ಸುತ್ತೂರು ನಂಜುಂಡ ನಾಯಕ
ವರುಣ ಕ್ಷೇತ್ರಕ್ಕೆ ಸೇರಿರುವ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಹದಿನಾರು ಕೆರೆ ಈಗ ವಿದೇಶಿ ಹಕ್ಕಿಗಳಿಂದ ತುಂಬಿಹೋಗಿದ್ದು, ಪಕ್ಷಿ ಪ್ರಿಯರು, ಪರಿಸರ ಪ್ರಿಯರು ಹಾಗೂ ಛಾಯಾಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಹದಿನಾರು ಕೆರೆಯು ವಿಸ್ತಾರದಲ್ಲಿ ದೊಡ್ಡದಾಗಿದ್ದು, ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಈ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿರುವುದರಿಂದ ಪ್ರತಿ ವರ್ಷ ದೇಶ ವಿದೇಶಗಳಿಂದ ಹಲವು ಬಗೆಯ ಪಕ್ಷಿಗಳು ಆಹಾರ ಅರಸುತ್ತಾ ಹಾಗೂ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ವಲಸೆ ಬರುತ್ತವೆ.
ಪರ್ವತ ಪಕ್ಷಿಗಳ ನೆಚ್ಚಿನ ತಾಣ ಹದಿನಾರು: ಹದಿನಾರು ಕೆರೆಗೆ ಪ್ರತಿ ವರ್ಷ ನವೆಂಬರ್ ಅಂತ್ಯದಿಂದ ಮಾರ್ಚ್ ತಿಂಗಳವರೆಗೆ ಸಾವಿರಾರು ಸಂಖ್ಯೆಯಲ್ಲಿ ಬಾರ್ ಹೆಡೆಡ್ ಗೀಸ್ (ಪಟ್ಟೆತಲೆ ಹೆಬ್ಬಾತು)ಗಳು ಬರುತ್ತವೆ. ಮಧ್ಯ ಏಷ್ಯಾ, ಮಂಗೋಲಿಯಾದಿಂದ ಭಾರತಕ್ಕೆ ವಲಸೆ ಬರುವ ಈ ಹಕ್ಕಿಗಳು ೩೦ ಸಾವಿರ ಅಡಿಗಳಿಗೂ ಎತ್ತರದಲ್ಲಿ ಹಾರುತ್ತಾ ಹಿಮಾಲಯ ಪರ್ವತವನ್ನು ದಾಟಿ ಭಾರತಕ್ಕೆ ಬರುವುದರಿಂದ ಈ ಪಕ್ಷಿಗಳನ್ನು ಸ್ಥಳೀಯವಾಗಿ ‘ಪರ್ವತ ಹಕ್ಕಿಗಳು’ ಎಂದೂ ಕರೆಯುತ್ತಾರೆ. ಈ ಹಕ್ಕಿಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಹದಿನಾರು ಕೆರೆಗೆ ಬಂದು ಹೋಗುತ್ತವೆ. ಪ್ರಮುಖವಾಗಿ ಕರ್ನಾಟಕದ ಮಾಗಡಿ ಕೆರೆ, ಹದಿನಾರು ಕೆರೆ ಹಾಗೂ ಕಬಿನಿ ಹಿನ್ನೀರಿನಲ್ಲಿ ಈ ಹಕ್ಕಿಗಳನ್ನು ಕಾಣಬಹುದು. ಶುದ್ಧ ಸಸ್ಯಾಹಾರಿಯಾಗಿರುವ ಈ ಹಕ್ಕಿಗಳು ಜಮೀನಿನಲ್ಲಿ ಸಿಗುವ ಭತ್ತದ ಚಿಗುರು, ಹುಲ್ಲಿನ ಚಿಗುರು, ಕಾಳುಗಳನ್ನು ಆಹಾರವಾಗಿ ಸೇವಿಸುತ್ತವೆ.
ನಿಶಾಚಾರಿಯಾಗಿರುವ ಇವು, ರಾತ್ರಿ ವೇಳೆ ಆಹಾರಕ್ಕಾಗಿ ಜಮೀನುಗಳಲ್ಲಿ ಅಲೆದಾಡಿ ಬೆಳಗಾಗುತ್ತಿದ್ದಂತೆ ನೀರಿನಲ್ಲಿ ತೇಲುತ್ತಾ ವಿಶ್ರಾಂತಿ ಪಡೆಯುತ್ತವೆ. ಇವುಗಳಷ್ಟೇ ಅಲ್ಲದೆ ಹದಿನಾರು ಕೆರೆಗೆ ದೂರದ ಯೂರೋಪ್, ಬಲೂಚಿಸ್ತಾನ್, ಟಿಬೆಟ್, ಮಂಗೋಲಿಯಾ, ಜರ್ಮನಿ ಹಾಗೂ ಮಧ್ಯ ಏಷ್ಯಾದ ಅನೇಕ ಪ್ರದೇಶಗಳಿಂದ ವಿವಿಧ ಪ್ರಭೇದಗಳ ಪಕ್ಷಿಗಳು ವಲಸೆ ಬರುತ್ತವೆ. ಸದ್ಯ ಈ ಹಕ್ಕಿಗಳ ಕಲರವ ಕಂಡು ಜನರು ಪುಳಕಿತರಾಗಿದ್ದು, ರಸ್ತೆಯಲ್ಲಿ ಸಂಚರಿಸುವವರು, ವನ್ಯಜೀವಿ ಛಾಯಾಗ್ರಾಹಕರು ಸಂತೋಷಗೊಂಡಿದ್ದಾರೆ.
ವಿಶೇಷವೆಂದರೆ, ಹದಿನಾರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಟಿ.ರಂಗಸ್ವಾಮಿ ಹಾಗೂ ಹಿರಿಯ ಶಿಕ್ಷಕಿ ತೆರೇಸಾರವರು ಶಾಲೆಯ ವಿದ್ಯಾರ್ಥಿಗಳನ್ನು ಆಗಾಗ್ಗೆ ಈ ಕೆರೆಗೆ ಕಿರು ಪ್ರವಾಸ ಕರೆದುಕೊಂಡು ಬಂದು, ವಿದೇಶಿ ಹಕ್ಕಿಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ವಿದೇಶದಿಂದ ಆಗಮಿಸುವ ಎಲ್ಲ ಹಕ್ಕಿಗಳ ಚಿತ್ರಗಳನ್ನು ಸೆರೆಹಿಡಿದು ಮಕ್ಕಳಿಗೆ ತೋರಿಸುವ ಮೂಲಕ, ಪರಿಸರ ಸಂರಕ್ಷಣೆ, ಹಕ್ಕಿಗಳ ಸಂರಕ್ಷಣೆಯ ಮಹತ್ವ, ಅವುಗಳ ಜೀವನ ಶೈಲಿಯ ಪರಿಚಯ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಶಾಲೆಯ ಒಂದು ಕೊಠಡಿಯಲ್ಲಿ ಪಕ್ಷಿಗಳ ಚಿತ್ರಗಳನ್ನು ಅಂಟಿಸಿ ಅವುಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಪಕ್ಷಿಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಪಠ್ಯಗಳ ಜತೆ ಇಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಉತ್ಸಾಹ ತುಂಬುತ್ತಿದ್ದು, ಪರಿಸರ ಕಾಳಜಿಯನ್ನು ಮೂಡಿಸುತ್ತಿವೆ. ಯಾವುದೇ ಕೆರೆಯಾಗಲಿ, ಅಲ್ಲಿನ ಜೀವ ಸಂಕುಲವನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹದಿನಾರು ಗ್ರಾಮದಲ್ಲಿಯೂ ಜನರು ಅದನ್ನೇ ಪಾಲಿಸುತ್ತಿದ್ದಾರೆ. ವಿದೇಶಿ ಹಕ್ಕಿಗಳ ತವರೂರಾಗಿರುವ ಹದಿನಾರು ಕೆರೆಯಲ್ಲಿ ಹಕ್ಕಿಗಳ ರಕ್ಷಣೆಯ ಜವಾಬ್ದಾರಿಯನ್ನು ಈ ಊರಿನ ಕೆಲ ಯುವಕರು ಹಾಗೂ ಗ್ರಾಮಸ್ಥರು ಹೊತ್ತಿದ್ದಾರೆ. ವಿದೇಶದಿಂದ ಆಗಮಿಸುವ ಹಕ್ಕಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು, ಅವುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಜವಾಬ್ದಾರಿತವಾಗಿ ಅವುಗಳನ್ನು ಬೀಳ್ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿಯೇ ಇಂದಿಗೂ ಹದಿನಾರು ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ ಹೆಚ್ಚಾಗಿದ್ದು, ವಿದೇಶಿ ಹಕ್ಕಿಗಳೊಡನೆ ಬಣ್ಣ ಬಣ್ಣದ ಸ್ಥಳೀಯ ಹಕ್ಕಿಗಳು ಆಶ್ರಯಪಡೆದಿವೆ.
ಸರ್ಕಾರ ಕೆರೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ವಿದೇಶದಿಂದ ಹಕ್ಕಿಗಳು ವಲಸೆ ಬರುವ ಕೆರೆಗಳನ್ನು ಗುರುತಿಸಿ ಅಲ್ಲಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅವು ಬಂದು ಹೋಗುವವರೆಗೂ ಅವುಗಳಿಗೆ ಯಾವುದೇ ತೊಂದರೆಯಾಗದಂತೆ, ನೋಡಿಕೊಂಡು ಅವುಗಳನ್ನು ಬೀಳ್ಕೊಡುವುದು ಸರ್ಕಾರದೊಂದಿಗೆ ನಮ್ಮೆಲ್ಲರ ಜವಾಬ್ದಾರಿಯೂ ಆಗಿರಬೇಕು.
” ನಮ್ಮ ಹದಿನಾರು ಕೆರೆಗೆ ಆಗಮಿಸುವ ಹಕ್ಕಿಗಳನ್ನು ರಕ್ಷಣೆ ಮಾಡುವುದು, ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಪರಿಸರ, ಪ್ರಾಣಿ-ಪಕ್ಷಿಗಳ ರಕ್ಷಣೆಯಾದರೆ ಮಾತ್ರ ನಾವೆಲ್ಲ ಬದುಕಲು ಸಾಧ್ಯ.”
-ಗೌಲದ ಅಕ್ಕಿ ಶಿವಣ್ಣ, ಹದಿನಾರು ಮೋಳೆ ಗ್ರಾಮ.
ಮಧುಕರ ಮಳವಳ್ಳಿ ಅಂಬೇಡ್ಕರ್ ಪರಿಚಯ ಆಗಿದ್ದು, ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಕನ್ನಡದ ಮೇಷ್ಟ್ರು ನಾವು ತರಲೆ ಮಾಡುವಾಗ ನೀವು ಹಿಂಗೆ…
ಉಷಾ ಆಂಬ್ರೋಸ್ ಆ ಕಾಲದ ಕಂದಾಚಾರಗಳು, ಧಾರ್ಮಿಕ ಅಸಮಾನತೆಗಳು, ಬಹಿಷ್ಕಾರ, ಅನ್ಯಾಯಗಳನ್ನು ಕುರಿತು ಪ್ರಶ್ನಿಸಿದ್ದಕ್ಕಾಗಿ ಅಂದಿನ ವ್ಯವಸ್ಥೆ ಏಸುಕ್ರಿಸ್ತನನ್ನು ಮರಣದಂಡನೆಗೆ…
ಶೇಷಾದ್ರಿ ಗಂಜೂರು ಇಂತಹ ಮಿತಿ ಮೀರಿದ ಹುಚ್ಚಾಟಗಳಿಂದ ಹಿರಿಯಣ್ಣನ ಮೇಲೆ ವಿಶ್ವಕ್ಕಿರುವ ಭರವಸೆ ಕುಸಿಯುತ್ತಿದೆ. ಅಮೆರಿಕನ್ ಸರ್ಕಾರದ ಬಾಂಡ್‌ಗಳ ಮೇಲೆ,…
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವುದಕ್ಕೆ ಪ್ರತೀಕಾರವಾಗಿ ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಇದ್ದ…
ಮೈಸೂರಿನ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ೧೭ನೇ ಮುಖ್ಯರಸ್ತೆಯಲ್ಲಿರುವ ಜೆ.ಪಿ.ನಗರ ೩ನೇ ಹಂತ, ೮ನೇ ಕ್ರಾಸ್ ಎಂಬ ಮಾರ್ಗಸೂಚಿ…
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ…