ಜಿ. ತಂಗಂ ಗೋಪಿನಾಥಂ
ಒಂದೇ ಸೂರಿನಡಿ ಕರ್ನಾಟಕ ಶಾಸ್ತ್ರೀಯ ನೃತ್ಯ, ಸಂಗೀತ, ಸುಗಮ ಸಂಗೀತ, ಮಕ್ಕಳ ನಾಟಕ. . . ಹೀಗೆ ಹಲವು ಕಲಾ ಪ್ರಕಾರಗಳಲ್ಲಿ ಸಮನ್ವಯತೆ ಸಾಧಿಸಿಕೊಂಡು ಗ್ರಾಮೀಣ ಪ್ರತಿಭೆಗಳನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಮೈಸೂರಿನ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಲಾ ಶಾಲೆಗೆ ಈಗ ಬೆಳ್ಳಿಹಬ್ಬದ ಸಂಭ್ರಮ.
೧೯೯೯ ನ. ೧೪ರ ಮಕ್ಕಳ ದಿನಾಚರಣೆಯಂದು ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಲಾ ಸಂಸ್ಥೆ ಮಂಡ್ಯ, ಮೈಸೂರು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿಯೂ ಕಾರ್ಯಾರಂಭಗೊಂಡು ಅವಕಾಶ ವಂಚಿತ ನೂರಾರು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ.
ಈ ಅಕಾಡೆಮಿ ಕಳೆದ ೨೫ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಭರತನಾಟ್ಯ, ಸಂಗೀತ, ಯೋಗ, ಸಂಸ್ಕೃತ, ವಾದ್ಯಗಳು, ಮಕ್ಕಳ ರಂಗತರಬೇತಿ, ಜಾನಪದ ಕಲೆಗಳು. . . ಹೀಗೆ ಹಲವು ಆಯಾಮಗಳಲ್ಲಿ ವಿವಿಧ ಕಲಾ ಚಟುವಟಿಕೆಗಳ ಮೂಲಕ ಸಾವಿರಾರು ಮಕ್ಕಳನ್ನು ನೃತ್ಯಗಾರರನ್ನಾಗಿ, ಸಂಗೀತಗಾರರನ್ನಾಗಿ ಮಾಡಿದೆ. ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪದವಿ ಹೊಂದಿದ ಅನೇಕ ಪ್ರತಿಭಾನ್ವಿತರನ್ನು ಗುರುತಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿದೆ. ಜತೆಗೆ ಮಕ್ಕಳ ಹೆಚ್ಚಿನ ಕಲಿಕೆಗೆ ಒತ್ತು ನೀಡುವ ಸಲುವಾಗಿ ಹಲವಾರು ಕಲಾ ಶಿಬಿರಗಳು, ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳು, ಸಂವಾದ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಾ ಬಂದಿದೆ. ಹಲವು ನೃತ್ಯ, ಸಂಗೀತ, ನಾಟಕ, ಉತ್ಸವಗಳನ್ನು ಹಮ್ಮಿಕೊಂಡು ನಾಡಿನಾದ್ಯಂತ ನೂರಾರು ಕಲಾವಿದರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆ ಮೂಲಕ ಆಯಾಮ ಅಕಾಡೆಮಿಯು ಕಲೆಯ ಜೊತೆಗೆ ಮೌಲ್ಯಾ ಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ.
೩೫ ವರ್ಷಗಳಿಂದ ಭರತನಾಟ್ಯ ಸೇವೆ
ವಿದುಷಿ ಡಾ. ಎಸ್. ವಿ. ಶಾಂಭವಿ ಸ್ವಾಮಿ ಅವರು ೩೫ ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಶೈಲಿಗೆ ಕಟ್ಟುಬೀಳದೆ ಭರತನ ನಾಟ್ಯಶಾಸ್ತ್ರ ಆಧಾರಿತ ರೀತಿಯಲ್ಲಿ ನೃತ್ಯ ಪಸರಿಸುತ್ತಿದ್ದಾರೆ. ೧೯೯೯ರಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಎಂಬ ಲಲಿತ ಕಲಾ ಶಾಲೆಯನ್ನು ಸ್ಥಾಪಿಸಿದ ಇವರು, ನಗರ ಸೇರಿದಂತೆ ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಂಗೀತ, ನೃತ್ಯ, ನಾಟಕ ಕಲೆಗಳ ತರಬೇತಿ ನೀಡುತ್ತಾ, ಅವರ ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಜತೆಗೆ ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಸಂಗೀತ ಮತ್ತು ನೃತ್ಯ ಶಾಲೆಗಳನ್ನು ಆರಂಭಿಸಿದ್ದಾರೆ. ಈ ಎಲ್ಲ ಕಡೆ ಆರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ ಗಣನೀಯವಾಗಿ ಹೆಚ್ಚಾಗಿದೆ.
ವಾರಪೂರ್ತಿ ತರಬೇತಿ
ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಮೈಸೂರಿನ ಬೋಗಾದಿಯ ೨ನೇ ಹಂತದಲ್ಲಿದ್ದು, ಅಲ್ಲಿ ವಾರಪೂರ್ತಿ ತರಬೇತಿ ತರಗತಿಗಳು ನಡೆಯುತ್ತವೆ. ಡಾ. ಎಸ್. ವಿ. ಶಾಂಭವಿ ಸ್ವಾಮಿ ಅವರು ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ, ರಂಗಗೀತೆ ಹಾಗೂ ಮಕ್ಕಳ ನಾಟಕಗಳನ್ನು ಹೇಳಿಕೊಡುತ್ತಿದ್ದಾರೆ. ಪ್ರತಿದಿನ ಮಕ್ಕಳ ನಾಟಕ ತರಗತಿ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ, ಭರತನಾಟ್ಯ, ರಂಗ ಗೀತೆಯ ತರಗತಿಗಳು ನಡೆಯುತ್ತವೆ. ಸಂಗೀತ, ನೃತ್ಯ ತರಗತಿಗಳಿಗೆ ತಲಾ ೬೦ ವಿದ್ಯಾರ್ಥಿಗಳು ಹಾಗೂ ನಾಟಕ ಕಲಿಯಲು ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
ಶಾಂಭವಿ ಸ್ವಾಮಿ ನಡೆದು ಬಂದ ಹಾದಿ
ಕಳೆದ ೧೫ ವರ್ಷಗಳಿಂದಲೂ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗದಲ್ಲಿ ವಿದುಷಿ ಡಾ. ಎಸ್. ವಿ. ಶಾಂಭವಿ ಸ್ವಾಮಿ ಅವರು ಸಹಾಯಕ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಲ್ಲಿ ಶ್ರೀರಂಗಪಟ್ಟಣದ ಪರಿಮಳಾ ಐಯ್ಯರ್ ಬಳಿ ನೃತ್ಯ ಕಲಿತ ಇವರು, ಬಳಿಕ ಮಣಿ ಐಯ್ಯರ್, ಪ್ರಕಾಶ್ ಐಯ್ಯರ್ ಬಳಿಯೂ ತರಬೇತಿ ಪಡೆದಿದ್ದಾರೆ. ಪಿಯುಸಿ ವೇಳೆ ಡಾ. ಶೀಲಾ ಶ್ರೀಧರ್ ಬಳಿ ತರಬೇತಿ ಪಡೆದ ಇವರು, ನಂತರ ಡಾ. ಕುಮಾರ್ ಬಳಿ ತರಬೇತಿ ಪಡೆದು ರಂಗಪ್ರವೇಶ ಮಾಡಿದರು. ಬೆಂಗಳೂರು ವಿವಿಯ ನೃತ್ಯ ವಿಭಾಗದಲ್ಲಿ ಎಂಎ ಪದವಿ ಪಡೆದಿದ್ದಾರೆ. ಡಾ. ಶೀಲಾ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ‘ಸಂಸ್ಕೃತ ನಾಟಕಗಳಲ್ಲಿ ನೃತ್ಯಾಂಶಗಳು’ ವಿಷಯದಲ್ಲಿ ಪಿಎಚ್. ಡಿ. ಮಾಡಿ, ಮೈಸೂರು ವಿವಿಯ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗದಲ್ಲಿ ಡಾಕ್ಟರೇಟ್ ಪಡೆದ ಮೊದಲಿಗರೆನಿಸಿಕೊಂಡಿದ್ದಾರೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…
ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…