ವಾರಾಂತ್ಯ ವಿಶೇಷ

ಇಲ್ಲಿ ಕಾಡೇ ಮಾತೆ, ಹುಲಿಯೇ ಅನ್ನದಾತ

ಅನಿಲ್ ಅಂತರಸಂತೆ

ಉಮ್ರೇಡ್‌ನಲ್ಲಿ ಹುಲಿಗಳ  ರಕ್ಷಣೆಗೆ ಸ್ಥಳೀಯರ ಪಣ; ೫ ಮರಿಗಳನ್ನು ಒಮ್ಮೆಲೆ ಕಂಡು ಪ್ರವಾಸಿಗರು ಪುಳಕ

‘ಜಂಗಲ್ ಹಮಾರ ಮಾತಾ ಹೈ, ಭಾಗ್ ಹಮಾರ ಅನ್ನದಾತ ಹೈ’ ಇದು ಸಫಾರಿ ವಾಹನವೊಂದರ ಮೇಲೆ ಬರೆಸಿದ್ದ ಸಾಲುಗಳು. ಅಚ್ಚರಿ ಅನಿಸಿದರೂ ನಿಜ ವಾಗಿಯೂ ಇಂದು ಹುಲಿಗಳು ಸಾವಿರಾರು ಕುಟುಂಬ ಗಳ ಅನ್ನದಾತರಂತಾಗಿವೆ. ಅದು ಹೇಗೆ? ಅನ್ನುವ ಪ್ರಶ್ನೆ ಮೂಡುವುದು ಸಹಜ. ದೇಶದ ಬಹುತೇಕ ಕಾಡು ಗಳಲ್ಲಿರುವ ಸಫಾರಿ ಕೇಂದ್ರಗಳಿಗೆ ಭೇಟಿ ನೀಡಿದರೆ ಇದು ಅಕ್ಷರಶಃ ಸತ್ಯ ಅನಿಸದಿರದು.

ದೇಶದ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳು ತಮ್ಮದೇ ಆದ ವಿಶಿಷ್ಟತೆಗಳನ್ನು ಹೊಂದಿವೆ. ಇಲ್ಲಿ ವಾಸಿಸುವ ಹುಲಿಗಳೂ ಕೂಡ. ಅಂತಹದ್ದೇ ವಿಶಿಷ್ಟತೆ ಹೊಂದಿರುವ ಕಾಡು ಗಳಲ್ಲಿ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿರುವ ಉಮ್ರೇಡ್ ಕರಂಡ್ಲ ಕಾಡು ಕೂಡ ಒಂದು. ಅಂದ ಹಾಗೆ ಇದು ಹುಲಿ ಸಂರಕ್ಷಿತ ಪ್ರದೇಶವಾಗದಿದ್ದರೂ ಇಲ್ಲಿರುವ ಹುಲಿಗಳಿಂದಲೇ ಕಾಡು ಇಂದು ಹೆಚ್ಚು ಪ್ರಚಲಿತದಲ್ಲಿದೆ.

ಉಮ್ರೇಡ್ ಕರಂಡ್ಲ ವಿಶೇಷವಾದ ಕಾಡು. ೧೮೯ ಚ.ಕಿ.ಮೀ. ವಿಸ್ತೀರ್ಣದ ಈ ಕಾಡಿನಲ್ಲಿ ಹುಲಿಗಳ ಸಂಖ್ಯೆಬೆರಳೆಣಿಕೆಯಷ್ಟು ಮಾತ್ರ. ಹೀಗಿರುವಾಗ ಹುಲಿ ಪ್ರವಾಸೋದ್ಯಮದಲ್ಲಿ ಈ ಕಾಡು ಇಷ್ಟು ಜನಪ್ರಿಯಗೊಳ್ಳಲು ಕಾರಣವೇನು? ಇಂತಹದೊಂದು ಪ್ರಶ್ನೆಗೆ ಬಹುಶಃ ಅಲ್ಲಿಗೆ ಭೇಟಿ ನೀಡಿದರೆ ಉತ್ತರ ಕಂಡುಕೊಳ್ಳಬಹುದೆನಿಸುತ್ತದೆ. ಕರ್ನಾಟಕದ ಅನೇಕ ವನ್ಯಜೀವಿ ಪ್ರಿಯರು ಈಗಾಗಲೇ ಅಲ್ಲಿಗೆ ಭೇಟಿ ನೀಡಿದ್ದಾರೆ. ಅದರಲ್ಲಿ ನಾನೂ ಒಬ್ಬ, ಇದು ಉಮ್ರೇಡ್‌ಗೆ ನನ್ನ ಎರಡನೇ ಪ್ರವಾಸ.

ಇಲ್ಲಿ ಹುಲಿಗಳಷ್ಟೇ ಅಲ್ಲ ಚಿರತೆಗಳೂ ತೀರ ಕಡಿಮೆ. ಭಕ್ಷಕ ಪ್ರಾಣಿಗಳಿರಲಿ, ಕನಿಷ್ಠ ಪಕ್ಷ ಇಲ್ಲಿ ಜಿಂಕೆಗಳು, ಸಾಂಬಾರ್, ಕಾಡುಹಂದಿಗಳೂ ಕಡಿಮೆ. ಅಪರೂಪಕ್ಕೆ ಸಿಗುವ ನೀಲಗಾಯಿ, ಚೌಸಿಂಗಾ ಕಾಣಬಹುದು. ಇಷ್ಟು ಕಡಿಮೆ ವನ್ಯ ಸಂಪತ್ತಿದ್ದರೂ ಇಲ್ಲಿಗೆ ಜನರನ್ನು ಆಕರ್ಷಿಸಲು ಇಲ್ಲಿನ ಹುಲಿಗಳು ಯಶಸ್ವಿಯಾಗಿವೆ. ಅವು ಅಲ್ಲಿನ ಸ್ಥಳೀಯರಿಗೆ ಸದ್ಯಕ್ಕೆ ಅನ್ನದಾತರಾಗಿವೆ.

‘ವೈನ್ ಗಂಗಾ’ ನದಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ‘ಇಂದಿರಾ ಸಾಗರ್’ ಅಣೆಕಟ್ಟೆಯ ಹಿನ್ನೀರಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಉಮ್ರೇಡ್ ಕರಂಡ್ಲ ಒಂದು ಕುರುಚಲು ಕಾಡು. ಸಣ್ಣ ಮರಗಳು, ಹೇರಳವಾದ ಹುಲ್ಲುಗಾವಲಿನಿಂದ ಆವರಿಸಿದೆ. ಇಂತಹ ಕಾಡಿನಲ್ಲಿ ಹುಲಿಯೊಂದು ೫ ಮರಿಗಳಿಗೆ ಜನ್ಮ ನೀಡಿದ್ದು, ಸಫಾರಿ ವೇಳೆ ಕಾಣಿಸಿಕೊಳ್ಳುತ್ತಾ ದೇಶದ ಗಮನ ಸೆಳೆದಿದೆ.  ಕ್ರಿಕೆಟ್ ದಿಗ್ಗಜರಿಂದ ಹಿಡಿದು, ಖ್ಯಾತ ನಟನಟಿಯರೂ ಈ ಹುಲಿ ಮತ್ತು ಮರಿಗಳನ್ನು ನೋಡಲು ಈ ಕಾಡಿಗೆ ಭೇಟಿ ನೀಡಿದ್ದಾರೆ ಎಂಬುದು ಇಲ್ಲಿನ ಮತ್ತೊಂದು ವಿಶೇಷ.

ತಾಯಿಯಂತೆ ಮಗಳಿಗೂ ೫ ಮರಿ: ಉಮ್ರೇಡ್‌ಗೆ ಹೆಚ್ಚು ಜನರನ್ನು ಸೆಳೆದ ಹುಲಿ ‘ಫೇರಿ’. ನಾನು ೨೦೨೨ರಲ್ಲಿ ಉಮ್ರೇಡ್‌ಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಫೇರಿ ಎಂಬ ಹೆಣ್ಣು ಹುಲಿ, ಅದಕ್ಕೆ ೫ ಮರಿ, ಸೂರ್ಯ ಎಂಬ ಗಂಡು ಹುಲಿ ಇದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಈಗ ಫೇರಿ ಬೇರೆ ನೆಲೆಯ ಹುಡುಕಾಟದಲ್ಲಿದೆ. ಆದರೆ ಇದೇ ಕಾಡಿನಲ್ಲಿ ಈಗ ಫೇರಿ ಹುಲಿಯ ೫ ಮರಿಗಳ ಪೈಕಿ ಒಂದಾದ ‘ಎಫ್-೨’ ಎಂಬ ಹೆಣ್ಣು ಹುಲಿ ಉಮ್ರೇಡ್‌ನಲ್ಲಿ ನೆಲೆಸಿದ್ದು, ಇದೂ ಕೂಡ ತನ್ನ ೫ ಪುಟ್ಟ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಾ, ಹುಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವುದು ವಿಶೇಷ. ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿ ಅನ್ನದಾತ ಅನಿಸಿಕೊಂಡಿದೆ.

ದೇಶದ ಬಹುತೇಕ ಕಾಡುಗಳಲ್ಲಿ ಹುಲಿಯೊಂದು ೫ ಮರಿಗಳಿಗೆ ಜನ್ಮ ನೀಡುವುದು ಬಹಳ ವಿಶೇಷ. ಕೆಲ ವರ್ಷಗಳ ಹಿಂದೆ ಕರ್ನಾಟಕದ ನಾಗರಹೊಳೆಯ ಕಾಕನಕೋಟೆ ಸಫಾರಿ ವೇಳೆಯಲ್ಲೂ ಹುಲಿಯೊಂದು ೪ ಮರಿ ಗಳೊಂದಿಗೆ ಪ್ರವಾಸಿಗರಿಗೆ ದರ್ಶನ ನೀಡಿತ್ತು. ಈಗ ಬಂಡೀಪುರದಲ್ಲಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನ ವಾಗುತ್ತಿದೆ. ಹೀಗೆ ಹುಲಿ ೨, ೩, ೪ ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಆದರೆ ಉಮ್ರೇಡ್‌ನಲ್ಲಿ ತಾಯಿಯಂತೆ ಮಗಳೂ ೫ ಮರಿಗಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಈ ೫ ಮರಿಗಳೇ ಈಗ ಮಹಾ ರಾಷ್ಟ್ರದ ಕೇಂದ್ರ ಬಿಂದುವಾಗಿ ಹೋಗಿವೆ.

೨೦೧೨-೧೩ಕ್ಕೂ ಮೊದಲು ಇಲ್ಲಿನ ಜನರು ಕೃಷಿಯ ಜತೆಗೆ ಕೂಲಿಯನ್ನು ನಂಬಿಕೊಂಡು ಜೀವನ ಸಾಗಿಸು ತ್ತಿದ್ದರು. ಸಿಗುವ ಅಲ್ಪಮೊತ್ತದಲ್ಲಿಯೇ ಜೀವನ. ೨೦೧೨ಕ್ಕೂ ಮೊದಲು ಉಮ್ರೇಡ್, ಪೌನಿ ಮತ್ತು ಕರೆಂಡ್ಲ ವಲಯಗಳಲ್ಲಿ ಆವರಿಸಿದ್ದ ಕಳ್ಳಬೇಟೆ ಈ ಕಾಡಿನ ಜೀವ ಸಂಕುಲ ಶೇ.೮೦ರಷ್ಟು ಕುಸಿಯುವಂತೆ ಮಾಡಿದೆ. ಅಂದು ಕೊಂದು ತಿನ್ನುತ್ತಿದ್ದ ಗ್ರಾಮದವರೇ ಇಂದು ಸಂರಕ್ಷಣೆಗೆ ಮುಂದಾಗಿರುವ ಪರಿಣಾಮ ಉಮ್ರೇಡ್‌ಗೆ ಮರುಹುಟ್ಟು ಸಿಕ್ಕಿದಂತಾಗಿದ್ದು, ತುಸು ಉಸಿರಾಡುತ್ತಿದೆ. ಬೇಟೆಯಾಡುತ್ತಿದ್ದವರಿಗೆ ಈಗ ಹುಲಿಗಳೇ ಅನ್ನದಾತರಾಗಿವೆ. ಎಂದರೆ ಇಂದಿರಾ ಗಾಂಧಿಯವರ ‘ಹುಲಿ ಯೋಜನೆ’ ಫಲಿಸಿದೆ ಎಂದರ್ಥವಲ್ಲವೇ? ಅರಣ್ಯ ಇಲಾಖೆಯಲ್ಲಿ ಹಾಗೂ ಸಫಾರಿ ವಾಹನದ ಚಾಲಕರು, ಗೈಡ್‌ಗಳ ಹುದ್ದೆಗಳನ್ನು ಸ್ಥಳೀಯ ರಿಗೇ ನೀಡಿದ್ದು, ಅವರಿಗೆ ಕಾಡಿನ ಮೇಲೆ ಅಭಿಮಾನದ ಜತೆಗೆ ಸಂರಕ್ಷಣೆ ಮಾಡಬೇಕು ಎಂಬ ಪ್ರಜ್ಞೆ ಮೂಡುವಂತೆ ಮಾಡಲಾಗಿದೆ. ಪರಿಣಾಮ ದಶಕದಲ್ಲೇ ಕಳ್ಳಬೇಟೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಅರಣ್ಯ ಪ್ರದೇಶವೂ ಹುಲಿ ಸಂರಕ್ಷಿತ ಪ್ರದೇಶವಾಗಬಹುದು ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

” ಉಮ್ರೇಡ್ ಬಹಳ ವಿಶೇಷವಾದ ಕಾಡು. ಇಲ್ಲಿನ ಹುಲಿಯೊಂದು ೫ ಮರಿಗಳಿಗೆ ಜನ್ಮ ನೀಡಿದ್ದು, ಅವು ಸಫಾರಿಯಲ್ಲಿ ಕಾಣಸಿಗುವುದರಿಂದ ನಾವು ಹೆಚ್ಚಾಗಿ ಇಲ್ಲಿ ಸಫಾರಿ ಮಾಡುತ್ತೇವೆ. ಕಳೆದ ಬಾರಿ ಬಂದಾಗ ಫೇರಿ ಮತ್ತು ಅದರ ೫ ಮರಿಗಳನ್ನು ನೋಡಿದ್ದೆ. ಈಗ ಫೇರಿಯ ಮರಿ ಎಫ್-೨ ಹುಲಿಯ ೫ ಮರಿಗಳನ್ನು ನೋಡಿದ್ದೇನೆ. ಈ ಹುಲಿಗಳು ನಮ್ಮ ದೇಶದ ವನ್ಯ ಸಂಪತ್ತಿನ ಪ್ರತೀಕ.”

-ಭರತ್ ಲಕ್ಷ್ಮೀಶ್, ವನ್ಯಜೀವಿ ಛಾಯಾಗ್ರಾಹಕ, ಬೆಂಗಳೂರು.

ಆಂದೋಲನ ಡೆಸ್ಕ್

Recent Posts

ಶಾಸಕ ಗಾಲಿ ಜನಾರ್ಧನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…

4 mins ago

ಉನ್ನಾವೋ ಅತ್ಯಾಚಾರ ಕೇಸ್:‌ ಆರೋಪಿ ಕುಲದೀಪ್‌ ಸಿಂಗ್‌ ಸೆಂಗರ್‌ ಜಾಮೀನಿಗೆ ಸುಪ್ರೀಂಕೋರ್ಟ್‌ ತಡೆ

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…

25 mins ago

ರಾಜ್ಯದಲ್ಲಿ ಡ್ರಗ್ಸ್‌ ದಂಧೆ: ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್‌ ಸೀಜ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…

39 mins ago

ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ : ಯಾವುದು ನಂಬರ್‌ ಒನ್‌ ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಪ್ರಸಿದ್ಧ…

1 hour ago

ತಲಕಾಡಿನತ್ತ ಹರಿದುಬರುತ್ತಿರುವ ಪ್ರವಾಸಿಗರು: ಕಾವೇರಿ ನದಿಯಲ್ಲಿ ಮಿಂದೆದ್ದು ಸಂಭ್ರಮ

ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…

1 hour ago

ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಸಚಿವ ಎಚ್.ಸಿ.ಮಹದೇವಪ್ಪ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ…

2 hours ago