ತಿ.ನರಸೀಪುರ ತಾಲ್ಲೂಕು ಕುರುಬೂರಿನ ವಿದ್ಯಾರ್ಥಿನಿ ರಾಷ್ಟ್ರ ತಂಡದ ಪ್ರತಿನಿಧಿ
ಜಿ. ತಂಗಂ ಗೋಪಿನಾಥಂ
ಮೈಸೂರು: ‘ಭತ್ತದ ಕಣಜ’ ತಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುವ ಕಾಲ ಸನ್ನಿಹಿತವಾಗತೊಡಗಿದೆ. ಖೋ ಖೋ ಆಟದಲ್ಲಿ ಮಿಂಚಿನಂತೆ ಹರಿದಾಡಿ ಎಲ್ಲರೂ ಬೆರಗಾಗುವಂತೆ ಮಾಡುತ್ತಿರುವ ಗ್ರಾಮದ ಹೆಣ್ಣುಮಗಳು ಬಿ. ಚೈತ್ರಾ ಭಾರತದ ಪ್ರತಿನಿಧಿಯಾಗಿ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ವಿಜಯ ಪತಾಕೆ ಹಾರಿಸಲು ಸಿದ್ದರಾಗುತ್ತಿದ್ದಾರೆ. . !
ಮೈಸೂರು ಜಿಲೆಯ ತಿ. ನರಸೀಪುರ ತಾಲ್ಲೂಕು ಕುರುಬೂರು ಗ್ರಾಮದ ರೈತ ಕೆ. ಎಂ. ಬಸವಣ್ಣ ಮತ್ತು ನಾಗರತ್ನ ದಂಪತಿಯ ಪುತ್ರಿ ಚೈತ್ರಾ ಹೊಸದಿಲ್ಲಿಯಲ್ಲಿ ಜ. ೧೩ರಿಂದ ೧೯ ರವರೆಗೆ ನಡೆಯಲಿರುವ ಚೊಚ್ಚಲ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಶಾಲಾ ಕಾಲೇಜು ಮಟ್ಟದಿಂದ ರಾಷ್ಟ್ರೀಯ ಹಂತದವರೆಗೂ ದೇಶದ ವಿವಿಧೆಡೆ ನಡೆದಿರುವ ಖೋ-ಖೋ ಪಂದ್ಯಾವಳಿಗಳಲ್ಲಿ ಈಕೆಯ ಆಟಕ್ಕೆ ಮನಸೋಲದವರಿಲ್ಲ. ಶಾಲಾ ಹಂತದಿಂದಲೂ ಖೋ ಖೋ ಕ್ರೀಡೆಯಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆಯ ಮೂಲಕ ಕ್ರೀಡಾಭಿಮಾನಿಗಳೂ ಸೇರಿದಂತೆ ಎಲ್ಲರ ಮನಗೆದ್ದಿರುವ ಚೈತ್ರಾ ಅವರದ್ದು ಅಪೂರ್ವ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.
ನೋಡುತ್ತ ಮೂಡಿದ ಆಸಕ್ತಿ: ಗ್ರಾಮದಲ್ಲಿ ಚೈತ್ರಾ ಓದುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖೋ ಖೋ ಆಟಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾ ಗುತ್ತಿತ್ತು. ಹಿರಿಯ ವಿದ್ಯಾರ್ಥಿಗಳು ಈ ಆಟದಲ್ಲಿ ಮಿಂಚುತ್ತಿರುವುದನ್ನು ಕಂಡು ತಾನೂ ಇವರಂತೆ ಆಡಬೇಕೆಂಬ ಹಂಬಲ ಮೂಡಿತು. ಅಲ್ಲದೇ ತನ್ನ ಹಿರಿಯ ಸಹೋದರನೂ ಖೋ ಖೋ ಆಟದಲ್ಲಿ ಹೆಸರು ಗಳಿಸಿ ಬಹುಮಾನವನ್ನು ಪಡೆಯುತ್ತಿದ್ದುದನ್ನು ಗಮನಿಸಿ ಅಣ್ಣನಂತೆಯೇ ತಾನೂ ಖೋ ಖೋ ಆಟದಲ್ಲಿ ಬಹುಮಾನ ಪಡೆಯಬೇಕು ಎಂಬ ಆಸೆ ಮನಸ್ಸಿನಲ್ಲಿ ಅಂಕುರಾರ್ಪಣೆ ಆಯಿತು. ಸತತ ಪ್ರಯತ್ನ, ಪರಿಶ್ರಮ ದಿಂದ ಈ ದೇಸಿ ಕ್ರೀಡೆಯಲ್ಲಿ ಛಾಪು ಮೂಡಿಸಿದ ಚೈತ್ರಾ ಖೋ ಖೋ ಆಟದಿಂದಲೇ ಕುರುಬೂರು ಗ್ರಾಮಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ. ಹಲವು ವರ್ಷ ಗಳಿಂದ ಖೋ ಖೋ ಆಟವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
‘ಗೆಲ್ಲುವ ಹಂಬಲ, ಛಲ, ವಿಶ್ವಾಸವೇ ನನ್ನ ಧ್ಯೇಯ’
ಬರಿಗಾಲಿನಲ್ಲಿಯೇ ಆಡುವ ಖೋ ಖೋ ಕ್ರೀಡೆ ನಮ್ಮಂತಹವರ ಕೈ ಹಿಡಿಯಿತು. ಅಂತೆಯೇ ೩೧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪಽಸಿ ಪದಕ ಸಂಪಾದಿಸಿದೆವು. ಇಲ್ಲಿ ಸಹಾಯಕ್ಕೆ ಬಂದಿದ್ದು ಗೆಲ್ಲುವ ವಿಶ್ವಾಸ ಮಾತ್ರ. . !
೩೧ ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಗಳಲ್ಲಿ ೧೧ ಚಿನ್ನ, ೯ ಬೆಳ್ಳಿ, ೬ ಕಂಚಿನ ಪದಕ ಪಡೆದಿರುವ ಖೋ-ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಕರ್ನಾಟಕದಿಂದ ಸ್ಥಾನ ಗಿಟ್ಟಿಸಿಕೊಂಡಿರುವ ತಂಡದ ಪ್ರಮುಖ ಆಟಗಾರ್ತಿ ಚೈತ್ರಾ ತಮ್ಮ ಕ್ರೀಡಾ ಜೀವನವನ್ನು ಮೇಲಿನಂತೆ ಮೆಲುಕು ಹಾಕಿದರು.
ಖೋ ಖೋ ಕ್ರೀಡೆಯನ್ನು ಬರಿಗಾಲಿನಲ್ಲಿ ಆಡಿದರೂ ಕ್ರೀಡೆಗೆ ತಕ್ಕ ಫಿಟ್‌ನೆಸ್, ವೇಗದ ಓಟ ರೂಢಿಸಿಕೊಳ್ಳಲು ಸತತ ಅಭ್ಯಾಸದ ಅಗತ್ಯವಿದೆ. ಈ ಸಂದರ್ಭದಲ್ಲಿ ತರಬೇತುದಾರರು ಹೇಳಿದಂತೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪಾದರಕ್ಷೆಗಳು ಅತ್ಯಗತ್ಯ. ಆದರೆ ಚೈತ್ರಾ ಅದ್ಯಾವ ಗೋಜಿಗೂ ಹೋಗದೆ ಬರಿಗಾಲಿನಲ್ಲಿಯೇ ಅಭ್ಯಾಸ ನಡೆಸಿ ಕ್ರೀಡೆಗೆ ಬೇಕಾದ ತಕ್ಕ ದೇಹದಾರ್ಢ್ಯತೆಯನ್ನು ಕಾಪಾಡಿಕೊಂಡು ಈ ಮಹತ್ತರ ಸಾಧನೆ ಮಾಡಿದ್ದಾಳೆ.
ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಎರಡನೇ ವರ್ಷದ ಬಿ. ಪಿ. ಇಡಿ. ಪದವಿ ವ್ಯಾಸಂಗ ಮಾಡುತ್ತಿರುವ ಚೈತ್ರ್ರಾ ಖೋ ಖೋ ಸಾಧನೆ ಮಾಡಿದ್ದು, ತನ್ನ ಹುಟ್ಟೂರು ಕುರುಬೂರು ಗ್ರಾಮದ ವಿದ್ಯಾದರ್ಶಿನಿ ಕಾನ್ವೆಂಟ್ ಶಾಲೆಯಲ್ಲಿ. ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು, ಶಾಲೆಯ ಶಿಕ್ಷಕ ಕೆ. ಮಂಜುನಾಥ್ ಅವರು. ಚೈತ್ರಾ ಕ್ರೀಡಾಂಗಣಕ್ಕಿಳಿದರೆ ಮಿಂಚಿನ ವೇಗ ಪ್ರದರ್ಶಿಸುವ ಅಪ್ರತಿಮ ಆಟಗಾರ್ತಿ. ಅಂತೆಯೇ ಈಕೆಯನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಅದೇ ರೀತಿ ತನ್ನ ಜಿಂಕೆ ಓಟವನ್ನು ಮುಂದುವರಿಸಿ ಎದುರಾಳಿಗಳನ್ನು ಅತಿ ವೇಗವಾಗಿ ಔಟ್ ಮಾಡುವ ಕೌಶಲವನ್ನೂ ಈಕೆ ಕರಗತ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಖೋ ಖೋ ವಿಶ್ವ ಕಪ್ ಪಂದ್ಯಾವಳಿಗೆ ಆಯ್ಕೆಯಾಗಿರುವುದು ನನಗೆ ಖುಷಿ ತಂದಿದೆ. ನನ್ನ ಈ ಸಾಧನೆಗೆ ಪೋಷಕರು, ಶಾಲಾ ಶಿಕ್ಷಕರು, ತರಬೇತುದಾರರು ನೀಡುತ್ತಿರುವ ಬೆಂಬಲ, ಪ್ರೋತ್ಸಾಹವೇ ಕಾರಣ. ಖೋ ಖೋ ಕ್ರೀಡೆಯಲ್ಲಿ ಉತ್ಸಾಹ, ಶ್ರದ್ಧೆಯಿಂದ ಭಾಗವಹಿಸಲು ಇಚ್ಛಿಸುವ ಕಿರಿಯರಿಗೆ ನಾನು ಪ್ರೋತ್ಸಾಹ, ಸಹಕಾರ ನೀಡಲು ಸದಾ ಸಿದ್ಧಳಿದ್ದೇನೆ. -ಬಿ. ಚೈತ್ರಾ, ಅಂತಾರಾಷ್ಟ್ರೀಯ ಖೋ-ಖೋ ಆಟಗಾರ್ತಿ.
ರಾಜ್ಯ ತಂಡದಲ್ಲಿ ಮಿಂಚು ೨೦೨೫ರ ಜ. ೧೩ರಿಂದ ೧೯ರವರೆಗೆ ಹೊಸದಿಲ್ಲಿಯಲ್ಲಿ ಖೋ ಖೋ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಹೊಸದಿಲ್ಲಿಯಲ್ಲಿ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಕ್ಯಾಂಪ್‌ನಲ್ಲಿ ಕುರುಬೂರು ಗ್ರಾಮದ ೨೨ ವರ್ಷದ ಚೈತ್ರಾ ಆಯ್ಕೆಯಾಗಿದ್ದಾರೆ. ಈಕೆ ೩೧ ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಚೈತ್ರಾ, ಖೋ ಖೋ ವಿಶ್ಚಕಪ್‌ನಲ್ಲಿ ಭಾರತ ತಂಡಕ್ಕೆ ಪದಕ ತಂದುಕೊಡುವ ಗುರಿ ಹೊಂದಿದ್ದಾರೆ.
ಹಳ್ಳಿಯಲ್ಲಿ ಖೋ ಖೋ ಆಡುವುದನ್ನು ಕಲಿತ ನಮ್ಮ ಹುಡುಗಿ ಇದೀಗ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಽಸಲು ಆಯ್ಕೆಯಾಗಿರುವುದು ಅತ್ಯಂತ ಸಂತಸ ತಂದಿದೆ. ಇಂತಹ ಪ್ರತಿಭೆಗೆ ಬೆನ್ನೆಲುಬಾಗಿ ಸಹಕಾರ ನೀಡಿದ ಶಾಲೆಯ ಆಡಳಿತ ಮತ್ತು ಬೋಧಕ ಸಿಬ್ಬಂದಿಗೂ ಧನ್ಯವಾದಗಳನ್ನು ಹೇಳಲು ಇಚ್ಛಿಸುವೆ. -ಕೆ. ಮಂಜುನಾಥ್, ಶಾಲಾ ಶಿಕ್ಷಕ ಹಾಗೂ ತರಬೇತುದಾರ.
ಸಾಲೋಮನ್ ೨೨.೨೦ ವಿಸ್ತೀರ್ಣದ ಕೆರೆ ಈಗ ಉಳಿದಿರುವುದು ೫ ಎಕರೆ! ಅನೇಕ ವರ್ಷಗಳಿಂದ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಯಾರೇ…
ನವೀನ್ ಡಿಸೋಜ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಚರ್ಚೆ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಹಿಂದಿನಿಂದಲೂ ಇದೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ…
ಬಿ.ಟಿ. ಮೋಹನ್ ಕುಮಾರ್ ಶೇ.೬೦ರಷ್ಟು ಬಿ, ಸಿ, ಡಿ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ ಪೌರಕಾರ್ಮಿಕರ ಹುದ್ದೆ ಭರ್ತಿಗೆ ಸಂಬಂಧಪಟ್ಟ…
ಪಂಜು ಗಂಗೊಳ್ಳಿ ಹತ್ತನೇ ತರಗತಿ ಪರೀಕ್ಷೆಗಳು ಮುಗಿದು ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳಿಗೆ ಈ ಹತ್ತನೇ…
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕ್ಯಾತಮಾರನಹಳ್ಳಿ 4ನೇ ಹಂತದ ಕಲ್ಯಾಣಗಿರಿ ನಗರ ಬಡಾವಣೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ವಾಸದ ಮನೆಗಳ ಪಕ್ಕ ಇರುವ…
ಆಂದೋಲನ’ ಸಂದರ್ಶನದಲ್ಲಿ ಸಚಿವ ಕೆ.ವೆಂಕಟೇಶ್ ಭರವಸೆ ನೇರ ನೇಮಕಾತಿ ಅಥವಾ ನಿಯೋಜನೆ ಮೂಲಕ ಭರ್ತಿಗೆ ಸೂಚನೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ…