ಆಂದೋಲನ ಪುರವಣಿ

ಬುದ್ಧನ ನಾಡಲ್ಲಿ ನೆಮ್ಮದಿಯ ಅರಸುತ್ತಾ…

 ಲುಂಬಿನಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಭೂಮಿಯಿಂದ ಆಕಾಶದಗಲಕ್ಕೂ ಆತನೇ ವ್ಯಾಪಿಸಿರುವಂತೆ ಭಾಸವಾಗುತ್ತಿತ್ತು. ಬೃಹದಾಕಾರದ ಈ ದೇವಾಲಯಗಳು, ಅವುಗಳ ಒಳಗೆ ಗೌತಮ ಬುದ್ಧನ ವಿಗ್ರಹಗಳು ಆಯಾ ದೇಶಗಳಲ್ಲಿ ಅನುಸರಿಸುವ ಬೌದ್ಧ ಧರ್ಮದ ರೀತಿಯನ್ನು ಪ್ರತಿನಿಧಿಸುತ್ತಿದ್ದವು. ಎಲ್ಲ ಬೌದ್ಧ ದೇವಾಲಯಗಳ ವಾಸ್ತುಶಿಲ್ಪ, ಒಳಗಿರುವ ಮೂರ್ತಿ, ಪ್ರಾರ್ಥಿಸುವ ವಿಧಾನ ಎಲ್ಲವೂ ಬೇರೆ ಬೇರೆ. ಅವುಗಳಲ್ಲಿನ ಬುದ್ಧನ ವಿಗ್ರಹಗಳ ಬಾಹ್ಯ ಸ್ವರೂಪವೂ ಬೇರೆ ಬೇರೆ. ಆದರೆ ಅವೆಲ್ಲದರಿಂದ ಹೊರಸೂಸುತ್ತಿದ್ದ ಮಂದಹಾಸ ಮಾತ್ರ ಒಂದೇ. ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ಮಂದಹಾಸ ಅದು!  

ರಶ್ಮಿ ಕೋಟಿ rashmikoti@andolana.in

‘‘ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ…..’’
ವರಕವಿ ದ.ರಾ. ಬೇಂದ್ರೆಯವರ ‘‘ಬುದ್ಧ’’ ಕವಿತೆಯ ಸಾಲುಗಳನ್ನು ಓದುತ್ತಿದ್ದರೆ, ಸಿದ್ಧಾರ್ಥನು ಬುದ್ಧನಾಗುವ ಕಡೆಗಿನ ಪಯಣದ ಚಿತ್ರಣ ಕಣ್ಣ ನಮ್ಮ ಮುಂದೆ ಕಟ್ಟಿದಂತಾಗುತ್ತದೆ. ಅರಮನೆಯ ಮೋಹ, ಬಂಧನಗಳಿಂದ ಬಿಡಿಸಿಕೊಂಡು ಶಾಂತಿಯ ಸೆಳೆತಕ್ಕೆ ಸಿಕ್ಕಿ ಹೊರಟ ಸಾಹಸಿಯ ಸಾಧನೆಯ ಮಾರ್ಗವನ್ನು ನೆನೆದರೇ ರೋಮಾಂಚನವನ್ನು ಮೂಡಿಸುತ್ತದೆ. ಗೌತಮ ಬುದ್ಧನು ಜನಿಸಿದ ಸ್ಥಳವಾದ ಲುಂಬಿನಿಗೆ ಭೇಟಿ ನೀಡಬೇಕೆಂಬುದು ನನ್ನ ಬಹುದಿನಗಳ ಕನಸು. ಅದಕ್ಕೆ ಸರಿಯಾಗಿ ನನ್ನ ಸ್ನೇಹಿತೆ ನೇಪಾಳ ಪ್ರವಾಸಕ್ಕೆ ಹೋಗೋಣವೆಂದಾಗ ತಕ್ಷಣವೇ ನನ್ನ ಒಪ್ಪಿಗೆಯನ್ನು ಸೂಚಿಸಿದೆ. ಇಬ್ಬರೂ ನೇಪಾಳ ಪ್ರವಾಸವನ್ನು ಕೈಗೊಳ್ಳಲು ಸಜ್ಜಾದೆವು. ನೇಪಾಳಕ್ಕೆ ಭಾರತೀಯರು ಪ್ರವೇಶಿಸಲು ಇತರೆ ದೇಶಗಳಲ್ಲಿರುವಂತೆ ಪಾಸ್ ಪೋರ್ಟ್ ಕಡ್ಡಾಯವಾಗಿ ಬೇಕೇ ಬೇಕು ಅಂತೇನಿಲ್ಲ. ಭಾರತೀಯ ಪ್ರಜೆ ಎಂದು ರುಜುವಾತುಪಡಿಸಲು ಬೇಕಾದ ಮತದಾರರ ಗುರುತಿನ ಚೀಟಿ, ಆಧಾರ್, ಚಾಲನಾ ಪರವಾನಿಗೆಗಳಿದ್ದರೂ ಸಾಕು. ಹಾಗಾಗಿ ಪಾಸ್‌ಪೋರ್ಟಿನ ಜಂಜಾಟವಿಲ್ಲದೆ ನೆರೆಯ ಊರಿಗೆ ಹೋಗಿ ಬರುವಷ್ಟು ಸಲೀಸಾಗಿ ಬೆಂಗಳೂರಿನಿಂದ ನೇರವಾಗಿ ಕಾಠ್ಮಂಡುವಿಗೆ ನಾವು ವಿಮಾನದ ಮೂಲಕ ತಲುಪಿದೆವು.

ನಮ್ಮ ಹತ್ತು ದಿನಗಳ ನೇಪಾಳ ಪ್ರವಾಸ ಕಾಠ್ಮಂಡು, ಪೋಖರಾ, ಚಿತ್‌ವನ್ ಹಾಗೂ ಲುಂಬಿನಿ ನಗರಗಳನ್ನೊಳಗೊಂಡಿತ್ತು. ಪ್ರತಿಯೊಂದು ನಗರವೂ ನಮಗೆ ಬೇರೆ ಬೇರೆ ರೀತಿಯ ವಿಶಿಷ್ಟ ಅನುಭವಗಳನ್ನು ನೀಡಿದವು. ನೇಪಾಳಕ್ಕೆ ಬರುವ ಪ್ರವಾಸಿಗರ ಆಸಕ್ತಿಗಳು ಆಧ್ಯಾತ್ಮಿಕವಾಗಿರಲಿ, ಧಾರ್ಮಿಕವಾಗಿರಲಿ ಅಥವಾ ಐತಿಹಾಸಿಕವಾಗಿರಲಿ, ಅಲ್ಲಿಗೆ ಕಾಲಿಡುತ್ತಿದ್ದಂತೆ ಅಲ್ಲಿನ ಬೌದ್ಧ ದೇವಾಲಯಗಳು, ಮಾನೆಸ್ಟರಿಗಳು, ಸ್ತೂಪಗಳು ಹಾಗೂ ಪಗೋಡಗಳ ಸೌಂದರ್ಯದಿಂದ ಸಮ್ಮೋಹಗೊಳ್ಳದೆ ಇರಲು ಸಾಧ್ಯವೇ ಇಲ್ಲ.

ನಮ್ಮ ನೇಪಾಳ ಪಯಣದ ಕಡೆಯ ಗುರಿ ಲುಂಬಿನಿಯಾಗಿತ್ತು. ಅದಾಗಲೇ ನಾವು ನೇಪಾಳಕ್ಕೆ ಬಂದಿಳಿದು 6 ದಿನಗಳಾಗಿದ್ದವು. ಅಷ್ಟರಲ್ಲಿ ನಾವು ನೇಪಾಳದ ರಾಜಧಾನಿ ಕಾಠ್ಮಂಡುವಿನ ದೇವಾಲಯಗಳನ್ನು, ಹಿಮಚ್ಛಾದಿತ ಅನ್ನಪೂರ್ಣ ಪರ್ವತ ಶ್ರೇಣಿಯ ಸೌಂದರ್ಯವನ್ನು ಅನುಭವಿಸಿ, ಪೋಖರಾ ನಗರದ ಮೈ ನವಿರೇಳಿಸುವ ಸಾಹಸ ಕ್ರೀಡೆಗಳನ್ನು, ಬೆಟ್ಟದ ಮೇಲೆ ನಿಂತು ಸೂರ್ಯನು ಒಮ್ಮೆಲೇ ಕೇಸರಿ ಬಣ್ಣದಿಂದ ಕಂಗೊಳಿಸುವ ಸೂರ್ಯೋದಯದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು, ಶ್ರೀಮಂತ ಸಸ್ಯ ಹಾಗೂ ಪ್ರಾಣಿ ಸಂಪತ್ತಿನಿಂದ ಕೂಡಿರುವ ರಾಷ್ಟ್ರೀಯ ಉದ್ಯಾನವನ ಚಿತ್‌ವನ್‌ದ ರೋವಾಂಚನಕಾರಿ ಅನುಭವಗಳನ್ನು ಪಡೆದು ಕಡೆಗೆ ಲುಂಬಿನಿಯತ್ತ ನಮ್ಮ ಪ್ರಯಾಣವನ್ನು ಬೆಳೆಸಿದೆವು. ಭಾರತ, ನೇಪಾಳದಿಂದ ಇಂಡೋನೇಷಿಯಾವರೆಗೆ, ಥೈಲ್ಯಾಂಡ್‌ನಿಂದ ದಕ್ಷಿಣ ಕೊರಿಯಾವರೆಗೆ, ಟಿಬೆಟ್‌ನಿಂದ ಜಪಾನ್‌ವರೆಗೆ… ಹೀಗೆ ಏಷ್ಯಾ ಖಂಡದಲ್ಲಿ ಬೌದ್ಧ ಮಂದಿರಗಳಿಗೆ ಕೊರತೆಯೇ ಇಲ್ಲ. ಆದರೆ ಯಾವ ಸ್ಥಳವೂ ಕೂಡ ನೇಪಾಳದ ಲುಂಬಿನಿಯಷ್ಟು ಸಾಂಕೇತಿಕ ಹಾಗೂ ಚಾರಿತ್ರಿಕ ಮಹತ್ವವನ್ನು ಹೊಂದಿಲ್ಲ. ಏಕೆಂದರೆ, ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರಿಶ್ಚಿಯನ್ನರಿಗೆ ಜೆರುಸಲೇಮ್ ಹೇಗೋ ಹಾಗೆಯೇ ಪ್ರಪಂಚದಾದ್ಯಂತ ಹರಡಿರುವ ಬೌದ್ಧ ಧರ್ಮೀಯರಿಗೆ ಲುಂಬಿನಿಯಾಗಿದೆ. ಇದು ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣವಾಗಿದ್ದು, ಪ್ರಪಂಚದಾದ್ಯಂತದಿಂದ ಪ್ರವಾಸಿಗರನ್ನು ಹಲವಾರು ಕಾರಣಗಳಿಗೆ ಆಕರ್ಷಿಸುತ್ತದೆ. ಪ್ರಮುಖ ಬೌದ್ಧ ಯಾತ್ರಾ ಸ್ಥಳವೆಂಬ ಕಾರಣದಿಂದ, ಆಂತರಿಕ ಶಾಂತಿಗಾಗಿ, ಪವಿತ್ರ ತೀರ್ಥ ಕ್ಷೇತ್ರದ ದರ್ಶನಕ್ಕಾಗಿ, ಯುನೆಸ್ಕೋದ ಹೆಸರಾಂತ ತಾಣವೆಂಬ ಕಾರಣಕ್ಕೆ ಅಥವಾ ಈ ಸ್ಥಳದ ವಾಸ್ತುಶಿಲ್ಪದ ವೈಶಿಷ್ಟ್ಯದ ಕಾರಣಕ್ಕೆ ಜಗತ್ತಿನ ಜನರನ್ನು ತನ್ನತ್ತ ಸೆಳೆಯುತ್ತಿದೆ. ನಮ್ಮನ್ನು ಆಕರ್ಷಿಸಿದ್ದು ಈ ಸ್ಥಳ ಆಧ್ಯಾತ್ಮ ಜನ್ಮವೆತ್ತ ಸ್ಥಳವೆಂಬ ಕಾರಣವಾಗಿತ್ತು.

ಲುಂಬಿನಿಯ ನೇಪಾಳವನ್ನು ಪ್ರಪಂಚದ ನಕ್ಷೆಯಲ್ಲಿ ಪ್ರಮುಖ ಪ್ರವಾಸಿ ಸ್ಥಾನವನ್ನಾಗಿಸಿದೆ. ಇಲ್ಲಿಗೆ ಭೇಟಿ ನೀಡಬೇಕೆಂದರೆ ರಸ್ತೆ ಮಾರ್ಗವೊಂದೇ ಸದ್ಯಕ್ಕಿರುವ ದಾರಿ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಿರ್ವಾಣದ ಹಂತದಲ್ಲಿದ್ದು, ಅತಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಹಾಗಾಗಿ ನಾವು ಕಾಠ್ಮಂಡುವಿನಿಂದ ಲುಂಬಿನಿವರೆಗೆ ರಸ್ತೆ ಮಾರ್ಗವಾಗಿ ಹೋಗಬೇಕಾಯಿತು. ಅದು ರಾಷ್ಟ್ರೀಯ ಹೆದ್ದಾರಿಯಾದರೂ ಕೂಡ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಗಳಲ್ಲಿ ಪ್ರಯಾಣಿಸುವುದು ಯಮಯಾತನೆಯಾಗಿತ್ತು. ಅದರೊಂದಿಗೆ ಭೂ ಕುಸಿತದ ಆತಂಕ, ಒಂದೆಡೆ ಬೆಟ್ಟಗುಡ್ಡಗಳ ಕುಸಿತದಿಂದ ರಸ್ತೆಯನ್ನು ಸಂಚಾರಕ್ಕೆ ಮುಕ್ತವಾಗಿಸುವವರೆಗೆ ವಾಹನಗಳ ದಟ್ಟಣೆಯ ನಡುವೆ ಸಿಲುಕಿ ಪರದಾಡಿದ ಅನುಭವ, ಬಿಸಿಲಿನ ಝಳ, ಇನ್ನೇನು ಲುಂಬಿನಿಯನ್ನು ತಲುಪಬೇಕೆನ್ನುವಷ್ಟರಲ್ಲಿ ನಮ್ಮ ವಾಹನ ಕೆಟ್ಟು ಹೋಗಿ ಅದು ರಿಪೇರಿಯಾಗುವವರೆಗೂ ಗಂಟೆಗಟ್ಟಲೆ ಕಾದುಕುಳಿತ ಅನಿವಾರ್ಯತೆ ಇವೆಲ್ಲವೂ ಲುಂಬಿನಿಯ ನಮ್ಮ ಪ್ರಯಾಣವನ್ನು ಹೈರಾಣಾಗಿಸಿತ್ತು. ಆದರೂ ಸುತ್ತಲೂ ಆವರಿಸಿದ್ದ ಬೆಟ್ಟದ ಸಾಲುಗಳು, ಅವುಗಳ ಮಧ್ಯದಲ್ಲಿ ಚಲಿಸುವ ಮೋಡಗಳು, ಬೆಟ್ಟದ ಮೇಲಿಂದ ಹರಿವ ನದಿ, ತೊರೆ, ಝರಿಗಳು, ತಂಪಾದ, ಆಹ್ಲಾದಕರವಾದ ತಂಗಾಳಿ ನಮ್ಮ ಪ್ರಯಾಣದ ಆಯಾಸವನ್ನು ಮರೆಸಿತ್ತು. ಕಾಠ್ಮಂಡುವಿನ ದಟ್ಟಣೆಯ ವಾಹನಗಳ ಸಂಚಾರದಿಂದ ತುಂಬಿದ ರಸ್ತೆಯಿಂದ ಮುಕ್ತಿಯನ್ನು ಪಡೆದು ಲುಂಬಿನಿಯನ್ನು ತಲುಪುವುದರೊಳಗೆ ಸಂಜೆಯಾಗಿತ್ತು. ಹಾಗಾಗಿ ಸೂರ್ಯೋದಯವಾಗುತ್ತಿದ್ದಂತೆಯೇ ಲುಂಬಿನಿ ವನಕ್ಕೆ ಹೋಗಬೇಕೆಂದು ತೀರ್ಮಾನಿಸಿದೆವು.

ಬೆಳಗಿನ ಉಪಾಹಾರವನ್ನು ಸೇವಿಸಿ ಲುಂಬಿನಿ ವನಕ್ಕೆ ಹೊರಟೆವು. ಈ ಸ್ಥಳವು 4.5 ಕಿ.ಮೀ. ವಿಸ್ತಾರದಲ್ಲಿ ಹರಡಿದ್ದು, ಒಳಗೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲದಿದ್ದರೂ, ಆಟೋರಿಕ್ಷಾಗಳು ಹಾಗೂ ಸೈಕಲ್ ರಿಕ್ಷಾಗಳ ಅನುಕೂಲವನ್ನು ಪ್ರವಾಸಿಗರಿಗೆ ಒದಗಿಸಲಾಗಿದೆ. ಆದರೆ ನಾವಿಬ್ಬರೂ ಕಾಲ್ನಡಿಗೆಯಲ್ಲೇ ಲುಂಬಿನಿ ವನವನ್ನು ಅನುಭವಿಸಬೇಕೆಂದು ತೀರ್ಮಾನಿಸಿದೆವು. ಲುಂಬಿನಿಯ ದ್ವಾರವನ್ನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿನ ಪ್ರಶಾಂತ ವಾತಾವರಣ ನಮ್ಮಿಬ್ಬರನ್ನೂ ಮೌನಕ್ಕೆ ಶರಣಾಗಿಸಿತ್ತು. ಮನಸ್ಸು ಆಶ್ಚರ್ಯದಿಂದ ಪುಳಕಿತಗೊಂಡಿತ್ತು. ಅಡಿಗಡಿಗೂ ಮುದನೀಡುತ್ತಿದ್ದ ಹಕ್ಕಿಗಳ ಚಿಲಿಪಿಲಿ, ಅವುಗಳ ಕಲರವಕ್ಕೆ ಹಿಮ್ಮೇಳವಾಗಿ ಸುಯ್ಗುಡುತ್ತಿದ್ದ ತಂಗಾಳಿ ನಮಗೆ ಆಧ್ಯಾತ್ಮಿಕದೆಡೆಗೆ ಹೆಜ್ಜೆ ಹಾಕುತ್ತಿರುವಂತೆ ಭಾಸವಾಯಿತು.

ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲಿಯೇ ಬುದ್ಧನ ಪಂಚಶೀಲ ತತ್ವಗಳನ್ನೊಳಗೊಂಡ ಕಲ್ಲಿನ ಶಿಲೆಯೊಂದನ್ನು ಸ್ಥಾಪಿಸಲಾಗಿದೆ. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆಯೇ ಮಾಯಾದೇವಿ ದೇಗುಲ ಕಂಡಿತು. ಲುಂಬಿನಿಯ ಕೇಂದ್ರ ಬಿಂದು ಮಾಯಾದೇವಿ ದೇವಾಲಯವಾಗಿದ್ದು, ಅದು ಅನೇಕ ಪಳೆಯುಳಿಕೆಗಳಿಂದ ಆವರಿಸಲ್ಪಟ್ಟಿದೆ. ಬಿಳಿಯ ಬಣ್ಣ ಹಾಗೂ ಸರಳ ವಾಸ್ತುಶಿಲ್ಪದಿಂದ ಕೂಡಿರುವ ಮಾಯಾದೇವಿ ದೇವಾಲಯವನ್ನು ಗೌತಮ ಬುದ್ಧನ ತಾಯಿಯಿಂದ ಮಾಯಾದೇವಿಯ ನೆನಪಿಗಾಗಿ ನಿರ್ಮಿಸಲಾಗಿದೆ. ಹಲವಾರು ರೀತಿಯಲ್ಲಿ ಬೌದ್ಧ ಧರ್ಮ ಪ್ರಾರಂಭವಾಗುವುದೇ ಈ ಸ್ಥಳದಲ್ಲಿ, ಹುಣ್ಣಿಮೆಯ ದಿನದಂದು 2600ವರ್ಷಗಳ ಹಿಂದೆ. ಇಲ್ಲಿಯೇ ತುಂಬು ಬಸುರಿಯಾದ ಮಾಯಾದೇವಿಯು ತನ್ನ ತವರು ಮನೆಗೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಪ್ರಸವ ವೇದನೆ ಕಾಣಿಸಿಕೊಂಡು ಮಗುವಿಗೆ ಜನ್ಮವಿತ್ತಳೆಂದು ಹೇಳಲಾಗುತ್ತದೆ. ಈ ಪ್ರದೇಶ ಕ್ರಿ.ಪೂ.ದಲ್ಲಿ ಭವ್ಯವಾದ ದೇವಾಲಯ ಮತ್ತು ಸುತ್ತಮುತ್ತ ಭವ್ಯ ಕಟ್ಟಡಗಳ ಒಂದು ಸಂಕೀರ್ಣವಾಗಿ ರೂಪುಗೊಂಡಿತ್ತಂತೆ. ಇಂದು ಗತವೈಭವದ ಪಳೆಯುಳಿಕೆಗಳ ನಡುವೆಯೇ ಮಾಯಾದೇವಿಯ ಮಗುವಿಗೆ ಜನ್ಮ ನೀಡಿದ ಜಾಗವನ್ನು ಸಂರಕ್ಷಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಶತನಮಾನಗಳ ಕಾಲ ಈ ತಾಣ ಯಾರ ಗಮನಕ್ಕೂ ಬಂದಿರಲಿಲ್ಲ. 19ನೇ ಶತವಾನದಲ್ಲಿ ಜರ್ಮನಿಯ ಕೆಲವು ಪುರಾತತ್ವ ಶಾಸ್ತ್ರಜ್ಞರಿಗೆ ಲುಂಬಿನಿಯ ಉದ್ಯಾನದಲ್ಲಿ ಕಲ್ಲಿನ ಶಾಸನವೊಂದು ದೊರೆತು, ಅದು ಚಕ್ರವರ್ತಿ ಅಶೋಕನ ಕಾಲದ್ದೆಂದು ಗುರುತಿಸಿದರು.

1997ರಿಂದ ಲುಂಬಿನಿಯ UNESCO ಸಂಸ್ಥೆಯ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿದೆ.
ಮಾಯಾದೇವಿ ದೇವಾಲಯದ ಹತ್ತಿರದಲ್ಲೇ ಬೃಹದಾಕಾರದ ಬೋಧಿ ವೃಕ್ಷವಿದೆ. ಇಲ್ಲಿ ಜಗತ್ತಿನ ನಾನಾ ಭಾಗದ ಬೌದ್ಧ ಭಿಕ್ಷುಗಳು ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ನಿರತರಾಗಿರುವುದು ಕಂಡುಬಂದಿತು. ಆ ಸ್ಥಳದ ಅಗೋಚರವಾದ ಶಕ್ತಿ, ತೇಜಸ್ಸು ನಮ್ಮ ಮನಸ್ಸಿಗೂ ಕೂಡ ನೆಮ್ಮದಿ ನೀಡಿತು. ಅಲ್ಲಿಂದ ಕಣ್ಣಳತೆ ದೂರದಲ್ಲಿಯೇ ತಾವರೆಯ ಕೊಳವಿದ್ದು, ಅದನ್ನು ಪುಷ್ಕರಿಣಿ ಕೊಳ ಎಂದು ಕರೆಯಲಾಗುತ್ತದೆ. ಇಲ್ಲಿ ರಾಣಿ ಮಾಯಾದೇವಿಯ ಮಗುವಿಗೆ ಜನ್ಮ ನೀಡುವ ಮೊದಲು ಮಿಂದುದಾಗಿ ಹೇಳಲಾಗುತ್ತದೆ. ಜೊತೆಗೆ ಮಗುವಿಗೂ ಮೊದಲ ಮಜ್ಜನವನ್ನು ಇದೇ ಕೊಳದಲ್ಲಿ ಮಾಡಿಸಲಾಯಿತೆಂದು ಹೇಳಲಾಗುತ್ತದೆ. ಇಂದು ಈ ಜಾಗದಲ್ಲಿ ಹಲವಾರು ಭಕ್ತರು ತೀರ್ಥ ಸ್ನಾನವನ್ನು ಮಾಡುತ್ತಾರೆ.

ಮಾಯಾದೇವಿ ದೇವಾಲಯದ ಮುಂದೆಯೇ ಅಶೋಕ ಸ್ಥಂಭವಿದ್ದು, ಇದು ಕೆತ್ತನೆಗಳಿಂದ ಕೂಡಿರುವ ಬೃಹದಾಕಾರದ ಸ್ಥಂಭವಾಗಿದೆ. ಅದರ ಮೇಲ್ಭಾಗದಲ್ಲಿ ಇದು ಬುದ್ಧನ ಜನ್ಮ ಸ್ಥಳವೆಂದು ಹಾಗೂ ರಾಜನು ಲುಂಬಿನಿ ಗ್ರಾಮದ ಜನರಿಗೆ ತೆರಿಗೆ ವಿನಾಯಿತಿ ನೀಡಿರುವುದಾಗಿ ತಿಳಿಸುತ್ತದೆ. ಈ ಸ್ಥಳದಲ್ಲಿ ಒಟ್ಟು 19 ಸ್ಥಂಭಗಳಿದ್ದು ಅಶೋಕ ಸ್ಥಂಭ ಎಲ್ಲಕ್ಕಿಂತಲೂ ಪುರಾತನವಾದದ್ದಾಗಿದೆ. ಬೌದ್ಧ ಧರ್ಮದ ಅನುಯಾಯಿಯಾಗಿ ಪರಿವರ್ತನೆಯಾದ ಅಶೋಕ ಚಕ್ರವರ್ತಿಯ ಕ್ರಿ.ಪೂ. 3ರಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬುದ್ಧನ ಜನ್ಮಸ್ಥಳವನ್ನು ಗುರುತಿಸಿ ಇಲ್ಲಿ ಶಿಲಾಸ್ಥಂಭವನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಕೋಟೆಯನ್ನೂ ಕಟ್ಟಿಸಿ, ನಾಲ್ಕು ಸ್ತೂಪಗಳನ್ನು ನಿರ್ಮಿಸಿದ. ಮುಂದೆ ಕ್ರಿ.ಶ.9ನೇ ಶತಮಾನದಲ್ಲಿ ಅನೇಕ ಮಾನೆಸ್ಟರಿಗಳನ್ನು, ಸ್ತೂಪಗಳನ್ನು ದೇವಾಲಯಗಳನ್ನು ನಿರ್ಮಿಸಲಾಯಿತು. ಪ್ರಪಂಚದಾದ್ಯಂತ ಬೌದ್ಧ ಧರ್ಮ ಪ್ರಾಧಾನ್ಯತೆ ಪಡೆದಿರುವ ಹಲವಾರು ದೇಶಗಳು ಈ ವಿಶ್ವ ಪಾರಂಪರಿಕ ತಾಣದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವ ದೇವಾಲಯಗಳನ್ನು ನಿರ್ಮಿಸಿವೆ. ಒಂದು ಕಡೆ ಸಾವಿರಾರು ವರ್ಷಗಳಷ್ಟು ಹಳೆಯದಾದ ಇಟ್ಟಿಗೆ ಸ್ತೂಪಗಳು ಮತ್ತು ಕಟ್ಟಡಗಳ ಅವಶೇಷಗಳಿಂದ ಕೂಡಿದ್ದರೆ, ಮತ್ತೊಂದು ಕಡೆ ಜಪಾನ್, ಚೀನಾ, ಬರ್ಮಾ, ಮಯನ್‌ಮಾರ್, ಕಾಂಬೋಡಿಯಾ, ಕೊರಿಯಾ ಹೀಗೆ ಇತರ ದೇಶಗಳಿಂದ ನಿರ್ಮಿಸಲಾದ ಆಧುನಿಕ ಸ್ತೂಪಗಳು, ಪಗೋಡಗಳು, ದೇವಾಲಯಗಳು ಕಣ್ಣಿಗೆ ಹಬ್ಬದ ಅನುಭವವನ್ನು ನೀಡಿದವು. ಇವುಗಳೊಂದಿಗೆ ಹೊಸದಾಗಿ ನಿರ್ಮಿಸಿರುವ ಕೊಳಗಳು, ಉದ್ಯಾನಗಳು… ಹೀಗೆ ಪ್ರಾಚೀನದೊಂದಿಗೆ ನವೀನ ವಾಸ್ತುಶಿಲ್ಪವನ್ನು ಅಕ್ಕಪಕ್ಕದಲ್ಲಿಯೇ ಕಂಡ ಅನುಭವ ನಮಗಾಯಿತು.

ದೂರದೂರಕ್ಕೆ ನಿರ್ಮಾಣವಾಗಿರುವ ಬೌದ್ಧ ಮಂದಿರಗಳು ಹಾಗೂ ಪಗೋಡಗಳನ್ನು ನೋಡುತ್ತಾ ನಮ್ಮ ಕಾಲುಗಳಿಗೆ ದಣಿವಾಗಿ ಸಾಕೆನಿಸಿದರೂ, ಮನಸ್ಸಿಗೆ ಮಾತ್ರ ದಣಿವಾಗಲಿಲ್ಲ. ದೈನಂದಿನ ಜಂಜಾಟಗಳಿಂದ ಬೇಸತ್ತಿದ್ದ ನಮ್ಮ ಮನಸ್ಸಿಗೆ ಅಲ್ಲಿನ ಶಾಂತ ಪರಿಸರ ನೆಮ್ಮದಿಯ ತಂಪೆರೆಯುತ್ತಿತ್ತು. ಎತ್ತ ಕಣ್ಣು ಹಾಯಿಸಿದರೂ ಭೂಮಿಯಿಂದ ಆಕಾಶದಗಲಕ್ಕೂ ಬುದ್ಧನೇ ವ್ಯಾಪಿಸಿರುವಂತೆ ಭಾಸವಾಗುತ್ತಿತ್ತು. ಬೃಹದಾಕಾರದ ಈ ದೇವಾಲಯಗಳು, ಅವುಗಳ ಒಳಗೆ ಗೌತಮ ಬುದ್ಧನ ವಿಗ್ರಹಗಳು ಆಯಾ ದೇಶಗಳಲ್ಲಿ ಅನುಸರಿಸುವ ಬೌದ್ಧ ಧರ್ಮದ ರೀತಿಯನ್ನು ಪ್ರತಿನಿಧಿಸುತ್ತಿದ್ದವು. ಎಲ್ಲ ಬೌದ್ಧ ದೇವಾಲಯಗಳ ವಾಸ್ತುಶಿಲ್ಪ, ಒಳಗಿರುವ ಮೂರ್ತಿ, ಪ್ರಾರ್ಥಿಸುವ ವಿಧಾನ ಎಲ್ಲವೂ ಬೇರೆ ಬೇರೆ. ಅವುಗಳಲ್ಲಿನ ಬುದ್ಧನ ವಿಗ್ರಹಗಳ ಬಾಹ್ಯ ಸ್ವರೂಪವೂ ಬೇರೆ ಬೇರೆ. ಆದರೆ ಅವೆಲ್ಲದರಿಂದ ಹೊರಸೂಸುತ್ತಿದ್ದ ಮಂದಹಾಸ ಮಾತ್ರ ಒಂದೇ. ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ಮುಗುಳ್ನಗೆ. ಅವೆಲ್ಲವೂ ಪ್ರೀತಿ, ಕರುಣೆ, ಅಹಿಂಸೆ, ಸತ್ಯ, ತ್ಯಾಗದ ಪ್ರತಿರೂಪವೇ ಆಗಿವೆ. ಒಟ್ಟಾರೆಯಾಗಿ ಈ ಸ್ಥಳ ಪ್ರಪಂಚದ ಎಲ್ಲಾ ದೇಶಗಳ ಬೌದ್ಧ ಧರ್ಮದ ಯಾತ್ರೆಯನ್ನು ಮಾಡಿದಂತೆ ನಮಗೆ ಅನುಭವವಾಯಿತು. ಹೀಗೆ ಬೇರೆ ಬೇರೆ ದೇಶಗಳು ಇಲ್ಲಿ ಸ್ತೂಪಗಳನ್ನು ನಿರ್ಮಿಸಿರುವುದನ್ನು ನೋಡಿದರೆ, ಪ್ರಪಂಚದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸಿದ ಬುದ್ಧನ ದೂರದೃಷ್ಟಿಯ ಫಲವೇನೋ ಎಂಬಂತೆ ಕಾಣುತ್ತಿತ್ತು.

ಹತ್ತಾರು ವಿಭಿನ್ನ ಬೌದ್ಧ ಸಂಪ್ರದಾಯಗಳಿಗೆ ಸೇರಿದ ಯಾತ್ರಾರ್ಥಿಗಳು ವರ್ಷವಿಡೀ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸುವುದರಿಂದ ಈ ಸ್ಥಳ ಹಿಂದೂಗಳಿಗೂ ಪವಿತ್ರ ಯಾತ್ರಾ ಸ್ಥಳವಾಗಿದೆ. ಹಾಗಾಗಿ ಪ್ರಪಂಚದ ನಾನಾ ಭಾಗಗಳಿಂದ ಯಾತ್ರಾರ್ಥಿಗಳು ಬಂದಿದ್ದರು. ಇಲ್ಲಿಗೆ ಬಂದವರು ವೃಕ್ಷದಡಿ ಮೌನವಾಗಿ ಧ್ಯಾನದಲ್ಲಿ ಮಗ್ನರಾಗಿ ಮನಶಾಂತಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದುದು ಕಂಡುಬಂತು. ಅದನ್ನು ಕಂಡ ನಮಗೆ ಬುದ್ಧನಿಗೆ ಹುಟ್ಟಿದ ಕ್ಷಣದಿಂದ ಜ್ಞಾನೋದಯವೇನೂ ಆಗಲಿಲ್ಲ. ಅವನು ವಿಲಾಸಿ ಜೀವನವನ್ನು ಅನುಭವಿಸುತ್ತಿದ್ದರೂ, ತಾನು ಕಂಡ ಮನುಷ್ಯನ ನೋವು, ದುಃಖಕ್ಕೆ ಕಾರಣವನ್ನು ಅರಸುತ್ತಾ ಆಸೆಯೇ ದುಃಖಕ್ಕೆ ಮೂಲವೆಂಬುದನ್ನು ಅರಿತ. ತನಗಾದ ಅರಿವನ್ನು ಜಗತ್ತಿಗೇ ಸಾರಲು ಪ್ರಯತ್ನಿಸಿದ. ಅವನಿಗೆ ಹೊರ ಜಗತ್ತಿನ ಸಮಸ್ಯೆಗಳ ಮೂಲ ತಿಳಿದದ್ದು ಹೊರಗಿನಿಂದಲ್ಲ, ಒಳಗಿನಿಂದ. ನಮಗೂ ಕೂಡ ಬುದ್ಧನ ಹಾಗೆಯೇ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಹಲವಾರು ಮಾರ್ಗಗಳಿವೆ ಎಂಬ ಅರಿವು ಜಾಗೃತವಾದಂತಾಯಿತು. ಆ ಮಾರ್ಗವನ್ನು ಕಂಡುಕೊಳ್ಳುವ ತುಡಿತ ನಮ್ಮನ್ನೂ ಕಾಡಿತು.

ಬುದ್ಧನು ಜನಿಸಿದ ಸ್ಥಳವನ್ನು ನೋಡುತ್ತಾ, ಅವನು ಹಾಕಿದ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಹಾಕುತ್ತಾ, ಆಧ್ಯಾತ್ಮಿಕತೆ ಜನ್ಮತಳೆದ ಸ್ಥಳದಲ್ಲಿ ನಡೆದಂತೆಲ್ಲಾ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಈ ಸ್ಥಳಕ್ಕೆ ಪಯಣಿಸುತ್ತಾ ಬಂದಿರುವ ಮಿಲಿಯನ್‌ಗಟ್ಟಲೆ ಯಾತ್ರಿಗಳೊಂದಿಗೆ ನಾವೂ ಒಂದಾಗಿ ಆಧ್ಯಾತ್ಮಿಕ ಶಕ್ತಿಯನ್ನು ನಮ್ಮದಾಗಿಸಿಕೊಂಡ ಅನುಭವವಾಯಿತು.

ಮಾಯಾದೇವಿ ದೇವಾಲಯನ್ನು ನೋಡುತ್ತಾ ಹೊರಗೆ ಬರುತ್ತಿರಬೇಕಾದರೆ ಪ್ರವಾಸಿಗರೊಬ್ಬರು ನನ್ನ ಬಳಿ ಬಂದು ತಮ್ಮ ಮೊಬೈಲ್‌ನಲ್ಲಿ ಅವರ ಫೋಟೋವನ್ನು ಕ್ಲಿಕ್ಕಿಸಿಕೊಡುವಂತೆ ಕೇಳಿಕೊಂಡರು. ಟ್ಯೂನಿಕ್ ಉಡುಗೆಯೊಂದಿಗೆ ಪಲಾರೆ ಪ್ಯಾಂಟ್ ಧರಿಸಿ, ಅದರೊಂದಿಗೆ ಬಿದಿರಿನ ಟೋಪಿ ಧರಿಸಿದ್ದ ಅವರ ಪೋಷಾಕು ನನ್ನ ಗಮನವನ್ನು ಸೆಳೆಯಿತು. ಫೋಟೋ ತೆಗೆದ ನಂತರ ಅವರೊಂದಿಗೆ ಮಾತಿಗಿಳಿದಾಗ ಆಕೆ ವಿುಂಟ್ನಾಂ ನಿಂದ ಬಂದಿರುವುದಾಗಿ ತಿಳಿದು ಬಂದಿತು. ನನ್ನ ಕುತೂಹಲ ಕೆರಳಿ ಮತ್ತಷ್ಟು ಅವರ ಬಗ್ಗೆ ವಿಚಾರಿಸಿದಾಗ, ವಿುಂಟ್ನಾಂ ಯುದ್ಧದಲ್ಲಿ ಅಮೆರಿಕವು ನೇಪಾಮ್ ಮೇಲೆ ನಡೆಸಿದ ಬಾಂಬಿಂಗ್‌ನಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಅನಾಥಳಾದ ಆಕೆ ಈಗ ಶುಶ್ರೂಷಕಿಯಾಗಿ ಬದುಕು ಕಟ್ಟಿಕೊಂಡಿದ್ದಾರೆಂದು ನಗುನಗುತ್ತಲೇ ತಿಳಿಸಿದರು. ಬೇರೆಯವರ ದೇಹಕ್ಕಾದ ಗಾಯಕ್ಕೆ ಮುಲಾಮು ಹಚ್ಚುವ ಮೂಲಕ ತನ್ನ ಮನಸ್ಸಿನ ಗಾಯವನ್ನು ಮಾಗಿಸಿಕೊಳ್ಳುತ್ತಿರುವ ಆಕೆಯನ್ನು ಕಂಡು ಗೌತಮ ಬುದ್ಧ ಸಾರಿದ ಪ್ರೀತಿ, ದಯೆ, ಕರುಣೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಬುದ್ಧನ ಮಾರ್ಗದಲ್ಲಿ ಸಾಗುವ ನಮ್ಮ ಮೊದಲ ಹೆಜ್ಜೆ ಅಲ್ಲವೆ ಎನಿಸಿತು.

andolana

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

6 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

6 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

7 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

9 hours ago