್ಲಿಡ್ ಪೆಲಿಕನ್‌ಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಜೂನ್‌ನಿಂದ ನವೆಂಬರ್ ತಿಂಗಳವರೆಗೆ ಇಲ್ಲಿ ಹಲವು ಹಕ್ಕಿಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಮಳೆಗಾಲವಾದ್ದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗಿ ಪ್ರವಾಸಿಗರಿಗೆ ಕೆಲವು ಬಾರಿ ನಿರ್ಬಂಧ ಹೇರಲಾಗುತ್ತದೆ.

1940ರಲ್ಲಿ ಸಲೀಂ ಅಲಿಯವರ ಮನವಿಯ ಮೇರೆಗೆ ಮೈಸೂರು ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ಈ ಪ್ರದೇಶವನ್ನು ಎಂದು ಘೋಷಿಸಿದರು. ಅಲ್ಲದೆ ಕಾವೇರಿ ನದಿಗೆ ಅಡ್ಡಲಾಗಿ ಬಂಗಾರ ದೊಡ್ಡಿ ಅಣೆಕಟ್ಟೆಯನ್ನು ನಿರ್ಮಿಸಿದ ಬಳಿಕ ಇಲ್ಲಿ 6 ಚಿಕ್ಕ ಚಿಕ್ಕ ದ್ವೀಪಗಳು ನಿರ್ಮಾಣವಾಗಿವೆ. ಈ ದ್ವೀಪಗಳೇ ಇಂದು ಪಕ್ಷಿ ಸಂಕುಲಕ್ಕೆ ಆಶ್ರಯ ತಾಣಗಳಾಗಿವೆ.

ಯೂರೋಪ್, ಲ್ಯಾಟಿನ್ ಅಮೆರಿಕ ಮತ್ತು ಸೈಬೀರಿಯಾದಿಂದ ವಲಸೆ ಬರುವ ಹಕ್ಕಿಗಳ ಜತೆಗೆ ಉತ್ತರ ಭಾರತದ ನಾನಾ ಭಾಗಗಳಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬಂದು ಗೂಡುಕಟ್ಟಿ ಮರಿ ಮಾಡಲು ಈ ಪ್ರದೇಶ ಸೂಕ್ತವಾಗಿದೆ. ಇಲ್ಲಿ ಸುಮಾರು 170-200 ಪ್ರಭೇದದ ಹಕ್ಕಿಗಳನ್ನು ಗುರುತಿಸಲಾಗಿದ್ದು, ಪೇಂಟೆಡ್ ಕೊಕ್ಕರೆ, ವಿವಿಧ ತಳಿಯ ಕಿಂಗ್‌ಫಿಶರ್, ಕಾರ್ಮೊರಂಟ್, ಡಾರ್ಟರ್, ಹೆರಾನ್ಸ್, ರಿವರ್ ಟರ್ನ್, ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಸ್ಪೂನ್‌ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್, ಬಕಪಕ್ಷಿ, ದೊಡ್ಡ ಬಂಡೆಗೊರವ, ಗೀರುಗತ್ತಿನ ಕವಲು ತೋಕೆ ಮತ್ತು ಪಿಲಿಕನ್‌ನಂತಹ ಹಕ್ಕಿಗಳನ್ನು ಕಾಣಬಹುದಾಗಿದೆ. ಈ ಹಕ್ಕಿಗಳಿಗೆ ವಂಶಾಭಿವೃದ್ಧಿ ಮತ್ತು ವರ್ಷವಿಡೀ ಆಹಾರದ ನೆಲೆಯಾಗಿ ರಂಗನತಿಟ್ಟು ರೂಪುಗೊಂಡಿದೆ.

ಈ ಪಕ್ಷಿಧಾಮವು ಎಲ್ಲ ದಿನಗಳಲ್ಲಿಯೂ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೂ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಇಲ್ಲಿಗೆ ಮಳೆಗಾಲ ಮುಗಿದ ಬಳಿಕ ಅಕ್ಟೋಬರ್‌ನಿಂದ ಮೇ ತಿಂಗಳವರೆಗೂ ಭೇಟಿ ನೀಡಬಹುದಾಗಿದ್ದು, ವಿಶೇಷವಾಗಿ ನವೆಂಬರ್‌ನಿಂದ ಫೆಬ್ರವರೆಗಿನ ಅವಧಿ ಹೇಳಿ ಮಾಡಿಸಿದ ಸಮಯವಾಗಿದೆ.

ಇದು ಕೇವಲ ಹಕ್ಕಿಗಳ ಆವಾಸ ಸ್ಥಾನ ಮಾತ್ರವಲ್ಲ, ಇಲ್ಲಿ ಇತರೆ ಬಗೆಯ ಜೀವಿಗಳನ್ನೂ ಕಾಣಬಹುದಾಗಿದೆ. ಹೆಚ್ಚಾಗಿ ಮೊಸಳೆ ಹಾಗೂ ನೀರು ನಾಯಿಗಳನ್ನು ಇಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದ್ದು, ಬೋಟಿಂಗ್ ಮೂಲಕ ಇವುಗಳ ವೀಕ್ಷಣೆಗೆ ಅರಣ್ಯ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಗೆ ಶುಲ್ಕವೂ ನಿಗದಿಯಾಗಿರುತ್ತದೆ.

ಪಕ್ಷಿಧಾಮ ಎಂದು ಪಕ್ಷಿ ಕಾಶಿ ರಂಗನತಿಟ್ಟಿನಲ್ಲಿ ನೂರಾರು ಬಗೆಯ ಹಕ್ಕಿಗಳನ್ನು ಕಾಣಬಹುದು. ಸ್ಥಳೀಯ ಹಕ್ಕಿಗಳು ಮಾತ್ರವಲ್ಲದೆ ಸಾವಿರಾರು ಕಿ.ಮೀ.ಗಳಿಂದ ವಲಸೆ ಬರುವ ಹಕ್ಕಿಗಳಿಗೂ ಇದು ಆಶ್ರಯ ತಾಣವಾಗಿದೆ. ಚಳಿಗಾಲದಲ್ಲಿ ಹಲವು ಬಗೆಯ ವಿದೇಶಿ ಹಕ್ಕಿಗಳನ್ನು ಇಲ್ಲಿ ಕಾಣಬಹುದಾಗಿದ್ದು, ಇಲ್ಲಿಗೆ ಭೇಟಿ ನೀಡಲು ಇದು ಸೂಕ್ತ ಸಮಯ. -ಸಾಗರ್ ಸುರೇಶ್‌, ಪಕ್ಷಿ ಪ್ರಿಯ, ಮೈಸೂರು.

ಆಂದೋಲನ ಡೆಸ್ಕ್

Recent Posts

ಪುಲ್ವಾಮಾ ದಾಳಿ 7 ವರ್ಷ : ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ…

12 mins ago

ಎಮರ್ಜೆನ್ಸಿ ಲ್ಯಾಂಡಿಂಗ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ಮೋರನ್ : ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಮೋರಂನಲ್ಲಿರುವ ಸಿ-130ಜೆ ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ…

35 mins ago

ಸಚ್ಚಿದಾನದ ಶ್ರೀಗಳ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಯಜ್ಞ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಾಮೂಹಿಕ ಹನುಮಾನ್…

2 hours ago

ಓದುಗರ ಪತ್ರ | ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಎಲ್ಲಾ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ಅಪಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ…

2 hours ago

ಭಾರತ – ಅಮೆರಿಕ ವ್ಯಾಪಾರ ಒಪ್ಪಂದ : ಹಿನ್ನೆಲೆ ಮತ್ತು ಪರಿಣಾಮ

• ರಮಾನಂದ ಶರ್ಮಾ, ಅರ್ಥಿಕ, ರಾಜಕೀಯ ವಿಶ್ಲೇಷಕರು ಭಾರೀ ಹಗ್ಗಜಗ್ಗಾಟದ ನಂತರ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಹಿ…

3 hours ago

ಓದುಗರ ಪತ್ರ | ಯಡತೊರೆಯಲ್ಲಿ ಬಸ್ ತಂಗುದಾಣ ನಿರ್ಮಿಸಿ

ತಿ.ನರಸೀಪುರ ತಾಲ್ಲೂಕಿನ ಯಡದೊರೆ ಗ್ರಾಮದಲ್ಲಿ ಬಸ್ ತಂಗುದಾಣ ಇಲ್ಲದೇ ಸಾರ್ವಜನಿಕರು ಮರದ ಕೆಳಗೆ ನಿಲ್ಲುವುದು ಅನಿವಾರ್ಯವಾಗಿದೆ. ಬಸ್ಸುಗಳು ಯಡದೊರೆ ಹತ್ತಿರ…

3 hours ago