ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ
ರಶ್ಮಿ ಕೋಟಿ
ಮನೆಗೆ ಕರೆದುಕೊಂಡು ಹೋಗಲು ಬಂದ ತನ್ನ ತಾಯಿಗೆ ೧೦ ವರ್ಷದ ಮಾದೇವ ಕೇಳುವ ಈ ಪ್ರಶ್ನೆ ಚಲನಚಿತ್ರವನ್ನು ಕಣ್ತುಂಬಿಕೊಂಡವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡದೆ ಇರಲು ಸಾಧ್ಯವಿಲ್ಲ. ಇತ್ತೀಚೆಗೆ ತೆರೆ ಕಂಡು ೫೦ ದಿನಗಳನ್ನು ಪೂರೈಸಿರುವ ‘ಅನ್ನ’ ಕನ್ನಡ ಚಲನಚಿತ್ರ ಚಾಮರಾಜನಗರದ ಗ್ರಾಮೀಣ ಕಥಾ ಹಂದರವನ್ನು ಒಳಗೊಂಡಿರುವುದಷ್ಟೇ ಅಲ್ಲ, ಚಾಮರಾಜನಗರ ಭಾಗದಲ್ಲೇ ಇಡೀ ಚಿತ್ರದ ಚಿತ್ರೀಕರಣವೂ ನಡೆದಿದೆ. ಮತ್ತೊಂದು ವಿಶೇಷವೆಂದರೆ ಚಾಮರಾಜನಗರ ಪ್ರಾಂತ್ಯದ ಆಡುಭಾಷೆಯೇ ಈ ಸಿನಿಮಾಗೆ ಜೀವಾಳವಾಗಿದ್ದು, ಚಾಮರಾಜನಗರ ಆಡುಭಾಷೆಗೆ ಸಾಹಿತ್ಯ ಲೋಕದಲ್ಲಿ ದೇವನೂರ ಮಹಾದೇವ ಅವರಿಂದ ಮನ್ನಣೆ ದೊರೆತರೆ ದೃಶ್ಯಕಾವ್ಯದಲ್ಲಿ ‘ಅನ್ನ’ ಚಲನಚಿತ್ರದಿಂದ ಮನ್ನಣೆ ದೊರೆತಿದೆ ಎಂದರೆ ತಪ್ಪಾಗಲಾರದು.
‘ನಾ ನೆನ್ನೇನೆ ಏಳಿವ್ನಿ ಅನ್ನ ಮಾಡ್ಬೇಕು ಅಂತ, ಇಟ್ಟಾದ್ರೆ ನಾ ಉಣ್ಣಾಕೇ ಇಲ್ಲ’ ‘ಡೌ, ಡೌ ಕೂಸೆ, ಇಟ್ನ ಉಣ್ಕಂಡು ಪಳ್ಳಿಗೆ ಚೀಲ ತಕ್ಕೊಂಡ್ ವೋಗುಡಾ’ ‘ಊಹುಂ. . . ನಂಗ್ ಬ್ಯಾಡ’.
‘ಕೇಡಿ ಕಣ್ ವೋಗುಡ ನೀನು ಕೇಡಿ. ಯೋಳುದ್ ಮಾತ್ನೆ ಕ್ಯೋಳಲ ಇಂವ. ಎಲ್ಲಾ ಅವ್ರ ಅಪ್ಪ್ ಬಡ್ಡಿಮಗ್ನಂಗಾಗವ್ನೆ. ವಸಿ ಬುದ್ಧಿ ಕೊಡಪ್ಪ ಮಾಯಕಾರನೇ’. . .
ಹೀಗೆ ಸಂಪೂರ್ಣವಾಗಿ ಚಾಮರಾಜನಗರ ನೆಲದ ಆಡುಭಾಷೆಯಲ್ಲಿ ನಿರ್ಮಾಣವಾಗಿ ಅಮೋಘ ಯಶಸ್ಸನ್ನು ಕಾಣುತ್ತಿರುವ ‘ಅನ್ನ’ ಚಲನಚಿತ್ರ ಚಾಮರಾಜನಗರದ ಭಾಷೆ, ಚಾಮರಾಜನಗರದ ಕಲಾವಿದರು ಹಾಗೂ ಚಾಮರಾಜನಗರದ ಹಳ್ಳಿಗಳಲ್ಲಿಯೇ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ. ದೊಡ್ಡ ಗಾತ್ರದ ಬಜೆಟ್ ಮತ್ತು ದೊಡ್ಡ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾಗಳು ನಿರ್ಮಾಣವಾಗುತ್ತಿರುವ ಇಂದಿನ ದಿನಗಳಲ್ಲಿ, ‘ಅನ್ನ’ ಇದಕ್ಕೆ ಅಪವಾದವಾಗಿ ಎದ್ದು ಕಾಣುತ್ತದೆ. ಸಾಧಾರಣ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಕನ್ನಡ ಚಲನಚಿತ್ರವು ತನ್ನ ಕಥೆ, ನೈಜ ದೃಶ್ಯಾವಳಿ ಮತ್ತು ಪ್ರತಿಭಾವಂತ ಸ್ಥಳೀಯ ಕಲಾವಿದರಿಂದ ಪ್ರೇಕ್ಷಕರ ಹೃದಯವನ್ನು ಗೆದ್ದುಕೊಂಡಿದೆ.
‘ಅನ್ನ’ ಹನೂರು ಚೆನ್ನಪ್ಪ ಅವರ ಸಣ್ಣಕಥೆ ಆಧಾರಿತ ಚಿತ್ರ. ಈ ಕಥೆಯನ್ನು ಓದಿದ ನಾಗೇಶ್ ಕಂದೇಗಾಲ ಅವರು ಇದನ್ನು ಸಿನಿಮಾ ಮಾಡಬೇಕೆಂದು ತೀರ್ಮಾನಿಸಿದರು. ೨೦೧೯ರಲ್ಲಿ ಸ್ಕ್ರೀನ್ ಪ್ಲೇ ರೆಡಿ ಮಾಡಿ ಇನ್ನೇನು ಚಿತ್ರೀಕರಣ ಆರಂಭಿಸಬೇಕೆನ್ನುವಷ್ಟರಲ್ಲಿ ಕೋವಿಡ್ ಸಾಂಕ್ರಾಮಿಕ ಹರಡಲಾರಂಭಿಸಿತು. ಕೋವಿಡ್ ಅಲೆ ಮುಗಿದ ನಂತರ ಇಸ್ಲಾವುದ್ದೀನ್ ಅವರ ನಿರ್ದೇಶನದಲ್ಲಿ ಕತೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ರೆಡಿ ಮಾಡಿಕೊಳ್ಳಲಾಯಿತು.
ಕಥೆಯು ಚಾಮರಾಜನಗರದಲ್ಲಿ ಘಟಿಸುವುದರಿಂದ ಅದರಲ್ಲಿ ಬರುವ ಪಾತ್ರಗಳನ್ನು ನಿಭಾಯಿಸುವವರು ಸ್ಥಳೀಯ ಭಾಷೆಯನ್ನು ಬಲ್ಲವರಾಗಿದ್ದರೆ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಬಲ್ಲರೆಂದು ತೀರ್ಮಾನಿಸಿ ಚಾಮರಾಜನಗರ, ಹನೂರು, ಕೊಳ್ಳೇಗಾಲ, ಮೈಸೂರುಗಳಲ್ಲಿ ಆಡಿಷನ್ ಮಾಡಿ, ಕತೆಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದ ಮುಖ್ಯ ಪಾತ್ರಧಾರಿ ಮಾದೇವನ ಆಯ್ಕೆಯೇ ಒಂದು ರೋಚಕ ಕತೆ. ನಂದನ್ ಫೇಸ್‌ಬುಕ್‌ನಲ್ಲಿ ತನ್ನ ಚಿಕ್ಕಪ್ಪನ ಜೊತೆ ಮಾತನಾಡಿರುವ ವಿಡಿಯೋಗಳನ್ನು ನೋಡಿ ಆತನ ನೈಜ ಪ್ರತಿಭೆಗೆ ಆಕರ್ಷಿತವಾದ ಚಿತ್ರತಂಡವು ಆತನನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿತು. ಚಿತ್ರದಲ್ಲಿ ಮಾದೇವನ ಸಂಭಾಷಣೆಗಳು ಪ್ರೇಕ್ಷಕರ ವ್ಯಾಪಕ ಮೆಚ್ಚುಗೆ ಗಳಿಸುವಲ್ಲಿ ಸಫಲವಾಗಿವೆ.
ಮೂಲ ಕಥೆಯಲ್ಲಿ ದಿಬ್ಬಜ್ಜನ ಪಾತ್ರವೇ ಇಲ್ಲ. ಆದರೆ ಮಾದೇವ ಪಣಗಾರರ ಮನೆಯನ್ನು ಸೇರಿದಾಗ ಸಾವುಕಾರರ ಮನೆಯಲ್ಲಿ ಸುಲಭವಾಗಿ ಬೆರೆಯುವುದು ಸಾಧ್ಯವಾಗುವುದಿಲ್ಲ.
ಅವನಿಗೆ ಆ ಪರಿಸರದಲ್ಲಿ ಬೆರೆಯಲು ಯಾರದ್ದಾದರೂ ಆಸರೆ ಬೇಕು ಎಂಬ ಕಾರಣಕ್ಕೆ ಪಣಗಾರರ ಮನೆಯಲ್ಲಿ ಆಳಾಗಿರುವ ದಿಬ್ಬಜ್ಜನ ಪಾತ್ರವನ್ನು ರೂಪಿಸಲಾಯಿತು. ಅಲ್ಲದೆ ಮೂಲ ಕಥೆಯಲ್ಲಿ ರಾಯಪ್ಪನ ಪಾತ್ರ ಬರೀ ಹೆಸರಿಗಷ್ಟೇ ಸೀಮಿತವಾಗಿದೆ. ಈ ಸಿನಿಮಾ ಹೆಚ್ಚು ಲವಲವಿಕೆಯಿಂದ ಕೂಡಿರಲಿ ಎಂದು ಈ ಪಾತ್ರವನ್ನು ಸಿನಿಮಾದುದ್ದಕ್ಕೂ ಜೀವಂತವಾಗಿಡಲಾಗಿದೆ.
ಹೀಗೆ ಗುಣಮಟ್ಟದ ಕಥಾಹಂದರವಿದ್ದರೆ ಅದ್ಧೂರಿ ಬಜೆಟ್ ಇಲ್ಲದೆಯೂ ಚಲನಚಿತ್ರ ಯಶಸ್ಸು ಗಳಿಸಬಲ್ಲದು ಎಂಬುದನ್ನು ‘ಅನ್ನ’ ಸಾಬೀತುಪಡಿಸಿದೆ. ಇದಕ್ಕೆ ನಿರ್ದೇಶಕ ಇಸ್ಲಾವುದ್ದೀನ್ ಅವರ ದೃಷ್ಟಿಕೋನ ಹಾಗೂ ದಿಟ್ಟ ಹೆಜ್ಜೆ ಫಲ ನೀಡಿದೆ.
‘ದುಡ್ಡು ಮಾಡುವುದೇ ಜೀವನ ಅಲ್ಲ. ಸಮಾಜಕ್ಕೆ ಒಂದು ಸಂದೇಶವನ್ನು ನೀಡಬೇಕು. ಕತೆಯನ್ನು ಓದಿದಾಗ ನಾನು ನನ್ನ ಜೀವನದಲ್ಲಿ ಪಟ್ಟಿರುವ ಕಷ್ಟಗಳೇ ಕಣ್ಣ ಮುಂದೆ ಬಂದಿತು. ಹಾಗಾಗಿ ಈ ಚಿತ್ರವನ್ನು ನಿರ್ಮಿಸುವ ತೀರ್ಮಾನ ಮಾಡಿದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ಬಸವರಾಜು. ಒಟ್ಟಿನಲ್ಲಿ ‘ಅನ್ನ’ ಚಿತ್ರದ ಯಶಸ್ಸು ಸ್ಥಳೀಯ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…
ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…
ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…
ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…