ಬೂದನೂರಲ್ಲಿ ಹೊಯ್ಸಳರ ವಾಸ್ತುಶಿಲ್ಪ ವೈಭವ

ಸಾವಿರ ವರ್ಷಗಳ ಇತಿಹಾಸವುಳ್ಳ ಹೊಯ್ಸಳರ ದೇವಾಲಯ; ಬೇಲೂರು, ಹಳೇಬೀಡು, ಸೋಮನಾಥಪುರದ ವಾಸ್ತುಶಿಲ್ಪ ಚಹರೆ ಈ ದೇವಾಲಯಕ್ಕೂ ಇದೆ!

ದೇವಾಲಯ ವಾಸ್ತುಶಿಲ್ಪ ಎಂದರೆ ನಮಗೆಲ್ಲ ಬಾದಾಮಿ ಚಾಲುಕ್ಯರು, ಹೊಯ್ಸಳರು ನೆನಪಾಗುತ್ತಾರೆ. ಕರ್ನಾಟಕದ ದಕ್ಷಿಣ ಭಾಗದ ವಾಸ್ತುಶಿಲ್ಪಕ್ಕೆ ವಿಶೇಷವಾಗಿ ಹೊಯ್ಸಳರ ಕೊಡುಗೆ ಅನನ್ಯ, ಬೇಲೂರು, ಹಳೇಬೀಡುವಿನಲ್ಲಿ ಅವರು ನಿರ್ಮಿಸಿದ ದೇವಾಲಯಗಳ ವಾಸ್ತುಶಿಲ್ಪ ನಯನ ಮನೋಹರ. ಅವರೇ ನಿರ್ಮಿಸಿದ ದೇವಾಲಯ ಸಕ್ಕರೆ ನಗರ ಮಂಡ್ಯದ ಸಮೀಪದಲ್ಲೂ ಇದೆ. ಆದರೆ ಪ್ರಚಾರದ ಕೊರತೆಯಿಂದ ಅಷ್ಟಾಗಿ ಪ್ರವಾಸಿಗರ ಗಮನ ಸೆಳೆದಿಲ್ಲ.

ಮಂಡ್ಯದಿಂದ 7 ಕಿ.ಮೀ ದೂರದಲ್ಲಿರುವ ಬೂದನೂರು ಗ್ರಾಮದಲ್ಲಿ ಸಾವಿರ ವರ್ಷಗಳ ಇತಿಹಾಸವುಳ್ಳ ಹೊಯ್ಸಳರ ಕಾಲದ ಕಾಶಿ ವಿಶ್ವೇಶ್ವರ ದೇವಾಲಯ ಹಾಗೂ ಅನಂತಪದ್ಮನಾಭ ದೇವಾಲಯವಿದೆ. ಹೊಯ್ಸಳರು ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ಮಾದರಿಯಲ್ಲೇ ಈ ಎರಡೂ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವು ಏಕಕೂಟದ ದ್ರಾವಿಡ ಮಾದರಿಯ ದೇವಾಲಯಗಳಾಗಿವೆ.

ಕಾಶಿ ವಿಶ್ವೇಶ್ವರ ದೇವಾಲಯ: ಬೂದನೂರು ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಎತ್ತರದ ಜಗತಿಯ ಮೇಲೆ ನಿಂತಿದೆ. ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಸಣ್ಣ ಮುಖ ಮಂಟಪವನ್ನು ಹೊಂದಿದ್ದು, ಶಿಖರ ಮತ್ತು ಸುಕನಾಶಿಗಳನ್ನು ಅಂದವಾಗಿ ನಿರ್ಮಿಸಿಲಾಗಿದೆ.

ಭಿತ್ತಿಯಲ್ಲಿ ಹೆಚ್ಚಿನ ಅಲಂಕಾರ ಇಲ್ಲದಿದ್ದರೂ, ಸರಳವಾಗಿ ನೋಡಲು ಆಕರ್ಷಕವಾಗಿದೆ. ನವರಂಗದ ಮಧ್ಯದಲ್ಲಿ ನಂದಿಯ ಮೂರ್ತಿಯಿದ್ದು, ನೋಡಲು ಬಹಳ ಸುಂದರವಾಗಿದೆ. ಗಂಟೆಸರ, ಗೆಜ್ಜೆ, ಬಾಸಿಂಗ, ಕಾಲ್ಗೆಜ್ಜೆ ಮುಂತಾದವುಗಳನ್ನು ಬಹಳ ಸೂಕ್ಷ್ಮವಾಗಿ ಕೆತ್ತಿದ್ದು, ಇದು ನಂದಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಸುಖನಾಶಿಯ ಬಲಭಾಗದಲ್ಲಿ ಸುಬ್ರಹ್ಮಣ್ಯ ಹಾಗೂ ಎಡಭಾಗದಲ್ಲಿ ಗಣೇಶನ ಮೂರ್ತಿಗಳು ದ್ವಾರಪಾಲಕರಂತೆ ಗರ್ಭಗುಡಿಯನ್ನು ಕಾಯುತ್ತಿವೆ. ನಂದಿಯ ವಿಗ್ರಹದಲ್ಲಿದ್ದ ತಿರುಪಿನಂಹತ ಕಿವಿಗಳು ಇಲ್ಲಿನ ಅದ್ಭುತ ಕೆತ್ತನೆಯಾಗಿತ್ತು. ಇದೀಗ ಆ ತಿರುಪಿನಂತಹ ಕಿವಿಗಳು ನಾಪತ್ತೆಯಾಗಿವೆ. ಸ್ಥಳೀಯರು ತಿಳಿಸುವಂತೆ ನಂದಿಯ ಕಿವಿಗಳನ್ನು ತಿರುಗಣಿಯಂತೆ ತಿರುಗಿಸಿ ತೆಗೆಯುವ ಅಪರೂಪದ ವಿಶೇಷವಿತ್ತು. ಅಂಥ ಅಪರೂಪದ ಕೌಶಲವಿದ್ದ ಶಿಲ್ಪಗಳು ಕಳ್ಳರ ಪಾಲಾಗಿದೆ. ಕಾಶಿ ವಿಶ್ವೇಶ್ವರ ಸ್ವಾಮಿಗೆ ಕಾರ್ತೀಕ ಮಾಸದ ಸೋಮವಾರ ಹಾಗೂ ಸಂಕ್ರಾಂತಿ, ಶಿವರಾತ್ರಿ ವಿಶೇಷ ದಿನಗಳಲ್ಲಿ ಈಗಲೂ ಪೂಜೆ ಜರುಗುತ್ತ ಬಂದಿದೆ.

ಅನಂತಪದ್ಮನಾಭ ದೇವಾಲಯ: ಈ ದೇವಾಲಯ ಊರಮಧ್ಯದಲ್ಲಿ ಪೂರ್ವಾಭಿಮುಖವಾಗಿ ಇದೆ. ಈ ದೇವಾಲಯದಿಂದಲೇ ಹೊಸಬೂದನೂರಿಗೆ ಉದ್ಭವ ಸರ್ವಜ್ಞಪದ್ಮನಾಭಪುರ ಎಂಬ ಹೆಸರಿದ್ದದ್ದು ಕ್ರಿ.ಶ 1276ರ 3ನೇ ನರಸಿಂಹನ ಶಾಸನದಿಂದ ತಿಳಿದುಬರುತ್ತದೆ. ಅನಂತ ಪದ್ಮನಾಭನ ಸ್ಥಾನಿಕ ಮೂರ್ತಿಯಿರುವುದು ಇಲ್ಲಿನ ವಿಶೇಷವಾಗಿದೆ. ಸುಮಾರು 6 ಅಡಿ ಎತ್ತರದ ಪದ್ಮನಾಭನು ಮಂದಸ್ಮಿತವಾಗಿದ್ದು, ಪದ್ಮ, ಚಕ್ರ, ಗದ, ಶಂಖುಧಾರಿಯಾಗಿದ್ದಾನೆ. ನೋಡಲು ಸಹ ಆಕರ್ಷಕವಾಗಿದ್ದಾನೆ. ದೇವಾಲಯದ ಬಾಗಿಲಿನ ಚೌಕಟ್ಟುಗಳನ್ನು ಹೆಚ್ಚು ಅಲಂಕರಿಸಲಾಗಿದೆ. ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಸಣ್ಣ ಮುಖ ಮಂಟಪವನ್ನು ಹೊಂದಿದೆ. ನವರಂಗದಲ್ಲಿ ನುಣುಪಾದ ನಾಲ್ಕು ಕಂಬಗಳಿವೆ. ಇಲ್ಲಿನ ಆನಂತಪದ್ಮನಾಭಸ್ವಾಮಿಗೆ ಅನಂತಪದ್ಮನಾಭ ವ್ರತದ ದಿನ ವಿಶೇಷವಾಗಿ ಸೇವೆಗಳು ನಡೆಯುತ್ತಿರುತ್ತವೆ.

ಸಾವಿರ ವರ್ಷಗಳ ಇತಿಹಾಸವುಳ್ಳ ಈ ಎರಡೂ ದೇವಾಲಯಗಳು ಮಳೆ, ಗಾಳಿ, ಬಿಸಿಲಿಗೆ ಸಿಕ್ಕಿ ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತಿವೆ. ಆದಾಗ್ಯೂ ಜೀರ್ಣೋದ್ದಾರ ಕಾರ್ಯಗಳು ನಡೆದಿವೆ. ಈ ದೇವಾಲಯವು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹೆದ್ದಾರಿಯ ಎಡಭಾಗದ ಬೂದನೂರಿನಲ್ಲಿದೆ. ಇಲ್ಲಿಗೆ ತೆರಳಲು ಬಸ್‌ಗಳ ವ್ಯವಸ್ಥೆಯಿದೆ. ಇತ್ತೀಚೆಗಷ್ಟೇ ಮಂಡ್ಯ ಜಿಲ್ಲಾಡಳಿತ ಇಲ್ಲಿನ ಪುರಾತನ ಸ್ಮಾರಕಗಳತ್ತ ಪ್ರವಾಸಿಗರನ್ನು ಸೆಳೆಯಲು ಪ್ರಥಮ ಬಾರಿಗೆ ಬೂದನೂರು ಉತ್ಸವ ಆಯೋಜಿಸಿ ಕಾಶಿ ವಿಶ್ವೇಶ್ವರ ಹಾಗೂ ಅನಂತಪದ್ಮನಾಭ ದೇವಾಲಯದ ವೈಭವವನ್ನು ಮರುಕಳಿಸಿತ್ತು.

ಬೂದನೂರಿನ ಈ ದೇವಾಲಯಗಳನ್ನು ಕರ್ನಾಟಕ ಪುರಾತತ್ವ ಇಲಾಖೆಯು ಸಂರಕ್ಷಿತ ಪ್ರಾಚೀನ ಸ್ಮಾರಕವಾಗಿ ಘೋಷಿಸಿದೆ. ಊರೊಳಗೆ ಇರುವ ಈ ದೇವಾಲಯದ ಸುತ್ತಮುತ್ತಾ ಮನೆಗಳನ್ನು ನಿರ್ಮಿಸಿರುವುದರಿಂದ ಇದು ಪ್ರವಾಸಿಗರ ಕಣ್ಣಿಗೆ ಬೀಳುವುದೇ ಇಲ್ಲ. ನೀವೊಮ್ಮೆ ಮಂಡ್ಯಕ್ಕೆ ಭೇಟಿ ಕೊಟ್ಟರೆ ತಪ್ಪದೇ ಬೂದನೂರಿನಲ್ಲಿರುವ ಐತಿಹಾಸಿಕ ದೇವಾಲಯವನ್ನು ನೋಡಿಕೊಂಡು ಬನ್ನಿ..

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

1 hour ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

1 hour ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

2 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

3 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

12 hours ago